IMG 20260904 WA0019

ಭಾರತದಲ್ಲಿ ತಲಸೇಮಿಯಾ ಬಾಧಿತ ಮಕ್ಕಳಿಗಾಗಿ ಮೈಲಿಗಲ್ಲು ಆಚರಿಸಿದ DKMS….!

BUSINESS

1,000 ಹೊಸ ಆರಂಭಗಳು: ಭಾರತದಲ್ಲಿ ತಲಸೇಮಿಯಾ ಬಾಧಿತ ಮಕ್ಕಳಿಗಾಗಿ ಮೈಲಿಗಲ್ಲು ಆಚರಿಸಿದ DKMS ಮತ್ತು ಸಂಕಲ್ಪ

ಬೆಂಗಳೂರು, ಭಾರತ — 4 ಸೆಪ್ಟೆಂಬರ್ 2026 — ಒಂದು ಸಾವಿರ ಮಕ್ಕಳು, ಒಂದು ಸಾವಿರ ಕುಟುಂಬಗಳು ಮತ್ತು ಒಂದು ಸಾವಿರ ಹೊಸ ಆರಂಭಗಳು: ಸಂಕಲ್ಪ ಇಂಡಿಯಾ ಫೌಂಡೇಶನ್ 1,000 ಮಕ್ಕಳ ಸ್ಟೆಮ್ ಸೆಲ್ ಟ್ರಾನ್ಸ್‌ಪ್ಲಾಂಟೇಶನ್ (ಕಾಂಡಕೋಶ ಕಸಿ) ಪೂರ್ಣಗೊಳಿಸುವ ಮೂಲಕ ಅಪರೂಪದ ಮೈಲಿಗಲ್ಲನ್ನು ಸಾಧಿಸಿದೆ. ಇದು ತೀವ್ರ ಮಾದರಿಯ ಅನುವಂಶಿಕ ರಕ್ತಸ್ರಾವದ ಕಾಯಿಲೆಯಾದ ತಲಸೇಮಿಯಾದಿಂದ ಬಳಲುತ್ತಿರುವ ಮಕ್ಕಳಿಗೆ ನಿಯಮಿತ ರಕ್ತಪೂರಣ ಮತ್ತು ಆಜೀವ ಚಿಕಿತ್ಸೆಯಿಂದ ಮುಕ್ತಿ ನೀಡಿ, ಆರೋಗ್ಯಕರ ಜೀವನದ ಭರವಸೆಯನ್ನು ಮೂಡಿಸಿದೆ. ಈ ಸಾಧನೆಯನ್ನು ಸೆಪ್ಟೆಂಬರ್ 5 ರಂದು ಬೆಂಗಳೂರಿನಲ್ಲಿ “1,000 ಆರಂಭಗಳು” ಎಂಬ ಪರಿಕಲ್ಪನೆಯಡಿಯಲ್ಲಿ ಆಚರಿಸಲಾಗುವುದು. ಇದು ಸಂಕಲ್ಪ ಇಂಡಿಯಾ ಫೌಂಡೇಶನ್, ಅಂತಾರಾಷ್ಟ್ರೀಯ ಲಾಭರಹಿತ ಸಂಸ್ಥೆಯಾದ DKMS ಹಾಗೂ ವೈದ್ಯಕೀಯ ಮತ್ತು ಜ್ಞಾನ ಪಾಲುದಾರ ಸಂಸ್ಥೆಯಾದ ‘ಕ್ಯೂರ್2ಚಿಲ್ಡ್ರನ್ ಫೌಂಡೇಶನ್‘ ನಡುವಿನ ಹತ್ತು ವರ್ಷಗಳಿಗೂ ಹೆಚ್ಚಿನ ಸಹಭಾಗಿತ್ವದ ಪ್ರಮುಖ ಸಾಧನೆಯನ್ನು ಗುರುತಿಸುತ್ತದೆ.

