Vibrant Jamboosavari Festival News Collage e1792596344136

ತುಮಕೂರು ದಸರಾ ಜಂಬೂಸವಾರಿ ಜನಮನದಲ್ಲಿ ಅಚ್ಚಳಿಯದ ನೆನಪು…..!

DISTRICT NEWS ತುಮಕೂರು

ತುಮಕೂರು ದಸರಾ ಜಂಬೂಸವಾರಿಗೆ ಅದ್ಧೂರಿ ಮೆರುಗು: ಗಜಪಡೆ, ಗ್ರಾಮ ದೇವತೆಗಳು, ನೂರಾರು ಕಲಾತಂಡಗಳ ವೈಭವ!

ಉಪಮುಖ್ಯಮಂತ್ರಿ ಜಿ. ಪರಮೇಶ್ವರರಿಂದ ನಂದಿಧ್ವಜಕ್ಕೆ ಪೂಜೆ; ಚಾಮುಂಡೇಶ್ವರಿ ದೇವಿಯ ಅಂಬಾರಿ ಮೆರವಣಿಗೆಗೆ ಸಾವಿರಾರು ಜನ ಸಾಕ್ಷಿ

ತುಮಕೂರು, ಅ. 21: ನಾಡಿನ ಸಂಸ್ಕೃತಿ, ಸಂಪ್ರದಾಯ ಮತ್ತು ಕಲಾ ವೈಭವವನ್ನು ಅನಾವರಣಗೊಳಿಸಿದ ತುಮಕೂರು ದಸರಾ ಜಂಬೂಸವಾರಿ ಮೆರವಣಿಗೆಯು ನಗರದ ಮೆರುಗನ್ನು ಮತ್ತಷ್ಟು ಹೆಚ್ಚಿಸಿತು. ಉಪಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ ಅವರು ನಗರದ ಬಿ.ಜಿ.ಎಸ್. ವೃತ್ತದ ಬಳಿ ಸಾಂಪ್ರದಾಯಿಕವಾಗಿ ನಂದಿಧ್ವಜಕ್ಕೆ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿದರು. ಗಜಪಡೆ, ಗ್ರಾಮ ದೇವತೆಗಳ ಉತ್ಸವ ಮೂರ್ತಿಗಳು, ನೂರಾರು ಕಲಾತಂಡಗಳ ಪ್ರದರ್ಶನ ಹಾಗೂ ಜನರ ಉತ್ಸಾಹದಿಂದ ಜಂಬೂಸವಾರಿ ಕಂಗೊಳಿಸಿತು.

ಅಂಬಾರಿ ಹೊತ್ತ ಲಕ್ಷ್ಮಣ ಆನೆ ಪ್ರಮುಖ ಆಕರ್ಷಣೆ

ಮೈಸೂರು ದಸರಾ ಸಂಪ್ರದಾಯವನ್ನು ನೆನಪಿಸುವಂತೆ ಅಂಬಾರಿ ಹೊತ್ತ ಲಕ್ಷ್ಮಣ ಆನೆಯನ್ನು ಬಣ್ಣಬಣ್ಣದ ವಸ್ತ್ರ ಹಾಗೂ ಹೂಗಳಿಂದ ಅಲಂಕರಿಸಲಾಗಿತ್ತು. ಅಂಬಾರಿಯಲ್ಲಿ ತಾಯಿ ಚಾಮುಂಡೇಶ್ವರಿ ದೇವಿಯ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿತ್ತು. ದುಬಾರೆಯಿಂದ ಆಗಮಿಸಿದ್ದ ಲಕ್ಷ್ಮಣ ಆನೆಯೊಂದಿಗೆ ಸಾಗಿದ ಎರಡು ಲಕ್ಷ್ಮೀ ಆನೆಗಳು ಮೆರವಣಿಗೆಯ ಸೊಬಗನ್ನು ಇಮ್ಮಡಿಗೊಳಿಸಿದವು.

ತುಮಕೂರಿನಲ್ಲಿ ಮೂರನೇ ಬಾರಿಗೆ ಆಯೋಜಿಸಲಾದ ಜಂಬೂಸವಾರಿಯನ್ನು ಕಣ್ತುಂಬಿಕೊಳ್ಳಲು ಸಾವಿರಾರು ಜನರು ಸೇರಿದ್ದರು. ಮೆರವಣಿಗೆಯ ಮಾರ್ಗದುದ್ದಕ್ಕೂ ಗ್ಯಾಲರಿಗಳನ್ನು ನಿರ್ಮಿಸಲಾಗಿತ್ತು. ಸಾರ್ವಜನಿಕರು ಮೊಬೈಲ್‌ಗಳಲ್ಲಿ ಮೆರವಣಿಗೆಯ ಸುಂದರ ಕ್ಷಣಗಳನ್ನು ಸೆರೆಹಿಡಿದು ಸಂಭ್ರಮಿಸಿದರು.

