*ರಾಷ್ಟ್ರ ಮಟ್ಟದಿಂದ ತಾಲೂಕು ಮಟ್ಟದವರೆಗೂ ರೈತರ ಹೋರಾಟಕ್ಕೆ ಕಾಂಗ್ರೆಸ್ ಬೆಂಬಲ: ಡಿ.ಕೆ ಶಿವಕುಮಾರ್*
ಬೆಂಗಳೂರು:- ರಾಷ್ಟ್ರಮಟ್ಟದಿಂದ, ತಾಲೂಕು ಹಾಗೂ ಬ್ಲಾಕ್ ಮಟ್ಟದವರೆಗೂ ದೇಶದ ಅನ್ನದಾತ ಹೋರಾಟಕ್ಕೆ ಕಾಂಗ್ರೆಸ್ ಸಂಪೂರ್ಣ ಬೆಂಬಲ ನೀಡಲಿದೆ. ರೈತರು ಕರೆ ನೀಡಿರುವ ಬಂದ್ ಗೆ ನಾವು ಕೈಜೋಡಿಸಿ ಪ್ರತಿಭಟನೆ ನಡೆಸುತ್ತೇವೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.
ಸೋಮವಾರ ವಿಧಾನಸೌಧದ ಕಾಂಗ್ರೆಸ್ ಶಾಸಕಾಂಗ್ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಡಿ.ಕೆ ಶಿವಕುಮಾರ್ ಅವರು, ಹೇಳಿದ್ದಿಷ್ಟು:
‘ರೈತ ಹಾಗೂ ಕಾರ್ಮಿಕ ವಿರೋಧಿ ಕಾಯ್ದೆಗಳ ವಿರುದ್ಧ ಕಾಂಗ್ರೆಸ್ ಪಕ್ಷ ರಾಷ್ಟ್ರ ಮಟ್ಟದಲ್ಲಿ ಸಹಿ ಸಂಗ್ರಹ ಅಭಿಯಾನ ಆರಂಭಿಸಲಾಗಿತ್ತು. ರಾಜ್ಯದಲ್ಲಿ ಈ ಅಭಿಯಾನಕ್ಕೆ ಸುಮಾರು 8.80 ಲಕ್ಷ ಜನ ರೈತರು ಸಹಿ ಹಾಕಿ ಭಾಗವಹಿಸಿದ್ದಾರೆ. ಅವರು ತಮ್ಮ ಸಹಿ ಪತ್ರ ಕಳುಹಿಸಿಕೊಟ್ಟು, ರೈತರ ಹೊರಾಟಕ್ಕೆ ಬೆಂಬಲ ಸೂಚಿಸಿ ಕೊಟ್ಟಿದ್ದಾರೆ. ಅವರ ಸಹಿ ಪತ್ರಗಳನ್ನು ಕಾಂಗ್ರೆಸ್ ಅಧ್ಯಕ್ಷರಾದ ಸೋನಿಯಾ ಗಾಂಧಿ ಅವರ ಪರವಾಗಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ರಾಷ್ಟ್ರಪತಿ ರಾಮನಾಥ ಕೊವಿಂದ್ ಅವರಿಗೆ ನೀಡಲಿದ್ದಾರೆ.