ಸಂಕಲ್ಪ ಸಂಸ್ಥೆಯ ಮೂಲಕ ನಡೆಸಲಾದ 1,000 ಟ್ರಾನ್ಸ್‌ಪ್ಲಾಂಟ್‌ಗಳಲ್ಲಿ, DKMS ಸಂಸ್ಥೆಯು 820ಕ್ಕೂ ಹೆಚ್ಚು ಮಕ್ಕಳ ಚಿಕಿತ್ಸಾ ವೆಚ್ಚಕ್ಕೆ ನೆರವು ನೀಡಿದೆ. ವರ್ಷಗಳು ಕಳೆದಂತೆ, ಈ ಸಹಯೋಗವು ಕೇವಲ ಪ್ರತ್ಯೇಕ ಟ್ರಾನ್ಸ್‌ಪ್ಲಾಂಟ್‌ಗಳಿಗೆ ಆರ್ಥಿಕ ನೆರವು ನೀಡುವುದನ್ನು ಮೀರಿ ಬೆಳೆದಿದೆ. ಇಂದು ಇದು ತಲಸೇಮಿಯಾ ಆರೈಕೆ, ಟ್ರಾನ್ಸ್‌ಪ್ಲಾಂಟೇಶನ್ ಮೂಲಸೌಕರ್ಯ ಮತ್ತು ರೋಗನಿರ್ಣಯ, ತಜ್ಞರ ತರಬೇತಿ ಹಾಗೂ ವೈದ್ಯಕೀಯ ಸಂಶೋಧನೆಗಳನ್ನು ಒಳಗೊಂಡಿದೆ.

“ಒಂದು ಸಾವಿರ ಟ್ರಾನ್ಸ್‌ಪ್ಲಾಂಟ್‌ಗಳು ದೀರ್ಘಕಾಲೀನ ಸಹಭಾಗಿತ್ವವು ಏನು ಸಾಧಿಸಬಲ್ಲದು ಎಂಬುದನ್ನು ತೋರಿಸುತ್ತವೆ. ಸಂಕಲ್ಪ ಸಂಸ್ಥೆಯು ಅದ್ಭುತವಾದ ಸ್ಥಳೀಯ ನೈಪುಣ್ಯತೆ ಮತ್ತು ಬದ್ಧತೆಯನ್ನು ತಂದರೆ, ಕ್ಯೂರ್2ಚಿಲ್ಡ್ರನ್ ಪ್ರಮುಖ ವೈದ್ಯಕೀಯ ಜ್ಞಾನವನ್ನು ನೀಡುತ್ತದೆ. ನಾವು ಒಟ್ಟಾಗಿ ಹೆಚ್ಚಿನ ಮಕ್ಕಳಿಗೆ ಗುಣಮುಖರಾಗುವ ಅವಕಾಶವನ್ನು ನಿಜವಾಗಿಸಲು ನೆರವಾಗುತ್ತಿದ್ದೇವೆ. ನಾವು ಕಟ್ಟಲು ಬಯಸುವ ಸುಸ್ಥಿರ ಸಹಯೋಗ ಇದೇ ಆಗಿದೆ: ದೇಶದಲ್ಲಿಯೇ, ದೇಶಕ್ಕಾಗಿ,” ಎಂದು DKMS ಜಾಗತಿಕ ಸಿಇಒ ಡಾ. ಎಲ್ಕೆ ನೊಯ್ಜಾರ್ ಹೇಳಿದ್ದಾರೆ.

ಹತ್ತು ವರ್ಷಗಳಿಗೂ ಹೆಚ್ಚು ಕಾಲ ಬೆಳೆದ ಪ್ರಭಾವ

ಸಂಕಲ್ಪ ಸಂಸ್ಥೆಯು ಕ್ಯೂರ್2ಚಿಲ್ಡ್ರನ್ ಸಹಭಾಗಿತ್ವದಲ್ಲಿ 2015 ರಲ್ಲಿ ಬೆಂಗಳೂರಿನಲ್ಲಿ ತನ್ನ ಮೊದಲ ಮಕ್ಕಳ ಮೂಳೆ ಮಜ್ಜೆ ಕಸಿ (ಬೋನ್ ಮ್ಯಾರೋ ಟ್ರಾನ್ಸ್‌ಪ್ಲಾಂಟೇಶನ್) ಕಾರ್ಯಕ್ರಮವನ್ನು ಪ್ರಾರಂಭಿಸಿತು. ಅದೇ ವರ್ಷದಲ್ಲಿ, ಉಚಿತ ಹೆಚ್‌ಎಲ್‌ಎ ಟೈಪಿಂಗ್ ಮೂಲಕ DKMS ಜೊತೆಗಿನ ಸಹಯೋಗವು ಆರಂಭವಾಗಿ, ಅಂದಿನಿಂದ ಚಿಕಿತ್ಸಾ ಹಾದಿಯಲ್ಲಿ ನಿರಂತರವಾಗಿ ಬೆಳೆದಿದೆ. DKMS ಸಂಸ್ಥೆಯು ರೋಗಿಗಳು ಮತ್ತು ಅವರ ಕುಟುಂಬಗಳಿಗೆ ಉಚಿತ ಹೆಚ್‌ಎಲ್‌ಎ ಟೈಪಿಂಗ್, ತಲಸೇಮಿಯಾ ನಿರ್ವಹಣೆ ಮತ್ತು ಟ್ರಾನ್ಸ್‌ಪ್ಲಾಂಟೇಶನ್ ವೆಚ್ಚಗಳನ್ನು ಭರಿಸುತ್ತಿದ್ದು, ಬೆಂಗಳೂರು ಮತ್ತು ಅಹಮದಾಬಾದ್‌ನಲ್ಲಿ ವಿಶೇಷ ಮಕ್ಕಳ ಬಿಎಂಟಿ ಸಾಮರ್ಥ್ಯ ಮತ್ತು ಮೊಲಿಕ್ಯೂಲರ್ ಡಯಾಗ್ನೋಸ್ಟಿಕ್ಸ್‌ನಲ್ಲಿ ಹೂಡಿಕೆ ಮಾಡಿದೆ. ಈ ಪಾಲುದಾರರು ಶುಶ್ರೂಷಕರಿಗೆ (ನರ್ಸ್) ತಜ್ಞ ತರಬೇತಿಯನ್ನು ನೀಡುತ್ತಿದ್ದು, 2025 ರಿಂದ ವೈದ್ಯಕೀಯ ಸಂಶೋಧನೆಯಲ್ಲೂ ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ.IMG 20260904 WA0020

