IMG 20260325 WA0082

ವಿಧಾನಪರಿಷತ್ : ಶಿಕ್ಷಕ ಸ್ನೇಹಿ ವರ್ಗಾವಣೆ ತಿದ್ದುಪಡಿ ವಿಧೇಯಕ 2026 – ಅಂಗೀಕಾರ.!

Genaral STATE

*ಶಿಕ್ಷಕ ಸ್ನೇಹಿ ವರ್ಗಾವಣೆ ತಿದ್ದುಪಡಿ ವಿಧೇಯಕ 2026 – ವಿಧಾನಪರಿಷತ್ತಿನಲ್ಲಿ ಅಂಗೀಕಾರ*

​ಬೆಂಗಳೂರು, ಮಾರ್ಚ್ 25, (ಕರ್ನಾಟಕ ವಾರ್ತೆ) :ರಾಜ್ಯದ ಸಾವಿರಾರು ಶಿಕ್ಷಕರ ಬಹುದಿನಗಳ ಬೇಡಿಕೆಯನ್ನು ಈಡೇರಿಸುವ ನಿಟ್ಟಿನಲ್ಲಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವರಾದ ಎಸ್. ಮಧು ಬಂಗಾರಪ್ಪ ಅವರು ಇಂದು ಕರ್ನಾಟಕ ವಿಧಾನಸಭೆಯಿಂದ ಅಂಗೀಕೃತ ರೂಪದಲ್ಲಿರುವ *ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು (ಶಿಕ್ಷಕರ ವರ್ಗಾವಣೆ ನಿಯಂತ್ರಣ) (ತಿದ್ದುಪಡಿ) ವಿಧೇಯಕ 2026* ವಿಧಾನಪರಿಷತ್ತಿನಲ್ಲಿ ಮಂಡಿಸಿದರು.

*ಉದ್ದೇಶಗಳು ಮತ್ತು‌ ಕಾರಣಗಳು*

​ಈ ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು (ಶಿಕ್ಷಕರ ವರ್ಗಾವಣೆ ನಿಯಂತ್ರಣ) ಅಧಿನಿಯಮ, 2020 (2020ರ ಕರ್ನಾಟಕ ಅಧಿನಿಯಮ 04)ನ್ನು, ​ (i) ನಿರ್ಣಾಯಕ ಹುದ್ದೆಗಳನ್ನು ಪರಿಭಾಷಿಸಲು, ​(ii) ಅನುಸೂಚಿ-1ರ ಕ್ರಮ ಸಂಖ್ಯೆ IIIರಲ್ಲಿನ ಹುದ್ದೆಗಳಿಗೆ ಕೌನ್ಸಿಲಿಂಗ್ ಮೂಲಕ ವರ್ಗಾವಣೆಗಾಗಿ ಉಪಬಂಧವನ್ನು ಕಲ್ಪಿಸಲು, (iii) ಸದರಿ ಹುದ್ದೆಗಳಿಗೆ ಗರಿಷ್ಠ ಸೇವಾವಧಿಯನ್ನು ನಿರ್ದಿಷ್ಟಪಡಿಸಲು, ​(iv) ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಲ್ಲಿನ ಬೋಧಕೇತರ ಹುದ್ದೆಗಳಿಗೆ ಮತ್ತು ರಾಜ್ಯ ಸಿವಿಲ್ ಸೇವೆಗಳು ಅಥವಾ ಮಂಡಳಿಗಳು ಅಥವಾ ನಿಗಮಗಳಲ್ಲಿನ ಯಾವುದೇ ಇತರ ಹುದ್ದೆಗಳಿಗೆ ಅನುಸೂಚಿ-1ರಲ್ಲಿ ಮತ್ತು 2ನೇ ಪ್ರಕರಣದ (ಎಚ್) ಖಂಡದಲ್ಲಿ ನಿರ್ದಿಷ್ಟಪಡಿಸಿದ ಬೋಧಕ ಹುದ್ದೆಗಳ ಸ್ಥಾನಿಕರ ವರ್ಗಾವಣೆಯನ್ನು ಪ್ರತಿಷೇಧಿಸುವ ಉಪಬಂಧವನ್ನು ಕಲ್ಪಿಸಲು ಮತ್ತು ( v) ಕೆಲವು ಇತರ ಆನುಷಂಗಿಕ ತಿದ್ದುಪಡಿಗಳನ್ನು ಮಾಡಲು ಮತ್ತಷ್ಟು ತಿದ್ದುಪಡಿ ಮಾಡುವುದು ಅವಶ್ಯಕವೆಂದು ಪರಿಗಣಿಸಿ ಜಾರಿಗೆ ತರಲು ಈ ವಿಧೇಯಕವನ್ನು ಮಂಡಿಸುತ್ತಿದ್ದು ವಿಧೇಯಕವನ್ನು ಪರ್ಯಾಲೋಚಿಸಿ ಅಂಗೀಕರಿಸುವಂತೆ ಕೋರಿದರು.

