IMG 20260107 WA0078 scaled

Karnataka : ಜನರ ಆಶೀರ್ವಾದ ಇರುವವರೆಗೆ ರಾಜಕೀಯದಲ್ಲಿರುತ್ತೇನೆ….!

POLATICAL STATE

*ಜನರ ಆಶೀರ್ವಾದ ಇರುವವರೆಗೆ ರಾಜಕೀಯದಲ್ಲಿರುತ್ತೇನೆ*.

*ನನ್ನ ಆಡಳಿತ ತೃಪ್ತಿ ತಂದಿದೆ*: *ಮುಖ್ಯಮಂತ್ರಿ ಸಿದ್ದರಾಮಯ್ಯ**

ಹಾವೇರಿ : ಜನವರಿ – 07:
ರಾಜಕಾರಣದಲ್ಲಿ ಇರಬೇಕಾದರೆ ಜನರ ಆಶೀರ್ವಾದ ಇರಬೇಕು. ಅವರ ಆಶೀರ್ವಾದದಿಂದ ಇಲ್ಲಿಯವರೆಗೂ ಸಾಗಿ ಬಂದಿದ್ದು, ಜನರ ಆಶೀರ್ವಾದ ಇರುವವರೆಗೆ ರಾಜಕೀಯದಲ್ಲಿರುತ್ತೇನೆ. ನನ್ನ ಆಡಳಿತ ತೃಪ್ತಿ ತಂದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು .

ಅವರು ಇಂದು ಹಾವೇರಿಯ ಕೊಳ್ಳಿ ಪಾಲಿಟೇಕ್ನಿಕ್ ಆವರಣದ ಹೆಲಿ ಪ್ಯಾಡ್ ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.

ಹಾವೇರಿ ವೈದ್ಯಕೀಯ ಕಾಲೇಜು ಪೂರ್ಣಗೊಂಡಿದ್ದು, ಇದಕ್ಕೆ ಸುಮಾರು 500 ಕೋಟಿಗಳು ವೆಚ್ಚವಾಗಿದೆ. ಇದನ್ನು ನಾನೇ ಘೋಷಣೆ ಮಾಡಿದ್ದೆ ಹಾಗೂ ಉದ್ಘಾಟನೆಯನ್ನು ನಾನೇ ಮಾಡುತ್ತಿದ್ದೇನೆ. ಈಗಾಗಲೇ ಮೂರನೇ ಬ್ಯಾಚ್ ನಡೆಯುತ್ತಿದೆ ಎಂದರು.

*ಬಿಜೆಪಿಯವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು*

ಸಿದ್ದರಾಮಯ್ಯ ಅವರ ಸರ್ಕಾರ ಬೊಕ್ಕಸ ಖಾಲಿ ಮಾಡಿದೆ ಎಂದು ಬಿಜೆಪಿಯವರು ಮಾಡಿರುವ ಟೀಕೆಗಳಿಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಗಳು ಬಿಜೆಪಿಯವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು ಎಂದರು.