“ನಮ್ಮ ಮಟ್ಟಿಗೆ, ಈ 1,000 ಟ್ರಾನ್ಸ್‌ಪ್ಲಾಂಟ್‌ಗಳು 1,000 ಹೊಸ ಆರಂಭಗಳು. ಸಂಸ್ಥೆಗಳು ತಮ್ಮ ಸಾಮರ್ಥ್ಯಗಳನ್ನು ಒಂದೇ ಉದ್ದೇಶದೊಂದಿಗೆ ಒಗೂಡಿಸಿದಾಗ ಕಾಯಿಲೆಗಳನ್ನು ಗುಣಪಡಿಸುವುದನ್ನು ಎಲ್ಲರಿಗೂ ತಲುಪಿಸಲು ಸಾಧ್ಯ ಎಂಬುದಕ್ಕೆ ಇದೇ ಸಾಕ್ಷಿ,” ಎಂದು ಸಂಕಲ್ಪ ಇಂಡಿಯಾ ಫೌಂಡೇಶನ್‌ನ ಅಧ್ಯಕ್ಷ ರಜತ್ ಕುಮಾರ್ ಅಗರ್ವಾಲ್ ಹೇಳಿದ್ದಾರೆ. “ಸಂಖ್ಯೆಗಳಿಗಿಂತ ಹೆಚ್ಚಾಗಿ, ಈ ಮೈಲಿಗಲ್ಲು ನಮ್ಮ ಪ್ರಯತ್ನಕ್ಕೆ ಸೂಕ್ತ ಮನ್ನಣೆ ತಂದಿದೆ. ಸಂಪನ್ಮೂಲಗಳ ಕೊರತೆಯಿರುವ ಸ್ಥಳಗಳಲ್ಲೂ ಟ್ರಾನ್ಸ್‌ಪ್ಲಾಂಟೇಶನ್‌ ವೆಚ್ಚವನ್ನು ಕಡಿಮೆ ಮಾಡಿ, ವಿಶ್ವ ದರ್ಜೆಯ ಫಲಿತಾಂಶ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಗುಣಮಟ್ಟವನ್ನು ಸಾಧಿಸಬಹುದು ಎಂಬುದನ್ನು ಇದು ತೋರಿಸಿಕೊಟ್ಟಿದೆ. DKMS ಮತ್ತು ಕ್ಯೂರ್2ಚಿಲ್ಡ್ರನ್ ಸಂಸ್ಥೆಗಳೊಂದಿಗಿನ ಸಹಭಾಗಿತ್ವವು ಈ ಜಂಟಿ ಪ್ರಯತ್ನಕ್ಕೆ ಅತ್ಯಗತ್ಯವಾಗಿದೆ.”

ಇಂದು ಸಂಕಲ್ಪ ಸಂಸ್ಥೆಯು 30 ಸಮಗ್ರ ತಲಸೇಮಿಯಾ ಡೇ–ಕೇರ್ ಕೇಂದ್ರಗಳ ಮೂಲಕ 3,000 ಕ್ಕೂ ಹೆಚ್ಚು ಮಕ್ಕಳ ಆರೈಕೆ ಮಾಡುತ್ತಿದೆ ಹಾಗೂ ಬೆಂಗಳೂರು ಮತ್ತು ಅಹಮದಾಬಾದ್‌ನಲ್ಲಿ ಎರಡು ಮಕ್ಕಳ ಬಿಎಂಟಿ ಕೇಂದ್ರಗಳನ್ನು ನಡೆಸುತ್ತಿದೆ. ಇದರ ರೋಗ ತಡೆಗಟ್ಟುವಿಕೆ ಜಾಲವು 81 ಜಿಲ್ಲೆಗಳ 87 ಕೇಂದ್ರಗಳನ್ನು ಹೊಂದಿದ್ದು, 2,20,000 ಕ್ಕೂ ಹೆಚ್ಚು ದಂಪತಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ.