​ಈ ತಿದ್ದುಪಡಿ ವಿಧೇಯಕವು ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯನ್ನು ಹೆಚ್ಚು ಸರಳಗೊಳಿಸುವ ಮತ್ತು ಮಾನವೀಯ ನೆಲೆಗಟ್ಟಿನಲ್ಲಿ ಸುಧಾರಿಸುವ ಗುರಿಯನ್ನು ಹೊಂದಿದೆ.

*ಈ ವಿಧೇಯಕದ ಪ್ರಮುಖ ಅಂಶಗಳು*:

*ಪರಸ್ಪರ ವರ್ಗಾವಣೆಗೆ ಹೆಚ್ಚಿನ ಸಡಿಲಿಕೆ*:

ಹೊಸ ತಿದ್ದುಪಡಿಯ ಅನ್ವಯ, ಇಬ್ಬರು ಶಿಕ್ಷಕರು ಪರಸ್ಪರ ಒಪ್ಪಿಗೆಯೊಂದಿಗೆ ವರ್ಗಾವಣೆಗೊಳ್ಳಲು (Mutual Transfer) ವಿಧಿಸಲಾಗಿದ್ದ ಕನಿಷ್ಠ ಸೇವಾ ಅವಧಿಯನ್ನು ಕಡಿತಗೊಳಿಸಲಾಗಿದೆ. ಇದರಿಂದ ಶಿಕ್ಷಕರು ತಮಗೆ ಅನುಕೂಲಕರವಾದ ಸ್ಥಳಗಳಿಗೆ ಶೀಘ್ರವಾಗಿ ವರ್ಗಾವಣೆ ಪಡೆಯಲು ಹಾದಿ ಸುಗಮವಾಗಿದೆ.

*ವಿಶೇಷ ಪ್ರಕರಣಗಳ ವರ್ಗಾವಣೆ*:

ದೀರ್ಘಕಾಲದ ಕಾಯಿಲೆಯಿಂದ ಬಳಲುತ್ತಿರುವ ಶಿಕ್ಷಕರು, ಅಂಗವಿಕಲರು ಮತ್ತು ವಿಧವೆಯರಿಗೆ ವರ್ಗಾವಣೆಯಲ್ಲಿ ಹೆಚ್ಚಿನ ಆದ್ಯತೆ ನೀಡಲು ನಿರ್ಧರಿಸಲಾಗಿದೆ. ಮಾನವೀಯ ದೃಷ್ಟಿಯಿಂದ ಈ ವರ್ಗದ ಶಿಕ್ಷಕರು ಬಯಸುವ ಸ್ಥಳಗಳಿಗೆ ವರ್ಗಾವಣೆಗೊಳ್ಳಲು ನಿಯಮಗಳಲ್ಲಿ ಅಗತ್ಯ ತಿದ್ದುಪಡಿ ತರಲಾಗಿದೆ.IMG 20260325 WA0095

*ವಲಯವಾರು ವರ್ಗಾವಣೆ ಮಿತಿ*:

ಈ ಹಿಂದೆ ಇದ್ದ ಕಟ್ಟುನಿಟ್ಟಾದ ವಲಯವಾರು ವರ್ಗಾವಣೆ ನಿಯಮಗಳನ್ನು ಸಡಿಲಿಸಿ, ಶೈಕ್ಷಣಿಕ ಹಿತದೃಷ್ಟಿಯಿಂದ ಶಿಕ್ಷಕರ ಕೊರತೆ ಇರುವ ಶಾಲೆಗಳಿಗೆ ಸಮತೋಲಿತವಾಗಿ ಶಿಕ್ಷಕರನ್ನು ಮರುಹಂಚಿಕೆ ಮಾಡಲು ಇಲಾಖೆಗೆ ಹೆಚ್ಚಿನ ಅಧಿಕಾರ ನೀಡಲಾಗಿದೆ. ಇದು ಗ್ರಾಮೀಣ ಭಾಗದ ಶಾಲೆಗಳಲ್ಲಿ ಶಿಕ್ಷಕರ ಲಭ್ಯತೆಯನ್ನು ಖಚಿತಪಡಿಸಲಿದೆ.