‘ಈ ಮಸೂದೆಗಳ ವಿರುದ್ಧ ರೈತರ ಭಾವನೆಯನ್ನು ರಾಷ್ಟ್ರಪತಿಗಳಿಗೆ ತಿಳಿಸುವ ಪ್ರಯತ್ನ ಇದಾಗಿದ್ದು, ನಾವು ಈ ಸಹಿ ಪತ್ರಗಳನ್ನು ಎಐಸಿಸಿಗೆ ಕಳುಹಿಸಿಕೊಡುತ್ತೇವೆ. ಅಲ್ಲಿಂದ ರಾಷ್ಟ್ರಪತಿಗಳಿಗೆ ಸಲ್ಲಿಸಲಾಗುವುದು. ದೇಶದ ಆರ್ಥಿಕತೆಯ ಬೆನ್ನೆಲುಬು ರೈತ. ಇಂದು ಕೇಂದ್ರ ಸರ್ಕಾರದ ಕಾನೂನುಗಳು ಉದ್ದಿಮೆದಾರರ ಹಿತಕ್ಕಾಗಿ ರೈತರಿಗೆ ಮಾರಕವಾದ ಕಾನೂನು ತಂದಿದೆ. ಹೀಗಾಗಿ ನಾವು ರೈತರ ಪರವಾಗಿ ನಿಲ್ಲುತ್ತೇವೆ’
‘ಭೂಸುಧಾರಣ ಕಾಯ್ದೆ, ಎಪಿಎಂಸಿ ಹಾಗೂ ಕಾರ್ಮಿಕ ಕಾಯ್ದೆಗಳ ತಿದ್ದುಪಡಿಗಳು ಅನ್ನದಾತರ ವಿರುದ್ಧವಾಗಿದ್ದು, ಇದನ್ನು ನಾವು ವಿರೋಧಿಸುತ್ತೇವೆ. ನಾಳೆ ರೈತರು ಈ ದೇಶದಲ್ಲಿ ಬಂದ್ ಕರೆ ನೀಡಿದ್ದು, ಇದಕ್ಕೆ ಇಡೀ ರಾಷ್ಟ್ರದ್ಯಂತ ಪ್ರತಿ ತಾಲೂಕು, ಬ್ಲಾಕ್ ಮಟ್ಟದಲ್ಲಿ ಕಾಂಗ್ರೆಸ್ ಪಕ್ಷ ಸಂಪೂರ್ಣವಾಗಿ ಬೆಂಬಲ ನೀಡಲಿದೆ. ಹೀಗಾಗಿ ಎಲ್ಲ ಬ್ಲಾಕ್ ಕಾಂಗ್ರೆಸ್ ಸದಸ್ಯರು ರೈತರ ಹೊರಾಟದಲ್ಲಿ ಭಾಗವಹಿಸಿ ಬೆಂಬಲ ಸೂಚಿಸಬೇಕು. ಈ ಬಗ್ಗೆ ನಾವು ಪಕ್ಷದ ಹಿರಿಯ ನಾಯಕರ ಸಭೆಯಲ್ಲಿ ತೀರ್ಮಾನ ಮಾಡಿದ್ದೇವೆ.’
ನಾವು ನಾಳೆ ವಿಧಾನಸೌಧದ ಮುಂದೆ ಪ್ರತಿಭಟನೆ ಮಾಡುತ್ತೇವೆ. ನಾವು ಬೀದಿಗಿಳಿದು ಹೋರಾಟ ಮಾಡಲೇಬೇಕಾದ ಪರಿಸ್ಥಿತಿ ಇದ್ದು, ನಾವು ಬಹಳ ಶಾಂತಿಯುತವಾಗಿ ಯಾರಿಗೂ ಅಡಚಣೆ ಮಾಡದೇ, ಸಾರ್ವಜನಿಕ ಆಸ್ತಿಪಾಸ್ತಿಗೆ ನಷ್ಟವಾಗದಂತೆ ರೈತರ ಪರವಾಗಿ ಹೊರಾಟ ಮಾಡುತ್ತೇವೆ.
*ಬಿ.ರಾಜಣ್ಣ ಪಕ್ಷಕ್ಕೆ ಸೇರ್ಪಡೆ:*
‘ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷರಾದ ಬಿ.ರಾಜಣ್ಣ ಹಾಗೂ ಅವರ ಬೆಂಬಲಿಗರನ್ನು ಇಂದು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲಾಯಿತು. ಹಾಗಾಗಿ ಇಲ್ಲಿಗೆ ಆಗಮಿಸಲು ತಡವಾಯಿತು. 9ರಂದು ಮಾಜಿ ವಿಧಾನಪರಿಷತ್ ಸದಸ್ಯರಾದ ಜಿ.ವಿಜಯ ಅವರು ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ. ಪಕ್ಷಕ್ಕೆ ಸೇರುವವರ ಪಟ್ಟಿ ಇನ್ನು ಇದ್ದು, ಮುಂದಿನ ದಿನಗಳಲ್ಲಿ ದಿನಾಂಕ ನಿಗದಿ ಮಾಡಿ ಮಾಹಿತಿ ನೀಡುತ್ತೇನೆ.’
