ಪಾವಗಡ: – ಇಂದು ಸ್ವಾಮಿ ವಿವೇಕಾನಂದರ 159ನೇ ಜನ್ಮದಿನೋತ್ಸವವನ್ನು ಸ್ವಾಮಿ ವಿವೇಕಾನಂದ ಸಂಘಟಿತ ಗ್ರಾಮಾಂತರ ಆರೋಗ್ಯ ಕೇಂದ್ರದ ಸಭಾಂಗಣದಲ್ಲಿ ಅತ್ಯಂತ ಅರ್ಥಗರ್ಭಿತವಾಗಿ ಆಚರಿಸಲಾಯಿತು.
ಇಂದಿನ ಕಾರ್ಯಕ್ರಮದಲ್ಲಿ ಸಂತರು, ಸಂರಕ್ಷಕರು ಹಾಗೂ ಸೈನಿಕರೊಬ್ಬರ ಸಂಗಮದೊಂದಿಗೆ ಕಾಯಕ್ರಮವು ನೆರವೇರಿತು. ಪಟ್ಟಣದ ವಿವಿಧ ಕಾಲೇಜುಗಳ 500ಕ್ಕೂ ಮಿಗಿಲಾದ ಹಿರಿಯ ವಿದ್ಯಾರ್ಥಿ ವಿದ್ಯಾರ್ಥಿನಿಯರು, ಪೆÇೀಷಕರು ಹಾಜರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಕಾರ್ಯಕ್ರಮದ ದಿವ್ಯಸಾನ್ನಿಧ್ಯವನ್ನು ಶ್ರೀಮತ್ ಸ್ವಾಮಿ ಜಪಾನಂದಜಿ, ಅಧ್ಯಕ್ಷರು, ಶ್ರೀರಾಮಕೃಷ್ಣ ಸೇವಾಶ್ರಮ, ಪಾವಗಡ ರವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶ್ರೀ ಎಂ.ಆರ್.ಗೌತಮ್, ಪೆÇಲೀಸ್ ಉಪ ಅಧೀಕ್ಷಕರು, ಕರ್ನಾಟಕ ಲೋಕಾಯುಕ್ತ, ಶ್ರೀ ಎ.ನಂಜುಂಡೇಶ್ವರ ನಿವೃತ್ತ ಗೌ.ಸುಬೇದಾರ್ ಮೇಜರ್, ಡಾ.ವೈ.ಎಸ್.ಹನುಮಂತರಾಯ, ಪ್ರಾಂಶುಪಾಲರು, ವೈ.ಇ.ಆರ್.ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಶ್ರೀ ಸುದೇಶ್ ಬಾಬು, ಅಧ್ಯಕ್ಷರು, ಶ್ರೀ ಕನ್ಯಕಾ ಪರಮೇಶ್ವರಿ ಆರ್ಯ ವೈಶ್ಯ ಸಂಘ, ಶ್ರೀ ಪವನ್ ಕುಮಾರ್ ರೆಡ್ಡಿ, ಕ್ಷೇತ್ರ ಸಂಪನ್ಮೂಲನಾಧಿಕಾರಿಗಳು, ಶಿಕ್ಷಣ ಇಲಾಖೆ, ಪಾವಗಡ ರವರು ಭಾಗವಹಿಸಿದ್ದರು.
ಮೊದಲಿಗೆ ಶ್ರೀ ಸ್ವಾಮಿ ಜಪಾನಂದಜೀ ರವರು ರಾಷ್ಟ್ರಕವಿ ಕುವೆಂಪು ಮತ್ತು ಶ್ರೀ ಜಿ.ಎಸ್.ಶಿವರುದ್ರಪ್ಪ ರವರು ರಚಿಸಿದ ದೇಶ ಭಕ್ತಿಗೀತೆಗಳನ್ನು, ಸ್ವಾಮಿ ವಿವೇಕಾನಂದರ ವೀರ ಗೀತೆಗಳನ್ನು ಪ್ರಸ್ತುತ ಪಡಿಸಿದರು. ನಂತರ ತಮ್ಮ ಪ್ರಾಸ್ತಾವಿಕ ನುಡಿಗಳಲ್ಲಿ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸಿ ಕಾರ್ಯಕ್ರಮದಲ್ಲಿ ಹಾಜರಿದ್ದ ವಿದ್ಯಾರ್ಥಿ ವಿದ್ಯಾರ್ಥಿನಿಯರನ್ನು ಭವಿಷ್ಯ ಭಾರತದ ಶಕ್ತಿ ಎಂದು ಸಂಬೋಧಿಸಿ ದೇಶಭಕ್ತಿಯನ್ನು ಉದ್ದೀಪನಗೊಳಿಸಿದರು.