*ದಂಪತಿ ಪ್ರಕರಣಗಳಿಗೆ ಆದ್ಯತೆ*:

ಸರ್ಕಾರಿ ಸೇವೆಯಲ್ಲಿರುವ ದಂಪತಿಗಳು (Couple Cases) ಒಂದೇ ಜಿಲ್ಲೆ ಅಥವಾ ಪಕ್ಕದ ತಾಲ್ಲೂಕುಗಳಲ್ಲಿ ಕೆಲಸ ಮಾಡಲು ಅನುಕೂಲವಾಗುವಂತೆ ವರ್ಗಾವಣೆ ಪ್ರಕ್ರಿಯೆಯಲ್ಲಿ ವಿಶೇಷ ರಿಯಾಯಿತಿಗಳನ್ನು ಘೋಷಿಸಲಾಗಿದೆ. ಇದು ಶಿಕ್ಷಕರ ಕೌಟುಂಬಿಕ ನೆಮ್ಮದಿಗೆ ಸಹಕಾರಿಯಾಗಲಿದೆ.

*ಪಾರದರ್ಶಕ ಪ್ರಕ್ರಿಯೆ*:

ವರ್ಗಾವಣೆ ಪ್ರಕ್ರಿಯೆಯು ಸಂಪೂರ್ಣವಾಗಿ ಗಣಕೀಕೃತಗೊಂಡಿದ್ದು, ಯಾವುದೇ ಮಧ್ಯವರ್ತಿಗಳ ಹಸ್ತಕ್ಷೇಪವಿಲ್ಲದೆ ಅರ್ಹತೆಯ ಆಧಾರದ ಮೇಲೆ ಕೌನ್ಸೆಲಿಂಗ್ ಮೂಲಕ ನಡೆಯಲಿದೆ ಎಂದು ಸಚಿವರು ಸದನಕ್ಕೆ ಭರವಸೆ ನೀಡಿದ್ದಾರೆ.

​ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಮಧು ಬಂಗಾರಪ್ಪ ಅವರು, “ನಮ್ಮ ಸರ್ಕಾರ ಶಿಕ್ಷಕರ ಹಿತರಕ್ಷಣೆಗೆ ಬದ್ಧವಾಗಿದೆ. ಈ ತಿದ್ದುಪಡಿ ವಿಧೇಯಕವು ಶಿಕ್ಷಕರ ವೃತ್ತಿಜೀವನದ ಒತ್ತಡವನ್ನು ಕಡಿಮೆ ಮಾಡಿ, ಅವರು ಬೋಧನೆಯಲ್ಲಿ ಹೆಚ್ಚಿನ ಆಸಕ್ತಿ ವಹಿಸಲು ಪೂರಕವಾಗಲಿದೆ” ಹಾಗೂ ಈ ವಿಧೇಯಕವು ಜಾರಿಗೆ ಬರುವುದರಿಂದ ರಾಜ್ಯದ ಲಕ್ಷಾಂತರ ಶಿಕ್ಷಕರಿಗೆ ವರ್ಗಾವಣೆ ಪ್ರಕ್ರಿಯೆಯಲ್ಲಿ ನ್ಯಾಯ ಸಿಗುವ ನಿರೀಕ್ಷೆಯಿದೆ ಎಂದು‌ ತಿಳಿಸಿದರು

ವಿಧಾನ ಪರಿಷತ್ತಿನ ಸದಸ್ಯರಾದ ಶಶೀಲ್ ನಮೋಶಿ, ಡಿ.ಟಿ. ಶ್ರೀನಿವಾಸ್, ವೈ.ಎಂ. ಸತೀಶ್, ಐವಾನ್ ಡಿಸೋಜಾ, ಪುಟ್ಟಣ್ಣ, ಎಸ್.ವ್ಹಿ. ಸಂಕನೂರ, ಶಾಂತರಾಂ ಬುಡ್ನ ಸಿದ್ದಿ, ಎಸ್.ಎಲ್. ಭೋಜೆಗೌಡ, ನಿರಾಣಿ ಹನಮಂತ ರುದ್ರಪ್ಪ, ಅವರುಗಳು ಪರ್ಯಾಲೋಚಿಸಿ, ವಿಧೇಯಕವನ್ನು ಸ್ವಾಗತಿಸಿದರು.

ನಂತರ *ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು (ಶಿಕ್ಷಕರ ವರ್ಗಾವಣೆ ನಿಯಂತ್ರಣ) (ತಿದ್ದುಪಡಿ) ವಿಧೇಯಕ 2026* ವಿಧೇಯಕವು ವಿಧಾನ ಪರಿಷತ್ತಿನಲ್ಲಿ ಅಂಗೀಕಾರವಾಯಿತು.