ಆರೈಕೆಯ ಗುಣಮಟ್ಟಕ್ಕೆ ಅಂತಾರಾಷ್ಟ್ರೀಯ ಮನ್ನಣೆ

ಸಹಭಾಗಿತ್ವವು ಕೇವಲ ಚಿಕಿತ್ಸೆಯ ತಲುಪುವಿಕೆಯನ್ನು ಹೆಚ್ಚಿಸುವುದಷ್ಟೇ ಅಲ್ಲದೆ, ಗುಣಮಟ್ಟವನ್ನು ವ್ಯವಸ್ಥಿತವಾಗಿ ಹೇಗೆ ಬಲಪಡಿಸಿದೆ ಎಂಬುದಕ್ಕೆ ಮತ್ತೊಂದು ಪ್ರಮುಖ ಮೈಲಿಗಲ್ಲು ಸಾಕ್ಷಿಯಾಗಿದೆ: ಬೆಂಗಳೂರಿನ ಬಿಎಂಜೆಹೆಚ್‌–ಸಂಸ್ಥೆಯ ‘BMJH-ಸಂಕಲ್ಪ್ ಸೆಂಟರ್ ಫಾರ್ ಪೀಡಿಯಾಟ್ರಿಕ್ ಹೆಮಟಾಲಜಿ ಆಂಕಾಲಜಿ ಮತ್ತು BMT’ ಕೇಂದ್ರವು JACIE ಮಾನ್ಯತೆ ಪಡೆದ ಭಾರತದ ಮೊದಲ ಕಾರ್ಯಕ್ರಮವಾಗಿದೆ.

JACIE ಮಾನ್ಯತೆಯು ಹೆಮಾಟೊಪಯಟಿಕ್ ಸ್ಟೆಮ್ ಸೆಲ್ ಟ್ರಾನ್ಸ್‌ಪ್ಲಾಂಟೇಶನ್ ಮತ್ತು ಸೆಲ್ಯುಲಾರ್ ಥೆರಪಿಯಲ್ಲಿ ಅಂತಾರಾಷ್ಟ್ರೀಯ ಮಟ್ಟದ ಮನ್ನಣೆಯನ್ನು ಹೊಂದಿದೆ. ಇದು ವೈದ್ಯಕೀಯ ಆರೈಕೆ, ಸ್ಟೆಮ್ ಸೆಲ್ ಸಂಗ್ರಹಣೆ ಮತ್ತು ಸಂಸ್ಕರಣೆ, ಗುಣಮಟ್ಟದ ನಿರ್ವಹಣೆ ಹಾಗೂ ರೋಗಿಯ ಸುರಕ್ಷತೆಯಲ್ಲಿ ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸುವುದನ್ನು ತೋರಿಸುತ್ತದೆ. ಅಂತಾರಾಷ್ಟ್ರೀಯ ಗುಣಮಟ್ಟದ ಟ್ರಾನ್ಸ್‌ಪ್ಲಾಂಟೇಶನ್ ಸೇವೆಯನ್ನು ಭಾರತದಲ್ಲಿ ಸುಸ್ಥಿರವಾಗಿ ನೀಡಬಹುದು ಮತ್ತು ಅತ್ಯುತ್ತಮ ಫಲಿತಾಂಶಗಳಿಗೆ ಯಾವಾಗಲೂ ದುಬಾರಿ ಅಥವಾ ಸಂಕೀರ್ಣ ಮಾದರಿಗಳ ಅಗತ್ಯವಿಲ್ಲ ಎಂಬುದನ್ನು ಈ ಮಾನ್ಯತೆ ಎತ್ತಿಹಿಡಿಯುತ್ತದೆ.

