ಸತ್ಯಸಾಯಿ ಅನ್ನಪೂರ್ಣ ಟ್ರಸ್ಟ್, ಮುದ್ದೇನಹಳ್ಳಿ, ಚಿಕ್ಕಬಳ್ಳಾಪುರ ಜಿಲ್ಲೆ
ಮತ್ತು
ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿಗಳ ಕಚೇರಿ, ತುಮಕೂರು
ಇವರ ಸಂಯುಕ್ತಾಶ್ರಯದಲ್ಲಿ
ಹಾಲಿ ಚಿಕಿತ್ಸೆಗೆ ಒಳಗಾಗಿರುವ ಎಲ್ಲಾ ಕ್ಷಯರೋಗಿಗಳಿಗೆ ಉಚಿತ ಪೌಷ್ಟಿಕಾಂಶಭರಿತ ಶಕ್ತಿವರ್ಧಕ ಆಹಾರ ಮಿಶ್ರಣಗಳ ಪೊಟ್ಟಣಗಳ ವಿತರಣೆ.
ಇಂದು ಸ್ವಾಮಿ ವಿವೇಕಾನಂದ ಸಂಘಟಿತ ಗ್ರಾಮಾಂತರ ಆರೋಗ್ಯ ಕೇಂದ್ರದ ಆವರಣದಲ್ಲಿ ಪಾವಗಡ ತಾಲ್ಲೂಕಿನಲ್ಲಿ ಕ್ಷಯರೋಗಕ್ಕೆ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ಶಕ್ತಿವರ್ಧಕ ಪೌಷ್ಟಿಕಾಂಶಭರಿತ ಆಹಾರ ಮಿಶ್ರಣಗಳ (ಸಾಯಿಶ್ಯೂರ್) ವಿತರಣಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲು ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿಗಳಾದ ಡಾ.ಜಿ.ಕೆ.ಸನತ್ ಕುಮಾರ್ ರವರು ಆಗಮಿಸಿದ್ದರು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಪೂಜ್ಯ ಸ್ವಾಮಿ ಜಪಾನಂದಜೀ ರವರು ಶ್ರೀ ಸತ್ಯಸಾಯಿ ಅನ್ನಪೂರ್ಣ ಟ್ರಸ್ಟ್ ರವರ ಸಹಕಾರದಿಂದ ಸರಿಸುಮಾರು 120 ಹಾಲಿ ಕ್ಷಯರೋಗದಿಂದ ಬಳಲುತ್ತಿರುವ ರೋಗಿಗಳಿಗೆ ಪೌಷ್ಟಿಕಾಂಶ ಕೂಡಿದ ಆಹಾರ ಮಿಶ್ರಣಗಳನ್ನು ವಿತರಿಸಲಾಗುತ್ತಿದ್ದು ಇದು ಅತ್ಯಂತ ಪರಿಣಾಮಕಾರಿಯಾಗಿ ಹಾಗೂ ತುಂಬಾ ರುಚಿಕರವಾಗಿ ಇದ್ದು ಖಂಡಿತವಾಗಿ ರೋಗಿಗಳಿಗೆ ಹೆಚ್ಚಿನ ಶಕ್ತಿಯನ್ನು ನೀಡುವಂತಹ ಆಹಾರವಾಗಿದೆ. ಈ ಕಾರ್ಯಕ್ರಮ ಇಡೀ ತುಮಕೂರು ಜಿಲ್ಲೆಯಲ್ಲಿ ಪ್ರಪ್ರಥಮವಾಗಿ ಪಾವಗಡ ತಾಲ್ಲೂಕಿನಿಂದ ಆರಂಭವಾಗುತ್ತಿರುವುದು ಅತ್ಯಂತ ಹೆಮ್ಮೆಯ ವಿಷಯವಾಗಿದೆ. ಈ ನಿಟ್ಟಿನಲ್ಲಿ ತಾಲ್ಲೂಕಿನ ಎಲ್ಲ ಕ್ಷಯರೋಗಿಗಳ ಪರವಾಗಿ ಅನ್ನಪೂರ್ಣ ಟ್ರಸ್ಟ್ ರವರಿಗೆ ಧನ್ಯವಾದವನ್ನು ಅರ್ಪಿಸುತ್ತಿದ್ದೇವೆ ಎಂದರು. ಇದೇ ಸಂದರ್ಭದಲ್ಲಿ ಉದ್ಘಾಟನಾ ಭಾಷಣವನ್ನು ಮಾಡಿದ ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿಗಳಾದ ಡಾ.ಸನತ್ ಕುಮಾರ್ ಮಾತನಾಡಿ ಕಳೆದ ಏಪ್ರಿಲ್ ತಿಂಗಳಿನಿಂದ ಮುಖಗವಸು ಧರಿಸುವುದನ್ನು ಕಡ್ಡಾಯ ಮಾಡಿದ್ದರ ಪರಿಣಾಮವಾಗಿ ನಮ್ಮ ದೇಶದಲ್ಲಿ ಸಾಂಕ್ರಾಮಿಕ ರೋಗಗಳು ಗಣನೀಯವಾಗಿ ಕಡಿಮೆಯಾಗಿರುವುದನ್ನು ಗಮನಿಸಬಹುದಾಗಿದೆ ಎಂದು ತಿಳಿಸಿದರು. ಹಾಗೆಯೇ ಸ್ವಾಮಿ ವಿವೇಕಾನಂದ ಗ್ರಾಮಾಂತರ ಆರೋಗ್ಯ ಕೇಂದ್ರ ಈ ಒಂದು ನವೀನ ಯೋಜನೆಯನ್ನು ಕೈಗೆತ್ತಿಕೊಂಡು ನೂರಾರು ಕ್ಷಯರೋಗಿಗಳಿಗೆ ಈಗಾಗಲೇ ಪ್ರತಿ ವಾರಕ್ಕೊಮ್ಮೆ ಐದು ಕೆ.ಜಿ. ಆಹಾರ ಧಾನ್ಯವನ್ನು ನೀಡುತ್ತಿರುವುದಲ್ಲದೆ ಇದರ ಜೊತೆಯಲ್ಲಿಯೇ ಇನ್ನೂ ಹೆಚ್ಚಿನ ರೀತಿಯಲ್ಲಿ ಸಹಾಯ ಹಸ್ತವನ್ನು ನೀಡುತ್ತಾ ಪೌಷ್ಟಿಕಾಂಶ ಕೂಡಿದ ಪೊಟ್ಟಣಗಳನ್ನು ನೀಡುತ್ತಿರುವುದು ನಿಜಕ್ಕೂ ಸಂತೋಷಕರವಾದ ವಿಚಾರ ಎಂದು ಆಸ್ಪತ್ರೆಯ ಎಲ್ಲ ಸಿಬ್ಬಂದಿಗಳಿಗೆ ಹಾಗೂ ವೈದ್ಯಾಧಿಕಾರಿಗಳ ಕಾರ್ಯವನ್ನು ಶ್ಲಾಘಿಸಿದರು.
ಕಾರ್ಯಕ್ರಮವು ಅಚ್ಚುಕಟ್ಟಾಗಿ ನೆರವೇರಿದ್ದು ದೂರ ದೂರದಿಂದ ಬಂದಂತಹ ಎಲ್ಲ ಕ್ಷಯರೋಗಿಗಳಿಗೆ ಔಷಧೋಪಚಾರದ ಜೊತೆ ಆಹಾರ ಸಾಮಗ್ರಿಗಳನ್ನು ಹಾಗೂ ಭೋಜನವನ್ನು ಏರ್ಪಡಿಸಿದ್ದು ಕಾರ್ಯಕ್ರಮಕ್ಕೆ ಮೆರಗನ್ನು ತಂದೊಡ್ಡಿತು. ಕಾರ್ಯಕ್ರಮವು ಶ್ರೀ ತಿಪ್ಪೇಸ್ವಾಮಿ ರವರ ವಂದನಾರ್ಪಣೆಯೊಂದಿಗೆ ಮುಕ್ತಾಯವಾಯಿತು. ಕಾರ್ಯಕ್ರಮದ ಆರಂಭದಲ್ಲಿ ಸಂಸ್ಥೆಯ ಮುಖ್ಯ ವೈದ್ಯಾಧಿಕಾರಿಗಳವರಾದ ಡಾ.ಚಂದ್ರಕಲಾ ರವರು ಅತ್ಯಂತ ಪರಿಣಾಮಕಾರಿಯಾಗಿ ಕಾರ್ಯಕ್ರಮವನ್ನು ನಿರೂಪಿಸಿದರು.