ಈ ಬಜೆಟ್ ಜನರ ನಿರೀಕ್ಷೆಯ ನಾಲ್ಕಾಣೆ ಭಾಗದ್ದು ಅಲ್ಲ: ಶಾಸಕ ಬಂಡೆಪ್ಪ ಖಾಶೆಂಪುರ್
ಬೆಂಗಳೂರು (ಮಾ.08): ಈ ಬಜೆಟ್ ನ ಮೇಲೆ ರಾಜ್ಯದ ಜನರು ಬಹಳಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದರು. ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನೇತೃತ್ವದ ಸರ್ಕಾರ ಜನರ ನಿರೀಕ್ಷೆಗಳನ್ನು ಹುಸಿಗೊಳಿಸಿದೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರಾಗಿರುವ ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಬಂಡೆಪ್ಪ ಖಾಶೆಂಪುರ್ ಅವರು ಹೇಳಿದ್ದಾರೆ.
ನಗರದ ವಿಧಾನಸೌಧ ಆವರಣದಲ್ಲಿ ಮಾತನಾಡಿದ ಅವರು, ಕೃಷಿ, ಶಿಕ್ಷಣ, ಆರೋಗ್ಯ ಕ್ಷೇತ್ರಕ್ಕೆ ಬಜೆಟ್ ನಲ್ಲಿ ಹೆಚ್ಚಿನ ಆಧ್ಯತೆ ನೀಡಬೇಕಾಗಿತ್ತು. ನಮಗೂ ಈ ಬಜೆಟ್ ಮೇಲೆ ಬಹಳ ನಿರೀಕ್ಷೆಗಳಿದ್ದವು. ಕೃಷಿ, ಶಿಕ್ಷಣ, ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಆಧ್ಯತೆ ನೀಡಬಹುದು ಎಂದುಕೊಂಡಿದ್ದೇವು. ಆದ್ರೆ, ಅದು ಆಗಲಿಲ್ಲ. ಇದರಿಂದ ನಮಗೆ ನೋವು ಆಗುತ್ತಿದೆ. ಈ ಬಜೆಟ್ ಜನರ ನಿರೀಕ್ಷೆಯ ನಾಲ್ಕಾಣೆ ಭಾಗದ್ದು ಅಲ್ಲ.
ರಾಜ್ಯದ ಜನತೆಗೆ ಹೊಸ ತೆರಿಗೆಯ ಹೊರೆ ಹಾಕಿಲ್ಲ ಅನ್ನೋದನ್ನು ಬಿಟ್ರೆ ಬಜೆಟ್ ನಲ್ಲಿ ಏನು ಹೊಸತನ ಇಲ್ಲ. ಇದು 2 ಲಕ್ಷ 40 ಸಾವಿರ ಕೋಟಿ ರೂ ಬಜೆಟ್. ಸುಮಾರು 80 ಸಾವಿರ ಕೋಟಿ ರೂ, ಸಾಲ ಮಾಡಿದ್ದಾರೆ. ಇಷ್ಟೆಲ್ಲ ಸಾಲ ಯಾವ ಕಾರಣಕ್ಕಾಗಿ ಮಾಡಿದ್ದಾರೆ. ಅಕಾಲಿಕ ಮಳೆ, ಪ್ರವಾಹದಿಂದ ರೈತರು ಸಂಕಷ್ಟದಲ್ಲಿದ್ದಾರೆ. ಈ ಬಜೆಟ್ ನಲ್ಲಿ ರೈತರಿಗೆ ಎಷ್ಟು ಪರಿಹಾರ ನೀಡಿದ್ದಾರೆ. ಇನ್ನೂ 10 ಸಾವಿರ ಕೋಟಿ ಸಾಲ ಮಾಡಿ ರೈತರಿಗೆ ಕೊಡಬಹುದಿತ್ತು.
ಸಿಎಂ ಬಿಎಸ್ವೈ ಮಹಿಳೆಯರ ದಿನದಂದು ಬಜೆಟ್ ಮಾಡಿದ್ರು, ಮಹಿಳೆಯರಿಗೆ ಏನು ಯೋಜನೆಗಳನ್ನು ತಂದಿದ್ದಾರೆ. ಅವರ ಬಗ್ಗೆ ಒಳ್ಳೆ ಮಾತನಾಡಿದ್ದಾರೆ ಅಷ್ಟೆ. ಕುಮಾರಸ್ವಾಮಿ ಸಿಎಂ ಆಗಿದ್ದಾಗ ನೀಡಿದ್ದ ಅನುದಾನವೇ ಇದುವರೆಗೂ ಬಂದಿಲ್ಲ, ಹೊಸ ಅನುದಾನ ನೀಡೋದು ದೂರದ ಮಾತು. ಕ್ಷೇತ್ರದ ಅಭಿವೃದ್ದಿಗಾಗಿ ಕುಮಾರಸ್ವಾಮಿ ಸರ್ಕಾರದ ಅವಧಿಯಲ್ಲಿ ಕೊಟ್ಟಿದ್ದ ದುಡ್ಡು ಬಂದ್ರೆ ಸಾಕು ಅನ್ನೋ ಚಿಂತೆಯಲ್ಲಿ ನಾವುಗಳು ಇದ್ದಿವಿ ಎಂದು ಶಾಸಕ ಬಂಡೆಪ್ಪ ಖಾಶೆಂಪುರ್ ಅವರು ಬೇಸರ ವ್ಯಕ್ತಪಡಿಸಿದರು.