ವಿಜಯೇಂದ್ರ ಆಡಳಿದಲ್ಲಿ ಹಸ್ತಕ್ಷೇಪ ಮಾಡುತ್ತಿಲ್ಲ….
ರಾಜ್ಯದ ಸರ್ವಾಂಗೀಣ ಅಭಿವೃದ್ಧಿ ಕುರಿತು ಚರ್ಚಿಸಲು ಪ್ರಧಾನಿ, ಕೇಂದ್ರ ಸಚಿವರ ಜೊತೆಗೆ ಭೇಟಿ : ಬಿ ಎಸ್ ಯಡಿಯೂರಪ್ಪ
ನವದೆಹಲಿ, ಸೆಪ್ಟೆಂಬರ್ 18 ( ಕರ್ನಾಟಕ ವಾರ್ತೆ ) :
ರಾಜ್ಯದ ಸರ್ವಾಂಗೀಣ ಅಭಿವೃದ್ಧಿ ಕುರಿತು ಚರ್ಚಿಸಲು ತಾವು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ಸರ್ಕಾರದ ಹಲವು ಸಚಿವರನ್ನು ಭೇಟಿ ಮಾಡುತ್ತಿರುವುದಾಗಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಇಲ್ಲಿ ಇಂದು ತಿಳಿಸಿದರು.
ರಾಷ್ಟ್ರದ ರಾಜಧಾನಿಯಲ್ಲಿ 120 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ರಾಜ್ಯದ ರಾಯಭಾರಿ ಕಚೇರಿ ಎಂದೇ ಬಣ್ಣಿಸಲಾಗುವ ಕರ್ನಾಟಕ ಭವನ-1 “ ಕಾವೇರಿ ” ಕಟ್ಟಡದ ಪುನನಿರ್ಮಾಣ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ಎರಡು ತಳ ಮಹಡಿಗಳೂ, ನೆಲ ಮಹಡಿ ಹಾಗೂ ಆರು ಮಹಡಿ ಒಳಗೊಂಡಂತೆ ಒಟ್ಟು ಒಂಭತ್ತು ಮಹಡಿಗಳ ಈ ಕಟ್ಟಡವನ್ನು ರ್ಮಾಣಕ್ಕೆ ಮೆ : ಬಾಲಾಜಿ ಕೃಪಾ ಪ್ರಾಜೆಕ್ಸ್ ಪ್ರೈವೇಟ್ ಲಿಮಿಟೆಡ್ ಅವರಿಗೆ ವಹಿಸಿದ್ದು, ಮುಂದಿನ 24 ತಿಂಗಳಲ್ಲಿ ಕಟ್ಟಡದ ಕಾಮಗಾರಿಗಳು ಪೂರ್ಣಗೊಳ್ಳಲಿವೆ ಎಂದರು.
ಪ್ರತಿಪಕ್ಷ ನಾಯಕರ ಆರೋಪ ತಳ್ಳಿಹಾಕಿದ ಮುಖ್ಯಮಂತ್ರಿ
ತಮ್ಮ ಪುತ್ರ ಬಿ ವೈ ವಿಜಯೇಂದ್ರ ಅವರನ್ನು ಸೂಪರ್ ಸಿ ಎಂ ಎಂದು ಬಣ್ಣಿಸಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಆರೋಪವನ್ನು ತಳ್ಳಿ ಹಾಕಿದ ಮುಖ್ಯಮಂತ್ರಿ, ವಿಜಯೇಂದ್ರ ಅವರು ಭಾರತೀಯ ಜನತಾ ಪಕ್ಷದ ರಾಜ್ಯ ಘಟಕದಲ್ಲಿ ಉಪಾಧ್ಯಕ್ಷರಾಗಿ ರಾಜ್ಯದಲ್ಲಿ ಪಕ್ಷವನ್ನು ಸಂಘಟಿಸುವಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆಯೇ ಹೊರತು, ರಾಜ್ಯ ಸರ್ಕಾರದ ಯಾವುದೇ ಚಟುವಟಿಕೆಗಳಲ್ಲಿ ಹಸ್ತಕ್ಷೇಪ ಮಾಡುತಿಲ್ಲ ಎಂದು ಸ್ಪಷ್ಟಪಡಿಸಿದರು.
ಊಹಾಪೋಹ ಬೇಡ !
ಜಾತ್ಯಾತೀತ ಜನತಾ ದಳದ ಮುಖಂಡ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹಾಗೂ ತಮ್ಮ ನಡುವಿನ ಇತ್ತೀಚಿನ ಭೇಟಿ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ, ಕುಮಾರಸ್ವಾಮಿ ಅವರು ಪ್ರತಿಪಕ್ಷದ ನಾಯಕರಲ್ಲೊಬ್ಬರು. ತಮ್ಮ ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿದಂತೆ ಚರ್ಚಿಸಲು ಆಗಮಿಸಿದ್ದರು. ಇಂತಹ ವಿಷಯಗಳಲ್ಲಿ ಅನಗತ್ಯ ಊಹಾಪೋಹ ಬೇಡ ಎಂದು ಉತ್ತರಿಸಿದರು.
“ ಕಾವೇರಿ ” ಯ ಹಿನ್ನೆಲೆ !
ನವದೆಹಲಿಯ ಚಾಣಕ್ಯಪುರಿಯಲ್ಲಿರುವ ಕೌಟಿಲ್ಯ ಮಾರ್ಗದ ಸಂಖ್ಯೆ : 10 ರಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದವನಹಳ್ಳಿ ನಿಜಲಿಂಗಪ್ಪ ಅವರ ಪರಿಕಲ್ಪನೆಯಲ್ಲಿ ರಾಜ್ಯದ ಗಣ್ಯಾತಿಗಣ್ಯರ ವಾಸ್ತವ್ಯಕ್ಕೆ ಎಂದೇ ಕರ್ನಾಟಕ ಭವನ ಕಟ್ಟಡವು 1967 ರಲ್ಲಿ ನಿರ್ಮಾಣಗೊಂಡಿತ್ತು. ಐವತ್ತು ವರ್ಷಗಳಿಗೂ ಹೆಚ್ಚು ಕಾಲದ ಈ ಕಟ್ಟಡದಲ್ಲಿ ಕಾಲಕಾಲಕ್ಕೆ ಹಲವು ಮಾರ್ಪಾಡುಗಳನ್ನು ಮಾಡಲಾಗಿದೆ. ಹವಾಮಾನ ವೈಪರೀತ್ಯಗಳಿಂದ ಕಟ್ಟಡವು ಶಿಥಿಲಗೊಳ್ಳುತ್ತಿರುವುದನ್ನು ಪರಿವೀಕ್ಷಿಸಿದ ಹಳೆಯ ಕಟ್ಟಡವನ್ನು ಕೆಡವಿ, ಅದೇ ಸ್ಥಳದಲ್ಲಿ ಹೊಸ ಕಟ್ಟಡವನ್ನು ನಿರ್ಮಿಸುವುದು ಸೂಕ್ತ ಎಂದು 2018 ರ ಫೆಬ್ರವರಿ 1 ರಂದು ಮೆ: ಸಿವಿಲ್ ಏಡ್ ಟೆಕ್ನೋ ಕ್ಲಿನಿಕ್ ತಾಂತ್ರಿಕ ಸಂಸ್ಥೆ ನೀಡಿದ ತಾಂತ್ರಿಕ ಶಿಫಾರಸ್ಸನ್ನು ಅಂಗೀಕರಿಸಿದ ರಾಜ್ಯ ಸರ್ಕಾರ ಕಟ್ಟಡ ಪುನನಿರ್ಮಾಣ ಕಾಮಗಾರಿಗಳಿಗೆ 87 ಕೋಟಿ ರೂ ಗಳಿಗೆ ಆಡಳಿತಾತ್ಮಕ ಅನುಮೋದನೆ ಹಾಗೂ 81 ಕೋಟಿ ರೂ ತಾಂತ್ರಿಕ ಮಂಜೂರಾತಿ ನೀಡಿದೆ. ಕಟ್ಟಡದ ನಿರ್ಮಾಣಕ್ಕೆ ಮೆ : ಬಾಲಾಜಿ ಕೃಪಾ ಪ್ರಾಜೆಕ್ಸ್ ಪ್ರೈವೇಟ್ ಲಿಮಿಟೆಡ್ ಆಯ್ಕೆಯಾಗಿದ್ದು, ಮುಂದಿನ ಎರಡು ವರ್ಷಗಳಲ್ಲಿ ಮತ್ತೆ ಮೇಳೈಸಲಿರುವ ಕಾವೇರಿ ಕಟ್ಟಡವು ಕೌಟಿಲ್ಯ ಮಾರ್ಗದ ಹೆಗ್ಗುರುತಾಗಿ ಮತ್ತೆ ಕಂಗೊಳಿಸಲಿದೆ.