1,000 ಆರಂಭಗಳಲ್ಲಿ ಒಂದು: ಶಾಹೀಮ್ ಕಥೆ

ಪ್ರತಿಯೊಂದು ಟ್ರಾನ್ಸ್‌ಪ್ಲಾಂಟ್‌ ಹಿನ್ನೆಲೆಯಲ್ಲೂ ಒಂದು ಮಗು ಮತ್ತು ಕುಟುಂಬವಿರುತ್ತದೆ. ಕರ್ನಾಟಕದ ಮುಹಮ್ಮದ್ ಶಾಹೀಮ್‌ಗೆ ಐದು ತಿಂಗಳ ಮಗುವಿದ್ದಾಗಲೇ ತೀವ್ರ ತಲಸೇಮಿಯಾ ಇರುವುದು ಪತ್ತೆಯಾಯಿತು. ವರ್ಷಗಟ್ಟಲೆ ನಿರಂತರವಾಗಿ ರಕ್ತಪೂರಣ ಮಾಡಿದ್ದರಿಂದ ಆತನ ಹೃದಯ ಮತ್ತು ಯಕೃತ್ತಿನ (ಲಿವರ್) ಮೇಲೆ ಕಬ್ಬಿಣದ ಅಂಶ ಹೆಚ್ಚಾಗಿ ಪರಿಣಾಮ ಬೀರಿ, ಟ್ರಾನ್ಸ್‌ಪ್ಲಾಂಟೇಶನ್ ಮಾಡುವುದು ತೀವ್ರ ಅಪಾಯಕಾರಿಯಾಗಿತ್ತು. ಆತನ ತಂಗಿ ಝಾರಾ ಸಂಪೂರ್ಣ ಹೆಚ್‌ಎಲ್‌ಎ ಹೊಂದುವ ದಾನಿ ಎಂದು ಗುರುತಿಸಲಾಯಿತು. ಬೆಂಗಳೂರಿನ ಸಂಕಲ್ಪ–ಬಿಎಂಜೆಹೆಚ್ ಕೇಂದ್ರದಲ್ಲಿ ತೀವ್ರವಾದ ಸಿದ್ಧತೆ ಮತ್ತು ಕೌನ್ಸೆಲಿಂಗ್ ನಂತರ, ಆತನ ಕುಟುಂಬವು ಟ್ರಾನ್ಸ್‌ಪ್ಲಾಂಟೇಶನ್ ಮಾಡಲು ನಿರ್ಧರಿಸಿತು.

ಶಾಹೀಮ್ ತಾಯಿ ಝರೀನಾ ಅವರಿಗೂ ತಲಸೇಮಿಯಾ ಮೇಜರ್ ಇರುವುದರಿಂದ, ಅವರಿಗೆ ಕಾಯಿಲೆಯ ಕಷ್ಟದ ಅರಿವಿದೆ. ಅವರು ಈಗಲೂ ನಿಯಮಿತ ಚಿಕಿತ್ಸೆ ಮತ್ತು ರಕ್ತಪೂರಣ ಪಡೆಯುತ್ತಿದ್ದಾರೆ. “ಒಬ್ಬ ತಾಯಿಯಾಗಿ, ನನ್ನ ಮಗನಿಗೆ ತಲಸೇಮಿಯಾ ಬಾಧಿಸದ ಜೀವನ ಸಿಗಬೇಕೆಂದು ನಾನು ಬಯಸಿದ್ದೆ. ನಮಗೆ ಭಯವಿತ್ತು, ಆದರೆ ವೈದ್ಯಕೀಯ ತಂಡ ನಮಗೆ ಧೈರ್ಯ ತುಂಬಿತು. ಇಂದು ಶಾಹೀಮ್‌ನನ್ನು ನೋಡಿದಾಗ ಆ ನಿರ್ಧಾರಕ್ಕೆ ಸಾರ್ಥಕತೆ ಅನಿಸುತ್ತದೆ.”

1,000 ಟ್ರಾನ್ಸ್‌ಪ್ಲಾಂಟ್ ಮೈಲಿಗಲ್ಲು ಈ ಸಹಭಾಗಿತ್ವವು ಈಗಾಗಲೇ ಸಾಧಿಸಿರುವುದನ್ನು ಮತ್ತು ಭವಿಷ್ಯದ ಮಹತ್ವಾಕಾಂಕ್ಷೆಯನ್ನು ಪ್ರತಿನಿಧಿಸುತ್ತದೆ: ಸುಸ್ಥಿರವಾಗಿ ಉನ್ನತ ಗುಣಮಟ್ಟದ ಆರೈಕೆಯನ್ನು ನೀಡಲು ಅಗತ್ಯವಿರುವ ವ್ಯವಸ್ಥೆಯನ್ನು ಬಲಪಡಿಸುವುದು ಮತ್ತು ಹೆಚ್ಚಿನ ಮಕ್ಕಳು ಗುಣಮುಖರಾಗುವಂತೆ ಮಾಡುವುದು. ಸಂಕಲ್ಪ ಸಂಸ್ಥೆಗೆ ಇದು 2047 ರ ವೇಳೆಗೆ ‘ತಲಸೇಮಿಯಾ ಮತ್ತು ಹಿಮೋಗ್ಲೋಬಿನೋಪಾಥಿ ಮುಕ್ತ ಭಾರತ‘ ನಿರ್ಮಿಸುವ ಕನಸಿನ ಕಡೆಗೆ ಮತ್ತೊಂದು ಪ್ರಮುಖ ಹೆಜ್ಜೆಯಾಗಿದೆ.