ವಿದ್ಯಾರ್ಥಿಗಳಿಗೆ ಸ್ವಾತಂತ್ರ್ಯ ಹೋರಾಟಗಾರರ ವಿಷಯಗಳನ್ನು ಅಧ್ಯಯನ ಮಾಡಬೇಕೆಂದು, ದೇಶ ಭಕ್ತಿಯನ್ನು ಮೈಗೂಡಿಸಿಕೊಳ್ಳಬೇಕೆಂದು ತಿಳಿಸಿದರು. ಸೆಪ್ಟೆಂಬರ್ 11ನೇ ತಾರೀಖು ಚಿಕಾಗೋ ನಗರದಲ್ಲಿ ನಡೆದ ವಿಶ್ವ ಧರ್ಮ ಸಮ್ಮೇಳನದಲ್ಲಿ ಮಾತನಾಡಿದ ನಂತರ ಸ್ವಾಮಿ ವಿವೇಕಾನಂದರಿಂದ ಹಿಂದೂ ಧರ್ಮ ಉದಯಿಸಿತು ಎಂದು ಸೋದರಿ ನಿವೇದಿತಾ ನುಡಿದಿದ್ದನ್ನು ಸ್ಮರಿಸಿದರು. ಅನೇಕ ಸ್ವಾತಂತ್ರ್ಯ ಹೋರಾಟಗಾರರಿಗೆ ಸ್ವಾಮಿ ವಿವೇಕಾನಂದರೇ ಸ್ಪೂರ್ತಿದಾಯಕರಾಗಿದ್ದರು ಎಂದು ತಿಳಿಸಿದರು. ಸುಭಾಷ್ ಚಂದ್ರ ಬೋಸ್, ಚಿತ್ತರಂಜನ್ ದಾಸ್, ಸರ್ದಾರ್ ವಲ್ಲಭ ಭಾಯಿ ಪಟೇಲ್ ರಂತಹ ಹೋರಾಟಗಾರರ ಕಿಚ್ಚು ಯುವಕರಲ್ಲಿ ಸ್ಫುರಣವಾಗಬೇಕು, ಧಮನಿ ಧಮನಿಗಳಲ್ಲಿ ದೇಶ ಭಕ್ತಿ ಪಸರಿಸಬೇಕು ಎಂದು ಅಭಿಪ್ರಾಯಪಟ್ಟರು.
ಕ್ಷುಲ್ಲಕ ಕಾರಣಗಳಿಗಾಗಿ ಕಾಲ ವ್ಯಯ ಮಾಡದೆ, ನಕಾರಾತ್ಮಕ ಚಿಂತನೆಗಳನ್ನು ಬದಿಗೊತ್ತಿ ದೇಶ ಭಕ್ತರ, ಸ್ವಾತಂತ್ರ್ಯ ಹೋರಾಟಗಾರರ ಪುಸ್ತಕಗಳನ್ನು ಓದಿ ಅವರಂತೆಯೇ ವಿಶ್ವಮಾನ್ಯರಾಗಬೇಕೆಂದು, ವಿನಾ ಕಾಲಹರಣ ಮಾಡದೆ ವಿದ್ಯಾಭ್ಯಾಸದತ್ತ ಗಮನ ಹರಿಸಿರಿ ಎಂದು ಕಿವಿಮಾತು ಹೇಳಿದರು.
