images 3

ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಗಂಭೀರ ಸಮಸ್ಯೆಗಳನ್ನು ಪರಿಹರಿಸಿ…..!

Genaral STATE

ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಗಂಭೀರ ಸಮಸ್ಯೆಗಳನ್ನು ಪರಿಹರಿಸಿ
ಅಧಿಕಾರಿಗಳಿಗೆ ನ್ಯಾಯಮೂರ್ತಿ ಎ.ಎನ್. ವೇಣುಗೋಪಾಲಗೌಡ ನಿರ್ದೇಶನ

ಬೆಂಗಳೂರು, ಫೆಬ್ರವರಿ 12, (ಕರ್ನಾಟಕ ವಾರ್ತೆ): ರಾಜ್ಯದ ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ ಸಂಬಂಧ ಪಟ್ಟ ಎಲ್ಲಾ ಅಧಿಕಾರಿಗಳು ನಿಯಮಿತವಾಗಿ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳನ್ನು ಗಂಭೀರವಾಗಿ ಆಲಿಸಿ ಸಮಸ್ಯೆಗಳನ್ನು ಪರಿಹರಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ  ಕರ್ನಾಟಕ ಉಚ್ಛನ್ಯಾಯಾಲಯದ ನಿವೃತ್ತ ನ್ಯಾಯಾಧೀಶರು ಹಾಗೂ ಕರ್ನಾಟಕ ರಾಜ್ಯ ಕಾನೂನೂ ಸೇವೆಗಳ ಪ್ರಾಧಿಕಾರದ ಗೌರವಾನ್ವಿತ ನ್ಯಾಯಮೂರ್ತಿಗಳಾದ ಎ.ಎನ್. ವೇಣುಗೋಪಾಲಗೌಡ ಅವರು ನಿರ್ದೇಶನ ನೀಡಿದರು.

ಇಂದು ಹೆಚ್. ಸಿದ್ದಯ್ಯ ರಸ್ತೆಯಲ್ಲಿರುವ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ “ನ್ಯಾಯದೇಗುಲ” ಸಭಾಂಗಣದಲ್ಲಿ, ರಾಜ್ಯದಲ್ಲಿರುವ ಅಂಗನವಾಡಿ ಕೇಂದ್ರಗಳ ಸಮಸ್ಯೆಗಳ ಬಗ್ಗೆ ಚರ್ಚಿಸುವ ಸಲುವಾಗಿ ಕರೆಯಲಾಗಿದ್ದ ಸಭೆಯಲ್ಲಿ ಅವರು ಮಾತನಾಡುತ್ತ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳ ಜೊತೆ ಜೊತೆಯಲ್ಲಿಯೇ ಆರೋಗ್ಯ ಇಲಾಖೆಯ ಅಧಿಕಾರಿಗಳು ಸಹ ಭೇಟಿ ನೀಡಿ ಅಲ್ಲಿನ ಮಕ್ಕಳ ಮತ್ತು ಗರ್ಭಿಣಿ ಸ್ತ್ರೀಯರ ಹಾಗೂ ಬಾಣಂತಿಯರ ಆರೋಗ್ಯದ ಬಗ್ಗೆ ತಪಾಸಣೆ ನಡೆಸಲು ತಿಳಿಸಿದರು. ಅಲ್ಲದೇ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧಿಕಾರಿಗಳು ಸಹ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳನ್ನು ಪರಿಹರಿಸುವಂತೆ ತಿಳಿಸಿದರು.

ಕೆಲವು ಕಡೆ ಅಂಗನವಾಡಿ ಕೇಂದ್ರಗಳು ಬಾಡಿಗೆ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಅದರೆ ಬಾಡಿಗೆ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿರು ಅಂಗನವಾಡಿ ಕೇಂದ್ರಗಳ ಬಾಡಿಗೆಯನ್ನು ಸರಿಯಾಗಿ ಪಾವತಿ ಮಾಡದೆ ಇರುವುದರಿಂದ ಅಲ್ಲಿ ಸಮಸ್ಯೆಗಳು ಉದ್ಭವವಾಗುತ್ತಿವೆ. ಆದ್ದರಿಂದ ಸಂಬಂಧಿಸಿದ ಅಧಿಕಾರಿಗಳು ಈ ಬಗ್ಗೆ ಹೆಚ್ಚಿನ ನಿಗಾ ವಹಿಸಿ ಸಕಾಲದಲ್ಲಿ ಬಾಡಿಗೆ ಪಾವತಿಗೆ ಕ್ರಮ ವಹಿಸುವಂತೆ ತಿಳಿಸಿದರು.

