ಮಹಾ ಮಳೆಯಿಂದ ಬೆಳೆ ಹಾನಿ :
ತುರ್ತಾಗಿ ವಿಶೇಷ ಪ್ಯಾಕೇಜ್ ಘೋಷಿಸಲು ಸಿದ್ದರಾಮಯ್ಯ ಆಗ್ರಹ
ಬೆಂಗಳೂರು : ಕಳೆದ ವರ್ಷದ ಮಹಾಮಳೆಯ ಕಹಿ ನೆನಪುಗಳು ಮರೆಯುವ ಮೊದಲೇ ಈ ವರ್ಷ ಮತ್ತೆ ಆಗಸ್ಟ್ ತಿಂಗಳಿನಿಂದ ರಾಜ್ಯದ ಉದ್ದಗಲಕ್ಕೂ ಅತಿವೃಷ್ಟಿಯಾಗುತ್ತಿದೆ. ರಾಜ್ಯದ ಕಲ್ಯಾಣ ಕರ್ನಾಟಕದಲ್ಲಂತೂ ಕಳೆದ 50 ವರ್ಷಗಳಲ್ಲಿ ಬೀಳದಷ್ಟು ಮಳೆ ಈ ಬಾರಿ ಸುರಿದಿದೆ. ಹಾಗಾಗಿ ಕೂಡಲೇ ಖರೀದಿ ಕೇಂದ್ರಗಳನ್ನು ತೆರೆದು ಕನಿಷ್ಠ ಬೆಂಬಲ ಬೆಲೆ ನಿಗಧಿ ಮಾಡಿರುವ ಮೊತ್ತಕ್ಕಾದರೂ ರೈತರು ಬೆಳೆದ ಉತ್ಪನ್ನಗಳನ್ನು ಖರೀದಿ ಮಾಡಬೇಕು. ಜೊತೆಗೆ ಅತಿವೃಷ್ಟಿಯಿಂದಾಗಿ ಹಾನಿಯಾಗಿರುವ ಬೆಳೆಗಳನ್ನು ಸಮರ್ಪಕವಾಗಿ ಸಮೀಕ್ಷೆ ಮಾಡಿ ಅತ್ಯಂತ ತುರ್ತಾಗಿ ವಿಶೇಷ ಪ್ಯಾಕೇಜನ್ನು ಘೋಷಿಸಿ ಪರಿಹಾರ ನೀಡಿ ರೈತರ ನೆರವಿಗೆ ನಿಲ್ಲಬೇಕೆಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಈ ಕುರಿತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಸಿದ್ದರಾಮಯ್ಯ ಅವರು ಪತ್ರ ಬರೆದಿದ್ದಾರೆ. ಪತ್ರದ ಪೂರ್ಣ ಪಾಠ ಹೀಗಿದೆ :
ಅಕ್ಟೋಬರ್-ನವೆಂಬರ್ ತಿಂಗಳುಗಳಲ್ಲಿ ಅಗತ್ಯಕ್ಕಿಂತ ಹೆಚ್ಚು ಮಳೆಯಾದರೆ ರೈತರ ಪಾಲಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗುತ್ತದೆ. ಈ ವರ್ಷದ ಮುಂಗಾರಿನಲ್ಲಿ ಬಿತ್ತನೆ ಮಾಡಿದ್ದ ಹೆಸರು, ಉದ್ದು ಮುಂತಾದ ಬೆಳೆಗಳನ್ನು ಕುಯಿಲು ಮಾಡುವ ಸಂದರ್ಭದಲ್ಲಿ ವಿಪರೀತ ಮಳೆ ಸುರಿದು ಗಿಡದಲ್ಲೇ ಮೊಳಕೆ ಬಂದು ಕೊಳೆತು ಹೋದವು. ಈಗ ಈರುಳ್ಳಿ, ಶೇಂಗಾ, ಹತ್ತಿ, ಮೆಣಸಿನ ಕಾಯಿ, ರಾಗಿ, ಮುಸುಕಿನ ಜೋಳ, ಬಿಳಿ ಜೋಳ ಮುಂತಾದ ಬೆಳೆಗಳು ಸಹ ಹೊಲದಲ್ಲೇ ಕೊಳೆತು ಹೋಗುತ್ತಿವೆ.
ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಪ್ರಧಾನವಾಗಿ ಬೆಳೆಯುವ ತೊಗರಿ ಹೂವು ಕಟ್ಟುವ ಸಮಯವಿದು. ಆಗಸ್ಟ್ ತಿಂಗಳಲ್ಲಿ ಬಿದ್ದ ಮಳೆಯಿಂದಾಗಿ ಗುಲ್ಬರ್ಗ ಜಿಲ್ಲೆ ಒಂದರಲ್ಲೇ ಸುಮಾರು 2 ಲಕ್ಷ ಹೆಕ್ಟೇರ್ ತೊಗರಿ ಹಾಳಾಗಿದೆ ಎಂದು ಸರ್ಕಾರವೇ ಅಂದಾಜು ಮಾಡಿದೆ. ವಾಡಿಕೆಗಿಂತ ಸುಮಾರು 250 ಮಿಲಿ ಮೀಟರ್‍ಗೂ ಹೆಚ್ಚು ಮಳೆ ಈ ವರ್ಷ ಗುಲ್ಬರ್ಗ ಒಂದರಲ್ಲೇ ಸುರಿದಿದೆ. ಇದೇ ಪರಿಸ್ಥಿತಿ ರಾಜ್ಯದ ಉಳಿದ ಜಿಲ್ಲೆಗಳಿಗೂ ಬಂದೊದಗಿದೆ. ದಕ್ಷಿಣ ಕರ್ನಾಟಕದ ಕಥೆಯೂ ಇದಕ್ಕಿಂತ ಭಿನ್ನವಾಗಿಲ್ಲ. ಅವರೆ, ರಾಗಿ, ಅಲಸಂದೆ, ಜೋಳ, ಶೇಂಗಾ ಮುಂತಾದ ಬೆಳೆಗಳು ನೆಲಕಚ್ಚಿ ಕೊಳೆತು ಹೋಗ ತೊಡಗಿವೆ.
ಕರಾವಳಿ ಮತ್ತು ಮಲೆನಾಡಿನ ಎಲ್ಲಾ ಜಿಲ್ಲೆಗಳಲ್ಲೂ ಇದೇ ಪರಿಸ್ಥಿತಿ ಇದೆ. ಅಡಿಕೆ ಬೆಳೆಗೆ ಹಳದಿ ಎಲೆ ರೋಗದ ಸಮಸ್ಯೆ ಕಾಡುತ್ತಿದೆ. ಕೊಳೆ ರೋಗದಿಂದಾಗಿ ಅಡಿಕೆ, ಮೆಣಸು, ಕಾಫಿ ಮುಂತಾದ ಬೆಳೆಗಳು ಮರ ಗಿಡಗಳಲ್ಲಿರುವುದಕ್ಕಿಂತ ನೆಲಕ್ಕೆ ಉದುರಿ ಕೊಳೆತು ಹೋಗಿರುವ ಪ್ರಮಾಣವೆ ಹೆಚ್ಚಾಗಿದೆ. ಬೆಳೆ ಕೈಗೆ ಬರುತ್ತಿರುವ ಹೊತ್ತಿನಲ್ಲಿ ಸುರಿಯುತ್ತಿರುವ ಮಳೆ ರೈತರನ್ನು ಕಂಗಾಲು ಮಾಡಿದೆ.