ನಂತರ ಮಾತನಾಡಿದ ಶ್ರೀ ಎಂ.ಆರ್.ಗೌತಮ್ ರವರು ಸ್ವಾಮಿ ವಿವೇಕಾನಂದರ ಬಾಲ್ಯ, ವಿದ್ಯಾಭ್ಯಾಸ ಹಾಗೂ ಗುರುಗಳ ಸಂಪರ್ಕ, ಅನುಯಾಯಿ ಸ್ನೇಹಿತರು, ಸಾಧನೆಗಳ ಬಗ್ಗೆ ಅತ್ಯಂತ ವಿವರವಾಗಿ, ಮನಮುಟ್ಟುವಂತೆ ತಿಳಿಸಿದರು ಹಾಗೂ ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಇತ್ತೀಚಿನ ಸಾಮಾಜಿಕ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿರುವ ನಕಾರಾತ್ಮಕ ಅಂಶಗಳ ಬಗ್ಗೆ ಬೇಸರ ವ್ಯಕ್ತಪಡಿಸಿದ ಅವರು ಸ್ವಾಮಿ ವಿವೇಕಾನಂದರ ಅನೇಕ ಅಂಶಗಳು ದೃಢೀಕರಿಸಲ್ಪಟ್ಟಿವೆ ಹಾಗೂ ಪುಸ್ತಕ ರೂಪದಲ್ಲಿ ಪ್ರಕಟವಾಗಿವೆ ಎಂದು ತಿಳಿಸಿದರು. ಚಿಕಾಕೋ ಸಮ್ಮೇಳನದಲ್ಲಿ ಸ್ವಾಮಿ ವಿವೇಕಾನಂದರು ಸಂಬೋಧಿಸಿದ ಅಮೆರಿಕಾದ ಸಹೋದರ ಸಹೋದರಿಯರೇ ಎಂಬ ಉದ್ಗಾರ ಇಡೀ ವಿಶ್ವವನ್ನೇ ತನ್ನೆಡೆ ಸೆಳೆದುಕೊಂಡ ಮಹಾನುಭಾವರು, ಇವರನ್ನು ಕ್ರಾಂತಿಕಾರಿ ರಾಷ್ಟ್ರೀಯವಾದಿ ಎಂದರೆ ತಪ್ಪಾಗಲಾರದು ಎಂದು ಅಭಿಪ್ರಾಯಪಟ್ಟರು.
ಸ್ವಾಮಿ ವಿವೇಕಾನಂದರ ಬಾಲ್ಯದಲ್ಲಿ ನಡೆದ ಒಂದೆರಡು ಘಟನೆಗಳನ್ನು ನೆನಪಿಸುತ್ತಾ, ಬಾಲ್ಯದಲ್ಲಿಯೇ ದಾನ ಧರ್ಮಗಳ ತತ್ವಗಳನ್ನು ಮೈಗೂಡಿಸಿಕೊಂಡಿದ್ದರು ಎಂದು ತಿಳಿಸಿದರು. ರವೀಂದ್ರನಾಥ ಟ್ಯಾಗೂರ್‍ರವರ ಉಲ್ಲೇಖದಂತೆ ಭಾರತವನ್ನು ತಿಳಿದುಕೊಳ್ಳಬೇಕೆಂದರೆ ಸ್ವಾಮಿ ವಿವೇಕಾನಂದರ ಬಗ್ಗೆ ಓದಿಕೊಳ್ಳಬೇಕೆಂದು ತಿಳಿಸಿರುತ್ತಾರೆ ಎಂದು ತಿಳಿಸಿದರು.
ಸ್ವಾಮಿ ವಿವೇಕಾನಂದರ ವಿಚಾರಗಳನ್ನು ಅಧ್ಯಯನ ಮಾಡಬೇಕೆಂದು ವಿದ್ಯಾರ್ಥಿಗಳಿಗೆ ತಿಳಿಹೇಳಿದರು.