ಉದ್ದೇಶಿತ ಕಟ್ಟಡದ ನೀಲನಕ್ಷೆ ಹಾಗೂ ಹಾಲಿ ಕಟ್ಟದ ಸ್ಥಳ ಸಮೀಕ್ಷೆ ಮಾಡಿ, ಕರ್ನಾಟಕ ಭವನದ ವಿವಿಧ ಕಚೇರಿಗಳಿಗೆ ನಿಗದಿಪಡಿಸಿದ ವಿಸ್ತೀರ್ಣವನ್ನು ಅವಶ್ಯಕತೆಗೆ ತಕ್ಕಂತೆ ಸೀಮಿತಗೊಳಿಸಲು ಹಾಗೂ ಪ್ರಸ್ತುತ ಕರ್ನಾಟಕ ಭವನಕ್ಕೆ ಹೊಂದಿಕೊಂಡಿರುವ ಅನೆಕ್ಸ್ ಕಟ್ಟಡದಲ್ಲಿರುವ ಐಷಾರಾಮಿ ಕೊಠಡಿಗಳನ್ನು ಉಪಯೋಗಿಸಲು ಹಾಗೂ ಒಂದು ಹೆಚ್ಚುವರಿ ಐಷಾರಾಮಿ ಕೊಠಡಿಯ ನಿರ್ಮಾಣವನ್ನು ಕೈಬಿಡಲು ಮುಖ್ಯಮಂತ್ರಿಯವರು ಸೂಚಿಸಿದ ಹಿನ್ನೆಲೆಯಲ್ಲಿ ಗಣ್ಯಾತಿಗಣ್ಯರ ಐಷಾರಾಮಿ ಕೊಠಡಿಗಳ ಸಂಖ್ಯೆ ನಾಲ್ಕರಿಂದ ಎರಡಕ್ಕೆ ಇಳಿಕೆಯಾಗಿದೆ.
ಗಣ್ಯರನ್ನು ಭೇಟಿ ಮಾಡಲು ಆಗಮಿಸುವ ಸಂದರ್ಶಕರಿಂದ, ಗಣ್ಯರ ಖಾಸಗೀತನಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳಲು ಪ್ರತಿ ಐಷಾರಾಮಿ ಕೊಠಡಿಯಲ್ಲೂ ಒಂದು ಹೆಚ್ಚಿನ ಶೌಚಾಲಯವನ್ನು ನಿರ್ಮಿಸಲು ಯೋಜಿಸಲಾಗಿದೆ. ಅದರಂತೆ, ಮಾರ್ಪಡಿತ ಅಂದಾಜುಪಟ್ಟಿ ಮೊತ್ತ 120 ಕೋಟಿ ರೂ ಗಳಿಗೆ ಪರಿಷ್ಕøತ ಆಡಳಿತಾತ್ಮಕ ಅನುಮೋದನೆ ದೊರೆತಿದೆ.
ಕರ್ನಾಟಕ ಭವನದಲ್ಲಿ ಕಚೇರಿಗಳ ಉಪಯೋಗಕ್ಕಾಗಿ ನಿಗದಿಪಡಿಸಿದ ಕಚೇರಿ ವಿಸ್ತೀರ್ಣವನ್ನು ಮಿತಗೊಳಿಸಿ, ಈ ಸ್ಥಳವನ್ನು ಬಳಸಿಕೊಂಡು ಗಣ್ಯರ ಐಷಾರಾಮಿ ಕೊಠಡಿಗಳ ಸಂಖ್ಯೆಯನ್ನು 14 ರಿಂದ 31 ಕ್ಕೆ ಹಾಗೂ ಗಣ್ಯರ ಕೊಠಡಿಗಳ ಸಂಖ್ಯೆಯನ್ನು 12 ರಿಂದ 15 ಕ್ಕೆ, ಒಟ್ಟಾರೆ ಗಣ್ಯಾತಿಗಣ್ಯರ ಕೊಠಡಿಗಳನ್ನು 30 ರಿಂದ 48 ಕ್ಕೆ ಹೆಚ್ಚಿಸಲಾಗಿದೆ.
