ಪಾವಗಡದ ಎಲ್ಲ ವಾಹನಗಳಿಗೆ ರೋಗ ನಿರೋಧಕ ಔಷಧಿ ಸಿಂಪಡಣೆ ಹಾಗೂ ಚಾಲಕರಿಗೆ ದಿನಸಿ ಕಿಟ್‍ಗಳ ವಿತರಣೆ
ಇಂದು ಕೋವಿಡ್19 ಎರಡನೇ ಅಲೆ ನಿಯಂತ್ರಣ ಯೋಜನೆಯಡಿಯಲ್ಲಿ ಪಾವಗಡ ಹಾಗೂ ಸುತ್ತಮುತ್ತಲ 280 ಆಟೋಗಳಿಗೆ ಹಾಗೂ ಸುಮಾರು 30 ಲಗ್ಗೇಜ್ ಆಟೋಗಳಿಗೆ ರೋಗ ನಿರೋಧಕ ಔಷಧವನ್ನು ಸಿಂಪಡಿಸಿದುದಲ್ಲದೆ, ಇದೇ ಸಂದರ್ಭದಲ್ಲಿ ಚಾಲಕರಿಗೆ ಅಕ್ಕಿ ಹಾಗೂ ದಿನಸಿ ಚೀಲಗಳನ್ನು ಎಲ್ಲರಿಗೂ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಬಹುತೇಕ ಆಟೋ ಚಾಲಕರು ಆಗಮಿಸಿ ತಮ್ಮ ತಮ್ಮ ವಾಹನಗಳಿಗೆ ಸೋಂಕು ನಿವಾರಕ ಔಷಧಿಗಳನ್ನು ಸಿಂಪಡಿಸಿದ್ದಲ್ಲದೆ, ಮುಖಗವಸು, ಸ್ಯಾನಿಟೈಸರ್ ಇತ್ಯಾದಿಗಳನ್ನು ಪಡೆದುಕೊಂಡರು. ಕಾರ್ಯಕ್ರಮವನ್ನು ಪಾವಗಡದ ಹಿರಿಯ ನ್ಯಾಯಾಧೀಶರಾದ ಶ್ರೀ ಹನುಮಂತಪ್ಪ ರವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡುತ್ತಾ ಪೂಜ್ಯ ಸ್ವಾಮಿ ಜಪಾನಂದಜೀ ರವರ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ತಾವು ಕಳೆದ ಒಂದು ವರ್ಷದಿಂದಲೂ ಸಕ್ರಿಯವಾಗಿ ಭಾಗವಹಿಸುತ್ತಾ ಇರುವುದು ತಮ್ಮ ಪುಣ್ಯ ಎಂದು ಕಾರ್ಯ ಯೋಜನೆಗಳನ್ನು ಕೊಂಡಾಡಿದರು. ಶ್ರೀ ಹನುಮಂತರಾಯ, ಪ್ರಾಂಶುಪಾಲರು, ಶ್ರೀ ಸಣ್ಣ ನಾಗಪ್ಪ, ಹೆಸರಾಂತ ಕವಿಗಳು, ಪುರಸಭೆ ಸದಸ್ಯರಾದ ಶ್ರೀ ಜಿ.ಸುದೇಶ್ ಬಾಬು, ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಪ್ರತಿಯೊಬ್ಬರೂ ಇಂತಹ ಪ್ರಕ್ಷುಬ್ಧ ಸ್ಥಿತಿಯಲ್ಲಿ ಸ್ವಾಮೀಜಿಯವರು ನೀಡಿರುವ ಸಹಾಯವನ್ನು ಹೃನ್ಮಸ್ಸಿನಿಂದ ಸ್ವೀಕರಿಸಿದರು. ಈ ಕಾರ್ಯಕ್ರಮಕ್ಕೆ ಸಹಕಾರ ನೀಡಿರುವ ಇನ್ಫೋಸಿಸ್ ಫೌಂಡೇಷನ್ನಿನ ಅತ್ಯಮೂಲ್ಯ ಉಪಕಾರವನ್ನು ನೆರೆದ ಎಲ್ಲರೂ ಸ್ಮರಿಸಿದರು. ಕಾರ್ಯಕ್ರಮವು ಕೋವಿಡ್ ನಿಯಮಗಳನ್ನು ಅತ್ಯಂತ ಶಿಸ್ತಿನಿಂದ ಪಾಲಿಸಿದ್ದು ಕಂಡು ಬಂದಿತು.