*ಜಿಎಸ್‌ಟಿ: ರಾಜ್ಯಕ್ಕೆ ಈ ವರ್ಷ 5 ರಿಂದ 6 ಸಾವಿರ ಕೋಟಿ ನಷ್ಟ*
ಕೇಂದ್ರ ಸರ್ಕಾರವೇ ಜಿಎಸ್.ಟಿ ಜಾರಿಗೆ ತಂದು ಎಂಟು ವರ್ಷ 24% ತೆರಿಗೆ ಸುಲಿಗೆ ಮಾಡಿ ನಂತರ ನಾವು ತೆರಿಗೆ ಕಡಿಮೆ ಮಾಡಿದ್ದೇವೆ ಎಂದರು. ಕರ್ನಾಟಕ ರಾಜ್ಯವೊಂದಕ್ಕೆ ಒಂದು ವರ್ಷಕ್ಕೆ 10 ರಿಂದ 12 ಸಾವಿರ ಕೋಟಿ ರೂ.ಕಡಿಮೆಯಾಗಿದೆ. ಈ ವರ್ಷ 5 ರಿಂದ 6 ಸಾವಿರ ಕೋಟಿ ನಷ್ಟವಾಗುತ್ತದೆ. ಇದಕ್ಕೆಲ್ಲ ಯಾರು ಹೊಣೆ ಎಂದರು. ನಾಲ್ಕೂವರೆ ಲಕ್ಷ ಕೋಟಿ ತೆರಿಗೆಯನ್ನು ನಾವು ಕೊಡುತ್ತೇವೆ. ನಮಗೆ ಕೊಡುವುದು 60ರಿಂದ 70 ಸಾವಿರ ಕೋಟಿ ಮಾತ್ರ. ಒಂದು ರೂ ಕೊಟ್ಟರೆ 14 ಪೈಸೆ ವಾಪಸ್ಸು ಬರುತ್ತದೆ. ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ಕೊಡಲಿಲ್ಲ. 5495 ಕೋಟಿ ರಾಜ್ಯಕ್ಕೆ ಒದಗಿಸಲು 15 ನೇ ಹಣಕಾಸು ಆಯೋಗ ಶಿಫಾರಸು ಮಾಡಿತ್ತು. ಅದನ್ನೂ ಕೊಡಲಿಲ್ಲ. ಪೆರಿಫೆರಲ್ ರಿಂಗ್ ರೋಡಿಗೆ 3000 ಕೋಟಿ, ಬೆಂಗಳೂರಿನ ಕೆರೆಯ ಅಭಿವೃದ್ಧಿಗೆ 3000 ಕೋಟಿ ಕೊಡಲಿಲ್ಲ. ಏನೂ ಕೊಡಲಿಲ್ಲ. ಬಿಜೆಪಿ ನಾಲ್ಕು ವರ್ಷ ಅಧಿಕಾರದಲ್ಲಿದ್ದರೂ ವೈದ್ಯಕೀಯ ಕಾಲೇಜನ್ನು ಏಕೆ ಪೂರ್ಣಗೊಳಿಸಲಿಲ್ಲ? ಇದನ್ನು ನಾವು ಅಧಿಕಾರಕ್ಕೆ ಬಂದು ಪೂರ್ಣಗೊಳಿಸಿದ್ದೇವೆ ಎಂದರು.

*ಬಳ್ಳಾರಿ ಪ್ರಕರಣ: ಬ್ಯಾನರ್ ಬಿಚ್ಚಿ ಹಾಕಿದ್ದು ಪ್ರಚೋದನೆ*
ಬಳ್ಳಾರಿ ಪ್ರಕರಣವನ್ನು ಸಿಬಿಐಗೆ ಹಸ್ತಾಂತರ ಮಾಡಬೇಕೆಂದು ಜನಾರ್ದನ ರೆಡ್ಡಿ ಶ್ರೀರಾಮುಲು ಸೇರಿದಂತೆ ಅನೇಕರು ಒತ್ತಾಯಿಸುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಗಳು ನಿನ್ನೆ ಕೆಪಿಸಿಸಿ ಅಧ್ಯಕ್ಷರಾದ ಡಿಕೆ ಶಿವಕುಮಾರ್ ಅವರು ಭೇಟಿ ನೀಡಿ ಮಾತನಾಡಿದ್ದಾರೆ. ಬಳ್ಳಾರಿಯಲ್ಲಿ ಗಲಾಟೆಯಾಗಿ ಒಬ್ಬ ವ್ಯಕ್ತಿ ಸಾಯಲು ಬ್ಯಾನರ್ ನ್ನು ಬಿಚ್ಚಿಹಾಕಿದ್ದು ಪ್ರಚೋದನೆ. ಬಿಜೆಪಿಯವರಿಗೆ ಅಸೂಯೆ ತಡೆಯಲು ಆಗುತ್ತಿಲ್ಲ ಎಂದರು.