33ಕ್ಕೂ ಹೆಚ್ಚು ಗ್ರಾಮ ದೇವತೆಗಳ ಉತ್ಸವ ಮೂರ್ತಿಗಳ ಮೆರವಣಿಗೆ

ಜಂಬೂಸವಾರಿಯಲ್ಲಿ ತುಮಕೂರು ತಾಲ್ಲೂಕು ಕಚೇರಿಯ ಗಣಪತಿ, ಮಂಡಿಪೇಟೆಯ ಶ್ರೀ ಭದ್ರಕಾಳಿ, ಶ್ರೀ ರಾಜರಾಜೇಶ್ವರಿ ಗಂಗಾಭವಾನಿ, ಚಿಕ್ಕಪೇಟೆಯ ಶ್ರೀ ಕೋಟೆ ಆಂಜನೇಯಸ್ವಾಮಿ, ಶ್ರೀ ಕನ್ನಿಕಾಪರಮೇಶ್ವರಿ, ವಿಶ್ವಕರ್ಮ ಕಾಳಿಕಾಂಬ, ಬ್ರಹ್ಮಕುಮಾರಿ ಈಶ್ವರಿ, ಅಂಕಾಲೇಶ್ವರಿ, ದಿಬ್ಬೂರಿನ ಶ್ರೀ ಮುಳಕಟ್ಟಮ್ಮ, ವಿನಾಯಕ ನಗರದ ಶ್ರೀ ಆದಿಶಕ್ತಿ ಅಮ್ಮ, ಮಾರಿಯಮ್ಮ ನಗರದ ಮಾರಿಯಮ್ಮ ದೇವಿ ಹಾಗೂ ಶ್ರೀ ವೀರಭದ್ರಸ್ವಾಮಿ ಸೇರಿದಂತೆ 33ಕ್ಕೂ ಹೆಚ್ಚು ಗ್ರಾಮ ದೇವತೆಗಳ ಉತ್ಸವ ಮೂರ್ತಿಗಳು ಭಾಗವಹಿಸಿದ್ದವು.

ಹೂಗಳಿಂದ ಅಲಂಕರಿಸಿದ ಸಾರೋಟುಗಳು ಹಾಗೂ ಬೆಳ್ಳಿ ರಥಗಳಲ್ಲಿ ಸಾಗಿದ ದೇವರ ಉತ್ಸವ ಮೂರ್ತಿಗಳು ಭಕ್ತರಲ್ಲಿ ಭಕ್ತಿ ಭಾವ ಮೂಡಿಸಿದವು. ಮೆರವಣಿಗೆಯ ಮಾರ್ಗದಲ್ಲಿ ಗಣ್ಯರು ದೇವರ ಉತ್ಸವ ಮೂರ್ತಿಗಳಿಗೆ ಪುಷ್ಪಾರ್ಚನೆ ಸಲ್ಲಿಸಿದರು.

ಜನಮನ ಸೆಳೆದ ನೂರಾರು ಕಲಾತಂಡಗಳ ಪ್ರದರ್ಶನ

ಮಹಿಳೆಯರ ಪೂರ್ಣಕುಂಭ, ಪೊಲೀಸ್ ಅಶ್ವದಳ, ನಂದಿಧ್ವಜ, ಸೋಮನಕುಣಿತ, ಗೊರವರ ಕುಣಿತ, ತಮಟೆ, ಹಗಲು ವೇಷ, ಹುಲಿವೇಷ, ಯಕ್ಷಗಾನ, ವೀರಗಾಸೆ, ಗಾರುಡಿ ಗೊಂಬೆ, ಕೀಲು ಕುದುರೆ, ಡೊಳ್ಳು ಕುಣಿತ ಹಾಗೂ ತಾಳಮದ್ದಳೆ ಸೇರಿದಂತೆ ನೂರಾರು ಕಲಾತಂಡಗಳು ತಮ್ಮ ಕಲಾಪ್ರತಿಭೆಯನ್ನು ಪ್ರದರ್ಶಿಸಿದವು.