ಹಲವಾರು ಅಂಗನವಾಡಿ ಕೇಂದ್ರಗಳು ಶಿಥಿಲಾವಸ್ಥೆಯಲ್ಲಿವೆ. ಕೂಡಲೇ ಅವುಗಳನ್ನು ಸ್ಥಳಾಂತರಿಸಲು ಕಟ್ಟಡಗಳನ್ನು ಗುರುತಿಸಿ ಕೂಡಲೇ ಸ್ಥಳಾಂತರ ಮಾಡಿ. ಗಣನೀಯ ಸಂಖ್ಯೆಯ ಅಂಗನವಾಡಿ ಕೇಂದ್ರಗಳು ಅತ್ಯಂತ ಕಿರಿದಾದ ಜಾಗದಲ್ಲಿ ಕಾರ್ಯನಿರ್ವಹಿಸುತ್ತಿವೆ. ಅವುಗಳನ್ನು ಗುರುತಿಸಿ ಅಂತಹ ಕಟ್ಟಡಗಳನ್ನು ಬೇರೆ ಕಡೆ ಸ್ಥಳಾಂತರ ಮಾಡಲು ಜಾಗ ಗುರುತಿಸಿ ಸ್ಥಳಾಂತರ ಮಾಡಲು ಕ್ರಮ ವಹಿಸುವಂತೆ ತಿಳಿಸಿದರು.

ಕೆಲವು ಕಡೆ ಅಂಗನವಾಡಿ ಕೇಂದ್ರಗಳಲ್ಲಿ ನೈರ್ಮಲ್ಯ ಮತ್ತು ಸ್ವಚ್ಛತೆಯನ್ನು ಕಾಪಾಡುತ್ತಿಲ್ಲ, ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಗಮನ ಹರಿಸಿ ಸ್ವಚ್ಛತೆಯನ್ನು ಕಾಪಾಡುವಂತೆ ಅರಿವು ಮೂಡಿಸಲು ಕ್ರಮವಹಿಸಿ. ಮೇಲ್ವಿಚಾರಕರು ಮತ್ತು ಸಿ.ಡಿ.ಪಿ.ಒ ಗಳು ಅಂಗನವಾಡಿ ಕೇಂದ್ರಗಳಿಗೆ ನಿಯಮಿತವಾಗಿ ಭೇಟಿ ನೀಡದೇ ಇರುವುದು ಕಂಡುಬಂದಿದ್ದು, ಮೇಲ್ವಿಚಾರಕರು ಮತ್ತು ಸಿ.ಡಿ.ಪಿ.ಒ ಗಳು ನಿಯಮಿತವಾಗಿ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸುವಂತೆ ಸೂಚಿಸಿದರು.

ಕೆಲವು ಅಂಗನವಾಡಿ ಕಾರ್ಯಕರ್ತೆಯರು ವಿಶೇಷ ಚೇತನರನ್ನು ಕೇಂದ್ರಗಳಿಗೆ ದಾಖಲಿಸಿಕೊಳ್ಳಲು ನಿರಾಕರಿಸುತ್ತಿದ್ದಾರೆ. ಈ ಬಗ್ಗೆ ವಿಶೇಷ ಗಮನ ಹರಿಸಿ ವಿಶೇಷ ಚೇತನರನ್ನು ಅಂಗನವಾಡಿ ಕೇಂದ್ರಗಳಿಗೆ ದಾಖಲಿಸಿಕೊಳ್ಳುವಂತೆ ಸಂಬಂಧಿಪಟ್ಟ ಅಂಗನವಾಡಿ ಕಾರ್ಯಕರ್ತರಿಗೆ ಸೂಚನೆಗಳನ್ನು ನೀಡಲು ತಿಳಿಸಲಾಯಿತು.

ಅಂಗನವಾಡಿ ಕೇಂದ್ರಗಳಿಗೆ ಕಳಪೆ ಗುಣಮಟ್ಟದ ಆಹಾರವನ್ನು ಪೂರೈಸಲಾಗುತ್ತಿದೆ. ಕೆಲವು ಕಡೆ ಅಂಗನವಾಡಿ ಕಾರ್ಯಕರ್ತೆಯರು ಆಹಾರ ಪದಾರ್ಥಗಳ ಮುಕ್ತಾಯ ದಿನಾಂಕವನ್ನು  ಪರಿಶೀಲಿಸದೆಯೇ ಅವುಗಳನ್ನು ಬಳಸುತ್ತಿದ್ದಾರೆ. ಇದರಿಂದ ಮಕ್ಕಳ ಆರೋಗ್ಯದ ಮೇಲೆ ಗಂಭೀರ ಪರಿಣಾಮಗಳನ್ನು ಬೀರುತ್ತವೆ. ಆಹಾರ ಸುರಕ್ಷತಾ ಇಲಾಖೆಯವರು ಅಗಿಂದಾಗ್ಗೆ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಅಂಗನವಾಡಿ ಕೇಂದ್ರಗಳಲ್ಲಿ ಬಳಸುವ ಆಹಾರ ಪದಾರ್ಥಗಳನ್ನು ಪರಿಶೀಲಿಸಿ. ಕಳಪೆ ಗುಣಮಟ್ಟದ ಆಹಾರಗಳ ಪೂರೈಕೆ ಬಗ್ಗೆ ತಪಾಸಣೆ ನಡೆಸಿ ವರದಿ ಸಲ್ಲಿಸಿ. ಅಲ್ಲದೇ ಅವಧಿ ಮುಗಿದ ಆಹಾರ ಪದಾರ್ಥಗಳನ್ನು ಬಳಕೆ ಮಾಡದಂತೆ ಸೂಚನೆ ನೀಡಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಾಗೂ ಆಹಾರ ಸುರಕ್ಷತಾ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು.

