ಬಜೆಟ್ ಬಗ್ಗೆ ಬಸವರಾಜ ಬೊಮ್ಮಾಯಿ ಅವರ ಪ್ರತಿಕ್ರಿಯೆ
ಬೆಂಗಳೂರು ಮಾ 8: – ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಕೋವಿಡ್ ೧೯ ರ ಸಂಕಷ್ಟ ಸಂದರ್ಭದಲ್ಲಿಯೂ ಮಂಡಿಸಿದ ೨೦೨೧-೨೦೨೨ ನೇ ಸಾಲಿನ ಬಜೆಟ್ ಅತ್ಯುತ್ತಮವಾಗಿದ್ದು, ಯಾವುದೇ ಹೊಸ ತೆರಿಗೆಗಳನ್ನು ಜನಸಾಮಾನ್ಯರ ಮೇಲೆ ಹೊರಿಸದೇ ಪ್ರಗತಿಗೆ ಇಂಬು ಕೊಡುವ ಸಮತೋಲಿತ ಬಜೆಟ್ ನ್ನು ಕೊಟ್ಟಿದ್ದಾರೆ ಎಂದು ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಬಸವರಾಜ ಬೊಮ್ಮಾಯಿ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕೃಷಿ, ನೀರಾವರಿ, ಮಹಿಳೆ, ಸಮಾಜ ಕಲ್ಯಾಣ, ಹಿಂದುಳಿದ ವರ್ಗ, ಮೂಲಸೌಕರ್ಯ ಕ್ಷೇತ್ರಗಳಿಗೆ ಬಜೆಟ್ ನಲ್ಲಿ ಪ್ರಾಧಾನ್ಯತೆ ನೀಡಲಾಗಿದೆ. ಪ್ರಾದೇಶಿಕ ಅಸಮತೋಲನ ನಿವಾರಣೆಗೆ ನಂಜುಂಡಪ್ಪ ವರದಿಯ ಆಧಾರದ ಮೇಲೆ ಹಿಂದುಳಿದ ತಾಲ್ಲೂಕುಗಳ ಅಭಿವೃದ್ಧಿಗೆ ೩೦೦೦ ಕೋಟಿ ರೂಪಾಯಿಗಳನ್ನು ನೀಡಿರುವುದು ಗಮನಾರ್ಹ. ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ವಿಶೇಷ ಗಮನ ನೀಡಿರುವ ಮುಖ್ಯಮಂತ್ರಿಗಳು ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಗೆ 1500 ಕೋಟಿ ರೂಪಾಯಿ ಅನುದಾನವನ್ನು ಬಜೆಟನಲ್ಲಿ ನಿಗದಿಪಡಿಸಿದ್ದಾರೆ. ನೀರಾವರಿ ಕ್ಷೇತ್ರಕ್ಕೆ ವಿಶೇಷ ಒತ್ತು ನೀಡಲಾಗಿದೆ. ಮೂಲಭೂತ ಸೌಕರ್ಯಕ್ಕೆ ಹಣದ ಬೆಂಬಲ ನೀಡಲಾಗಿದೆ. ಕಳೆದ ವರ್ಷ ಮಂಡಿಸಲಾದ ಬಜೆಟ್ ನ್ನು ಶೇ. 93ರಷ್ಟು ಸಾಧನೆ ಮಾಡುವ ವಿಶ್ವಾಸ ಮುಖ್ಯಮಂತ್ರಿಗಳಿಗೆ ಇದೆ.
ಮುಖ್ಯಮಂತ್ರಿಗಳು ಯಾವುದೇ ಹಳೇ ಯೋಜನೆಗಳನ್ನು ಕೈಬಿಟ್ಟಿಲ್ಲ . ರಾಜ್ಯದ ಪ್ರತಿಯೊಂದು ಜಿಲ್ಲೆಗೆ ಅನುದಾನ ನೀಡಿರುವುದು ಈ ಬಜೆಟಿನ ವಿಶೇಷತೆ. ಗೃಹ ನಿರ್ಮಾಣಕ್ಕೆ ಗ್ರಾಮೀಣ ಅಭಿವೃದ್ಧಿಗೆ ಕುಡಿಯುವ ನೀರಿಗೆ ಮುಖ್ಯಮಂತ್ರಿಗಳು ಅತಿ ಹೆಚ್ಚು ಅನುದಾನವನ್ನು ನೀಡಿದ್ದಾರೆ. ಆಡಳಿತ ಸುಧಾರಣೆಗೆ ಕ್ರಮ ಕೈಗೊಳ್ಳುವುದರ ಜೊತೆಗೆ ಜನರಿಗೆ ಹತ್ತಿರವಾಗಿ ಜನಸ್ನೇಹಿಯಾದ ಕಾರ್ಯಕ್ರಮಗಳನ್ನು ಯಡಿಯೂರಪ್ಪ ನೀಡಿದ್ದಾರೆ. ಸಂಕಷ್ಟದಲ್ಲಿ ಸಹಿತ ಜನರಿಗೆ ಯಾವುದೇ ರೀತಿಯಾದಂತಹ ಜನಪದ ಅಭಿವೃದ್ಧಿಗೆ ಪೂರಕವಾದ, ದೂರದೃಷ್ಟಿಯುಳ್ಳ ಬಜೆಟ್ಟನ್ನು ಯಡಿಯೂರಪ್ಪ ಮಂಡಿಸಿದ್ದಾರೆ ಎಂದು ಬೊಮ್ಮಾಯಿ ಹೇಳಿದರು.