ಗಾರುಡಿ ಗೊಂಬೆಗಳ ಬೃಹತ್ ಪ್ರತಿರೂಪಗಳು ಮಕ್ಕಳ ಗಮನ ಸೆಳೆದರೆ, ಡೊಳ್ಳಿನ ನಾದಕ್ಕೆ ಹೆಜ್ಜೆ ಹಾಕಿದ ಕಲಾವಿದರು ಪ್ರೇಕ್ಷಕರನ್ನು ರಂಜಿಸಿದರು. ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲ ವಯೋಮಾನದ ಜನರು ಮೆರವಣಿಗೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡರು.

ಶಮೀ ಪೂಜೆಯೊಂದಿಗೆ ಜಂಬೂಸವಾರಿ ಸಂಪನ್ನ

ನಗರದ ಬಿ.ಜಿ.ಎಸ್. ವೃತ್ತದಿಂದ ಆರಂಭವಾದ ಜಂಬೂಸವಾರಿ ಮೆರವಣಿಗೆಯು ಚರ್ಚ್ ಸರ್ಕಲ್, ಜಿಲ್ಲಾಧಿಕಾರಿ ಕಚೇರಿ, ಅಮಾನಿಕೆರೆ ರಸ್ತೆ, ಕೋತಿತೋಪು ಹಾಗೂ ಶ್ರೀ ಶಿವಕುಮಾರ ಸ್ವಾಮೀಜಿ ವೃತ್ತದ ಮಾರ್ಗವಾಗಿ ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನವನ್ನು ತಲುಪಿತು.

ನಂತರ ವಿವಿಧ ಗ್ರಾಮ ದೇವತೆಗಳ ಸಮ್ಮುಖದಲ್ಲಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಅವರು ಕದಳಿ ಛೇದನ ಮಾಡುವ ಮೂಲಕ ಶಮೀ ಪೂಜೆಯನ್ನು ನೆರವೇರಿಸಿದರು. ನಾಡಿನ ಒಳಿತಿಗಾಗಿ ಪ್ರಾರ್ಥಿಸುವ ಧಾರ್ಮಿಕ ಸಂಪ್ರದಾಯದೊಂದಿಗೆ ಜಂಬೂಸವಾರಿ ಕಾರ್ಯಕ್ರಮ ಸಂಪನ್ನಗೊಂಡಿತು.

ಚಂದನ್ ಶೆಟ್ಟಿ ಹಾಡಿಗೆ ಪರಮೇಶ್ವರ ಹೆಜ್ಜೆ; ರಚಿತಾ ರಾಮ್ ನೃತ್ಯಕ್ಕೆ ಅಭಿಮಾನಿಗಳು ಫಿದಾ!

ತುಮಕೂರು ದಸರಾ ಉತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳೂ ಜನರನ್ನು ಆಕರ್ಷಿಸಿದವು. ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿರುವ ಅಮರಶಿಲ್ಪಿ ಚಕಣಾಚಾರಿ ಸಾಂಸ್ಕೃತಿಕ ವೈಭವ ಮಹಾವೇದಿಕೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕನ್ನಡದ ರ್ಯಾಪರ್ ಚಂದನ್ ಶೆಟ್ಟಿ ಅವರ ಹಾಡಿಗೆ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಹೆಜ್ಜೆ ಹಾಕಿ ಸಂಭ್ರಮಿಸಿದರು.

ಚಂದನ್ ಶೆಟ್ಟಿ ಅವರೊಂದಿಗೆ ರ‍್ಯಾಂಪ್ ವಾಕ್ ಮಾಡಿದ ಪರಮೇಶ್ವರ ಅವರು ಪ್ರೇಕ್ಷಕರತ್ತ ಕೈಬೀಸಿ ಶುಭ ಕೋರಿದರು. “ಪೊಗರು ಅಣ್ಣನಿಗೆ ಪೊಗರು” ಹಾಗೂ “ಕರಾಬು ಬಾಸು ಕರಾಬು” ಸೇರಿದಂತೆ ಜನಪ್ರಿಯ ಹಾಡುಗಳಿಗೆ ಯುವಕರು ಕುಣಿದು ಕುಪ್ಪಳಿಸಿದರು. ಇದಕ್ಕೂ ಮುನ್ನ ವೀಣಾ ವಿದ್ಯಾಮೂರ್ತಿ ಮತ್ತು ತಂಡದವರು ಪ್ರದರ್ಶಿಸಿದ “ದೇವಿಶಕ್ತಿ” ಕಾರ್ಯಕ್ರಮ ಭಕ್ತಿಭಾವ ಮೂಡಿಸಿತು.