ಡಾ. ಎಲ್ಕೆ ನ್ಯೂಜಹ್ರ್, ಡಿಕೆಎಂಎಸ್‌ನ ಜಾಗತಿಕ ಸಿಇಒ

1,000 ಮೂಳೆ ಮಜ್ಜೆಯ ಟ್ರಾನ್ಸ್‌ಪ್ಲಾಂಟ್ ಹಿಂದಿರುವುದು 1,000 ಮಕ್ಕಳು ಮತ್ತು ಅವರ ಕುಟುಂಬಗಳು, ಅವರ ಜೀವನವೇ ಬದಲಾಗಿದೆ. ಈ ಮೈಲಿಗಲ್ಲನ್ನು ವಿಶೇಷವಾಗಿಸುವುದು 8 ವರ್ಷಗಳಲ್ಲಿ ಬೆಳೆದು ಬಂದಿರುವ ನಮ್ಮ ಸಹಭಾಗಿತ್ವ. ಸಂಕಲ್ಪ ಸಂಸ್ಥೆಯು ಅದ್ಭುತವಾದ ಸ್ಥಳೀಯ ಅನುಭವ ಮತ್ತು ಬದ್ಧತೆಯನ್ನು ತಂದರೆ, ‘ಕ್ಯೂರ್2ಚಿಲ್ಡ್ರನ್’ ಪ್ರಮುಖ ವೈದ್ಯಕೀಯ ಜ್ಞಾನವನ್ನು ನೀಡುತ್ತದೆ. ಹಾಗೆಯೇ DKMS ಸಂಸ್ಥೆಯು ಹೆಚ್‌ಎಲ್‌ಎ ಟೈಪಿಂಗ್, ಟ್ರಾನ್ಸ್‌ಪ್ಲಾಂಟೇಶನ್, ರೋಗಿಗಳ ಬೆಂಬಲ ಹಾಗೂ ಸಾಮರ್ಥ್ಯ ವೃದ್ಧಿಯಲ್ಲಿ ತನ್ನ ಅನುಭವವನ್ನು ಧಾರೆ ಎರೆದಿದೆ. ನಾವು ಒಟ್ಟಾಗಿ ರೋಗಿಯ ಪ್ರಯಾಣದಲ್ಲಿ ಎದುರಾಗುವ ವಿಭಿನ್ನ ಅಡೆತಡೆಗಳನ್ನು ನಿವಾರಿಸುತ್ತಿದ್ದೇವೆ ಮತ್ತು ಸುಸ್ಥಿರ ವ್ಯವಸ್ಥೆಯನ್ನು ನಿರ್ಮಿಸುತ್ತಿದ್ದೇವೆ. ಸ್ಥಳೀಯ ಪ್ರಬಲ ಪಾಲುದಾರರೊಂದಿಗೆ ಸೇರಿ ದೇಶದಲ್ಲಿಯೇ, ದೇಶಕ್ಕಾಗಿ ದೀರ್ಘಕಾಲೀನ ಪರಿಹಾರಗಳನ್ನು ರಚಿಸುವುದೇ ಸಹಭಾಗಿತ್ವದ ನಿಜವಾದ ಅರ್ಥ.