ಹೈದರಾಬಾದ್ ಮತ್ತು ಮುಂಬೈ ಕರ್ನಾಟಕದ ಭಾಗಗಳಲ್ಲಿ ಬೆಳೆ ಜತೆಗೆ ಸ್ತಿರಾಸ್ತಿಗಳು ಕೂಡ ನಾಶವಾಗಿವೆ. ಮನೆಗಳು ಉದುರಿ ಬಿದ್ದಿರುವ ಜನ-ಜಾನುವಾರುಗಳು ಮರಣ ಹೊಂದಿರುವ, ದವಸ-ಧಾನ್ಯ, ಹಸುಗಳು ನೀರಿನಲ್ಲಿ ಕೊಚ್ಚಿ ಹೋಗುತ್ತಿರುವ ದೃಶ್ಯಗಳು ದುರಂತದ ಪ್ರಮಾಣವನ್ನು ವಿವರಿಸುತ್ತಿವೆ. ತಗ್ಗಿನ ಪ್ರದೇಶಗಳಲ್ಲಿ ಬೆಳೆ ಜತೆಗೆ ಸ್ತಿರಾಸ್ತಿಯನ್ನು ಕಳೆದುಕೊಂಡ ಬಡ ರೈತರು ಮತ್ತೆ ತಮ್ಮ ಕುಟುಂಬವನ್ನು ಕಟ್ಟಿ ನಿಲ್ಲಿಸಿಕೊಳ್ಳಲು ಐದಾರು ವರ್ಷಗಳೇ ಬೇಕಾಗಬಹುದು. ಪದೇ ಪದೇ ದುರಂತಗಳಿಗೆ ಬಲಿಯಾಗುತ್ತಿರುವ ರೈತರ ನೆರವಿಗೆ ಬರದ ಸರ್ಕಾರ ಅತ್ಯಂತ ಕ್ರೂರಿ ಸರ್ಕಾರವೆನ್ನಿಸಿಕೊಳ್ಳುತ್ತದೆ.
ಕಳೆದ ವರ್ಷವೂ ಇದೇ ಪರಿಸ್ಥಿತಿ ನಿರ್ಮಾಣವಾಗಿತ್ತು. ಆಗಸ್ಟ್ ತಿಂಗಳಿನಲ್ಲಿ ಬಿದ್ದ ಮಹಾಮಳೆಯಿಂದ ಉಂಟಾದ ನಷ್ಟ ಸುಮಾರು ರೂ.1.00 ಲಕ್ಷ ಕೋಟಿಯಾಗಿದ್ದರೂ, ಕೇಂದ್ರ ರಾಜ್ಯ ಸರ್ಕಾರಗಳೆರಡೂ ಜನರಿಗೆ ಬಿಡಿಗಾಸನ್ನು ನೀಡಿ ಕೈತೊಳೆದುಕೊಂಡವು. ಕಳೆದ ವರ್ಷದ ಅತಿವೃಷ್ಟಿಯಿಂದಾಗಿ ಬಿದ್ದ ಅಸಂಖ್ಯಾತ ಮನೆಗಳಿಗೆ ಇನ್ನು ಸಹ ಪೂರ್ಣ ಪ್ರಮಾಣದ ಪರಿಹಾರ ನೀಡಿಲ್ಲ. ಬೆಳಗಾವಿ ಜಿಲ್ಲೆಯೊಂದರಲ್ಲೇ ಸುಮಾರು 9,000 ಮನೆಗಳಿಗೆ ಪರಿಹಾರ ನೀಡುವುದು ಬಾಕಿ ಇದೆ ಎಂದು ಸ್ವತ: ಜಿಲ್ಲಾ ಉಸ್ತುವಾರಿ ಸಚಿವರೇ ಹೇಳಿದ್ದಾರೆ. ಪರಿಹಾರ ಪಡೆದವರು ಕೂಡ ಪೂರ್ಣ ಪ್ರಮಾಣದಲ್ಲಿ ಪಡೆದಿಲ್ಲ. ಮನೆ ನಿರ್ಮಾಣಕ್ಕೆ ರೂ.5.00 ಲಕ್ಷ ಕೊಡುತ್ತೇವೆ ಎಂದು ಹೇಳಿ ಕೇವಲ ರೂ.1.00 ಲಕ್ಷಗಳನ್ನು ಮಾತ್ರ ನೀಡಲಾಗಿದೆ. ಕಳೆದ ವರ್ಷದ ಸೆಪ್ಟೆಂಬರ್-ಅಕ್ಟೋಬರ್ ತಿಂಗಳುಗಳಲ್ಲೂ ಕೂಡ ಶೇ.82 ಕ್ಕಿಂತ ಹೆಚ್ಚಿನ ಪ್ರಮಾಣದ ಮಳೆಯಾಗಿತ್ತು. ಕೊಚ್ಚಿ ಹೋದ ಹೊಲಕ್ಕೆ ಮತ್ತು ಹಾನಿಯಾದ ಬೆಳೆಗಳಿಗೆ ಸಮರ್ಪಕ ಪರಿಹಾರ ಸಿಗಲಿಲ್ಲ. ಅದರ ಕುರಿತು ಸಮರ್ಪಕವಾದ ಸಮೀಕ್ಷೆಯನ್ನೂ ಮಾಡಲಿಲ್ಲ. ಪರಿಹಾರವನ್ನೂ ನೀಡಲಿಲ್ಲ.