ಮತ್ತೋರ್ವ ಅಥಿಗಳಾದ ಸೈನ್ಯಾಧಿಕಾರಿಗಳಾಗಿ ನಿವೃತ್ತರಾಗಿರುವ ಶ್ರೀ ನಂಜುಂಡೇಶ್ವರ ರವರು ಮಾತನಾಡಿ ತಾವು ಸೈನ್ಯದಲ್ಲಿ ಸೇವೆ ಸಲ್ಲಿಸಿದ ಅನುಭವಗಳನ್ನು ಬಿಚ್ಚಿಟ್ಟರು. ತಾವು ಒಬ್ಬ ಮಧ್ಯಮ ವರ್ಗದ ಕುಟುಂಬದಿಂದ ಬಂದರೂ ಸಹ ತಮ್ಮ ವಿದ್ಯಾಭ್ಯಾಸದ ಸಮಯದಲ್ಲಿ ಎನ್.ಸಿ.ಸಿ. ವಿಭಾಗಕ್ಕೆ ಸೇರಿ ನಂತರ ಮುಂದಿನ ಜೀವನದಲ್ಲಿ ಸಮವಸ್ತ್ರ ಧರಿಸಿ ಈ ದೇಶ ಸೇವೆ ಮಾಡುವ ಕನಸನ್ನು ಕಂಡಿದ್ದು, ನಂತರದ ದಿನಗಳಲ್ಲಿ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿ ಸೈನ್ಯ ಸೇರಿದ ಪರಿಯನ್ನು ವಿವರಿಸಿದರು.
ತೀವ್ರವಾದ ಚಳಿ, ಮಳೆ ಮತ್ತು ಬಿಸಿಲು ಎಂದು ಲೆಕ್ಕಿಸದೆ ದೇಶದ ಗಡಿ ಭಾಗಗಳಲ್ಲಿ ನಿಸ್ವಾರ್ಥ ಸೇವೆಯನ್ನು ಸಲ್ಲಿಸಿದ್ದನ್ನು ತಿಳಿಸಿದರು. ಗಡಿ ಭಾಗಗಳಲ್ಲಿ, ಅರುಣಾಚಲ ಪ್ರದೇಶದಂತಹ ಮಂಜಿನ ಪ್ರದೇಶಗಳಲ್ಲಿ ಸೈನಿಕ ಸ್ನೇಹಿತರ ಹೆಣಗಳ ಮಧ್ಯೆ ದಿನಗಟ್ಟಲೆ ಕಳೆಯುವಂತಹ ವೇದನೆಯನ್ನು ಸಭೆಯಲ್ಲಿ ಹಂಚಿಕೊಂಡರು. ಸೈನಿಕರ ಜೀವನ ಬಹಳ ಶೋಚನೀಯವಾಗಿರುತ್ತದೆ, ಸಮಯಕ್ಕೆ ಸರಿಯಾಗಿ ನೀರು, ಆಹಾರ ಸಿಗದೆ, ಸಿದ್ದಪಡಿಸಿದ ಆಹಾರವನ್ನು ಹತ್ತು ಹದಿನೈದು ದಿನಗಳವರೆಗೆ ಶೇಖರಿಸಿಟ್ಟುಕೊಂಡು ತೆಗೆದುಕೊಳ್ಳಬೇಕಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿದ್ದರೂ ಸಹ ಸೈನಿಕರು ಧೈರ್ಯಗೆಡೆದೆ ಶ್ರದ್ಧೆ, ಭಕ್ತಿಯಿಂದ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
ವಿದ್ಯಾರ್ಥಿ ವಿದ್ಯಾರ್ಥಿನಿಯರು ಎನ್.ಸಿ.ಸಿ. ವಿಭಾಗಕ್ಕೆ ಸೇರಬೇಕೆಂದು ತನ್ಮೂಲಕ ದೇಶ ಸೇವೆ, ದೇಶ ಭಕ್ತಿ ಭಾವನೆಗಳನ್ನು ವೃದ್ಧಿಗೊಳಿಸಿಕೊಳ್ಳಬೇಕೆಂದು ವಿನಂತಿಸಿದರು.
ಇದೇ ಸಂದರ್ಭದಲ್ಲಿ ವಿವೇಕ ಬ್ರಿಗೇಡ್ ಉದ್ಘಾಟನೆಯನ್ನು ನೆರವೇರಿಸಲಾಯಿತು. ಶ್ರೀ ಎಂ.ಆರ್.ಗೌತಮ್ ಹಾಗೂ ಅತಿಥಿಗಳು ವಿವೇಕ ಬ್ರಿಗೇಡ್‍ಗೆ ಸೇರಿದ ಸ್ವಯಂಸೇವಕರುಗಳಿಗೆ ನೂತನ ಜಾಕೆಟ್‍ಗಳನ್ನು ವಿತರಿಸುವ ಮೂಲಕ ಚಾಲನೆ ನೀಡಲಾಯಿತು.