ಬಜೆಟ್ ನಲ್ಲಿ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಹೊಡ ಹೈಬ್ರೀಡ್ ಬೀಜ ನೀತಿ ನಿರೂಪಣೆಗೆ ಕ್ರಮ, ಸಾವಯವ ಕೃಷಿ ಉತ್ತೇಜನಕ್ಕೆ ಐದು ನೂರು ಕೋಟಿ ರೂಪಾಯಿಗಳ ವೆಚ್ಚದಲ್ಲಿ ಯೋಜನೆ ಜಾರಿ ಕೃಷಿ ವಿಶ್ವವಿದ್ಯಾಲಯಗಳಲ್ಲಿ ರೈತರ ಮಕ್ಕಳಿಗೆ ಇರುವ ಮೀಸಲಾತಿ ಪ್ರಮಾಣ ಶೇಕಡಾ 50 ಕ್ಕೆ ಹೆಚ್ಚಳ ,
ರೈತರ ಮೇಲಿನ ಹೊರೆಯನ್ನು ಕಡಿಮೆ ಮಾಡಲು ಮಾರುಕಟ್ಟೆ ಶುಲ್ಕವನ್ನು ಕಡಿಮೆಗೊಳಿಸಲಾಗಿದೆ. ಕೃಷಿ ಉತ್ಪನ್ನ ಸಂಗ್ರಹಣೆ ಹಾಗೂ ಸಂಸ್ಕರಣೆಗೆ ಆದ್ಯತೆ ನೀಡಲಾಗಿದೆ. ಒಟ್ಟಾರೆ ಕೃಷಿ ಆದಾಯವನ್ನು 2023 ರ ವೇಳೆಗೆ ದ್ವಿಗುಣಗೊಳಿಸುವ ಕನಸಿನೊಂದಿಗೆ ಯಡಿಯೂರಪ್ಪ ಹಲವಾರು ಯೋಜನೆಗಳನ್ನು ರೈತರಿಗೆ ನೀಡಿದ್ದಾರೆ.
ನೀರಾವರಿ ಯೋಜನೆಗಳಿಗೆ ವಿಶೇಷ ಆಸಕ್ತಿಯನ್ನು ಯಡಿಯೂರಪ್ಪ ತೋರಿಸಿದ್ದಾರೆ. ಕಳಸಾ ಬಂಡೂರಿ ಯೋಜನೆಗೆ 1677 ಕೋಟಿ ರೂಪಾಯಿಯನ್ನು ಮೀಸಲಿರಿಸಿದ್ದಾರೆ. ಕೃಷ್ಣ ಜಲಭಾಗ್ಯ ನಿಗಮಕ್ಕೆ 5600 ಕೋಟಿ ರೂಪಾಯಿ ಅನುದಾನ ಮೀಸಲಿರಿಸಲಾಗಿದೆ. ಸಮುದ್ರಕ್ಕೆ ಸೇರುವ ನೀರನ್ನು ಕೃಷಿಗೆ ಬಳಕೆ ಮಾಡಲು ಮಾಸ್ಟರ್ ಪ್ಲಾನ್ ರೂಪಿಸಲು ೫೦೦ ಕೋಟಿ ರೂಪಾಯಿಗಳನ್ನು ಮೀಸಲಿರಿಸಲಾಗಿದೆ. ಬೇಡ್ತಿ – ವರದಾ ನದಿ ಜೋಡಣೆ ಅಡಿ 22 ಟಿಎಂಸಿ ನೀರನ್ನು ಬಳಸಿಕೊಳ್ಳಲು ವಿವರವಾದ ಯೋಜನಾ ವರದಿ ರೂಪಿಸಲು ಸಿಎಂ ಕ್ರಮ ಕೈಗೊಂಡಿದ್ದಾರೆ. ಇದರಿಂದ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಿಗೆ ನೀರಾವರಿ ಅನುಕೂಲವಾಗಲಿದೆ. ಏತ ನೀರಾವರಿ ಯೋಜನೆಗಳ ವ್ಯವಸ್ಥಿತ ಕಾರ್ಯಾಚರಣೆ ಮತ್ತು ನಿರ್ವಹಣೆಗಾಗಿ ಕಾರ್ಯ ನೀತಿ ಜಾರಿ ಮಾಡುವುದಾಗಿ ತಿಳಿಸಿದ್ದಾರೆ. ಡ್ರಿಪ್ ಯೋಜನೆಯಡಿ ರಾಜ್ಯದ 58 ಅಣೆಕಟ್ಟೆಗಳ ಪುನಶ್ಚೇತನ ಮತ್ತು ಅಭಿವೃದ್ಧಿಗೆ 1500 ಕೋಟಿ ರೂಪಾಯಿಗಳ ಪ್ರಸ್ತಾವನೆ ಇರಿಸಿದ್ದಾರೆ. ಈ ಕ್ರಮಗಳು ಮುಖ್ಯಮಂತ್ರಿಗಳ ದೂರದೃಷ್ಟಿಗೆ ಹಿಡಿದ ಕೈಗನ್ನಡಿ ಎಂದು ಬೊಮ್ಮಾಯಿ ಅವರು ಹೇಳಿದರು.