ರೈತ ವಿರೋಧಿ ಕಾಯ್ದೆಗಳನ್ನು ಸುಗ್ರೀವಾಜ್ಞೆ ಮೂಲಕ ಜಾರಿ ಮಾಡಲು ತುದಿಗಾಗಲ್ಲಿ ನಿಂತಿರುವ ಸರ್ಕಾರಗಳು ಬೆಂಬಲ ಬೆಲೆಗಿಂತ ಕಡಿಮೆ ಬೆಲೆಗೆ ರೈತರ ಬೆಳೆಗಳನ್ನು ಖರೀದಿ ಮಾಡದಂತೆ ಸುಗ್ರೀವಾಜ್ಞೆ ಹೊರಡಿಸಿ, ಇದನ್ನು ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಏಕೆ ಹಿಂಜರಿಯುತ್ತಿವೆ? ಎಂದು ರೈತರು ಪ್ರಶ್ನಿಸುತ್ತಿದ್ದಾರೆ.
ಮುಖ್ಯಮಂತ್ರಿಗಳು ಈಗಾಗಲೇ ಈ ವರ್ಷ ಯಾವುದೇ ಬೆಳೆಗೆ ಬೆಂಬಲ ಬೆಲೆ ನೀಡುವುದಿಲ್ಲ, ಖರೀದಿ ಕೇಂದ್ರಗಳನ್ನು ತೆರೆಯುವುದಿಲ್ಲ, ಸಂಪನ್ಮೂಲಗಳ ಸಮಸ್ಯೆ ಇದೆ ಎಂದು ಹೇಳಿದ್ದಾರೆಂದು ಪತ್ರಿಕೆಗಳಲ್ಲಿ ವರದಿಯಾಗಿದೆ. ಹಾಗೆ ಹೇಳಲು ಕೇಂದ್ರ ಸರ್ಕಾರದ ನಿರ್ದೇಶನವಿದೆಯೇ ಎಂದು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಬೇಕು.
ಒಂದು ಕಡೆ ಹೊಲದಲ್ಲಿ ಬೆಳೆ ಕೊಳೆಯುತ್ತಿದೆ. ಮತ್ತೊಂದು ಕಡೆ ಕುಯಿಲು ಮಾಡಿದ ಫಸಲು ಮಾರುಕಟ್ಟೆಯಲ್ಲಿ ಬಿಡಿಗಾಸಿಗೆ ಮಾರಾಟವಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಸರ್ಕಾರ ತನ್ನ ಜವಾಬ್ದಾರಿಯನ್ನು ಮರೆತು ವರ್ತಿಸುತ್ತಿರುವುದರಿಂದ ರೈತರು ಭೀಕರ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಎ.ಪಿ.ಎಂ.ಸಿ. ಮಾರುಕಟ್ಟೆಗಳಲ್ಲೇ ಇಷ್ಟು ಕಡಿಮೆ ಬೆಲೆಗೆ ಮಾರಾಟವಾಗುತ್ತಿದ್ದರೆ, ರೈತರ ಹೊಲಗಳಲ್ಲಿ, ಮನೆಗಳಲ್ಲಿ ಇನ್ನೂ ಕಡಿಮೆ ದರಕ್ಕೆ ಖರೀದಿ ನಡೆಯುತ್ತಿದೆ. ಮೇಲಿನ ಬೆಳೆಗಳ ದರಗಳನ್ನು ನೋಡಿದರೆ ಹಾಕಿದ ಖರ್ಚು ಸಹ ವಾಪಸ್ಸು ಬರುವಂತೆ ಕಾಣುತ್ತಿಲ್ಲ. ಇದಿನ್ನೂ ಸುಗ್ಗಿಯ ಆರಂಭ ಮಾತ್ರ. ಹೆಚ್ಚಿನ ಪ್ರಮಾಣದ ಉತ್ಪನ್ನ ಮಾರುಕಟ್ಟೆಗೆ ಬರತೊಡಗಿದರೆ ಬೆಲೆ ಇನ್ನೂ ಪಾತಾಳಕ್ಕೆ ತಲುಪುತ್ತದೆ. ಇಂಥ ಪರಿಸ್ಥಿಯಲ್ಲಿ ಸರ್ಕಾರ ಬೆಂಬಲ ಬೆಲೆ ನೀಡಿ ಖರೀದಿಸಲು ಖರೀದಿ ಕೇಂದ್ರಗಳನ್ನು ತೆರೆಯದಿದ್ದರೆ ರೈತರ ಬದುಕಿನ ದುರಂತಗಳ ಸರಮಾಲೆ ಪ್ರಾರಂಭವಾಗುತ್ತವೆ.
