ಸರ್ಕಾರಿ ಶಾಲೆಗಳ ಬಲವರ್ಧನೆಗೆ ಸಹಾಯಹಸ್ತ e1795017573801

Karnataka ಸರ್ಕಾರಿ ಶಾಲೆಗಳ ಖಾಸಗೀಕರಣವಲ್ಲ, ಬಲವರ್ಧನೆಯೇ ಗುರಿ…..!

Genaral STATE

ಸರ್ಕಾರಿ ಶಾಲೆಗಳ ಖಾಸಗೀಕರಣವಲ್ಲ, ಬಲವರ್ಧನೆಯೇ ಗುರಿ…!

‘ನಮ್ಮ ಶಾಲೆ ನಮ್ಮ ಜವಾಬ್ದಾರಿ’ ಕಾರ್ಯಕ್ರಮದ ಬಗ್ಗೆ ಶಿಕ್ಷಣ ಇಲಾಖೆಯಿಂದ ಸ್ಪಷ್ಟನೆ

ಬೆಂಗಳೂರು, ನವೆಂಬರ್ 18: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ‘ನಮ್ಮ ಶಾಲೆ ನಮ್ಮ ಜವಾಬ್ದಾರಿ’ ಕಾರ್ಯಕ್ರಮವು ಸರ್ಕಾರಿ ಶಿಕ್ಷಣ ವ್ಯವಸ್ಥೆಯ ಖಾಸಗೀಕರಣಕ್ಕೆ ದಾರಿ ಮಾಡಿಕೊಡಲಿದೆ ಎಂಬ ಆರೋಪಗಳಿಗೆ ಶಾಲಾ ಶಿಕ್ಷಣ ಇಲಾಖೆ ಸ್ಪಷ್ಟನೆ ನೀಡಿದೆ. ಸರ್ಕಾರಿ ಶಾಲೆಗಳ ಮಾಲೀಕತ್ವ, ಆಡಳಿತ ಮತ್ತು ನಿರ್ವಹಣೆಯ ಸಂಪೂರ್ಣ ಅಧಿಕಾರ ಸರ್ಕಾರದ ಬಳಿಯೇ ಇರಲಿದೆ ಎಂದು ಇಲಾಖೆ ತಿಳಿಸಿದೆ.

ಈ ಕಾರ್ಯಕ್ರಮದಡಿ ಸರ್ಕಾರಿ ಶಾಲೆಗಳ ಯಾವುದೇ ಭೂಮಿ ಅಥವಾ ಆಸ್ತಿಯನ್ನು ಖಾಸಗಿ ಸಂಸ್ಥೆಗಳಿಗೆ ಹಸ್ತಾಂತರಿಸುವುದಿಲ್ಲ. ಪಠ್ಯಕ್ರಮ, ಶಿಕ್ಷಕರ ನೇಮಕಾತಿ, ವೇತನ ಮತ್ತು ಆಡಳಿತದ ಜವಾಬ್ದಾರಿ ಶಿಕ್ಷಣ ಇಲಾಖೆಯಲ್ಲಿಯೇ ಮುಂದುವರಿಯಲಿದೆ. ವಿದ್ಯಾರ್ಥಿಗಳಿಂದ ಯಾವುದೇ ಶುಲ್ಕ ಅಥವಾ ದೇಣಿಗೆ ಪಡೆಯಲು ಅವಕಾಶವಿಲ್ಲ. ಸರ್ಕಾರಿ ಶಾಲೆಗಳನ್ನು ಮುಚ್ಚುವ ಪ್ರಸ್ತಾಪವೂ ಇಲ್ಲ ಎಂದು ಸ್ಪಷ್ಟಪಡಿಸಿದೆ.

