IMG 20260830 WA0023

ಪಾವಗಡ : ಆರ್ಯ ವೈಶ್ಯ ಸಮದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ….!

DISTRICT NEWS ತುಮಕೂರು

ಆರ್ಯ ವೈಶ್ಯ ಸೇವಾ ಸಮಿತಿಯು ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗಾಗಿ ನಿರಂತರವಾಗಿ ಶ್ರಮಿಸುತ್ತದೆ – ಅಧ್ಯಕ್ಷ ಕೆ.ವಿ. ಶ್ರೀನಿವಾಸ್.

ಪಾವಗಡ: ಆರ್ಯ ವೈಶ್ಯ ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಹಲವಾರು ಕಾರ್ಯಕ್ರಮಗಳ ಮೂಲಕ ಪ್ರೋತ್ಸಾಹಿಸುವ ಉದ್ದೇಶದಿಂದ ಆರ್ಯ ವೈಶ್ಯ ಸೇವಾ ಸಮಿತಿ ಸ್ಥಾಪಿಸಲಾಗಿದೆ ಎಂದು ಸಮಿತಿಯ ಅಧ್ಯಕ್ಷ ಕೆ.ವಿ. ಶ್ರೀನಿವಾಸ್ ತಿಳಿಸಿದರು.

ಪಟ್ಟಣದ ಅಗಸರಕುಂಟೆ ಬಳಿಯಿರುವ ಸಾಯಿಬಾಬಾ ದೇವಸ್ಥಾನದ ಅನ್ನಪೂರ್ಣೇಶ್ವರಿ ಭವನದಲ್ಲಿ ಏರ್ಪಡಿಸಿದ್ದ ಆರ್ಯ ವೈಶ್ಯ ಸೇವಾ ಸಮಿತಿಯ ಪ್ರಥಮ ವಾರ್ಷಿಕೋತ್ಸವ, ಪ್ರತಿಭಾ ಪುರಸ್ಕಾರ ಹಾಗೂ ವಿದ್ಯಾರ್ಥಿ ವೇತನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಒಂದು ಒಳ್ಳೆಯ ಕೆಲಸ ಮಾಡಲು ಸಾವಿರ ವಿಘ್ನಗಳು ಎದುರಾಗುತ್ತವೆ. ಸಮಿತಿ ನೋಂದಣಿಗಿಂತ ಮುಂಚೆ ಮತ್ತು ನಂತರವೂ ಈ ಸಮಿತಿಗೆ ಸಹಕಾರ ನೀಡಬಾರದು ಎಂದು ದೂರವಾಣಿ ಮೂಲಕ ಹಾಗೂ ಮನೆಗಳಿಗೆ ಹೋಗಿ ಒತ್ತಡ ಹಾಕಿರುವ ಪ್ರಸಂಗಗಳು ನಡೆದಿವೆ. ಯಾರು ಏನೇ ಮಾಡಿದರೂ ಸಮಿತಿಯ ಮೂಲಕ ಹಲವಾರು ಸಾಮಾಜಿಕ ಕಾರ್ಯಗಳು ಮುಂದುವರೆಯುತ್ತವೆ. ಈ ಸಮಿತಿಯಲ್ಲಿ 80 ಜನ ದಾನಿಗಳಿದ್ದು, ಅವರ ಸಹಕಾರ ಹೀಗೆಯೇ ಮುಂದುವರೆಯಲಿ, ಹಲವರು ಸ್ವಯಂ ಪ್ರೇರಿತರಾಗಿ ಸಹಾಯ ಮಾಡಲು ಮುಂದೆ ಬಂದಿದ್ದಾರೆ” ಎಂದರು.