ಈಗಾಗಲೇ ರಾಜ್ಯ ಸರ್ಕಾರ ಈ ವರ್ಷ ಒಂದರಲ್ಲೇ ಸುಮಾರು ರೂ.90,000 ಕೋಟಿಗಿಂತ ಹೆಚ್ಚು ಸಾಲವನ್ನು ಪಡೆಯಲು ತೀರ್ಮಾನಿಸಿದೆ. ಸರ್ಕಾರಿ ಆಸ್ತಿ-ಪಾಸ್ತಿಗಳನ್ನೂ ಹರಾಜು ಹಾಕುತ್ತಿದೆ. ಹಾಗೆ ನೋಡಿದರೆ ಆಸ್ತಿಗಳನ್ನು ಹರಾಜು ಹಾಕಿ ಪರಿಸ್ಥಿತಿಯನ್ನು ಸುಧಾರಿಸುವ ಅಗತ್ಯವೇನು ಇರಲಿಲ್ಲ. ಜಿ.ಎಸ್.ಟಿ. ಸಂಗ್ರಹದಲ್ಲಿ ಮಹಾರಾಷ್ಟ, ತಮಿಳುನಾಡುಗಳ ನಂತರ ರಾಜ್ಯ 3ನೇ ಸ್ಥಾನದಲ್ಲಿದೆ. ಕಳೆದ ವರ್ಷ ಸೆಪ್ಟೆಂಬರ್‍ನಲ್ಲಿ ರಾಜ್ಯದಲ್ಲಿ ರೂ.6350 ಕೋಟಿಗಳು ಸಂಗ್ರಹವಾಗಿದ್ದರೆ ಈ ವರ್ಷ ರೂ.6050 ಕೋಟಿ ಸಂಗ್ರಹವಾಗಿದೆ. ಆಗಸ್ಟ್ ತಿಂಗಳ ಪರಿಸ್ಥಿತಿಯೂ ಹಾಗೆ ಇದೆ. ಇದಲ್ಲದೇ ಡೀಸೆಲ್, ಪೆಟ್ರೋಲ್ ಮತ್ತು ಮದ್ಯದ ಮೇಲೆ ವಿಪರೀತ ತೆರಿಗೆ ವಿಧಿಸಲಾಗುತ್ತಿದೆ. ನಾಡಿನ ರೈತರ ದುಡಿಯುವ ಸಮುದಾಯಗಳ ಕುಶಲ ಕರ್ಮಿಗಳ ಬದುಕನ್ನು ಸುಧಾರಿಸಲು ನೆರವಿಗೆ ಬರುವುದಿಲ್ಲವೆಂದ ಮೇಲೆ ಸರ್ಕಾರ ಸಾಲ ಮಾಡುವುದಾಗಲಿ, ತೆರಿಗೆ ಹೆಚ್ಚಿಸುವುದಾಗಲಿ ಅಮಾನವಿಯವಾಗುತ್ತದೆ. ಕೇಂದ್ರದ ಮೇಲೆ ಒತ್ತಡ ತಂದು ಪರಿಹಾರವನ್ನು ಪಡೆದುಕೊಳ್ಳಬೇಕಾಗಿರುವುದು ರಾಜ್ಯದ ಸಂವಿಧಾನ ಬದ್ಧವಾದ ಹಕ್ಕು.