ಹಿರಿಯರನ್ನು ಗೌರವಿಸಿ, ಹೆತ್ತವರನ್ನು ಪ್ರೀತಿಸಿ: ರಚಿತಾ ರಾಮ್

ದಸರಾ ಉತ್ಸವಕ್ಕೆ ಆಗಮಿಸಿದ್ದ ಕನ್ನಡದ ಖ್ಯಾತ ನಟಿ ರಚಿತಾ ರಾಮ್ ಅವರು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಹಾಗೂ ಅವರ ಧರ್ಮಪತ್ನಿ ಕನ್ನಿಕಾ ಪರಮೇಶ್ವರಿ ಅವರನ್ನು ವೇದಿಕೆಗೆ ಆಹ್ವಾನಿಸಿ ಮಾತನಾಡಿದರು.

“ಮೊದಲ ಬಾರಿಗೆ ತುಮಕೂರು ದಸರಾ ಉತ್ಸವಕ್ಕೆ ಆಗಮಿಸಿದ್ದು, ಇಲ್ಲಿನ ಸಂಭ್ರಮವನ್ನು ಕಂಡು ಬಹಳ ಸಂತೋಷವಾಗಿದೆ” ಎಂದು ಅವರು ಹೇಳಿದರು. ತಾಯಿ ಚಾಮುಂಡೇಶ್ವರಿ ತುಮಕೂರಿನ ಜನತೆಗೆ ಉತ್ತಮ ಆರೋಗ್ಯ ಮತ್ತು ನೆಮ್ಮದಿ ನೀಡಲಿ ಎಂದು ಹಾರೈಸಿದ ಅವರು, ಪರರಿಗೆ ಒಳಿತನ್ನು ಬಯಸಬೇಕು, ಹಿರಿಯರನ್ನು ಗೌರವಿಸಬೇಕು ಹಾಗೂ ಹೆತ್ತವರನ್ನು ನೋಯಿಸದೆ ಅವರು ಹೆಮ್ಮೆಪಡುವಂತೆ ಮಕ್ಕಳು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ನಂತರ “ಏಕ್ ಲವ್ ಯಾ” ಚಿತ್ರದ “ಮೀಟ್ ಮಾಡಾನ ಇಲ್ಲ ಡೇಟ್ ಮಾಡನಾ” ಹಾಗೂ “ರನ್ನ” ಚಿತ್ರದ “ತಿತಲಿ-ತಿತಲಿ” ಹಾಡುಗಳಿಗೆ ರಚಿತಾ ರಾಮ್ ಹೆಜ್ಜೆ ಹಾಕಿದರು. ಅವರ ನೃತ್ಯಕ್ಕೆ ಅಭಿಮಾನಿಗಳು ಉತ್ಸಾಹದಿಂದ ಸ್ಪಂದಿಸಿದರು.

ಕರುನಾಡಿನ ಗತವೈಭವ ಅನಾವರಣಗೊಳಿಸಿದ ನೃತ್ಯರೂಪಕ

ದಸರಾ ಉತ್ಸವದ ಸಾಂಸ್ಕೃತಿಕ ವೇದಿಕೆಯಲ್ಲಿ ಪ್ರಭಾತ್ ಕಲಾವಿದರು ಪ್ರಸ್ತುತಪಡಿಸಿದ “ಕರುನಾಡಿನ ವೈಭವ” ನೃತ್ಯರೂಪಕವು ಕನ್ನಡ ನಾಡಿನ ಶಿಲ್ಪಕಲೆ, ಸಂಸ್ಕೃತಿ, ಪುರಾಣ ಹಾಗೂ ಇತಿಹಾಸವನ್ನು ಪರಿಚಯಿಸಿತು.

ಹೊಯ್ಸಳರ ಶೌರ್ಯ, ವಿಜಯನಗರ ಸಾಮ್ರಾಜ್ಯದ ಕೀರ್ತಿ, ಶ್ರವಣಬೆಳಗೊಳದ ಬಾಹುಬಲಿ ಮೂರ್ತಿಯ ಶಿಲ್ಪಕಲೆ, ಬೆಂಗಳೂರಿನ ಇತಿಹಾಸ, ಪುಣ್ಯಕೋಟಿಯ ಕಥೆ, ದೇವರಾಯನದುರ್ಗದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ಪುರಾಣ, ನಾಮದ ಚಿಲುಮೆ ಹಾಗೂ ಸಿದ್ಧಗಂಗಾ ಮಠದ ತ್ರಿವಿಧ ದಾಸೋಹಿ ಡಾ. ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ ಮತ್ತು ಶಿಕ್ಷಣ ಕ್ಷೇತ್ರದ ಗಣ್ಯರ ಸೇವೆಯನ್ನು ನೃತ್ಯರೂಪಕದ ಮೂಲಕ ಕಟ್ಟಿಕೊಡಲಾಯಿತು.

