Kannada Toll Road News Alert e1791378941792

Karnataka : ನೈಸ್‌ ರಸ್ತೆ ಟೋಲ್ ಪಾವತಿ ಮಾಡಬೇಡಿ…..!

BUSINESS Genaral STATE

₹4,756.48 ಕೋಟಿ ಟೋಲ್ ಸುಲಿಗೆ ಆರೋಪ: ನೈಸ್ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ

ನೈಸ್ ಯೋಜನಾ ವೆಚ್ಚ ₹1,583.76 ಕೋಟಿ; ಮೂರು ಪಟ್ಟು ಟೋಲ್ ಸಂಗ್ರಹ ಆರೋಪ

ಬೆಂಗಳೂರು, ಅ.7: ನೈಸ್ ಸಂಸ್ಥೆ ಯೋಜನೆಯನ್ನು ಪೂರ್ಣಗೊಳಿಸದೇ 2008ರಿಂದ ಅಕ್ರಮವಾಗಿ ಟೋಲ್ ಸಂಗ್ರಹಿಸುತ್ತಿದೆ ಎಂದು ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಆರೋಪಿಸಿದ್ದಾರೆ. ಈವರೆಗೆ ₹4,756.48 ಕೋಟಿ ಟೋಲ್ ವಸೂಲಿ ಮಾಡಲಾಗಿದೆ ಎಂದು ಅವರು ದೂರಿದರು.

ಜೆಡಿಎಸ್ ಕೇಂದ್ರ ಕಚೇರಿ ಜೆ.ಪಿ. ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೈಸ್ ರಸ್ತೆಯ ಮೂಲ ಯೋಜನಾ ವೆಚ್ಚ ₹1,583.76 ಕೋಟಿ ಆಗಿದ್ದು, ಇದಕ್ಕಿಂತ ಸುಮಾರು ಮೂರು ಪಟ್ಟು ಮೊತ್ತವನ್ನು ಟೋಲ್ ರೂಪದಲ್ಲಿ ಸಂಗ್ರಹಿಸಲಾಗಿದೆ ಎಂದು ಹೇಳಿದರು. 2008–09ರಲ್ಲಿ ವಾರ್ಷಿಕ ₹5.59 ಕೋಟಿ ಇದ್ದ ಟೋಲ್ ಸಂಗ್ರಹ 2024–25ರಲ್ಲಿ ₹734.92 ಕೋಟಿಗೆ ಏರಿಕೆಯಾಗಿದೆ ಎಂದರು.

ಟೋಲ್ ಕನ್ಸೆಷನ್ ಒಪ್ಪಂದದ ಪ್ರಕಾರ ನಾಲ್ಕು ಪಥದ ಕಾಂಕ್ರೀಟ್ ರಸ್ತೆ, ಸರ್ವಿಸ್ ರಸ್ತೆ ಹಾಗೂ ಇತರ ಕಾಮಗಾರಿಗಳನ್ನು ಪೂರ್ಣಗೊಳಿಸಿದ ಬಳಿಕವೇ ಟೋಲ್ ಸಂಗ್ರಹಿಸಬೇಕಿತ್ತು. ಆದರೆ, ಈ ಷರತ್ತುಗಳನ್ನು ಪಾಲಿಸದೇ 2008ರಿಂದ ಟೋಲ್ ವಸೂಲಿ ಮಾಡಲಾಗಿದೆ ಎಂದು ಕುಮಾರಸ್ವಾಮಿ ಆರೋಪಿಸಿದರು.

ಹೈಕೋರ್ಟ್ ತೀರ್ಪು ಉಲ್ಲೇಖ

ODP ಮೂಲಕ ಮೂಲ ಒಪ್ಪಂದದಲ್ಲಿನ ಅಲೈನ್‌ಮೆಂಟ್ ಮತ್ತು ಭೂಮಿಯ ಪ್ರಮಾಣವನ್ನು ಬದಲಾಯಿಸಲಾಗಿದೆ ಎಂದು ಆರೋಪಿಸಿದ ಕುಮಾರಸ್ವಾಮಿ, ಈ ಕುರಿತು ರಾಜ್ಯ ಹೈಕೋರ್ಟ್ ಜುಲೈ 29ರಂದು ನೀಡಿದ ತೀರ್ಪಿನಲ್ಲಿ ಗಂಭೀರ ಅಭಿಪ್ರಾಯಗಳನ್ನು ದಾಖಲಿಸಿದೆ ಎಂದು ಹೇಳಿದರು.

ಹೈಕೋರ್ಟ್ ತೀರ್ಪಿನ ವಿರುದ್ಧ ನೈಸ್ ಸಂಸ್ಥೆ ಸಲ್ಲಿಸಿರುವ ಅರ್ಜಿಯ ವಿಚಾರಣೆ ಸುಪ್ರೀಂ ಕೋರ್ಟ್‌ನಲ್ಲಿ ನಡೆಯುತ್ತಿದ್ದು, ನವೆಂಬರ್ 2ಕ್ಕೆ ವಿಚಾರಣೆ ಮುಂದೂಡಲಾಗಿದೆ ಎಂದು ಅವರು ತಿಳಿಸಿದರು. ಹೈಕೋರ್ಟ್ ತೀರ್ಪಿಗೆ ಸುಪ್ರೀಂ ಕೋರ್ಟ್ ತಡೆ ನೀಡಿಲ್ಲ ಎಂಬ ಹಿನ್ನೆಲೆಯಲ್ಲಿ ಟೋಲ್ ಸಂಗ್ರಹವನ್ನು ತಕ್ಷಣ ನಿಲ್ಲಿಸಬೇಕು ಎಂದು ಅವರು ಆಗ್ರಹಿಸಿದರು.

