ಗ್ರಾಮೀಣ ಆಸ್ತಿ ಮಾಲೀಕರಿಗೆ ಗುಡ್‌ನ್ಯೂಸ್: ಡಿಸೆಂಬರ್ 31ರೊಳಗೆ 8 ಲಕ್ಷ ಆಸ್ತಿಗಳಿಗೆ ಇ-ಸ್ವತ್ತು!
ಭೂಗ್ಯಾರಂಟಿ ಅಭಿಯಾನಕ್ಕೆ ಸಚಿವ ಈಶ್ವರ ಖಂಡ್ರೆ ಚಾಲನೆ – ದಾಖಲೆ ಇಲ್ಲದವರಿಗೂ ಇ-ಸ್ವತ್ತು ಪಡೆಯಲು ಅವಕಾಶ
ಬೆಂಗಳೂರು: ಗ್ರಾಮೀಣ ಪ್ರದೇಶದ ಆಸ್ತಿ ಮಾಲೀಕರಿಗೆ ರಾಜ್ಯ ಸರ್ಕಾರ ಸಿಹಿಸುದ್ದಿ ನೀಡಿದೆ. ಇ-ಸ್ವತ್ತು ವಿತರಣೆಯಲ್ಲಿನ ವಿಳಂಬ ನಿವಾರಿಸಲು ನಿಯಮಗಳಿಗೆ ತಿದ್ದುಪಡಿ ತರಲಾಗಿದ್ದು, ಡಿಸೆಂಬರ್ 31ರೊಳಗೆ 8 ಲಕ್ಷ ಗ್ರಾಮಠಾಣಾ ಆಸ್ತಿಗಳಿಗೆ ಇ-ಸ್ವತ್ತು ನೀಡಲು ಸರ್ಕಾರ ಗುರಿ ನಿಗದಿಪಡಿಸಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ. ಖಂಡ್ರೆ ತಿಳಿಸಿದ್ದಾರೆ.
ವಿಕಾಸಸೌಧದಲ್ಲಿ ಭೂಗ್ಯಾರಂಟಿ ಇ-ಸ್ವತ್ತು ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಸಚಿವರು, ರಾಜ್ಯದ 5,927 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಇ-ಸ್ವತ್ತು ವಿತರಣೆಗೆ ವಿಶೇಷ ಅಭಿಯಾನ ಆರಂಭಿಸಲಾಗಿದೆ. ವ್ಯಾಜ್ಯರಹಿತ ಹಾಗೂ ಸರ್ಕಾರಿ ಮತ್ತು ಅರಣ್ಯ ಭೂಮಿಯಲ್ಲಿಲ್ಲದ ಅರ್ಹ ಗ್ರಾಮೀಣ ಆಸ್ತಿಗಳಿಗೆ ಹಂತ ಹಂತವಾಗಿ ಇ-ಸ್ವತ್ತು ನೀಡಲಾಗುವುದು ಎಂದರು.
1.50 ಕೋಟಿ ಗ್ರಾಮೀಣ ಆಸ್ತಿಗಳು
ರಾಜ್ಯದಲ್ಲಿ ಸುಮಾರು 1.50 ಕೋಟಿ ಗ್ರಾಮೀಣ ಆಸ್ತಿಗಳಿವೆ. ಈ ಪೈಕಿ 42,92,484 ಆಸ್ತಿಗಳಿಗೆ ನಮೂನೆ 11 ಹಾಗೂ 10,16,730 ಆಸ್ತಿಗಳಿಗೆ ನಮೂನೆ ಬಿ ವಿತರಿಸಲಾಗಿದೆ. ಇನ್ನೂ 97,59,867 ಆಸ್ತಿಗಳಿಗೆ ಇ-ಸ್ವತ್ತು ನೀಡಬೇಕಿದೆ. 2027ರ ಡಿಸೆಂಬರ್ 31ರೊಳಗೆ 80 ಲಕ್ಷ ಅರ್ಹ ಗ್ರಾಮೀಣ ಆಸ್ತಿಗಳಿಗೆ ಇ-ಸ್ವತ್ತು ನೀಡುವ ಗುರಿಯನ್ನೂ ಹೊಂದಲಾಗಿದೆ ಎಂದು ತಿಳಿಸಿದರು.