ರಾಜ್ಯದಲ್ಲಿ ಸ್ವಂತ ಜಾಗದಲ್ಲಿ ೧೦೦ ಪೊಲೀಸ್ ಠಾಣೆಗಳ ಕಟ್ಟಡ ನಿರ್ಮಾಣಕ್ಕೆ ೨೦೦ ಕೋಟಿ, ಪೊಲೀಸ್ ಗೃಹ ನಿರ್ಮಾಣ ಯೋಜನೆಯಡಿ 10032 ವಸತಿಗೃಹ ನಿರ್ಮಾಣಕ್ಕೆ ೨೭೪೦ ಕೋಟಿ ನಿಗದಿ, ಶಿಗ್ಗಾವಿ ತಾಲೂಕಿನ ರಾಜ್ಯ ಮೀಸಲು ಪಡೆಯ ಹತ್ತನೇ ಬಟಾಲಿಯನ್ ಬಲಪಡಿಸಲು ಎಂಟು ಕೋಟಿ ರೂಪಾಯಿ ಅನುದಾನ, ಹಾವೇರಿ ಮತ್ತು ಕೊಡಗು ಜಿಲ್ಲೆಗಳಲ್ಲಿ ನೂತನ ಜಿಲ್ಲಾ ಪೊಲೀಸ್ ಸಂಕೀರ್ಣ ನಿರ್ಮಾಣಕ್ಕೆ ತಲಾ 8 ಕೋಟಿ ನಿಗದಿ, ಕರಾವಳಿ ಕಾವಲು ಪಡೆಯನ್ನು ಹಂತಹಂತವಾಗಿ ಬಲಪಡಿಸಲು 2 ಕೋಟಿ, 8 ಕಾರಾಗೃಹಗಳ ಸಾಮರ್ಥ್ಯ ಹೆಚ್ಚಿಸಲು 40 ಕೋಟಿ ಅನುದಾನ, ಕೈದಿಗಳನ್ನು ಕಾರಾಗ್ರಹದಿಂದ ಆನ್ಲೈನ್ ಮೂಲಕ ನ್ಯಾಯಾಲಯಕ್ಕೆ ಹಾಜರುಪಡಿಸಲು ವಿಡಿಯೋ ಕಾನ್ಫರೆನ್ಸಿಂಗ್ ಸೌಲಭ್ಯಕ್ಕಾಗಿ ೧೫ ಕೋಟಿ ಹಣವನ್ನು ಬಜೆಟ್ ನಲ್ಲಿ ನಿಗದಿ ಮಾಡಿರುವ ಮುಖ್ಯಮಂತ್ರಿಗಳು, ಹುಬ್ಬಳ್ಳಿ ಮತ್ತು ಬಳ್ಳಾರಿಯಲ್ಲಿ ವಿಧಿ ವಿಜ್ಞಾನ ಪ್ರಯೋಗಾಲಯದ ಪ್ರಾದೇಶಿಕ ಕೇಂದ್ರ ಸ್ಥಾಪನೆ ಮಾಡುವುದಾಗಿ ಘೋಷಿಸಿರುವುದನ್ನು ಸ್ವಾಗತಿಸುವುದಾಗಿ ಬಸವರಾಜ ಬೊಮ್ಮಾಯಿ ಹೇಳಿದರು.
ಕಿತ್ತೂರು ಕೋಟೆ ಅಭಿವೃದ್ಧಿ ಮತ್ತು ಆದುನಿಕರಣಕ್ಕೆ ೫೦ ಕೋಟಿ, ಅಯೋಧ್ಯೆಯಲ್ಲಿ ಕನ್ನಡಿಗರಿಗಾಗಿ ಯಾತ್ರಿ ನಿವಾಸ ನಿರ್ಮಾಣ, ಪ್ರವಾಸೋದ್ಯಮ ಕ್ಷೇತ್ರಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಲು ೫೦೦ ಕೋಟಿ ರೂಪಾಯಿ ಮಿಸಲಿರಿಸಿರುವುದು ನಿಜಕ್ಕೂ ಸ್ವಾಗತಾರ್ಹ ಎಂದರು.