ನೈಸ್ ಸಂಸ್ಥೆಯು ಭೂ ಮಾರಾಟ, ಜಂಟಿ ಅಭಿವೃದ್ಧಿ ಯೋಜನೆಗಳು ಹಾಗೂ ಕನ್ವೆನ್ಷನ್ ಸೆಂಟರ್‌ಗಳಿಂದಲೂ ಆದಾಯ ಗಳಿಸಿದೆ ಎಂದು ಆರೋಪಿಸಿದ ಅವರು, ನೈಸ್ ಯೋಜನೆಗೆ ಸಂಬಂಧಿಸಿದ ಅಕ್ರಮಗಳ ಕುರಿತು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

“ಇನ್ನೂ ಹತ್ತು ವರ್ಷ ಟೋಲ್ ವಸೂಲಿ ಮಾಡಲಾಗುತ್ತದೆ ಎಂಬ ಮಾತು ನಡೆಯುವುದಿಲ್ಲ. ಕಾನೂನುಬಾಹಿರ ಟೋಲ್ ಸಂಗ್ರಹವನ್ನು ತಕ್ಷಣ ಬಂದ್ ಮಾಡಬೇಕು” ಎಂದು ಕುಮಾರಸ್ವಾಮಿ ಆಗ್ರಹಿಸಿದರು.

ಟೋಲ್ ಪಾವತಿ ಮಾಡಬೇಡಿ

ಬೆಂಗಳೂರು-ಮೈಸೂರು ಮೂಲಸೌಕರ್ಯ ಕಾರಿಡಾರ್ ಯೋಜನೆ ಹೆಸರಿನಲ್ಲಿ ರಸ್ತೆ ಅಪೂರ್ಣವಾಗಿದ್ದರೂ ಅಕ್ರಮವಾಗಿ ಟೋಲ್ ಸುಲಿಗೆ ಮಾಡುತ್ತಿರುವ ಬಗ್ಗೆ ಮಾಧ್ಯಮಗೋಷ್ಟಿಯಲ್ಲಿ ವಿಸ್ತೃತವಾಗಿ ಚರ್ಚೆ ನಡೆಸಲಾಯಿತು. ಟೋಲ್ ಸುಲಿಗೆ ವಿರುದ್ಧ ಹೈಕೋರ್ಟ್ ಕಟುವಾದ ಅಭಿಪ್ರಾಯ ದಾಖಲಿಸಿದ್ದರೂ, ಇದಕ್ಕೆ ಸುಪ್ರೀಂ ಕೋರ್ಟ್ ತಡೆಯಾಜ್ನೆ ನೀಡದೇ ಇದ್ದರೂ ಇನ್ನೂ ರಸ್ತೆ ಸುಂಕ ವಸೂಲಿ ಮಾಡುತ್ತಿರುವುದು ಅಕ್ರಮ. ನೈಸ್ ರಸ್ತೆ ಮೂಲ ಯೋಜನಾ ವೆಚ್ಚವೇ ₹1,583,76 ಕೋಟಿ. ಆದರೆ, ಈವರೆಗೆ ₹4,756.48 ಕೋಟಿ ಟೋಲ್ ಹಣ ವಸೂಲಿ ಮಾಡಿದೆ ಆ ಕಂಪನಿ. ಹೀಗಾಗಿ ತಕ್ಷಣವೇ ಟೋಲ್ ವಸೂಲಿ ನಿಲ್ಲಿಸಬೇಕು. ಅದಕ್ಕೆ ರಾಜ್ಯ ಸರಕಾರವೂ ತುರ್ತು ಕ್ರಮ ವಹಿಸಬೇಕು. ಸಾರ್ವಜನಿಕರು ಕೂಡ ಯಾವುದೇ ಕಾರಣಕ್ಕೂ ಟೋಲ್ ಪಾವತಿ ಮಾಡಬಾರದು ಎಂದು ಆಗ್ರಹಿಸುತ್ತೇನೆ.

ಹೆಚ್.ಡಿ. ಕುಮಾರಸ್ವಾಮಿ
ಕೇಂದ್ರ ಸಚಿವರು

ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕರಾದ ಸುರೇಶ್ ಗೌಡ, ಚೌಡರೆಡ್ಡಿ ತೂಪಲ್ಲಿ, ಗ್ರೇಟರ್ ಬೆಂಗಳೂರು ಜೆಡಿಎಸ್ ಅಧ್ಯಕ್ಷ ಎಚ್‌.ಎಂ. ರಮೇಶ್ ಗೌಡ, ರಾಜ್ಯ ವಕ್ತಾರ ಎಚ್‌.ಎನ್. ದೇವರಾಜು ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಸಪ್ತಸ್ವರ ನ್ಯೂಸ್

Leave a Reply

Your email address will not be published. Required fields are marked *