ತುಮಕೂರು ದಸರಾ ವೈಭವಕ್ಕೆ ರಮೇಶ್ ಅರವಿಂದ್ ಮೆಚ್ಚುಗೆ

ಖ್ಯಾತ ನಟ ಹಾಗೂ ನಿರ್ದೇಶಕ ರಮೇಶ್ ಅರವಿಂದ್ ಅವರು ತುಮಕೂರು ದಸರಾ ಉತ್ಸವದ ವೈಭವಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಇಷ್ಟೊಂದು ಸಂಖ್ಯೆಯಲ್ಲಿ ಜನರು ಸೇರಿ ಉತ್ಸವದಲ್ಲಿ ಪಾಲ್ಗೊಳ್ಳುತ್ತಿರುವುದು ಸಂತೋಷದ ಸಂಗತಿ ಎಂದು ಹೇಳಿದರು.

ಫಲ-ಪುಷ್ಪ ಪ್ರದರ್ಶನ, ಕಲಾ ಮತ್ತು ಜ್ಞಾನ ವೈಭವ ಪ್ರದರ್ಶನ, ಹೆಲಿಕಾಪ್ಟರ್ ಪ್ರದರ್ಶನ ಹಾಗೂ ಫ್ಲೋಟಿಂಗ್ ರೆಸ್ಟೋರೆಂಟ್ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಜನರನ್ನು ಆಕರ್ಷಿಸಿವೆ ಎಂದರು. ಮಹಿಳೆಯರಿಗೆ ಗೌರವ, ಸ್ಥಾನಮಾನ, ಸುರಕ್ಷತೆ ಹಾಗೂ ಪ್ರೋತ್ಸಾಹ ನೀಡುವುದು ದೇವಿಯ ಪೂಜೆಗೆ ಸಮಾನವಾದ ಪುಣ್ಯದ ಕಾರ್ಯ ಎಂದು ಅಭಿಪ್ರಾಯಪಟ್ಟರು.

ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಅವರು ರಮೇಶ್ ಅರವಿಂದ್ ಅವರ ಕಲಾಸೇವೆ ಹಾಗೂ ಮಾನವೀಯ ಮೌಲ್ಯಗಳನ್ನು ಶ್ಲಾಘಿಸಿ, ಅವರು ಇನ್ನಷ್ಟು ಸಾಧನೆ ಮಾಡಲಿ ಎಂದು ಹಾರೈಸಿದರು. ಬಳಿಕ ಸಂಜಿತ್ ಹೆಗ್ಡೆ ಮತ್ತು ತಂಡದವರ ಸಂಗೀತ ರಸಸಂಜೆ ಪ್ರೇಕ್ಷಕರನ್ನು ರಂಜಿಸಿತು.

ದಸರಾ ಯಶಸ್ಸಿಗೆ ಶ್ರಮಿಸಿದವರಿಗೆ ಸನ್ಮಾನ

ದಸರಾ ಮಹೋತ್ಸವದ ಯಶಸ್ಸಿಗೆ ಶ್ರಮಿಸಿದ ಅಧಿಕಾರಿಗಳು, ಅಧಿಕಾರೇತರರು, ಪಾಲಿಕೆಯ ಪೌರಕಾರ್ಮಿಕರು, ಪಂಜಿನ ಕವಾಯತಿನಲ್ಲಿ ಪಾಲ್ಗೊಂಡ ಮಕ್ಕಳು ಮತ್ತು ತರಬೇತಿದಾರರು ಹಾಗೂ ವಿವಿಧ ಸಮಿತಿಗಳ ಸದಸ್ಯರನ್ನು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಅವರು ಗೌರವಿಸಿ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ರಾಜ್ಯ ಕಾಡುಗೊಲ್ಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ. ಮಹೇಶ್, ಶಾಸಕರಾದ ಜಿ.ಬಿ. ಜ್ಯೋತಿಗಣೇಶ್ ಮತ್ತು ಟಿ.ಬಿ. ಜಯಚಂದ್ರ, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಚಂದ್ರಶೇಖರಗೌಡ, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ವಿ. ಅಶ್ವಿಜಾ, ಪಾಲಿಕೆ ಆಯುಕ್ತೆ ಶುಭ, ಅಪರ ಜಿಲ್ಲಾಧಿಕಾರಿ ಡಾ. ಎನ್. ತಿಪ್ಪೇಸ್ವಾಮಿ ಸೇರಿದಂತೆ ವಿವಿಧ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

 

Leave a Reply

Your email address will not be published. Required fields are marked *