*ಕಾನೂನು ಕೈಗೆತ್ತಿಕೊಂಡವರ ಮೇಲೆ ಕ್ರಮ*
ಹುಬ್ಬಳ್ಳಿಯಲ್ಲಿ ಮಹಿಳೆಯ ವಿವಸ್ತ್ರಗೊಳಿಸಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿಗಳು ಸುಜಾತ ಹಂಡೆ ಎಂಬ ಮಹಿಳೆಯನ್ನು ಪೊಲೀಸರು ಬಂಧಿಸಲು ಹೋಗಿದ್ದ ಸಂದರ್ಭದಲ್ಲಿ ಮಹಿಳೆಯೇ ಸ್ವತಃ ವಿವಸ್ತ್ರಗೊಂಡು ಮಹಿಳಾ ಪೊಲೀಸರನ್ನು ಕಚ್ಚಿದ್ದಾರೆ. ಆಕೆಯ ಮೇಲೆ ಎಫ್ಐಆರ್ ಆಗಿದ್ದು , ಪೊಲೀಸರು ವಿಚಾರಣೆಗೆ ಹೋಗಿದ್ದ ಸಂದರ್ಭದಲ್ಲಿ ಅವರನ್ನೇ ಕಚ್ಚಿದ್ದಾರೆ. ಹತ್ತು ಜನಕ್ಕೂ ಹೆಚ್ಚು ಮಹಿಳಾ ಪೊಲೀಸರಿದ್ದರು. ಕಾನೂನನ್ನು ಯಾರೂ ಕೈಗೆ ತೆಗೆದುಕೊಳ್ಳಬಾರದು. ಹಾಗೆ ಮಾಡಿದವರ ಮೇಲೆ ಕಾನೂನಿನ ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದರು.

ಅನ್ನಭಾಗ್ಯ ಯೋಜನೆಯನ್ನು ಅನೇಕರು ವ್ಯಾಪಾರ ಮಾಡಿಕೊಂಡಿರುವ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿಗಳು ಯೋಜನೆ ಅಡಿ 5 ಕೆ.ಜಿ ಅಕ್ಕಿಯ ಜೊತೆಗೆ ಬೇರೆ ಪದಾರ್ಥಗಳನ್ನು ಕೊಡಲು ತೀರ್ಮಾನಿಸಲಾಗಿದೆ ಎಂದರು.

ಮುಖ್ಯಮಂತ್ರಿಗಳಾಗಿ ದೀರ್ಘಾವಧಿ ಆಗಿದೆ , ಪೂರ್ಣಾವಧಿಯಾಗುತ್ತದೆಯೇ ಎಂಬ ಪ್ರಶ್ನೆಗೆ ಪಕ್ಷದ ವರಿಷ್ಠರು ಅದನ್ನು ತೀರ್ಮಾನಿಸುತ್ತಾರೆ ಎಂದರು

*ಹಂತ ಹಂತವಾಗಿ ಬಾಕಿ ಇರುವ ಜಿಲ್ಲೆಗಳಲ್ಲಿ ವೈದ್ಯಕೀಯ ಕಾಲೇಜು ,ಟ್ರಾಮಾ ಸೆಂಟರ್ ಸ್ಥಾಪನೆ*

*ಹಾವೇರಿ ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ: ಮುಖ್ಯಮಂತ್ರಿ ಸಿದ್ದರಾಮಯ್ಯ*

ಉತ್ತರ ಕರ್ನಾಟಕದ ಹೆಬ್ಬಾಗಿಲು ಎನಿಸಿಕೊಂಡಿರುವ ಹಾವೇರಿ ಜಿಲ್ಲೆಯಲ್ಲಿ ಕ್ಯಾನ್ಸರ್, ಟ್ರಾಮಾ ಸೆಂಟರ್ ಹಾಗೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.

