ಬರ ಪರಿಹಾರ ಹೆಚ್ಚಳಕ್ಕೆ ರೈತ ಸಂಘ ಆಗ್ರಹ.
ಪಾವಗಡ:: ತುಮಕೂರು ಜಿಲ್ಲೆಯ ಹತ್ತು ತಾಲ್ಲೂಕುಗಳಲ್ಲಿ 147 ವರ್ಷಗಳಲ್ಲೇ ಕಾಣದ ಬರಗಾಲ ಆವರಿಸಿದ್ದು, ಪ್ರತಿ ರೈತನಿಗೆ 25,000 ದಿಂದ 30,000 ರೂ. ಪರಿಹಾರ ನೀಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಪೂಜಾರಪ್ಪ ಒತ್ತಾಯಿಸಿದ್ದಾರೆ.
ಪಟ್ಟಣದ ತಾಲ್ಲೂಕು ಕಚೇರಿ ಎದುರು ರಸ್ತೆ ತಡೆ ನಡೆಸಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿ, ತಹಶೀಲ್ದಾರ್ ವೈ.ರವಿ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದರು.
ತುಮಕೂರು ಜಿಲ್ಲೆಯ ಪಾವಗಡ, ಮಧುಗಿರಿ, ಕೊರಟಗೆರೆ, ತುಮಕೂರು, ಶಿರಾ, ಚಿಕ್ಕನಾಯಕನಹಳ್ಳಿ, ತುರುವೇಕೆರೆ, ತಿಪಟೂರು, ಕುಣಿಗಲ್, ಗುಬ್ಬಿ ತಾಲ್ಲೂಕುಗಳಲ್ಲಿ ಮಳೆ ಕೊರತೆಯಿಂದ ಕೆರೆಗಳು ಬತ್ತಿವೆ. ಸಾವಿರ ಅಡಿ ಆಳದ ಕೊಳವೆಬಾವಿಗಳಲ್ಲಿ ನೀರಿಲ್ಲ. ಅಡಿಕೆ, ತೆಂಗು, ವೀಳ್ಯದೆಲೆ ಬೆಳೆ ಒಣಗಿದೆ. ಜಾನುವಾರುಗಳಿಗೆ ಮೇವು, ನೀರಿಲ್ಲದೆ ರೈತರು ಕಂಗಾಲಾಗಿದ್ದಾರೆ. ಕೂಲಿ ಕಾರ್ಮಿಕರು ಕೆಲಸವಿಲ್ಲದೆ ಗುಳೆ ಹೋಗುತ್ತಿದ್ದಾರೆ. ತಕ್ಷಣ ರಾಜ್ಯ ಸರ್ಕಾರ ರೈತರ ನೆರವಿಗೆ ಬರಬೇಕು ಎಂದು ಆಗ್ರಹಿಸಿದರು.
ವಿಬಿಜಿ ರಾಮ್ ಜಿ ಯೋಜನೆಯಡಿ ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಕೂಲಿ ಕಾರ್ಮಿಕರಿಗೆ ಕೆಲಸ ನೀಡಿ ವಾರಕ್ಕೊಮ್ಮೆ ಕೂಲಿ ಬಿಡುಗಡೆ ಮಾಡಬೇಕು. ಪ್ರತಿ ಹೋಬಳಿಯಲ್ಲಿ ಜಾನುವಾರುಗಳಿಗೆ ಮೇವು ಮತ್ತು ನೀರು ಪೂರೈಸಲು ಮೇವು ಬ್ಯಾಂಕ್ ಮತ್ತು ಗೋಶಾಲೆ ತೆರೆಯಬೇಕು. ಆರು ತಿಂಗಳಿಂದ ಸ್ಥಗಿತಗೊಂಡಿರುವ ವೃದ್ಧರು, ವಿಧವೆಯರು, ಅಂಗವಿಕಲರ ಮಾಸಾಶನದ ಬಾಕಿ ಬಿಡುಗಡೆ ಮಾಡಿ, ಮೊತ್ತವನ್ನು 2,500 ರೂ.ಗೆ ಹೆಚ್ಚಿಸಬೇಕು. ಫಾರಂ ನಂ.50, 53, 57 ರಲ್ಲಿ ಅರ್ಜಿ ಸಲ್ಲಿಸಿರುವ ಸಾಗುವಳಿದಾರರಿಗೆ ಸರ್ಕಾರಿ, ಗೋಮಾಳ ಜಮೀನು ಮಂಜೂರು ಮಾಡಬೇಕು ಎಂದು ಆಗ್ರಹಿಸಿದರು.
ಪಾವಗಡ ತಾಲ್ಲೂಕಿನ ನಲಿಗಾನಹಳ್ಳಿ ಸರ್ವೆ ನಂ.4 ರ 17.20 ಎಕರೆ ಸರ್ಕಾರಿ ಜಮೀನಿನಲ್ಲಿ ಬಡವರಿಗೆ ನಿವೇಶನ ಮಂಜೂರು ಮಾಡಬೇಕು. ಕಾಮನದುರ್ಗ ಗ್ರಾಮದ ಸುಮಾರು 370 ಎಕರೆ ಜಮೀನನ್ನು 2003ರಲ್ಲೇ ಭೂ ನ್ಯಾಯ ಮಂಡಳಿ ಸರ್ಕಾರದ ವಶಕ್ಕೆ ಪಡೆಯಲು ಆದೇಶಿಸಿದ್ದರೂ (ಪ್ರ.ಸಂ.264/74-75) ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ. ಜೆ.ರಂಗನಾಥಪುರದ ಸರ್ವೆ ನಂ.104, 79, 61, 86 ಸೇರಿದಂತೆ ಜೋಡಿದಾರ್ ಜಮೀನನ್ನು ಉಳುವವರಿಗೇ ಮಂಜೂರು ಮಾಡಬೇಕೆಂದು ಬೇಡಿಕೆ ಈಡೇರಿಸದಿದ್ದರೆ ಜಿಲ್ಲಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ತಾಲ್ಲೂಕು ಅಧ್ಯಕ್ಷ ಶಿವು, ಗೋಪಾಲ್, ದುರ್ಗಪ್ಪ, ರಾಜಣ್ಣ, ಈರಣ್ಣ, ನರಸಿಂಹಪ್ಪ, ಪಕೀರಪ್ಪ, ಹನುಮಂತರಾಯ,ಮಾರ್ಜನ್, ಶ್ರೀನಿವಾಸ್, ಚಿತ್ತಣ್ಣ, ಗಂಗಪ್ಪ ಸೇರಿದಂತೆ ರೈತ ಮುಖಂಡರು ಹಾಜರಿದ್ದರು.
ವರದಿ : ಶ್ರೀನಿವಾಸಲು ಎ