*ಗೋಹತ್ಯೆ ಮಸೂದೆ ಅನಗತ್ಯ:*
ನನ್ನ ಪ್ರಕಾರ ಗೋಹತ್ಯೆ ಮಸೂದೆ ತರುವ ಅಗತ್ಯ ಇಲ್ಲ. ಈಗಾಗಲೇ ರಾಜ್ಯದಲ್ಲಿ ಗೋಹತ್ಯೆ ಮಸೂದೆ ಜಾರಿಯಲ್ಲಿದೆ. ಅವರು ಒಂದು ವರ್ಗವನ್ನು ಗುರಿಯಾಗಿಟ್ಟುಕೊಂಡು ಈ ಮಸೂದೆ ತರುತ್ತಿದ್ದಾರೆ. ಈ ವಿಚಾರಕ್ಕೆ ಬಿಜೆಪಿ ನಾಯಕರು ಕೋಮು ಬಣ್ಣ ನೀಡುತ್ತಿದ್ದಾರೆ. ಇದು ಕೂಡ ರೈತರ ಮೇಲೆ ಪರಿಣಾಮ ಬೀರಲಿದೆ. ಅವರು ಯಾವ ರೀತಿ ಮಸೂದೆ ತರುತ್ತಾರೆ ನೋಡೋಣ. ಆ ಮೇಲೆ ಅದರ ಬಗ್ಗೆ ಪ್ರತಿಕ್ರಿಯೆ ನೀಡುತ್ತೇನೆ.
*ತಮ್ಮ ಸಿದ್ಧಾಂತಕ್ಕೆ ಬದ್ಧರಾಗಿರುವುದು ಜೆಡಿಎಸ್ ಗೆ ಬಿಟ್ಟ ವಿಚಾರ:*
ವಿಧಾನ ಪರಿಷತ್ ಸಭಾಪತಿಗಳ ವಿರುದ್ಧ ಅವಿಶ್ವಾಸ ನಿರ್ಣಯ ಜಾರಿ ವಿಚಾರದಲ್ಲಿ ಜೆಡಿಎಸ್ ಯಾವ ರೀತಿ ನಿರ್ಧಾರ ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡೋಣ. ಇಷ್ಟು ದಿನ ಅವರು ಜಾತ್ಯಾತೀತ ತತ್ವಗಳ ಮೇಲೆ ರಾಜಕೀಯ ಮಾಡುವುದಾಗಿ ತಿಳಿಸಿದ್ದರು. ನಾವು ಅವರಿಗೆ ಉಪಸಭಾಪತಿ ಸ್ಥಾನವನ್ನು ಬಿಟ್ಟುಕೊಟ್ಟಿದ್ದೇವೆ. ಅವರು ತಮ್ಮ ಪಕ್ಷದ ಸಿದ್ಧಾಂತಕ್ಕೆ ಬದ್ಧರಾಗಿರುತ್ತಾರೆ ಎಂದು ಭಾವಿಸಿದ್ದೇನೆ, ಆದರೆ ಅವರು ಬೇರೆ ನಿರ್ಧಾರ ತೆಗೆದುಕೊಳ್ಲುವುದಾದರೆ ಅದು ಅರಿಗೆ ಬಿಟ್ಟ ವಿಚಾರ. ಆದರೆ ಅವರು ತಮ್ಮ ನಿಲುವು ಬದಲಿಸಬಾರದು ಎಂದು ಮನವಿ ಮಾಡುತ್ತೇನೆ. ಆದರೆ ಅವರು ತಮ್ಮ ಹಿತಾಸಕ್ತಿಗಾಗಿ ಬಿಜೆಪಿ ಜತೆ ಕೈಜೋಡಿಸುವುದಾದರೆ ಅದು ಅವರ ಇಚ್ಛೆಗೆ ಬಿಡುತ್ತೇನೆ.
ವೇತನ ವಿಚಾರವಾಗಿ ವೈದ್ಯರು ಹಾಗೂ ಕೋವಿಡ್ ವಾರಿಯರ್ಸ್ ಹೋರಾಟ ನಡೆಸುತ್ತಿದ್ದು, ಕಾಂಗ್ರೆಸ್ ಪಕ್ಷ ಅವರ ಜತೆ ನಿಲ್ಲಲಿದೆ. ಅವರ ಸಮಸ್ಯೆ ಹಾಗೂ ಅವರ ಬೇಡಿಕೆಗಳ ಈಡೇರಿಸಬೇಕು ಎಂದು ಆಗ್ರಹಿಸುತ್ತೇವೆ.