ಅವರು ಇಂದು ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ವೈದ್ಯಕೀಯ ಶಿಕ್ಷಣ ಇಲಾಖೆ ಹಾಗೂ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಹಾವೇರಿ ವೈದ್ಯಕೀಯ ವಿಜ್ಞಾನ ಗಳ ಸಂಸ್ಥೆಯ ಉದ್ಘಾಟನೆ ಹಾಗೂ ವಿವಿಧ ಇಲಾಖೆಗಳ ಕಾಮಗಾರಿಗಳ ಉದ್ಘಾಟನೆ ಮತ್ತು ಶಿಲಾನ್ಯಾಸ ವನ್ನು ನೆರವೇರಿಸಿ ಮಾತನಾಡಿದರು.

ಕಳೆದ ಬಾರಿ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಘೋಷಿಸಿದ್ದ ಹಾವೇರಿ ವೈದ್ಯಕೀಯ ವಿಜ್ಞಾನ ಗಳ ಸಂಸ್ಥೆಯನ್ನು ಘೋಷಿಸಿದ್ದೆ. ಉಪಮುಖ್ಯಮಂತ್ರಿಯಾಗಿದ್ದಾಗ ಪ್ರತಿ ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆ ಮಾಡಬೇಕು ಎಂದು ಘೋಷಣೆ ಮಾಡಿದ್ದೆ ಎಂದು ಸ್ಮರಿಸಿದರು.

ಕರ್ನಾಟಕದಲ್ಲಿ ಇಂದು ಸುಮಾರು 71 ವೈದ್ಯಕೀಯ ಕಾಲೇಜುಗಳಿದ್ದು, ಈ ಪೈಕಿ 22 ಸರ್ಕಾರಿ ವೈದ್ಯಕೀಯ ಕಾಲೇಜುಗಳಿವೆ. ವಿಜಯಪುರ ಜಿಲ್ಲೆ ಸೇರಿದಂತೆ ಉಳಿದ ಜಿಲ್ಲೆಗಳಲ್ಲಿಯೂ ಹಂತ ಹಂತವಾಗಿ ವೈದ್ಯಕೀಯ ಕಾಲೇಜುಗಳು, ಟ್ರಾಮಾ ಸೆಂಟರ್ ಹಾಗೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿಗಳು ಈ ಸಂದರ್ಭದಲ್ಲಿ ಭರವಸೆ ನೀಡಿದರು.

*ಸ್ಥಳೀಯವಾಗಿ ಆರೋಗ್ಯ ಸೇವೆಗಳು ದೊರಕಬೇಕು*

ನಮ್ಮ ಸಮಾಜದಲ್ಲಿ ಬಡವರೇ ಹೆಚ್ಚಾಗಿದ್ದು, ಬಡವರೆಲ್ಲರೂ ಸರ್ಕಾರಿ ಆಸ್ಪತ್ರೆಗಳ ಮೇಲೆ ಅವಲಂಬಿಸಿದ್ದಾರೆ. ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಬಹಳ ದುಬಾರಿ. ದುಬಾರಿ ಚಿಕಿತ್ಸೆಯನ್ನು ಸಾಮಾನ್ಯ ಜನರು ಧರಿಸುವುದು ಕಷ್ಟ. ಸ್ಥಳೀಯವಾಗಿ ಆರೋಗ್ಯ ಸೇವೆ ನೀಡಬೇಕಾದರೆ ಪ್ರತಿ ಜಿಲ್ಲೆಯಲ್ಲಿ ಒಂದು ವೈದ್ಯಕೀಯ ಕಾಲೇಜು ಆಸ್ಪತ್ರೆ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಕ್ಯಾನ್ಸರ್ ಆಸ್ಪತ್ರೆ, ಟ್ರಾಮಾ ಸೆಂಟರ್ ಇರಲೇಬೇಕು ಎಂದರು.

*ಎಲ್ಲರನ್ನೂ ಒಳಗೊಂಡಿರುವ ಸರ್ಕಾರ*.