ಸರ್ಕಾರಿ ಶಾಲೆಗಳ ದಾಖಲಾತಿ ಕುಸಿತ ಕಳವಳಕಾರಿ

ಯುಡಿಐಎಸ್‌ಇ+ 2025-26ರ ಅಂಕಿಅಂಶಗಳ ಪ್ರಕಾರ, 2018-19ರಿಂದ 2025-26ರವರೆಗೆ ಸರ್ಕಾರಿ ಶಾಲೆಗಳ ದಾಖಲಾತಿಯಲ್ಲಿ 4.8 ಲಕ್ಷ ಇಳಿಕೆಯಾಗಿದೆ. ಇದೇ ಅವಧಿಯಲ್ಲಿ ಖಾಸಗಿ ಶಾಲೆಗಳ ದಾಖಲಾತಿ 7.7 ಲಕ್ಷ ಹೆಚ್ಚಾಗಿದೆ.

ಕರ್ನಾಟಕದಲ್ಲಿ 10ನೇ ತರಗತಿಯಿಂದ 11ನೇ ತರಗತಿಗೆ ಮುಂದುವರಿಯುವ ವಿದ್ಯಾರ್ಥಿಗಳ ಪ್ರಮಾಣ ಶೇ.61.5ರಷ್ಟಿದ್ದು, ರಾಷ್ಟ್ರೀಯ ಸರಾಸರಿ ಶೇ.78.1ರಷ್ಟಿದೆ. ಶಾಲೆ ತೊರೆಯುವ ಮಕ್ಕಳ ಸಂಖ್ಯೆಯನ್ನು ಕಡಿಮೆ ಮಾಡಿ ಗುಣಮಟ್ಟದ ಶಿಕ್ಷಣ ಒದಗಿಸುವುದು ಸರ್ಕಾರದ ಉದ್ದೇಶವಾಗಿದೆ.

ವಿದ್ಯಾರ್ಥಿಗಳಿಗೆ ಹೆಚ್ಚುವರಿ ಸೌಲಭ್ಯಗಳು

ಅರ್ಹ ಖಾಸಗಿ ಶಾಲೆಗಳು ಗರಿಷ್ಠ ಐದು ಸರ್ಕಾರಿ ಶಾಲೆಗಳಿಗೆ ಮಾರ್ಗದರ್ಶನ ನೀಡಲು ತಿಳಿವಳಿಕೆ ಒಪ್ಪಂದ ಮಾಡಿಕೊಳ್ಳಬಹುದು. ಇದರ ಮೂಲಕ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಹೆಚ್ಚುವರಿ ವಿಷಯ ಶಿಕ್ಷಕರು, ವಿಜ್ಞಾನ ಮತ್ತು STEAM ಪ್ರಯೋಗಾಲಯಗಳು, ಗ್ರಂಥಾಲಯ, ಕ್ರೀಡಾ ತರಬೇತಿ ಹಾಗೂ ಸಿಇಟಿ, ನೀಟ್, ಸಿಯುಇಟಿ, ಸಿಎಲ್‌ಎಟಿ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ದೊರೆಯಲಿದೆ.

ಖಾಸಗಿ ಶಾಲೆಗಳ ಮಾರ್ಗದರ್ಶಕ ಶಿಕ್ಷಕರು ಸರ್ಕಾರಿ ಶಿಕ್ಷಕರಿಗೆ ಪೂರಕವಾಗಿ ಕಾರ್ಯನಿರ್ವಹಿಸಲಿದ್ದು, ಅವರ ಸ್ಥಾನವನ್ನು ಬದಲಿಸುವುದಿಲ್ಲ ಎಂದು ಇಲಾಖೆ ತಿಳಿಸಿದೆ.