“ ಕಾವೇರಿ ” ಯಲ್ಲಿ ಏನೇನಿದೆ ?
ಕರ್ನಾಟಕ ಭವನ-1 “ ಕಾವೇರಿ ” ಕಟ್ಟಡದ ಕೆಳತಳ ( ಲೋವರ್ ಬೇಸ್‍ಮೆಂಟ್ ) ಮಹಡಿ ಹಾಗೂ ಮೇಲ್ತಳ ( ಅಪ್ಪರ್ ಬೇಸ್‍ಮೆಂಟ್ ) ಮಹಡಿಯಲ್ಲಿ ತಲಾ 2335 ಚದುರ ಮೀಟರ್ ಪ್ರದೇಶವಿದೆ. ಕೆಳತಳ ಮಹಡಿಯಲ್ಲಿ ನಾಲ್ಕು ಚಕ್ರಗಳ 151 ವಾಹನಗಳು ಹಾಗೂ 107 ದ್ವಿ-ಚಕ್ರ ವಾಹನಗಳ ನಿಲುಗಡೆಗೆ ಅವಕಾಶವಿರುತ್ತದೆ. ಮೇಲ್ತಳ ಮಹಡಿಯಲ್ಲಿ ವಾಹನ ಚಾಲಕರ ಕೊಠಡಿ, ಭ್ರದ್ರತಾ ಸಿಬ್ಬಂದಿಯ ವಿಶ್ರಾಂತಿ ಕೊಠಡಿ, ಬಟ್ಟೆ ಶುಚಿಗೊಳಿಸಿ ಇಸ್ತ್ರಿ ಮಾಡುವ “ ಲಾಂಡ್ರಿ ” ಕೂಡಾ ಇರುತ್ತದೆ.
ಅಲ್ಲದೆ, ಇದೇ ಕಟ್ಟಡದಲ್ಲಿ 1030 ಚದುರ ಮೀಟರ್ ಪ್ರದೇಶದ ನೆಲ ಮಹಡಿ ಮಾತ್ರವಲ್ಲದೆ, ಅದೇ ವಿಸ್ತೀರ್ಣದ ಆರು ಮಹಡಿಗಳು ಇರುತ್ತವೆ. ನೆಲಮಹಡಿಯಲ್ಲಿ ಸ್ವಾಗತ ಮತ್ತು ನಿರೀಕ್ಷಣಾ ಕೊಠಡಿ, ವೀಡಿಯೋ ಸಮ್ಮೇಳನ ಕೊಠಡಿ, ಅಡುಗೆ ವಸ್ತುಗಳ ಉಗ್ರಾಣ ( ಪ್ಯಾಂಟ್ರಿ ) , ಗಣ್ಯಾತಿಗಣ್ಯರ ವಿಶ್ರಾಂತಿ ಕೊಠಡಿ, ಭೋಜನಾಲಯ, ಸಭಾ ಕೊಠಡಿ, ಶ್ರವ್ಯ-ದೃಶ್ಯ ಕೊಠಡಿ, ಚರ್ಚಾ ಕೊಠಡಿ, ಸಮೃದ್ಧ ಭೋಜನಾಲಯ ಹಾಗೂ ಶೌಚಾಲಯಗಳಿರುತ್ತವೆ.