ನಮ್ಮದು ಎಲ್ಲರನ್ನೂ ಒಳಗೊಂಡಿರುವ ಸರ್ಕಾರ. ಯಾವುದೇ ಧರ್ಮ, ಜಾತಿ, ಪಕ್ಷಕ್ಕೆ ಸೇರಿದವರಾಗಿದ್ದರು ಅವರನ್ನು ಭೇದ ಭಾವವಿಲ್ಲದೆ, ಸೀಮಾತೀತವಾಗಿ ಕಾಣುತ್ತೇವೆ. ಎಲ್ಲ ಜಾತಿ, ಧರ್ಮ, ಪಕ್ಷಗಳಿಗೆ ಸೇರಿದ ಬಡವರಿಗೆ ನಮ್ಮ ಗ್ಯಾರಂಟಿ ಯೋಜನೆಗಳು ತಲುಪುತ್ತಿವೆ. ಬಡವರಿಗೆ ಆರ್ಥಿಕ ಸಾಮಾಜಿಕ ಶಕ್ತಿ ತುಂಬುವುದು ಇಂದಿನ ಅಗತ್ಯವಾಗಿದ್ದು ಸಂವಿಧಾನದಲ್ಲಿ ಜಾತಿ, ವರ್ಗ ರಹಿತವಾದ ಸಮಾಜ ನಿರ್ಮಾಣ ಮಾಡಬೇಕು ಎಂದು ಸ್ಪಷ್ಟವಾಗಿ ಹೇಳಿದೆ. ಕಟ್ಟಕಡೆಯ ಮನುಷ್ಯನಿಗೂ ಆರ್ಥಿಕ, ಸಾಮಾಜಿಕ ಸೌಲಭ್ಯ ದೊರಕಬೇಕು. ಆಗ ಮಾತ್ರ ಸಂವಿಧಾನದ ಆಶಯವಾದ ಜಾತ್ಯತೀತ ಸಮಾಜವನ್ನು ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ. ಇದನ್ನು ನಮ್ಮ ಸರ್ಕಾರ ಚಾಚೂ ತಪ್ಪದೇ ಮಾಡುತ್ತಿದೆ ಎಂದರು.

*ಪ್ರತಿ ವರ್ಷ 52000 ಕೋಟಿ ಗಳನ್ನು ಗ್ಯಾರಂಟಿ ಯೋಜನೆಗಳಿಗೆ ವೆಚ್ಚ ಮಾಡಲಾಗುತ್ತಿದೆ*

ಗ್ಯಾರಂಟಿ ಯೋಜನೆಗಳ ಬಗ್ಗೆ ಟೀಕೆಗಳು ಕೇಳಿ ಬಂದಾಗ ನಾವು ಯೋಜನೆ ನಿಲ್ಲಿಸಿಲ್ಲ. ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷಗಳಾಗಿ ಎಲ್ಲಾ ಗ್ಯಾರಂಟಿ ಯೋಜನೆಗಳನ್ನು ಮೊದಲನೇ ವರ್ಷದಲ್ಲಿಯೇ ಜಾರಿ ಮಾಡಲಾಗಿದೆ. ಒಂದು ಲಕ್ಷದ 12 ಸಾವಿರ ಕೋಟಿ ರೂಪಾಯಿ ಗಳನ್ನು ಎರಡುವರೆ ವರ್ಷದಲ್ಲಿ ಗ್ಯಾರಂಟಿ ಯೋಜನೆಗಳಿಗಾಗಿ ವೆಚ್ಚ ಮಾಡಿದ್ದರೂ ರಾಜ್ಯ ಆರ್ಥಿಕವಾಗಿ ದಿವಾಳಿಯಾಗಿಲ್ಲ. ಪ್ರತಿ ವರ್ಷ 52000 ಕೋಟಿ ಗಳನ್ನು ಗ್ಯಾರಂಟಿ ಯೋಜನೆಗಳಿಗೆ ವೆಚ್ಚ ಮಾಡಲಾಗುತ್ತಿದೆ ಎಂದರು.