ಅಂಗನವಾಡಿ ಕೇಂದ್ರಗಳಿಗೆ ಆರೋಗ್ಯ ತಪಾಸಣೆ ನಡೆಸಲು ವೈದ್ಯಕೀಯ ತಂಡವು ನಿಯಮಿತವಾಗಿ ಕೇಂದ್ರಗಳಿಗೆ ಭೇಟಿ ನೀಡುತ್ತಿಲ್ಲ ಈ ಬಗ್ಗೆ ಹೆಚ್ಚಿನ ಗಮನ ಹರಿಸಿ. ಯಾವುದೇ ರೀತಿಯ ಕಾರಣಗಳನ್ನು ನೀಡದೇ ನಿಯಮಿತವಾಗಿ ವೈದ್ಯಕೀಯ ತಂಡವು ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಆರೋಗ್ಯ ತಪಾಸಣೆ ನಡೆಸುವಂತೆ ಸೂಚಿಸಿದರು.

ಪ್ರಥಮ ಚಿಕಿತ್ಸಾ ಪೆಟ್ಟಿಗೆ / ಕಿಟ್ ಅನ್ನು ಹೇಗೆ ಬಳಸಬೇಕೆಂಬ ಬಗ್ಗೆ ಅಂಗನವಾಡಿ ಕಾರ್ಯಕರ್ತೆಯರಿಗೆ ಹೆಚ್ಚಿನ ಜ್ಞಾನವಿಲ್ಲ. ಮಕ್ಕಳಿಗೆ ಆಟಿಕೆಗಳ ನೇರ ಪ್ರವೇಶವಿಲ್ಲ (ಆಟವಾಡಲು ಸಿಗುತ್ತಿಲ್ಲ).ಅಗತ್ಯವಿರುವ ದಾಖಲೆಗಳನ್ನು / ರಿಜಿಸ್ಟರ್‍ಗಳನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ. ಆಹಾರದ ಕಿಟ್‍ಗಳನ್ನು ಕೇಂದ್ರಗಳಿಗೆ ಪೂರೈಸುವ ಮೊದಲು ಪ್ರಯೋಗಾಲಯಗಳಲ್ಲಿ ಸರಿಯಾಗಿ ಪರೀಕ್ಷಿಸುತ್ತಿಲ್ಲ. ಈ ಬಗ್ಗೆ ಅಂಗನವಾಡಿ ಕಾರ್ಯಕರ್ತೆಯರಿಗೆ ಅರಿವು ಮೂಡಿಸಲು ಅಗತ್ಯ ಕ್ರಮ ವಹಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದರು.

ಕೆಲವು ಅಂಗನವಾಡಿ ಕೇಂದ್ರಗಳಿಗೆ ಸರಿಯಾದ ವಿದ್ಯುತ್ ಮತ್ತು ನೀರಿನ ಪೂರೈಕೆ ಇಲ್ಲ. ಈ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಹೆಚ್ಚಿನ ಒತ್ತು ನೀಡಿ ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ ಉಚಿತವಾಗಿ ಶುದ್ಧ ನೀರು ಪೂರೈಕೆ ಮಾಡಲು ಹಾಗೂ ಉಚಿತವಾಗಿ ವಿದ್ಯುತ್ ಬಿಲ್ಲು ಪಾವತಿ ಮಾಡಲು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ವಹಿಸುವಂತೆ ತಿಳಿಸಲಾಯಿತು.

ಅಂಗನವಾಡಿ ಕೇಂದ್ರಗಳಲ್ಲಿ ಕಂಡುಬಂದ ಸಮಸ್ಯೆಗಳು ಅಥವಾ ಕೊರತೆಗಳ ಬಗ್ಗೆ ಶಿಫಾರಸು ಮಾಡಿದ್ದರೂ ಸಹ, ಇಲಾಖೆಯು ನಿಗದಿತ ಸಮಯದೊಳಗೆ ಅವುಗಳನ್ನು ಸರಿಪಡಿಸುತ್ತಿಲ್ಲ. ಕೊರತೆಗಳನ್ನು ಮರುಪರಿಶೀಲಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಯಾವುದೇ ಸರಿಯಾದ ಕಣ್ಗಾವಲು ವ್ಯವಸ್ಥೆ ಇಲ್ಲ. ಈ ಬಗ್ಗೆ ಕೂಡಲೇ ಕ್ರಮ ವಹಿಸುವಂತೆ ಸೂಚಿಸಿದರು.