ಮೊದಲ ಮಹಡಿಯಲ್ಲಿ ಸಮನ್ವಯ ಶಾಖೆ, ಭದ್ರತಾ ಕೊಠಡಿ, ವಾಸ್ತವ್ಯ ಮತ್ತು ಉಗ್ರಾಣ ವಿಭಾಗದ ವ್ಯವಸ್ಥಾಪಕರ ಕೊಠಡಿ, ಸಹಾಯಕ ಕಾರ್ಯಪಲಕ ಅಭಿಯಂತರರ ಕೊಠಡಿ, ಲೆಕ್ಕಪತ್ರ ವಿಭಾಗ ಮತ್ತು ಕೊಠಡಿ, ಗಣಕ ನಿಯಂತ್ರಣ ಕೊಠಡಿ, ಆಡಳಿತ ವಿಭಾಗ, ಶಿಷ್ಠಾಚಾರ ಕಚೇರಿ, ತಾಂತ್ರಿಕ ವಿಭಾಗ, ವೈದ್ಯಕೀಯ ಸೇವಾ ಕೊಠಡಿ ಹಾಗೂ ಅಡುಗೆ ವಸ್ತುಗಳ ಉಗ್ರಾಣ ( ಪ್ಯಾಂಟ್ರಿ ) ಗೆ ಅವಕಾಶ ಕಲ್ಪಿಸಲಾಗಿದೆ.
ಎರಡನೇ ಮಹಡಿಯಲ್ಲಿ ನಿವಾಸಿ ಆಯುಕ್ತರು, ಅಪರ ನಿವಾಸಿ ಆಯುಕ್ತರು, ಮನೆ ವಾರ್ತೆ ವಿಭಾಗದ ಉಪ ನಿವಾಸಿ ಆಯುಕ್ತರು ಮತ್ತು ಸಾರ್ವಜನಿಕ ಸಂಪರ್ಕ ವಿಭಾಗದ ಉಪ ನಿವಾಸಿ ಆಯುಕ್ತರು, ಸಹಾಯಕ ನಿವಾಸಿ ಆಯುಕ್ತರು ಹಾಗೂ ಬೆಂಬಲಿತ ಸಿಬ್ಬಂದಿಯ ಕಚೇರಿಗಳು ಇರುತ್ತವೆ. ಅಧಿಕಾರಿಗಳ ವಿಶ್ರಾಂತಿ ಗೃಹ, ಅಧಿಕಾರಿಗಳ ಭೋಜನಾಲಯ, ಮನರಂಜನಾ ತಾಣ ಹಾಗೂ ಅಡುಗೆ ವಸ್ತುಗಳ ಉಗ್ರಾಣ ( ಪ್ಯಾಂಟ್ರಿ ) ಅವಕಾಶ ಕಲ್ಪಿಸಲು ಯೋಜಿಸಲಾಗಿದೆ.
ಮೂರನೇ ಮಹಡಿಯಲ್ಲಿ ಮುಖ್ಯ ನ್ಯಾಯಮೂರ್ತಿಗಳ ಕೊಠಡಿ, ಕಾನೂನು ಕೋಶ ಮತ್ತು ಸಂಸದರ ಕೋಶದ ಕಚೇರಿಗಳು, ವಿಶೇಷ ಮತ್ತು ಅಪರ ಪ್ರತಿನಿಧಿಗಳ ಕಚೇರಿಗಳು ಹಾಗೂ ಆಪ್ತ ಕಾರ್ಯದರ್ಶಿಗಳ ಕೊಠಡಿ, ಕಚೇರಿ ವಿಸ್ತೀರ್ಣ, ಗ್ರಂಥಾಲಯ, ಅತಿಥಿ ಗೃಹ, ವ್ಯಾಯಾಮ ಶಾಲೆ ಹಾಗೂ ಅಡುಗೆ ವಸ್ತುಗಳ ಉಗ್ರಾಣ ( ಪ್ಯಾಂಟ್ರಿ ) ಕ್ಕೆ ವಿನ್ಯಾಸ ರೂಪಿಸಲಾಗಿದೆ.
ನಾಲ್ಕನೇ ಮಹಡಿಯಲ್ಲಿ ಗಣ್ಯಾತಿಗಣ್ಯರ ಕೊಠಡಿಗಳು, ಆರು ಐಷಾರಾಮಿ ಕೊಠಡಿಗಳು, ಯೋಗ ಕೇಂದ್ರ, ವ್ಯಾಯಾಮ ಶಾಲೆ ಹಾಗೂ ಅಡುಗೆ ವಸ್ತುಗಳ ಉಗ್ರಾಣ ( ಪ್ಯಾಂಟ್ರಿ ) ಇರುತ್ತವೆ.