*ರಾಜ್ಯ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿಲ್ಲ*

ಜನರು ತಪ್ಪು ತಿಳಿದುಕೊಳ್ಳುವ ರೀತಿಯಲ್ಲಿ ಅಪಪ್ರಚಾರವಾಗುತ್ತಿದೆ ರಾಜ್ಯ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿಲ್ಲ ಎಂದು ಸ್ಪಷ್ಟಪಡಿಸಿದ ಮುಖ್ಯಮಂತ್ರಿಗಳು ಹಾವೇರಿಯಲ್ಲಿ ಕರ್ನಾಟಕ ಪಬ್ಲಿಕ್ ಶಾಲೆ ಕಟ್ಟಡ, ಪ್ರವಾಸಿ ಮಂದಿರ, ವಾಲ್ಮೀಕಿ ಭವನ, ನೂತನ ಗ್ರಂಥಾಲಯ, ಜಿಲ್ಲಾ ಸಾರ್ವಜನಿಕ ಆಸ್ಪತ್ರೆ 250 ರಿಂದ 500 ಹಾಸಿಗೆಗಳ ಆಸ್ಪತ್ರೆಗೆ ಮೇಲ್ದರ್ಜೆಗೆ ಏರಿಸಲಾಗಿದೆ. ಹಾವೇರಿ ವೈದ್ಯಕೀಯ ಕಾಲೇಜಿಗೆ ಸುಮಾರು 500 ಕೋಟಿ ವೆಚ್ಚ ಮಾಡಲಾಗಿದೆ. ಇದರಲ್ಲಿ ಕೇಂದ್ರ ಸರ್ಕಾರ 194 ಕೋಟಿ ನೀಡಿದ್ದು, 300ಕ್ಕೂ ಹೆಚ್ಚು ಕೋಟಿ ಅನುದಾನವನ್ನು ರಾಜ್ಯ ಸರ್ಕಾರ ಭರಿಸಿದೆ ಎಂದರು.

*ಮಹದಾಯಿ ಯೋಜನೆ ಹಾಗೂ ಕೃಷ್ಣಾ ಮೇಲ್ದಂಡೆ ಯೋಜನೆ 3 ನೇ ಹಂತ ಜಾರಿಯಾಗಲೇಬೇಕು*
ನೀರಾವರಿ ಯೋಜನೆಗಳಿಗೆ ವೇಗ ನೀಡಲು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿಯೇ ಸಮಿತಿ ರಚಿಸೋಣ ಎಂದ ಮುಖ್ಯಮಂತ್ರಿಗಳು ಮಹದಾಯಿ ಯೋಜನೆ ಹಾಗೂ ಕೃಷ್ಣಾ ಮೇಲ್ದಂಡೆ ಯೋಜನೆ 3 ನೇ ಹಂತ ಜಾರಿಯಾಗಲೇಬೇಕು ಎಂದರು. ಪ್ರಕರಣ ಸುಪ್ರೀಂಕೋರ್ಟಿನಲ್ಲಿದ್ದರೂ ಅಫಿಡವಿಟ್ ಸಲ್ಲಿಸಿ ವಾಪಸ್ಸು ತೆಗೆದುಕೊಳ್ಳಬೇಕು ಎಂದು ಮುಖ್ಯಮಂತ್ರಿಗಳು ತಿಳಿಸಿದರು. ಕಾನೂನು ತಜ್ಞರ ಅಭಿಪ್ರಾಯ ಪಡೆದು ಮುಂದುವರೆಯೋಣ ಎಂದರು. ಕೃಷ್ಣ ಮೇಲ್ದಂಡೆ ಯೋಜನೆ ಪೂರ್ಣಗೊಳ್ಳಲೇಬೇಕು ಇಲ್ಲದಿದ್ದರೆ ರಾಜ್ಯಕ್ಕೆ ಹಂಚಿಕೆಯಾಗಿರುವ 173 ಟಿಎಂಸಿ ನೀರನ್ನು ಬಳಕೆ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ ಎಂದರು.
ಬಸವರಾಜ ಬೊಮ್ಮಾಯಿ ಅವರು ಈ ಬಗ್ಗೆ ಆಸಕ್ತಿ ವಹಿಸಲಿ ಎಂದು ಒತ್ತಾಯಿಸಿದರು. ಪರಿಸರ ತೀರುವಳಿ ದೊರಕಿಸಲು ಪ್ರಯತ್ನಿಸಬೇಕು ಎಂದರು.