ರಜತ್ ಕುಮಾರ್ ಅಗರ್ವಾಲ್, ಅಧ್ಯಕ್ಷರು, ಸಂಕಲ್ಪ ಭಾರತ ಫೌಂಡೇಶನ್

“ನಾವು ಈ ಮೈಲಿಗಲ್ಲನ್ನು ‘1,000 ಹೊಸ ಆರಂಭಗಳು’ ಎಂದು ಕರೆಯುತ್ತೇವೆ. ಏಕೆಂದರೆ ಪ್ರತಿಯೊಂದು ಮಗು ಮತ್ತು ಕುಟುಂಬಕ್ಕೆ ಈ ಟ್ರಾನ್ಸ್‌ಪ್ಲಾಂಟೇಶನ್ ಸಂಪೂರ್ಣ ಭಿನ್ನವಾದ ಮತ್ತು ಉಜ್ವಲ ಭವಿಷ್ಯದ ಆರಂಭವಾಗಬಹುದು. ನಮ್ಮ ಗುರಿ ಕೇವಲ ಪ್ರತ್ಯೇಕ ಟ್ರಾನ್ಸ್‌ಪ್ಲಾಂಟ್‌ಗಳಿಗೆ ಮಾತ್ರ ಸೀಮಿತವಾಗಿರಲಿಲ್ಲ. ರೋಗ ತಡೆಗಟ್ಟುವಿಕೆ, ಸಮಗ್ರ ತಲಸೇಮಿಯಾ ಆರೈಕೆ, ದಾನಿಗಳ ಗುರುತಿಸುವಿಕೆ ಮತ್ತು ಉತ್ತಮ ಗುಣಮಟ್ಟದ ಚಿಕಿತ್ಸೆಯನ್ನು ಒಂದಕ್ಕೊಂದು ಜೋಡಿಸುವುದು ನಮ್ಮ ಆಶಯವಾಗಿದೆ. DKMS ಮತ್ತು ಕ್ಯೂರ್2ಚಿಲ್ಡ್ರನ್ ಜೊತೆಗಿನ ನಮ್ಮ ಸಹಭಾಗಿತ್ವವು ತಲುಪುವಿಕೆಯನ್ನು ಹೆಚ್ಚಿಸಲು, ಮೂಲಸೌಕರ್ಯ ಮತ್ತು ರೋಗನಿರ್ಣಯವನ್ನು ಬಲಪಡಿಸಲು ಹಾಗೂ ಗುಣಮಟ್ಟ ಮತ್ತು ನೈಪುಣ್ಯತೆಯಲ್ಲಿ ಹೂಡಿಕೆ ಮಾಡಲು ನೆರವಾಗಿದೆ. 1,000 ಟ್ರಾನ್ಸ್‌ಪ್ಲಾಂಟ್‌ಗಳನ್ನು ತಲುಪಿರುವುದು ಮತ್ತು JACIE ಮಾನ್ಯತೆ ಪಡೆದಿರುವುದು 2047ರ ವೇಳೆಗೆ ‘ತಲಸೇಮಿಯಾ ಮತ್ತು ಹಿಮೋಗ್ಲೋಬಿನೋಪಾಥಿ ಮುಕ್ತ ಭಾರತ’ ನಿರ್ಮಿಸುವ ನಮ್ಮ ಕನಸಿನ ಕಡೆಗೆ ಇಟ್ಟ ಪ್ರಮುಖ ಹೆಜ್ಜೆಗಳಾಗಿವೆ.”

ಡಾ. ಲಾರೆನ್ಸ್ ಫಾಕ್ನರ್, ಸಂಸ್ಥಾಪಕರು ಮತ್ತು ವೈದ್ಯಕೀಯ ನಿರ್ದೇಶಕರು, ಕ್ಯೂರ್‌2ಚಿಲ್ಡ್ರನ್‌

“ತೀವ್ರ ತಲಸೇಮಿಯಾದಿಂದ ಬಳಲುತ್ತಿರುವ ಮಕ್ಕಳಿಗೆ ಮೂಳೆ ಮಜ್ಜೆಯ ನಾಟಿ ಚಿಕಿತ್ಸೆ ನೀಡಲು ಕೇವಲ ವೈದ್ಯಕೀಯ ತಂತ್ರಜ್ಞಾನವಷ್ಟೇ ಸಾಲದು. ಅದಕ್ಕೆ ಸುಶಿಕ್ಷಿತ ತಂಡಗಳು, ದೃಢವಾದ ಗುಣಮಟ್ಟದ ವ್ಯವಸ್ಥೆಗಳು ಮತ್ತು ಸಂಕೀರ್ಣ ಚಿಕಿತ್ಸೆಯನ್ನು ವಿಶ್ವಾಸಾರ್ಹವಾಗಿ ಹಾಗೂ ಸುಸ್ಥಿರವಾಗಿ ನೀಡುವ ಸಾಮರ್ಥ್ಯದ ಅಗತ್ಯವಿದೆ. ಸಂಕಲ್ಪ ಸಂಸ್ಥೆಯೊಂದಿಗಿನ ನಮ್ಮ ಸಹಯೋಗವು ಯಾವಾಗಲೂ ಸ್ಥಳೀಯ ನೈಪುಣ್ಯತೆಯನ್ನು ಬೆಳೆಸುವಲ್ಲಿ ಮತ್ತು ಕಡಿಮೆ ವೆಚ್ಚದಲ್ಲಿ ಉತ್ತಮ ಗುಣಮಟ್ಟದ ಟ್ರಾನ್ಸ್‌ಪ್ಲಾಂಟೇಶನ್ ಸೌಲಭ್ಯವನ್ನು ಒದಗಿಸುವುದರ ಮೇಲೆಯೇ ಗಮನ ಹರಿಸಿದೆ. DKMS ಸಂಸ್ಥೆಯ ದೀರ್ಘಕಾಲದ ಬೆಂಬಲದೊಂದಿಗೆ, ಈ ಕಾರ್ಯಕ್ರಮವು ಪ್ರಮಾಣ ಮತ್ತು ಗುಣಮಟ್ಟವೆರಡರಲ್ಲೂ ಬೆಳೆಯುತ್ತಾ ಸಾಗಿದೆ. 1,000 ಮಕ್ಕಳ ಟ್ರಾನ್ಸ್‌ಪ್ಲಾಂಟ್‌ಗಳು ಒಂದು ಅದ್ಭುತ ಸಾಧನೆಯಾಗಿದ್ದರೆ, JACIE ಮಾನ್ಯತೆಯು ಈ ಕಾರ್ಯಕ್ರಮವು ತಲುಪಿರುವ ಪರಿಪಕ್ವತೆ ಮತ್ತು ಉನ್ನತ ಗುಣಮಟ್ಟವನ್ನು ತೋರಿಸುತ್ತದೆ.”