ರಾಜ್ಯಕ್ಕೆ ಒಳ್ಳೆಯದಾಗಬಹುದು ಎಂಬ ಭರವಸೆಯಿಂದ 25 ಜನ ಬಿ.ಜೆ.ಪಿ. ಪಕ್ಷದ ಸಂಸದರನ್ನು ಆರಿಸಿ ಪಾರ್ಲಿಮೆಂಟಿಗೆ ಕಳುಹಿಸಿದರು. ಇವರಲ್ಲಿ ಅನೇಕರು ದ್ವೇಷಪೂರಿತ ಭಾಷಣಗಳನ್ನು ಮಾಡಿಕೊಂಡು ಜನರನ್ನು ಒಡೆಯುವ ಕೆಲಸವನ್ನು ಮಾಡುತ್ತಿದ್ದಾರೆಯೇ ಹೊರತು ರಾಜ್ಯದ ಸಂಕಷ್ಟಗಳಿಗೆ ಸ್ಪಂದಿಸುವ, ರಾಜ್ಯದ ಪರವಾಗಿ ಧ್ವನಿಯೆತ್ತುವ, ಕೆಲಸವನ್ನು ಮಾಡಲಿಲ್ಲ, ಮಾಡುತ್ತಲೂ ಇಲ್ಲ. ರಾಜ್ಯ ಸಭೆಗೆ ಆಯ್ಕೆಯಾಗಿ ಹೋದ ರಾಜ್ಯ ಸಭಾ ಸದಸ್ಯರುಗಳಾಗಲಿ ಮತ್ತು ರಾಜ್ಯವನ್ನು ಪ್ರತಿನಿಧಿಸುವ ಹಣಕಾಸು ಸಚಿವರಾಗಲಿ ಈ ಕುರಿತು ಉಸಿರೇ ಬಿಡದಿರುವುದು ರಾಜ್ಯದ ಜನರಿಗೆ ಮಾಡಿದ ಭೀಕರ ದ್ರೋಹ. ಇವರೆಲ್ಲರೂ ಸೇರಿ ರಾಜ್ಯವನ್ನು ಅಭಿವೃದ್ಧಿಯ ವಿಚಾರದಲ್ಲಿ ಕತ್ತಲ ಕೂಪಕ್ಕೆ ತಳ್ಳಲು ನಿರ್ಧರಿಸಿದಂತೆ ಕಾಣುತ್ತಿದೆ.
ಕೊರೋನಾ ಕಾರಣದಿಂದಾಗಿ ನಗರಗಳನ್ನು ಬಿಟ್ಟು ಹಳ್ಳಿಗಳಿಗೆ ವಲಸೆ ಹೋದ ಜನ ವ್ಯಾಪಕ ಪ್ರಮಾಣದಲ್ಲಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ. ಅಂದಾಜಿನ ಪ್ರಕಾರ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಶೇ.20 ಕ್ಕಿಂತ ಹೆಚ್ಚಿನ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಆರಂಭದಿಂದಲೂ ಸಮರ್ಪಕವಾಗಿ ಮಳೆ ಬಂದ ಕಾರಣದಿಂದ ಫಸಲು ಸಹ ಚೆನ್ನಾಗಿ ಬಂದಿದೆ. ಆದರೆ ಬೆಲೆಗಳು ಕುಸಿಯುತ್ತಿವೆ ಜೊತೆಗೆ ಅತಿವೃಷ್ಟಿ ಹಾನಿ ಮಾಡುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವರುಗಳಂತೂ ತಮಗೆ ನಿಗಧಿಯಾಗಿರುವ ಜಿಲ್ಲೆಗಳ ಕಡೆಗೆ ತಲೆ ಹಾಕುತ್ತಿಲ್ಲ. ಹೀಗಾಗಿ ರೈತರ ಗೋಳು ಕೇಳುವವರೇ ಇಲ್ಲದಂತಾಗಿದೆ ಎಂದು ಸಿದ್ದರಾಮಯ್ಯ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.