ದೇಶದ ಪ್ರಗತಿಗೆ ಅಟಲ್ ಜೀ ಕಾಣಿಕೆ ಅನನ್ಯ
ವೈ.ಎನ್.ಹೊಸಕೋಟೆ : ದೇಶದ ಪ್ರಗತಿಗೆ ಅಟಜ್ ಜೀ ರವರ ಕೊಡುಗೆ ಅಪಾರವಾಗಿದ್ದು, ಸದೃಢ ಭಾರತ ನಿರ್ಮಾಣದಲ್ಲಿ ಗಮನಾರ್ಹ ಕೆಲಸಗಳನ್ನು ಮಾಡಿದ್ದಾರೆ ಎಂದು ಬಿಜೆಪಿ ಮುಖಂಡ ಟಿ.ಉಮೇಶ್ ತಿಳಿಸಿದರು. ಶುಕ್ರವಾರದಂದು ಹೋಬಳಿಯ ಪೋತಗಾನಹಳ್ಳಿ ಗ್ರಾಮದ ಬಿಜೆಪಿ ಕಛೇರಿಯಲ್ಲಿ ಹಮ್ಮಿಕೊಂಡಿದ್ದ ಮಾಜಿ ಪ್ರದಾನಿ ಅಟಲ್ ಬಿಹಾರಿ ವಾಜಪೇಯಿರವರ ಜನ್ಮದಿನಾಚರಣೆಯಲ್ಲಿ ಮಾತನಾಡಿದ ಅವರು, ಬಿಜೆಪಿ ಆಡಳಿತದ ಸಮಯದಲ್ಲಿ ಇಡೀ ವಿಶ್ವವೇ ತಬ್ಬಿಬ್ಬಾಗುವಂತೆ ಮಾಡಿದ ಮಹಾನ್ ಆಡಳಿತ ಅವರು. ಪೋಖ್ರಾನ್ ಅಣು ಪರೀಕ್ಷೆ ನಡೆಸಿ ದೇಶದ ಶಕ್ತಿಯನ್ನು ಅಂತರಾಷ್ಟ್ರ ಮಟ್ಟದಲ್ಲಿ ತೋರಿಸಿಕೊಟ್ಟರು. ಭಾರತ ಪಾಕ್ ಬಾಂಧವ್ಯಕ್ಕೆ ಕೊಂಡಿಯಾಗಿ ಲಾಹೋರ್ ಬಸ್ ಪ್ರಯಾಣ ಆರಂಭಿಸಿದರು. ತನ್ನ ಕನಸಿನ ಕೂಸಾದ ರಾಷ್ಟ್ರೀಯ ಹೆದ್ದಾರಿ ಮತ್ತು ಪ್ರಧಾನ ಮಂತ್ರಿ ಗ್ರಾಮ್ ಸಡಕ್ ಯೋಜನೆಗೆ ಚಾಲನೆ ನೀಡಿದರು. ದೇಶದ ನಾಲ್ಕೂ ಮೂಲೆಗಳಿಗೂ ಸಂಪರ್ಕ ಕಲ್ಪಿಸುವ 15 ಸಾವಿರ ಕಿ.ಮೀ. ಉದ್ದದ “ಸುವರ್ಣ ಚತುಷ್ಪಥ” ಹೆದ್ದಾರಿಯನ್ನು ದಾಖಲೆಯ ಸಮಯದಲ್ಲಿ ಪೂರ್ಣಗೊಳಿಸಿ ಪ್ರತಿಹಳ್ಳಿಗೂ ಸಂಪರ್ಕ ಕಲ್ಪಿಸಿದ್ದಾರೆ. “ಸರ್ವ ಶಿಕ್ಷಾ ಅಭಿಯಾನ” ಮೂಲಕ ಎಲ್ಲರನ್ನೂ ಸಾಕ್ಷರರನ್ನಾಗಿ ಮಾಡಲು ಮುಂದಾಗಿದ್ದ ವಾಜಪೇಯಿಯವರು ಒಬ್ಬ ದೂರದೃಷ್ಟಿ ಹೊಂದಿದ್ದ ನಾಯಕ. ಅವರ ಸಾಧನೆ ಅಸಾಮಾನ್ಯವಾದುದು ಎಂದರು. ಈ ಸಂದರ್ಭದಲ್ಲಿ ಬಿ.ಹೊಸಹಳ್ಳಿ ನಾಗರಾಜು, ಚೈತನ್ಯ ಪ್ರಭು, ಕೆ.ಬಿ.ಮಂಜುನಾಥ, ಜಿ.ನಾರಾಯಣಪ್ಪ, ಪಿ.ಹೆಚ್.ನಾಗರಾಜಪ್ಪ, ಕಾಮೇಶ್ ಯಾದವ್, ನರಸಿಂಹಪ್ಪ.ಪಿ, ಜಗದೀಶ್ ಇತರರು ಇದ್ದರು.