ಜ್ಯಾತ್ಯತೀತ ಸಮಾಜ ನಿರ್ಮಾಣವಾಗದೆ ಹೋದರೆ, ಅಸಮಾನತೆ ನೀಗಿಸಲು ಸಾಧ್ಯವಿಲ್ಲ. ಎಲ್ಲರಿಗೂ ಆರ್ಥಿಕ ಸಾಮಾಜಿಕ ಶಕ್ತಿ ಬಂದಾಗ ಮಾತ್ರ ಸ್ವಾತಂತ್ರ್ಯ ಯಶಸ್ವಿಯಾಗಲು ಸಾಧ್ಯ ಎಂದರು.

*ಮನುಷ್ಯ ಸಮಾಜ ನಿರ್ಮಾಣ ನಮ್ಮ ನಂಬಿಕೆ*

ಹಾವೇರಿ ಜಿಲ್ಲೆ ಸರ್ವಜ್ಞ, ಕನಕದಾಸರು ಹಾಗೂ ಶಿಶುನಾಳ ಶರೀಫರ ನಾಡು. ಇವರೆಲ್ಲರೂ ಸಮಾಜದಲ್ಲಿ ಸುಧಾರಣೆಯಾಗಿ ಮನುಷ್ಯ ಸಮಾಜ ನಿರ್ಮಾಣವಾಗಬೇಕೆಂದು ಸಾರಿದವರು. ಮನುಷ್ಯರು ಪರಸ್ಪರ ಪ್ರೀತಿಸಬೇಕೆಂದು ಹೇಳುತ್ತದೆಯೇ ಹೊರತು ದ್ವೇಷಿಸಲು ಯಾವ ಧರ್ಮಗಳು ಹೇಳುವುದಿಲ್ಲ. ಇದರಲ್ಲಿ ನಂಬಿಕೆ ಇಟ್ಟವರು ನಾವು ಎಂದರು.

*ವೈಜ್ಞಾನಿಕ ಚಿಂತನೆ ಎಲ್ಲರಲ್ಲಿ ಬಂದಾಗ ಮಾತ್ರ ಜಾತ್ಯತೀಯ ಸಮಾಜ ನಿರ್ಮಾಣ ಸಾಧ್ಯ*
ಬುದ್ಧ, ಬಸವ, ಅಂಬೇಡ್ಕರ್, ಗಾಂಧಿ, ಕನಕದಾಸರು, ನಾರಾಯಣಗುರುಗಳು ಹಾಕಿಕೊಟ್ಟ ಮಾರ್ಗದಲ್ಲಿ ನಮ್ಮ ಸರ್ಕಾರ ನಡೆಯುತ್ತಿದೆ ಎಂದರು. ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಲಾಗಿದೆ. ಜಾತಿ ವಿನಾಶ, ಕಂದಾಚಾರ, ಮೌಢ್ಯ ತೊಲಗಬೇಕೆಂದು ಬಸವಣ್ಣನವರು ಹೇಳಿದ್ದಾರೆ. ವೈಚಾರಿಕತೆ, ವೈಜ್ಞಾನಿಕ ಚಿಂತನೆ ಎಲ್ಲರಲ್ಲಿ ಬಂದಾಗ ಮಾತ್ರ ಜಾತ್ಯತೀಯ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ ಎಂದರು.ಈ ದಿಸೆಯಲ್ಲಿ ನಮ್ಮ ಸರ್ಕಾರ ನಡೆಯುತ್ತಿದೆ. ಹಾವೇರಿ ಜಿಲ್ಲೆಯನ್ನು ಮಾದರಿ ಜಿಲ್ಲೆಯಾಗಿಸಲು ಸರ್ಕಾರ ಎಲ್ಲಾ ಪ್ರಯತ್ನ ಮಾಡಲಿದೆ ಎಂದರು.

Leave a Reply

Your email address will not be published. Required fields are marked *