ಸರ್ಕಾರದ 6ನೇ ಗ್ಯಾರಂಟಿಯಾಗಿ ಭೂಗ್ಯಾರಂಟಿ
ಚುನಾವಣಾ ಪೂರ್ವದಲ್ಲಿ ನೀಡಿದ್ದ ಐದು ಗ್ಯಾರಂಟಿಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿರುವ ಸರ್ಕಾರ, ಇದೀಗ ಗ್ರಾಮೀಣ ಜನರಿಗೆ ಆಸ್ತಿ ಹಕ್ಕಿನ ಭದ್ರತೆ ಒದಗಿಸುವ ಉದ್ದೇಶದಿಂದ ಭೂಗ್ಯಾರಂಟಿ ಇ-ಸ್ವತ್ತು ಅಭಿಯಾನವನ್ನು 6ನೇ ಗ್ಯಾರಂಟಿಯಾಗಿ ಆರಂಭಿಸಿದೆ ಎಂದು ಸಚಿವರು ಹೇಳಿದರು.
ದಾಖಲೆ ಕಳೆದುಕೊಂಡವರಿಗೂ ಇ-ಸ್ವತ್ತು
ತಲೆಮಾರುಗಳಿಂದ ಗ್ರಾಮಠಾಣಾ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಅನೇಕ ಕುಟುಂಬಗಳ ಆಸ್ತಿ ದಾಖಲೆಗಳು ಪ್ರವಾಹ, ಮಳೆ, ಬೆಂಕಿ ಅವಘಡ ಹಾಗೂ ಗೆದ್ದಲುಗಳಿಂದ ನಾಶವಾಗಿವೆ. ಅಂತಹವರಿಗೆ 07-04-2025ಕ್ಕೂ ಹಿಂದಿನ ವಿದ್ಯುತ್ ಬಿಲ್ ಆಧಾರವಾಗಿ ಹಾಗೂ ಸ್ಥಳ ಮಹಜರು ನಡೆಸಿ, ಸಾರ್ವಜನಿಕರಿಂದ ಆಕ್ಷೇಪಣೆ ಸಲ್ಲಿಸಲು 21 ದಿನಗಳ ಕಾಲಾವಕಾಶ ನೀಡಿ ಇ-ಸ್ವತ್ತು ವಿತರಿಸಲಾಗುವುದು ಎಂದು ಭರವಸೆ ನೀಡಿದರು.
ಕಣಮನೆ, ಮನೆದಳ ಆಸ್ತಿಗಳಿಗೂ ಸೌಲಭ್ಯ
ಮಲೆನಾಡು ಭಾಗದ ಜನರ ವಾಸಸ್ಥಳಗಳ ಸ್ವರೂಪವನ್ನು ಗಮನದಲ್ಲಿಟ್ಟುಕೊಂಡು ಕಣಮನೆ ಮತ್ತು ಮನೆದಳ ಆಸ್ತಿಗಳಿಗೂ ಇ-ಸ್ವತ್ತು ನೀಡಲು ಅವಕಾಶ ಕಲ್ಪಿಸಲಾಗಿದೆ. ಕೃಷಿ ಜಮೀನಿನಲ್ಲಿ ವಾಸಕ್ಕಾಗಿ ಅಥವಾ ಕೃಷಿ ಉದ್ದೇಶಕ್ಕಾಗಿ ನಿರ್ಮಿಸಿಕೊಂಡಿರುವ ಕಟ್ಟಡಗಳಿಗೆ ನೋಂದಾಯಿತ ದಾಖಲೆಗಳಿಲ್ಲದಿದ್ದರೂ ನಿಯಮಾನುಸಾರ ಇ-ಸ್ವತ್ತು ಪಡೆಯಬಹುದು. 4,000 ಚದರ ಅಡಿವರೆಗಿನ ಆಸ್ತಿಗಳಿಗೆ ಈ ಸೌಲಭ್ಯ ಲಭ್ಯವಾಗಲಿದೆ.