ಪ್ಯಾಟ್ರಿಕ್ ಪೌಲ್, ಎಕ್ಸೆಕ್ಯೂಟಿವ್ ಚೇರ್ಮನ್, ಡಿಕೆಎಂಎಸ್‌ ಫೌಂಡೇಶನ್ ಇಂಡಿಯಾ

“ತಲಸೇಮಿಯಾ ಇರುವ ಮಗುವಿಗೆ ಸೂಕ್ತವಾದ ದಾನಿಯನ್ನು ಹುಡುಕುವುದು ಗುಣಮುಖರಾಗುವತ್ತ ಪ್ರಮುಖ ಹೆಜ್ಜೆಯಾಗಿದೆ, ಆದರೆ ಅದುಷ್ಟೇ ಸಾಕಾಗುವುದಿಲ್ಲ. ಕುಟುಂಬಗಳಿಗೆ ಟ್ರಾನ್ಸ್‌ಪ್ಲಾಂಟೇಶನ್‌ಗೆ ಸ್ಪಷ್ಟ ಮಾರ್ಗ ಮತ್ತು ಹಾದಿಯಲ್ಲಿ ಎದುರಾಗುವ ಹಣಕಾಸಿನ ಹಾಗೂ ಪ್ರಾಯೋಗಿಕ ಅಡೆತಡೆಗಳನ್ನು ಜಯಿಸಲು ಬೆಂಬಲದ ಅಗತ್ಯವಿರುತ್ತದೆ. ನಮ್ಮ ‘ತಲಸೇಮಿಯಾ ಕಾರ್ಯಕ್ರಮ’ದ ಮೂಲಕ ನಾವು ಉಚಿತ ಹೆಚ್‌ಎಲ್‌ಎ ಟೈಪಿಂಗ್ ಮತ್ತು ದಾನಿಗಳ ಹುಡುಕಾಟವನ್ನು ಒದಗಿಸುತ್ತೇವೆ, ಹಾಗೂ ನಮ್ಮ ‘ರೋಗಿಗಳ ಧನಸಹಾಯ ಕಾರ್ಯಕ್ರಮ’ವು ಅರ್ಹ ಕುಟುಂಬಗಳಿಗೆ ಟ್ರಾನ್ಸ್‌ಪ್ಲಾಂಟ್ ಮತ್ತು ಟ್ರಾನ್ಸ್‌ಪ್ಲಾಂಟ್ ನಂತರದ ವೆಚ್ಚಗಳಿಗೆ ನೆರವಾಗುತ್ತದೆ. ಸಂಕಲ್ಪದಂತಹ ಪಾಲುದಾರರೊಂದಿಗೆ ಕೆಲಸ ಮಾಡುವುದರಿಂದ ಈ ಎಲ್ಲಾ ವಿಭಿನ್ನ ಬೆಂಬಲಗಳನ್ನು ಒಗ್ಗೂಡಿಸಲು ಮತ್ತು ಹೆಚ್ಚಿನ ಮಕ್ಕಳನ್ನು ತಲಸೇಮಿಯಾ ಜೀವನದಿಂದ ಗುಣಮುಖರಾಗುವ ಹಾದಿಯತ್ತ ಕರೆದೊಯ್ಯಲು ನಮಗೆ ಸಾಧ್ಯವಾಗುತ್ತಿದೆ.”