ನಂತರ ಬಡ ವಿದ್ಯಾರ್ಥಿಗಳಿಗೆ ತಮ್ಮ ವಿದ್ಯಾಭ್ಯಾಸವನ್ನು ಮುಂದುವರೆಸಲು ಧನ ಸಹಾಯವನ್ನು ಸಹ ನೀಡಲಾಯಿತು. ಸಾಂಕೇತಿಕವಾಗಿ ಹತ್ತು ಜನ ವಿದ್ಯಾರ್ಥಿಗಳಿಗೆ ಚೆಕ್ ವಿತರಿಸಲಾಯಿತು.
ಐ.ಟಿ.ಐ. ವಿದ್ಯಾರ್ಥಿಗಳು, ಕಂಪ್ಯೂಟರ್ ಶಿಕ್ಷಣ ಪಡೆಯುವ ವಿದ್ಯಾರ್ಥಿನಿಯರು ಹಾಗೂ ಸಾಮಾನ್ಯ ಶಿಕ್ಷಣ ಪಡೆಯುತ್ತಿರುವ ಸುಮಾರು 70 ಜನ ಬಡ ಮಕ್ಕಳನ್ನು ಗುರುತಿಸಿ ಅವರೆಲ್ಲರಿಗೂ ಧನ ಸಹಾಯವನ್ನು ನೀಡಲಾಯಿತು.
ವಂದನಾರ್ಪಣೆಯನ್ನು ನೆರವೇರಿಸಿದ ಪ್ರಾಂಶುಪಾಲರಾದ ಡಾ.ವೈ.ಎಸ್.ಹನುಮಂತರಾಯ ರವರು ಸ್ವಾಮೀಜಿಯವರಲ್ಲಿ ಗಡಿ ನಾಡ ಪ್ರದೇಶವಾದ ಪಾವಗಡದಲ್ಲಿ ಐ.ಎ.ಎಸ್. ಐ.ಪಿ.ಎಸ್. ತರಬೇತಿ ಕಾರ್ಯಾಗಾರವನ್ನು ತಮ್ಮ ಆಶ್ರಮದ ವತಿಯಿಂದ ಆಯೋಜಿಸಬೇಕೆಂದು, ಈ ಮೂಲಕ ಗ್ರಾಮಾಂತರ ವಿದ್ಯಾರ್ಥಿ ವಿದ್ಯಾರ್ಥಿನಿಯರನ್ನು ಮೇಲ್ಪಂಕ್ತಿಯಲ್ಲಿ ನೋಡುವ ಅವಕಾಶ ಪಾವಗಡ ತಾಲ್ಲೂಕಿಗೆ ಒದಗಿ ಬರಲಿ ಎಂದು ಆಶಿಸಿದ್ದು ಕಾರ್ಯಕ್ರಮದಲ್ಲಿ ನೆರೆದಿದ್ದ ವಿದ್ಯಾರ್ಥಿಗಳಲ್ಲಿ, ಪೆÇೀಷಕರಲ್ಲಿ ಒಂದು ರೀತಿಯ ವಿದ್ಯುತ್ ಸಂಚಲನ ಮೂಡಿದಂತಾಯಿತು.
ಕಾರ್ಯಕ್ರಮವನ್ನು ಶಿಕ್ಷಣ ತಜ್ಞರಾದ ಶ್ರೀಮತಿ ಪದ್ಮಿನಿ ಮುರಳಿ ರವರು ಅತ್ಯಂತ ಮನೋಜ್ಞಕರವಾಗಿ ನಿರೂಪಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಕಾರ್ಯಕ್ರಮದ ನಂತರ ಲಘು ಉಪಹಾರ, ಸಿಹಿ ಹಾಗೂ ಸ್ವಾಮಿ ವಿವೇಕನಂದರ ಪುಸ್ತಕಗಳನ್ನು ವಿತರಿಸಲಾಯಿತು.