ಮಕ್ಕಳ ಸುರಕ್ಷತೆಗೆ ಕಟ್ಟುನಿಟ್ಟಿನ ನಿಯಮಗಳು

ಶಾಲಾ ಆವರಣದಲ್ಲಿ ವಾಣಿಜ್ಯ ಪ್ರಚಾರಕ್ಕೆ ಅವಕಾಶವಿಲ್ಲ. ವಿದ್ಯಾರ್ಥಿಗಳ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳುವಂತಿಲ್ಲ. ಖಾಸಗಿ ಶಾಲೆಗಳಿಗೆ ಪ್ರವೇಶ ಪಡೆಯುವಂತೆ ಮಕ್ಕಳ ಮೇಲೆ ಒತ್ತಡ ಹೇರುವಂತಿಲ್ಲ. ಪೋಕ್ಸೋ ಕಾಯ್ದೆಯ ಪಾಲನೆ ಕಡ್ಡಾಯವಾಗಿದೆ.

ಜಿಲ್ಲಾ ಮಟ್ಟದ ಸಿಎಸ್‌ಆರ್ ಕೋಶಗಳು ಒಪ್ಪಂದಗಳಿಗೆ ಅನುಮೋದನೆ ನೀಡಲಿದ್ದು, ಮಾಸಿಕ ಮತ್ತು ತ್ರೈಮಾಸಿಕ ಪ್ರಗತಿ ಪರಿಶೀಲನೆ ನಡೆಸಲಿವೆ. ಸಾರ್ವಜನಿಕರ ಕುಂದುಕೊರತೆಗಳನ್ನು 30 ದಿನಗಳೊಳಗೆ ಪರಿಹರಿಸುವ ವ್ಯವಸ್ಥೆಯನ್ನೂ ರೂಪಿಸಲಾಗಿದೆ.

41 ಶಾಲೆಗಳಲ್ಲಿ ದಾಖಲಾತಿ ಶೇ.22.9ರಷ್ಟು ಏರಿಕೆ

ಬೆಂಗಳೂರಿನ ರಾಮಗೊಂಡನಹಳ್ಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ 2019ರಲ್ಲಿ 190 ಇದ್ದ ವಿದ್ಯಾರ್ಥಿಗಳ ಸಂಖ್ಯೆ ಖಾಸಗಿ ಪಾಲುದಾರರ ಬೆಂಬಲದ ನಂತರ 1,125ಕ್ಕೆ ಏರಿಕೆಯಾಗಿದೆ.

ನವೆಂಬರ್ 9, 2026ರ ವರದಿಯಂತೆ, ಖಾಸಗಿ ನೆರವು ಪಡೆದ 41 ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ 13,074ರಿಂದ 16,073ಕ್ಕೆ ಏರಿಕೆಯಾಗಿದೆ. ಇದು ಶೇ.22.9ರಷ್ಟು ಹೆಚ್ಚಳವಾಗಿದೆ.

2026-27ನೇ ಸಾಲಿನಲ್ಲಿ ಸುಮಾರು 6,000 ಅರ್ಹ ಶಾಲೆಗಳ ಪೈಕಿ ಕನಿಷ್ಠ 1,000 ಶಾಲೆಗಳಿಗೆ ಮಾರ್ಗದರ್ಶನ ಒದಗಿಸುವ ಗುರಿಯನ್ನು ಸರ್ಕಾರ ಹೊಂದಿದೆ.

ಸರ್ಕಾರಿ ಶಾಲೆಗಳನ್ನು ಬಲಪಡಿಸುವುದು, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಮತ್ತು ಆಧುನಿಕ ಸೌಲಭ್ಯಗಳನ್ನು ಒದಗಿಸುವುದೇ ಕಾರ್ಯಕ್ರಮದ ಆಶಯವಾಗಿದೆ. ಕಾರ್ಯಕ್ರಮದ ಸಂಪೂರ್ಣ ಮಾಹಿತಿ ಮತ್ತು ಪ್ರಗತಿಯನ್ನು nsnj.karnataka.gov.in ಜಾಲತಾಣದಲ್ಲಿ ಪ್ರಕಟಿಸಲಾಗುವುದು ಎಂದು ಶಿಕ್ಷಣ ಇಲಾಖೆ ಸ್ಪಷ್ಟಪಡಿಸಿದೆ.

Leave a Reply

Your email address will not be published. Required fields are marked *