*ಒಂದೇ ನೊಂದಣಿ ಸಂಖ್ಯೆಯಲ್ಲಿ ಸಂಚರಿಸುತ್ತಿದ್ದ ಬಸ್‌ಗಳ ವಶ: 41 ಲಕ್ಷ ರೂಪಾಯಿಗಳ ದಂಡ*
*ಯಶವಂತಪುರ ಹಾಗೂ ನೆಲಮಂಗಲ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಾರ್ಯಾಚರಣೆ*
*ಬೆಂಗಳೂರು ನವಂಬರ್ 23*: ಒಂದೇ ನೊಂದಣಿ ಸಂಖ್ಯೆಯನ್ನು ಬಳಸಿಕೊಂಡು ಅಂತರಾಜ್ಯ ಮಟ್ಟದಲ್ಲಿ ಸಂಚರಿಸುತ್ತಿದ್ದ ಬಸ್‌ಗಳನ್ನು ಹಾಗೂ ತೆರಿಗೆ ಪಾವತಿಸದೇ ನಗರದ ಹೊರವಲಯದಿಂದ ಸಂಚರಿಸುತ್ತಿದ್ದ ಇನ್ನೊಂದು ಬಸ್ಸನ್ನು ವಶಪಡಿಸಿಕೊಂಡು 41 ಲಕ್ಷ ರೂಪಾಯಿಗಳ ದಂಡವನ್ನು ವಿಧಿಸಲಾಗಿದೆ ಎಂದು *ಸಾರಿಗೆ ಆಯುಕ್ತರಾದ ಶಿವಕುಮಾರ್* ತಿಳಿಸಿದ್ದಾರೆ.
ಇಂದು ನೆಲಮಂಗಲ ಪ್ರಾದೇಶಿಕ ಸಾರಿಗೆ ಕಚೇರಿಯ ಅವರಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಕಾರ್ಯಾಚರಣೆಯನ್ನು ನಡೆಸಿದ *ಅಪರ ಸಾರಿಗೆ ಆಯುಕ್ತ ನರೇಂದ್ರ ಹೋಳ್ಕರ್, ಮೋಟಾರು ವಾಹನ ನಿರೀಕ್ಷಕರಾದ ಎಂ.ಎನ್ ಸುಧಾಕರ್, ಹಿರಿಯ ಮೋಟಾರ್ ವಾಹನ ನಿರೀಕ್ಷಕರಾದ ಹೆಚ್ ರಾಜಣ್ಣ, ಜೀ.ವಿ ಕೃಷ್ಣಾನಂದ ಹಾಗೂ ಎಂ.ಶಿವಪ್ರಸಾದ್ ಅವರ ತಂಡಕ್ಕೆ ಅಭಿನಂದನೆ* ಸಲ್ಲಿಸಿದರು.
ನವಂಬರ್ 18 ರಂದು ಆರ್ ಜೆ 19 ಪಿಸಿ 3131 ಸ್ಲೀಪರ್ ಬಸ್ಸನ್ನು ದಾಬಸ್ ಪೇಟೆ – ನೆಲಮಂಗಲ ಮಧ್ಯೆ ದೇವನಾರಾಯಣ ಡಾಬಾಬಳಿ ನಿಲ್ಲಿಸಲಾಗಿತ್ತು. ಸದರಿ ವಾಹನಕ್ಕೆ ಈಗಾಗಲೇ ದಿನಾಂಕ 31.10.2020 ಕ್ಕೆ ಅಂತ್ಯವಾಗುವಂತೆ ರಹದಾರಿ ಮತ್ತು ತೆರಿಗೆ ಪಾವತಿಸಲಾಗಿತ್ತು. ಆದರೆ 31.10.2020 ಕ್ಕೆ ಅಂತ್ಯವಾದ ತ್ರೈಮಾಸಿಕದ ತೆರಿಗೆಯಲ್ಲಿ ಕಡಿಮೆ ಮಾಡಲಾಗಿದ್ದು ಗಮನಕ್ಕೆ ಬಂದಿದ್ದು, ಈ ಬಗ್ಗೆ ಪ್ರಕರಣ ದಾಖಲಿಸಲಾಗಿದ್ದು ವ್ಯತ್ಯಾಸ ತೆರಿಗೆಯನ್ನು ಭರಿಸಬೇಕಾಗಿರುತ್ತದೆ. ಅಲ್ಲದೆ, 01.11.2020 ರಹದಾರಿ ಮತ್ತು ಆಥರೈಸೇಷನ್ ಪಡೆದು ಅನ್ವಯವಾಗುವ ತೆರಿಗೆಯನ್ನು ಪಾವತಿಸದೇ ಜೋಧಪುರದಿಂದ ಬೆಂಗಳೂರಿಗೆ ಪ್ರಯಾಣಿಕರನ್ನು ಸಾಗಣೆ ಮಾಡಲಾಗುತ್ತಿತ್ತು. ರಹದಾರಿ ಮತ್ತು ತೆರಿಗೆ ಇಲ್ಲದ ಕಾರಣ ತಪ್ಪಿಸಿಕೊಳ್ಳುವ ಉದ್ದೇಶದಿಂದ ಪ್ರಯಾಣಿಕರನ್ನು ನೆಲಮಂಗಲ ಹೊರವಲಯದಿಂದ ಬೇರೋಂದು ವಾಹನದಲ್ಲಿ ಸಾಗಣೆ ಮಾಡಿ, ನಂತರ ಸಂಜೆ ಬೆಂಗಳೂರಿನಿಂದ ಬಸ್ ನಿಂದ ಸ್ಥಳಕ್ಕೆ ಕಾಯ್ದಿರಿಸಲಾದ ಪ್ರಯಾಣಿಕರನ್ನು ಅನ್ಯ ವಾಹನಗಳಲ್ಲಿ ಸಾಗಣೆ ಮಾಡಿ ನಂತರ ಜೋಧಪುರಕ್ಕೆ ಪ್ರಯಾಣ ಬೆಳೆಸಲು ಉದ್ದೇಶಿಸಲಾಗಿತ್ತು. ಈ ಬಗ್ಗೆ ಖಚಿತ ಮಾಹಿತಿ ಪಡೆದು ವಾಹನವನ್ನು ವಶಕ್ಕೆ ಪಡೆದು ನೆಲಮಂಗಲ ಪ್ರಾದೇಶಿಕ ಸಾರಿಗೆ ಕಚೇರಿ ಆವರಣದಲ್ಲಿ ಮುಟ್ಟುಗೋಲು ಹಾಕಿ ತನಿಖಾ ವರದಿಯನ್ನು ನೀಡಲಾಗಿದೆ ಎಂದು ಹೇಳಿದರು.
ಈ ಮಧ್ಯೆ, ನೆಲಮಂಗಲ-ಬೇಗೂರು ಮಧ್ಯ ಹೆದ್ದಾರಿಯಲ್ಲಿ ಆನಂದ್ ಟ್ರಾನ್ಸ್‌ಲಿಂಕ್ ಗೆ ಸಂಬಂಧಿಸಿದ ಎನ್‌ಎಲ್ 01 ಬಿ 1794 ವಾಹನ ನಮ್ಮ ಅಧಿಕಾರಿಗಳ ತಂಡಕ್ಕೆ ಎದುರಾಗಿದೆ. ಆ ವೇಳೆಯಲ್ಲಿ ಅಧಿಕಾರಿಗಳು ಆರ್ ಜೆ 19 ಪಿಸಿ 3131 ವಾಹನ ಪತ್ತೆ ಹಚ್ಚುವ ಧಾವಂತದಿಂದ ಎನ್‌ಎಲ್ 01 ಬಿ 1794 ನ್ನು ನಿಲ್ಲಿಸಲಾಗಲಿ ಹಿಂಬಾಲಿಸಲಾಗಲೀ ಸಾಧ್ಯವಾಗಿಲ್ಲ. ಆದರೆ ಕೂಡಲೇ ಆಯುಕ್ತರ ಕಚೇರಿಗೆ ಕರೆ ಮಾಡಿ ವಾಹನದ ವಿವರಗಳನ್ನು ಕೇಳಿದಾದ ಇದರ ಬಗ್ಗೆ ಯಾವುದೇ ಮಾಹಿತಿ ಇಲ್ಲದಿರುವುದು ತಂಡಕ್ಕೆ ತಿಳಿದುಬಂದಿದೆ. ಅಷ್ಟರಲ್ಲಾಗಲೇ ಈ ಬಸ್ ಬೆಂಗಳೂರು ತಲುಪಿತ್ತು.
