ಹಾಯ್ ಬೆಂಗಳೂರು ವಾರಪತ್ರಿಕೆ ಸಂಸ್ಥಾಪಕರು ,ಹಿರಿಯ ಪತ್ರಕರ್ತ ರವಿ ಬೆಳೆಗೆರೆ (62) ನ.12 ರ ಮಧ್ಯರಾತ್ರಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
1958 ರ ಮಾರ್ಚ್ 15 ರಂದು ಬಳ್ಳಾರಿಯಲ್ಲಿ ಜನಿಸಿದ್ದ ರವಿ ಬೆಳೆಗೆರೆ ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರದ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದು ಪ್ರಾಧ್ಯಾಪಕರಾಗಿ ವೃತ್ತಿ ಆರಂಭಿಸಿದ್ದರು. ನಂತರ ಪತ್ರಿಕೋದ್ಯಮ ವೃತ್ತಿ ಪ್ರಾರಂಭಿಸಿದ್ದರು
ಹಾಯ್ ಬೆಂಗಳೂರ್ ವಾರಪತ್ರಿಕೆ ಹಾಗೂ ‘ಓ ಮನಸೇ’ ಪಾಕ್ಷಿಕ ಪತ್ರಿಕೆಯ ಸಂಪಾದಕರಾಗಿದ್ದರು. ಜೊತೆಗೆ ಅವರು ಕನ್ನಡ ಸಾಹಿತಿ, ಚಿತ್ರಕಥೆ ಬರಹಗಾರ, ಈ-ಟಿವಿ ಕನ್ನಡ ವಾಹಿನಿಯ ಜನಪ್ರಿಯ ಕ್ರೈಂ ಡೈರಿ ಕಾರ್ಯಕ್ರಮದ ನಿರೂಪಕರಾಗಿ ಹಾಗೂ ಜನಶ್ರೀ ವಾಹಿನಿಯ ಮುಖ್ಯಸ್ಥರಾಗಿ, ಕಾರ್ಯಕ್ರಮಗಳ ನಿರೂಪಕರಾಗಿ ಕಾರ್ಯ ನಿರ್ವಹಿಸಿದ್ದರು.
ಕನ್ನಡದಲ್ಲಿ ಹಲವಾರು ಪುಸ್ತಕಗಳನ್ನು ಬರೆದಿರುವ ಮತ್ತು ಭಾಷಾಂತರಿಸಿರುವ ರವಿ ಬೆಳಗೆರೆ, ಭಾವನಾ ಪ್ರಕಾಶನ, ಭಾವನಾ ಆಡಿಯೋ ರೀಚ್ ಮತ್ತು ಪ್ರಾರ್ಥನಾ ಶಾಲೆ ಯ ಸಂಸ್ಥಾಪಕರು, ಹಾಯ್ ಬೆಂಗಳೂರ್’ ಪತ್ರಿಕೆ ಪ್ರಾರಂಭಿಸುವ ಮುನ್ನ ಕರ್ಮವೀರ, ಸಂಯುಕ್ತ ಕರ್ನಾಟಕ ಮತ್ತು ಕಸ್ತೂರಿ ಪತ್ರಿಕೆಗಳಲ್ಲಿ ಕೆಲಸ ಮಾಡಿದ್ದರು.
ರವಿ ಬೆಳೆಗೆರೆ ಅವರ ಬಾಟಮ್ ಐಟಮ್, ಖಾಸ್ ಬಾತ್ ಅಂಕಗಳು ಅತ್ಯಂತ ಜನಪ್ರಿಯ. ಹಿಮಾಗ್ನಿ, ನೀನಾ ಪಾಕಿಸ್ತಾನ? ಡಿ ಕಂಪನಿ, ದಂಗೆಯ ದಿನಗಳು ಸೇರಿದಂತೆ ಅನೇಕ ಜನಪ್ರಿಯ ಕೃತಿಗಳನ್ನು ರಚಿಸಿದ್ದರು.
ಪತ್ರಿಕೋದ್ಯಮದಲ್ಲಿ ಸಾಧನೆ ಮಾಡಿದ್ದ ರವಿ ಬೆಳೆಗೆರೆ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಜೀವಮಾನದ ಸಾಧನೆ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವು ಪುರಸ್ಕಾರಗಳು ಸಂದಿವೆ. ರವಿ ಬೆಳೆಗೆರೆ ಅವರು ಸ್ಥಾಪಿಸಿರುವ ಪ್ರಾರ್ಥನಾ ಶಾಲೆಯ ಮೈದಾನದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.