ಜ್ಞಾನಬೋಧಿನಿ ಶಾಲೆಯ ಕಾರ್ಯದರ್ಶಿ ಕೆ.ಎಸ್. ಅನಿಲ್ ಕುಮಾರ್ ಮಾತನಾಡಿ, “ಆರ್ಯ ವೈಶ್ಯ ಸಮಾಜದ ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಉತ್ತಮ ಸಾಧನೆ ಮಾಡಿ ಉನ್ನತ ಮಟ್ಟಕ್ಕೆ ಬರಬೇಕು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು ಪ್ರತಿಭಾ ಪುರಸ್ಕಾರದಂತಹ ಕಾರ್ಯಕ್ರಮಗಳು ಹೆಚ್ಚು ನಡೆಯಬೇಕು” ಎಂದರು.
ಡಾ. ವಿ.ಕೆ. ಶಿವಕುಮಾರ್ ಮಾತನಾಡಿ, “ಪ್ರತಿಯೊಬ್ಬ ವಿದ್ಯಾರ್ಥಿ ಉನ್ನತ ಮಟ್ಟಕ್ಕೆ ಹೋಗಲು ತಂದೆ-ತಾಯಿಯ ಪರಿಶ್ರಮ ಮುಖ್ಯ. ವಿದ್ಯಾರ್ಥಿಗಳು ಅಂಕಗಳಿಗಿಂತ ಜ್ಞಾನಾರ್ಜನೆಗಾಗಿ ಓದಬೇಕು. ಜ್ಞಾನಕ್ಕಿಂತ ಮಿಗಿಲಾದ ಸಂಪತ್ತು ಇಲ್ಲ. ಜೀವನದಲ್ಲಿ ಎಷ್ಟೇ ಕಷ್ಟಗಳು ಬಂದರೂ ಕುಗ್ಗಬಾರದು” ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಕರ್ನಾಟಕ ಆರ್ಯ ವೈಶ್ಯ ಸಂಘದ ಪ್ರಧಾನ ಕಾರ್ಯದರ್ಶಿ ಅಜಯ್ ಕುಮಾರ್ ಮಾತನಾಡಿ, “ನಮ್ಮ ದೇಶ, ರಾಜ್ಯದ ಎಲ್ಲಾ ಕಡೆಗಳಲ್ಲಿ, ಎಲ್ಲಾ ಕ್ಷೇತ್ರಗಳಲ್ಲಿ ಪಾವಗಡದ ಸಾಧಕರಿದ್ದಾರೆ. ಆರ್ಯ ವೈಶ್ಯರು ನಂಬಿಕೆಗೆ ಬದ್ಧರಾದವರು. ಆರ್ಯ ವೈಶ್ಯ ಸೇವಾ ಸಮಿತಿಯಿಂದ ಅರ್ಥಪೂರ್ಣ ಕಾರ್ಯಕ್ರಮ ನಡೆಯುತ್ತಿದೆ. ಇದು ವಿದ್ಯಾರ್ಥಿಗಳನ್ನು ಉತ್ತೇಜಿಸುವ ಕಾರ್ಯಕ್ರಮ. ನಂಬಿಕೆ, ಸೇವೆಗೆ ಮತ್ತೊಂದು ಹೆಸರು ಆರ್ಯ ವೈಶ್ಯರು” ಎಂದರು.

ಕಾರ್ಯಕ್ರಮದಲ್ಲಿ 40 ಜನ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು 25 ಜನ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ವೈದ್ಯರಾದ ಜಯಂತಿ, ಅಜಯ್, ಪ್ರಜ್ವಲ್, ಉಜ್ವಲ್, ಸಿ.ಎ. ಗಳಾದ ಸಾಯಿ ಪ್ರಣಿತ್, ಅಭಿಷೇಕ್, ಉಪಾಧ್ಯಕ್ಷ ರಾಮಮೂರ್ತಿ, ಕಾರ್ಯದರ್ಶಿ ಸತೀಶ್, ಸಹ ಕಾರ್ಯದರ್ಶಿ ಲಕ್ಷ್ಮಿ ಗುಂಡಯ್ಯ ಸೇರಿದಂತೆ ನಿರ್ದೇಶಕರು ಹಾಜರಿದ್ದರು.

ವರದಿ : ಶ್ರೀನಿವಾಸಲು ಎ