ಆರ್ ಜೆ 19 ಪಿಸಿ 3131 ಮಹದೇವ ಬಸ್ಸನ್ನು ಸಂಜೆ ನೆಲಮಂಗಲ ಪ್ರಾದೇಶಿಕ ಸಾರಿಗೆ ಕಚೇರಿ ಆವರಣಕ್ಕೆ ತಂದಾಗ ಆವರಣದಲ್ಲಿ ಆನಂದ್ ಟ್ರಾನ್ಸ್‌ಲಿಂಕ್ ಗೆ ಸೇರಿದ ಎನ್‌ಎಲ್ 01 ಬಿ 1794 ವಾಹನವಿರುವುದನ್ನು ಕಂಡ ತಂಡಕ್ಕೆ ಆಶ್ಚರ್ಯವಾಗಿದೆ. ಈ ಬಗ್ಗೆ ನೆಲಮಂಗಲ ಪ್ರಾದೇಶಿಕ ಸಾರಿಗೆ ಕಚೇರಿಯ ಹಿರಿಯ ಮೋಟಾರು ವಾಹನ ನಿರೀಕ್ಷಕರಾದ ಎಂ ಶಿವಪ್ರಸಾದ್ ಅವರನ್ನು ವಿಚಾರಿಸಲಾಗಿ ಈ ಬಸ್ಸನ್ನು ನವೆಂಬರ್ 17 ರಂದೇ ಮುಟ್ಟುಗೋಲು ಹಾಕಿರುವುದು ತಿಳಿದುಬಂದಿದೆ.
ಒಂದೇ ನೊಂದಣಿ ಸಂಖ್ಯೆಯನ್ನು ಬಳಿಸಿಕೊಂಡು ಆನಂದ್ ಟ್ರಾನ್ಸ್‌ಲಿಂಕ್ ನ ವತಿಯಿಂದ ಸುಮಾರು 4 ಬಸ್ಸುಗಳು ಸಂಚರಿಸುತ್ತಿರುವುದನ್ನು ಪತ್ತೆಹಚ್ಚಿದ ಹಿರಿಯ ಮೋಟಾರ್ ವಾಹನ ನಿರೀಕ್ಷಕರಾದ ಹೆಚ್ ರಾಜಣ್ಣ, ಎಂ.ಎನ್ ಸುಧಾಕರ್, ಹಿಮೋವಾನಿ, ಜಿ.ಪಿ ಕೃಷ್ಣಾನಂದ ಮತ್ತು ಎಂ.ಶಿವಪ್ರಸಾದ್ ಅವರು ತುರ್ತು ಸಭೆ ನಡೆಸಿ ತಂಡಗಳ ರಚನೆ ಮಾಡಿ ಬೆಂಗಳೂರು ನಗರ ಹಾಗೂ ಹೊಸೂರು ರಸ್ತೆ, ಅತ್ತಿಬೆಲೆಗಳಲ್ಲಿ ಕಾವಲು ಕಾಯ್ದು ರಾತ್ರಿ 10 ಗಂಟೆಗೆ ಎನ್‌ಎಲ್ 01 ಬಿ 1794 (ಎರಡನೇ ವಾಹನ) ವನ್ನು ವಶಕ್ಕೆ ಪಡೆದು ಮುಟ್ಟುಗೋಲು ಹಾಕಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಲಾಗಿ, ಒಂದೇ ನೊಂದಣಿ ಸಂಖ್ಯೆಯಲ್ಲಿ ಹಲವು ವಾಹನಗಳು ಓಡಾಡುತ್ತಿರುವುದಾಗಿ ತಿಳಿದು ತದನಂತರ ಬರಲಾದ ವಾಹನಗಳನ್ನು ಕಾಯ್ದು, ನವೆಂಬರ್ 