ಪಾವಗಡ ತಾಲ್ಲೂಕಿನ ಹುಸೇನ್ ಪುರ ಗ್ರಾಮದಲ್ಲಿ ಮದ್ಯಕ್ಕೆ ಜೋತುಬಿದ್ದ ಅದೆಷ್ಟೋ ಮಂದಿಯ ಕೆಟ್ಟ ವರ್ತನೆ ವಿರುದ್ಧ ದ್ವನಿ ಎತ್ತಿದ ನಾರಿಯರು….
ಕುಡುಕರ ವಿರುದ್ಧ ಬೀದಿಗಿಳಿದ ಮಹಿಳೆಯರು…!
ಪಾವಗಡ: ತಾಲ್ಲೂಕಿನ ಹುಸೇನ್ ಪುರದ ಸರ್ಕಾರಿ ಮದ್ಯ ಮಾರಾಟ ಕೇಂದ್ರದ ಮದ್ಯ ವ್ಯಸನಿಗಳ ಹಾವಳಿ ಹೆಚ್ಚಾಗಿದೆ ಎಂದು ಆರೋಪಿಸಿ ಹುಸೇನ್ ಪುರದ ಮಹಿಳೆಯರು ಬೀದಿಗಿಳಿದು ಪ್ರತಿಭಟಿಸಿದ ಘಟನೆ ಪಟ್ಟಣದಲ್ಲಿಂದು ನಡೆಯಿತು.
ಹೌದು ತಾಲ್ಲೂಕಿನ ಹುಸೇನ್ ಪುರ ಗ್ರಾಮದಲ್ಲಿ ಮದ್ಯಕ್ಕೆ ಜೋತುಬಿದ್ದ ಅದೆಷ್ಟೋ ಮಂದಿ ಕೆಟ್ಟ ವರ್ತನೆ ವರ್ತಿಸುತ್ತಿರುವ ಪರಿಣಾಮ ಸ್ವತಂತ್ರ ವಾಗಿ ಮಹಿಳೆಯರು ಹಾಗೂ ಹೆಣ್ಣು ಮಕ್ಕಳು ಓಡಾಡಲು ಹೆದರೋ ಹೀನಾಯ ಪರಿಸ್ಥಿತಿ ನಿರ್ಮಾಣವಾಗಿದೆ ಎಂಬ ಕೂಗು ದಪ್ಪ ಚರ್ಮದ ಅಧಿಕಾರಿಗಳಿಗೆ ಕೇಳುತ್ತಿಲ್ಲವಾಗಿದೆ.ಇನ್ನು ಜಮೀನುಗಳಲ್ಲಿ ಎಲ್ಲಂದರಲ್ಲೆ ಗುಂಪು ಗುಂಪಾಗಿ ಮದ್ಯದ ಅಮಲಿನಲ್ಲಿ ಅರೆ ಬೆತ್ತಲೆಯಾಗಿ ಮಲಗಿರ್ತಾರೆ .
ಇದರಿಂದ ಒಂಟಿ ಮಹಿಳೆಯರು ವಯಸ್ಸಿಗೆ ಬಂದ ಹೆಣ್ಣು ಮಕ್ಕಳು ರಸ್ತೆಯಲ್ಲಿ ನಡೆದಾಡೋದು ಆತಂಕಮಯವಾಗಿದೆ. ಇನ್ನು ಕೆಲ ಪುಂಡ ಪೋಕರಿಗಳು ರಸ್ತೆ ಬದಿಗಳಲ್ಲಿ ಮತ್ತು ಜಮೀನುಗಳಲ್ಲಿ ನಡೆದು ಬರುವ ಮಹಿಳೆಯರೊಂದಿಗೆ ಅಸಭ್ಯ ಹಾಗೂ ಅನುಚಿತವಾಗಿ ವರ್ತಿಸುತ್ತಿದ್ದಾರೆ ಎಂದು ನೊಂದ ಮಹಿಳೆಯರು ಅಲವತ್ತುಕೊಂಡಿದ್ದಾರೆ.
ಇದರ ಪರಿಣಾಮ ಮಕ್ಕಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಎಂದು ಗ್ರಾಮದ ಮಹಿಳೆಯರು ಮದ್ಯ ಮಾರಾಟ ಕೇಂದ್ರವನ್ನು ತೆರೆವುಗೊಳಿಸುವಂತೆ ಎಷ್ಟೇ ದುಂಬಾಲು ಬಿದ್ದರು ಕ್ಯಾರೆ ಎನ್ನದ ಸಂಬಂಧಿಸಿದವರು ನಿಲ್ಲಿಸಲು ಆಗಲ್ಲ ನಿಮಗೇನು ಆಗುತ್ತೊ ಮಾಡ್ಕೊಳಿ ಎಂದು ಧಮ್ಕಿ ಹಾಕ್ತಾರೆ ಅಂತ ಗ್ರಾಮದ ಮಹಿಳೆಯರು ಆರೋಪಿಸಿದ್ದಾರೆ..
ಈ ಕೂಡಲೇ ಸರ್ಕಾರಿ ಮದ್ಯ ಮಾರಾಟ ಮಳಿಗೆ ತೆರವುಗೊಳಿಸುವಂತೆ ಸೂಚಿಸಿ ಹುಸೇನ್ ಪುರ ಗ್ರಾಮದ ಮಹಿಳೆಯರು ತಾಲ್ಲೂಕು ದಂಡಾಧಿಕಾರಿ ವರದರಾಜು ರವರಿಗೆ ಮನವಿ ಸಲ್ಲಿಸಿದರು.
ಅಷ್ಟೇ ಅಲ್ಲದೆ ತಾಲ್ಲೂಕಿನ ಪ್ರತಿ ಹಳ್ಳಿ ಹಳ್ಳಿಗಳಲ್ಲಿಯ ಮನೆಗಳಲ್ಲಿ, ಚಿಲ್ಲರೆ ಅಂಗಡಿಗಳಲ್ಲಿಯೂ ಮದ್ಯ ಮಾರಾಟ ಎಗ್ಗಿಲ್ಲದೆ ನಡೆಯುತ್ತಿದೆ ಇದನ್ನು ಮಟ್ಟ ಹಾಕುವಲ್ಲಿ ಅಧಿಕಾರಿಗಳು ಮೀನಾಮೇಷ ಎಣಿಸಿದ್ದಾರೆ.ಇನ್ನಾದರೂ ಗಮನಹರಿಸಿ ಇಂತಹ ಮಹಿಳೆಯರ ಗೋಳಾಟಕ್ಕೆ ಅಂತಿಮ ಹಾಡ್ತಾರಾ ಕಾದು ನೋಡ್ಬೇಕಿದೆ.
ವರದಿ: ನವೀನ್ ಕಿಲಾರ್ಲಹಳ್ಳಿ