ಕೆಲವು ಅಂಗನವಾಡಿ ಕೇಂದ್ರಗಳಿಗೆ ಪೂರೈಸಲಾಗುವ ಕೆಲವು ಪ್ಯಾಕೆಟ್ ಆಹಾರಗಳನ್ನು ಸೇವಿಸಲು ಮಕ್ಕಳು ಸಿದ್ಧರಿಲ್ಲ. ಕೆಲವು ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳ ಹಾಜರಾತಿ ಕಡಿಮೆ ಇದೆ. ಕೆಲವು ಅಂಗನವಾಡಿ ಕಾರ್ಯಕರ್ತೆಯರು ಕೇಂದ್ರಗಳನ್ನು ತೆರೆಯುವ ಮತ್ತು ಮುಚ್ಚುವ ಸಮಯದಲ್ಲಿ ಶಿಸ್ತನ್ನು ಪಾಲಿಸುತ್ತಿಲ್ಲ. ಈ ಬಗ್ಗೆ ಹೆಚ್ಚಿನ ಗಮನ ಹರಿಸಿ ಅಂಗನವಾಡಿ ಕೇಂದ್ರಗಳಿಗೆ ಮಕ್ಕಳನ್ನು ದಾಖಲಿಸುವ ಬಗ್ಗೆ ಸೂಕ್ತ ಅರಿಮೂಡಿಸಲು ತಿಳಿಸಲಾಯಿತು. ಅದೇ ರೀತಿ ಪೌಷ್ಟಿಕಾಂಶಗಳಿಂದ ಕೂಡಿರುವ ರೀತಿಯ ಆಹಾರ ಪದಾರ್ಥಗಳನ್ನು ಪೂರೈಸಲು ಸೂಚಿಸಲಾಯಿತು. ಅಲ್ಲದೇ ಅಂಗನವಾಡಿ ಕಾರ್ಯಕರ್ತೆಯರು ಅಂಗನವಾಡಿ ಕೇಂದ್ರಗಳನ್ನು ತೆರೆಯುವ ಮತ್ತು ಮುಚ್ಚುವ ಬಗ್ಗೆ ಸೂಕ್ತವಾದ ಮಾರ್ಗದರ್ಶನ ನೀಡಲು ತಿಳಿಸಲಾಯಿತು.

ಸಭೆಯಲ್ಲಿ ಉಪಸ್ಥಿತರಿದ್ದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮೇಜರ್ ಪಿ. ಮಣಿವಣ್ಣನ್ ಅವರು ಮಾತನಾಡುತ್ತಾ, ಕೆಲವು ಕಡೆ ಅಂಗನವಾಡಿ ಕೇಂದ್ರಗಳನ್ನು ತೆರೆಯಲು ಸ್ಥಳ ದೊರೆಯದೇ ಇರುವುದು ತಿಳಿದುಬಂದಿದ್ದು, ಬಿ.ಡಿ.ಎ. ವ್ಯಾಪ್ತಿಯಲ್ಲಿ ಅಗತ್ಯವಿರುವ ಸ್ಥಳಗಳನ್ನು ಗುರುತಿಸಿ ನೀಡಿದಲ್ಲಿ ಅದನ್ನು ಪ್ರಾಧಿಕಾರದ ಸಭೆಯ ಮುಂದೆ ಮಂಡಿಸಿ ಸೂಕ್ತ ರೀತಿಯಲ್ಲಿ ಸ್ಥಳವಕಾಶವನ್ನು ಕಲ್ಪಿಸಿಕೊಡಲಾಗುವುದು ಎಂದು ತಿಳಿಸಿದರು. ಈ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಕೂಡಲೇ ಬಿ.ಡಿ.ಎ ಅಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸುವಂತೆ ತಿಳಿಸಲಾಯಿತು.

ಸಭೆಯಲ್ಲಿ ಆರೋಗ್ಯ ಇಲಾಖೆ, ಬಿ.ಎಂ.ಟಿ.ಸಿ ಇಲಾಖೆ, ಕೇಂದ್ರ ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ವಿಡಿಯೋ ಕಾನ್ಫರೆನ್ಸ್ ಮೂಲಕ ಎಲ್ಲಾ ಜಿಲ್ಲೆಗಳ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಉಪಸ್ಥಿತರಿದ್ದರು.