ಇ-ಸ್ವತ್ತು 3.0 ತಂತ್ರಾಂಶ ಶೀಘ್ರದಲ್ಲೇ ಜಾರಿ
ಇ-ಸ್ವತ್ತು ವಿತರಣೆಯಲ್ಲಿ ಪಾರದರ್ಶಕತೆ ಮತ್ತು ಸುರಕ್ಷತೆ ಹೆಚ್ಚಿಸಲು ಇ-ಸ್ವತ್ತು 3.0 ತಂತ್ರಾಂಶ ಅಭಿವೃದ್ಧಿಪಡಿಸಲಾಗುತ್ತಿದೆ. ಕಂದಾಯ ಇಲಾಖೆಯ ತಂತ್ರಾಂಶದ ಮಾಹಿತಿಯನ್ನು ಸ್ವಯಂಚಾಲಿತವಾಗಿ ಪಡೆಯುವ ವ್ಯವಸ್ಥೆ ರೂಪಿಸಲಾಗುತ್ತಿದ್ದು, ಸರ್ಕಾರಿ ಆಸ್ತಿ ಹಾಗೂ ಬಿ ಖರಾಬು ಭೂಮಿಗೆ ಅನಧಿಕೃತವಾಗಿ ಇ-ಸ್ವತ್ತು ನೀಡುವುದನ್ನು ತಡೆಯಲು ಕ್ರಮ ಕೈಗೊಳ್ಳಲಾಗುತ್ತಿದೆ.
ರೋವರ್ ಮೂಲಕ ಜಮೀನು ಸರ್ವೆ
ಗ್ರಾಮೀಣ ಪ್ರದೇಶಗಳಲ್ಲಿನ ಜಮೀನುಗಳ ಅಳತೆ ಮತ್ತು ಸರ್ವೆ ಸಮಸ್ಯೆ ಪರಿಹರಿಸಲು ಪಂಚಾಯತ್ ರಾಜ್ ಇಲಾಖೆಯಲ್ಲಿಯೇ ಪ್ರತ್ಯೇಕ ಮೋಜಣಿ ವಿಭಾಗ ಆರಂಭಿಸುವ ಯೋಜನೆ ರೂಪಿಸಲಾಗಿದೆ. ಸಿಬ್ಬಂದಿಗೆ ತರಬೇತಿ ನೀಡಿ ರೋವರ್ ತಂತ್ರಜ್ಞಾನದ ಮೂಲಕ ಸರ್ವೆ ನಡೆಸುವ ಕಾರ್ಯಯೋಜನೆಯನ್ನು ಶೀಘ್ರದಲ್ಲೇ ಸಚಿವ ಸಂಪುಟದ ಮುಂದೆ ಮಂಡಿಸಲಾಗುವುದು ಎಂದು ಈಶ್ವರ ಖಂಡ್ರೆ ತಿಳಿಸಿದರು.
ಇ-ಸ್ವತ್ತು ಸಹಾಯವಾಣಿ: 9483476000
ಇ-ಸ್ವತ್ತು ಪಡೆಯುವಲ್ಲಿ ಸಾರ್ವಜನಿಕರಿಗೆ ಯಾವುದೇ ತೊಂದರೆಯಾದರೆ ಮೇಲಿನ ಸಹಾಯವಾಣಿಯನ್ನು ಸಂಪರ್ಕಿಸಬಹುದು.
ಅಧಿಕಾರಿಗಳಿಗೆ ಸಚಿವರ ಸೂಚನೆ
ಗ್ರಾಮೀಣ ಜನರಿಗೆ ಅವರ ಆಸ್ತಿಯ ಹಕ್ಕು ದೊರಕಿಸುವುದು ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ. ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಹಾಗೂ ಸರ್ಕಾರಿ ಆಸ್ತಿಗಳ ಸಂರಕ್ಷಣೆಯ ಜವಾಬ್ದಾರಿಯೊಂದಿಗೆ ಅಧಿಕಾರಿಗಳು ಮತ್ತು ಸಿಬ್ಬಂದಿ ಪ್ರಾಮಾಣಿಕತೆ, ದಕ್ಷತೆ ಹಾಗೂ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಸಚಿವರು ಸೂಚಿಸಿದರು.
ಕಾರ್ಯಕ್ರಮದಲ್ಲಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಪಂಕಜ್ ಕುಮಾರ್ ಪಾಂಡೆ, ಪಂಚಾಯತ್ ರಾಜ್ ಇಲಾಖೆಯ ಕಾರ್ಯದರ್ಶಿ ಡಿ. ರಂದೀಪ್, ಆಯುಕ್ತ ವೆಂಕಟರಾಜಾ, ಬೆಳಗಾವಿ ಸಿಇಒ ರಾಹುಲ್ ಶಿಂಧೆ, ಇ-ಆಡಳಿತ ನಿರ್ದೇಶಕ ಗಿರೀಶ್ ದಿಲೀಪ್ ಬದೋಲೆ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.
ಸಪ್ತಸ್ವರ ನ್ಯೂಸ್ | ಬೆಂಗಳೂರು