ಐದನೇ ಮಹಡಿಯಲ್ಲಿ ಗಣ್ಯಾತಿಗಣ್ಯರ ಕೊಠಡಿ ಮಲ್ಲಿಗೆ ಒಳಗೊಂಡಂತೆ ಮೂರು ಐಷಾರಾಮಿ ಕೊಠಡಿಗಳು ಇರಲಿವೆ.
ಆರನೇ ಮಹಡಿಯಲ್ಲಿ ಗಣ್ಯಾತಿಗಣ್ಯರ ಕೊಠಡಿ ಸಂಪಿಗೆ ಒಳಗೊಂಡಂತೆ ಐರು ಐಷಾರಾಮಿ ಕೊಠಡಿಗಳು ಇರುತ್ತವೆ.
ಲೋಕೋಪಯೋಗಿ ಮತ್ತು ಸಮಾಜ ಕಲ್ಯಾಣ ಖಾತೆಗಳ ಹೊತ್ತ ಉಪ ಮುಖ್ಯಮಂತ್ರಿ ಗೋವಿಂದ ಎಂ ಕಾರಜೋಳ, ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ ವಿ ಸದಾನಂದಗೌಡ, ಕೇಂದ್ರ ಸಂಸದೀಯ ವ್ಯಹಾರಗಳು, ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಹ್ಲಾದ ಜೋಶಿ, ಚಿಕ್ಕೋಡಿಯ ಸಂಸದ ಅಣ್ಣಾ ಸಾಹೇಬ್ ಜೊಲ್ಲೆ, ಬಾಗಲಕೋಟೆಯ ಸಂಸದ ಪಿ ಸಿ ಗದ್ದೀಗೌಡರ್, ಕಲಬುರಗಿಯ ಸಂಸದ ಉಮೇಶ್ ಜಾಧವ್, ಬೀದರ್‍ನ ಸಂಸದ ಭಗವಂತ ಖೂಬಾ, ಕೊಪ್ಪಳದ ಸಂಸದ ಕರಡಿ ಸಂಗಣ್ಣ, ಬಳ್ಳಾರಿಯ ವೈ ದೇವೇಂದ್ರಪ್ಪ, ದಾವಣಗೆರೆಯ ಸಂಸದ ಜಿ ಎಂ ಸಿದ್ದೇಶ್ವರ್, ಶಿವಮೊಗ್ಗದ ಸಂಸದ ಬಿ ವೈ ರಾಘವೇಂದ್ರ, ಚಿತ್ರದುರ್ಗ ಸಂಸದ ಎ ನಾರಾಯಣಸ್ವಾಮಿ, ತುಮಕೂರು ಸಂಸದ ಜಿ ಎಸ್ ಬಸವರಾಜು, ಮೈಸೂರು ಸಂಸದ ಪ್ರತಾಪ ಸಿಂಹ, ಬೆಂಗಳೂರು ಕೇಂದ್ರ ಕ್ಷೇತ್ರದ ಸಂಸದ ಪಿ ಸಿ ಮೊಹನ್, ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಮತ್ತು ಕೋಲಾರ ಸಂಸದ ಎಸ್ ಮುನಿಸ್ವಾಮಿ,ನವದೆಹಲಿಯಲ್ಲಿನ ರಾಜ್ಯ ಸರ್ಕಾರದ ವಿಶೇಷ ಪ್ರತಿನಿಧಿ ಶಂಕರಗೌಡ ಪಾಟೀಲ್ ಅವರೂ ಒಳಗೊಂಡಂತೆ ಹಲವು ಗಣ್ಯರು ಈ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ ಎಂ ವಿಜಯ್ ಭಾಸ್ಕರ್,ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ಡಾ ಇ ವಿ ರಮಣ ರೆಡ್ಡಿ, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳೂ ಆದ ಕರ್ನಾಟಕ ಭವನದ ನಿವಾಸಿ ಆಯುಕ್ತ ಡಾ ಸಂದೀಪ್ ದವೆ ಸೇರಿದಂತೆ ಹಿರಿಯ ಅಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.