file 000000000e2c82119518585017eeb53f 200kb

ಪಾವಗಡ :: ಕೆಜಿಬಿವಿ ಶಾಲೆಗೆ ಲೋಕಾಯುಕ್ತ ದಿಢೀರ್ ಭೇಟಿ…..!

DISTRICT NEWS ತುಮಕೂರು

ಕೆಜಿಬಿವಿ ಶಾಲೆಗೆ ಲೋಕಾಯುಕ್ತ ಅಧಿಕಾರಿಗಳ ಭೇಟಿ: ಮೂಲಸೌಕರ್ಯಗಳ ನ್ಯೂನತೆ ಪರಿಶೀಲನೆ

150 ವಿದ್ಯಾರ್ಥಿನಿಯರಿಗಾಗಿ ಇರುವ ಶಾಲೆಯಲ್ಲಿ 250 ವಿದ್ಯಾರ್ಥಿನಿಯರು; ವಸತಿ, ಕುಡಿಯುವ ನೀರು ಸೇರಿದಂತೆ ಹಲವು ಸಮಸ್ಯೆಗಳು ಬೆಳಕಿಗೆ

ಪಾವಗಡ: ಪಟ್ಟಣದ ಕಸ್ತೂರಬಾ ಗಾಂಧಿ ಬಾಲಿಕಾ ವಿದ್ಯಾಲಯಕ್ಕೆ (ಕೆಜಿಬಿವಿ) ಗುರುವಾರ ಲೋಕಾಯುಕ್ತ ಅಧಿಕಾರಿಗಳು ಭೇಟಿ ನೀಡಿ, ಶಾಲೆಯಲ್ಲಿನ ಮೂಲಸೌಕರ್ಯಗಳ ನ್ಯೂನತೆಗಳನ್ನು ಪರಿಶೀಲಿಸಿದರು.

2023ರಲ್ಲಿ ವಸತಿ ಶಾಲೆಯಲ್ಲಿನ ವಿವಿಧ ನ್ಯೂನತೆಗಳ ಕುರಿತು ದೂರು ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿತ್ತು. ಅಂದು ಗುರುತಿಸಲಾಗಿದ್ದ ಸಮಸ್ಯೆಗಳನ್ನು ಸರಿಪಡಿಸಲಾಗಿದೆಯೇ ಎಂಬುದನ್ನು ಪರಿಶೀಲಿಸುವ ಉದ್ದೇಶದಿಂದ ಇದೀಗ ಭೇಟಿ ನೀಡಲಾಗಿದೆ ಎಂದು ಲೋಕಾಯುಕ್ತ ಡಿವೈಎಸ್‌ಪಿ ಮಂಜುನಾಥಗೌಡ ತಿಳಿಸಿದರು.

ಈ ಹಿಂದೆ ಶಾಲೆಯಲ್ಲಿ ಹಲವು ಮೂಲಸೌಕರ್ಯಗಳ ಕೊರತೆ ಕಂಡುಬಂದಿದ್ದು, ಪ್ರಸ್ತುತ ಬಹುತೇಕ ಸಮಸ್ಯೆಗಳನ್ನು ಸರಿಪಡಿಸಲಾಗಿದೆ. ಆದರೆ, 150 ವಿದ್ಯಾರ್ಥಿನಿಯರಿಗೆ ಮಾತ್ರ ವಸತಿ ಸೌಲಭ್ಯ ಕಲ್ಪಿಸುವ ಸಾಮರ್ಥ್ಯವಿರುವ ಶಾಲೆಯಲ್ಲಿ ಪ್ರಸ್ತುತ 250 ವಿದ್ಯಾರ್ಥಿನಿಯರು ವ್ಯಾಸಂಗ ಮಾಡುತ್ತಿದ್ದಾರೆ. ಇದರಿಂದಾಗಿ ವಸತಿ ನಿಲಯದಲ್ಲಿ ಸ್ಥಳಾವಕಾಶದ ಕೊರತೆ, ಕುಡಿಯುವ ನೀರಿನ ಸಮಸ್ಯೆ ಹಾಗೂ ಹಾಸಿಗೆ ಮತ್ತು ಮಂಚಗಳ ಕೊರತೆ ಎದುರಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

ಮಳೆ ಬಂದ ಸಂದರ್ಭದಲ್ಲಿ ವಿದ್ಯಾರ್ಥಿನಿಯರು ಊಟದ ಸಭಾಂಗಣದಲ್ಲಿ ಮಲಗಬೇಕಾದ ಪರಿಸ್ಥಿತಿ ಇದೆ ಎಂದು ವಿದ್ಯಾರ್ಥಿನಿಯರು ಅಧಿಕಾರಿಗಳ ಗಮನಕ್ಕೆ ತಂದರು. ವಿದ್ಯಾರ್ಥಿನಿಯರ ಸಮಸ್ಯೆಗಳನ್ನು ಆಲಿಸಿದ ಅಧಿಕಾರಿಗಳು, ಯಾವುದೇ ತೊಂದರೆ ಅಥವಾ ಸಮಸ್ಯೆಗಳು ಎದುರಾದಲ್ಲಿ ಮಕ್ಕಳ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡುವಂತೆ ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಲೋಕಾಯುಕ್ತ ಹೆಡ್ ಕಾನ್‌ಸ್ಟೆಬಲ್‌ಗಳಾದ ರವೀಶ್, ರಂಗನಾಥ್, ನರಸಿಂಹರಾಜು, ಕೆಜಿಬಿವಿ ಶಾಲೆಯ ಮುಖ್ಯ ಶಿಕ್ಷಕಿ ಸಾವಿತ್ರಿ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಸಪ್ತಸ್ವರ ನ್ಯೂಸ್ | ಪಾವಗಡ

Leave a Reply

Your email address will not be published. Required fields are marked *