19 ರಂದು ಎನ್‌ಎಲ್ 01 ಬಿ 1797 (ಸೇಲಂ ಮುಂಬೈ) ಎನ್‌ಎಲ್ 01 ಬಿ 179೫ (ಮುಂಬೈ ಬೆಂಗಳೂರು) ಎರಡೂ ವಾಹನಗಳನ್ನು ವಶಕ್ಕೆ ಪಡೆಡಿದ್ದಾರೆ. ನಂತರ ನವಂಬರ್ 20 ರಂದು ಮತ್ತೆ ಬರಬೇಕಾದ ವಾಹನಗಳನ್ನು ಹಿಡಿಯಲು ಬಲೆ ಬೀಸಲಾಗಿತ್ತು. ಆದರೆ ಅವುಗಳನ್ನು ಮುಂಬೈನಲ್ಲೇ ಇಟ್ಟಿರಬಹುದು ಎಂದು ಸಂದೇಹಪಡಲಾಗಿದೆ. ಇದೇ ಕಂಪನಿಗೆ ಸೇರಿದ ಹಲವು ವಾಹನಗಳ ಪತ್ತೆಗಾಗಿ ಪ್ರಯತ್ನ ಪಟ್ಟಿದ್ದರೂ ವಾಹನಗಳ ಕಾರ್ಯಾಚರಣೆ ಸ್ಥಗಿತಗೊಳಿಸಿರುವುದರಿಂದ ಸಾಧ್ಯವಾಗಿಲ್ಲ. ಈ ವಾಹನಗಳಿಗೆ ಸಂಬಂಧಿಸಿದಂತೆ ಕರ್ನಾಟಕ ಸಾರಿಗೆ ಪ್ರಾಧಿಕಾರದಲ್ಲಿ ರಹದಾರಿ ಆಥರೈಸೇಷನ್ ಹಾಗೂ ತೆರಿಗೆ ಪಾವತಿಸಿರುವ ಬಗ್ಗೆ ಸುಳಿವು ಕಂಡುಬಂದಿಲ್ಲ.
ಮೇಲ್ನೋಟಕ್ಕೆ ವಾಹನಕ್ಕೆ ಬೇರೊಂದು (ನಕಲು) ನೊಂದಣಿ ಫಲಕ ಅಳವಡಿಸಿ ಸೂಕ್ತ ದಾಖಲೆಗಳಿಲ್ಲದೆ ನೊಂದಣಿ ದಿನಾಂಕದಿಂದ ಕರ್ನಾಟಕ ರಾಜ್ಯದ ರಸ್ತೆ ತೆರಿಗೆ ಅಂದಾಜು ಪ್ರತಿ ವಾಹನಕ್ಕೆ ರೂ 6,400*4= 25,60,000-00 ಗಳಷ್ಟು ಆನಂದ್ ಟ್ರಾನ್ಸ್‌ಲಿಂಕ್ ಕಂಪನಿಯ ವಾಹನಗಳಿಂದ ಹಾಗೂ ಜಜೆ 03 ಬಿ ವಿ 9015 ಮತ್ತು ಆರ್ ಜೆ 19 ಪಿ ಸಿ 3131 ರಿಂದ ರೂ 14,80,000-00 ಒಟ್ಟಾರೆಯಾಗಿ 41 ಲಕ್ಷ ರೂಪಾಯಿಗಳಷ್ಟು ನಷ್ಟವಾಗಿದೆ. ಈ ನಷ್ಟದ ತೆರಿಗೆಯನ್ನು ವಸೂಲು ಮಾಡಲು ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಆಯುಕ್ತರು ತಿಳಿಸಿದರು.