IMG 20201124 175422

ರಸಗೊಬ್ಬರ ಸಹಾಯಧನ ಹೆಚ್ಚಿಸಿದ ಕೇಂದ್ರ ಸರ್ಕಾರ

National - ಕನ್ನಡ
  • ರಸಗೊಬ್ಬರ ಸಹಾಯಧನ ಹೆಚ್ಚಿಸುವ ರೈತರ ಪರವಾದ ಐತಿಹಾಸಿಕ ನಿರ್ಧಾರ ಕೈಗೊಂಡ ಸರ್ಕಾರ
  • ಡಿಎಪಿ ರಸಗೊಬ್ಬರದ ಮೇಲಿನ ಸಹಾಯಧನ ಶೇ.140ರಷ್ಟು ಹೆಚ್ಚಳ
  • ಪ್ರತಿ ಚೀಲ ಡಿಎಪಿಗೆ 500 ರೂ. ಬದಲಿಗೆ 1200 ರೂ. ಸಹಾಯಧನ ಪಡೆಯಲಿರುವ ರೈತರು
  • ಪ್ರತಿ ಚೀಲ ಡಿಎಪಿಯನ್ನು 2400 ರೂ. ಬದಲಾಗಿ 1200 ರೂ.ಗೆ ಪಡೆಯಲಿರುವ ರೈತರು

*ಹೆಚ್ಚುವರಿಯಾಗಿ 14,775 ಕೋಟಿ ರೂ.ಗಳನ್ನು ಈ ಸಹಾಯಧನಕ್ಕಾಗಿ ವೆಚ್ಚ ಮಾಡಲಿರುವ ಸರ್ಕಾರ

  • ಅಂತಾರಾಷ್ಟ್ರೀಯ ಬೆಲೆ ಏರಿಕೆಯ ನಡುವೆಯೂ ಹಳೆ ದರದಲ್ಲೇ ರೈತರು ರಸಗೊಬ್ಬರ ಪಡೆಯುತ್ತಾರೆ: ಪ್ರಧಾನಮಂತ್ರಿ
  • ರೈತರ ಕಲ್ಯಾಣ ಸರ್ಕಾರದ ಪ್ರಯತ್ನದಲ್ಲಿ ಪ್ರಮುಖವಾಗಿದೆ: ಪ್ರಧಾನಮಂತ್ರಿ

ರಸಗೊಬ್ಬರ ದರ ಕುರಿತಂತೆ ಉನ್ನತ ಮಟ್ಟದ ಸಭೆಯ ಅಧ್ಯಕ್ಷತೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ವಹಿಸಿದ್ದರು. ರಸಗೊಬ್ಬರ ದರದ ವಿಷಯಕ್ಕೆ ಸಂಬಂಧಿಸಿದಂತೆ ಸವಿವರವಾದ ಪ್ರಾತ್ಯಕ್ಷಿಕೆಯನ್ನು ಅವರಿಗೆ ನೀಡಲಾಯಿತು.

ಫಾಸ್ಪರಿಕ್ ಆಮ್ಲ, ಅಮೋನಿಯಾ ಇತ್ಯಾದಿಗಳ ದರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಳವಾಗಿರುವುದರ ಪರಿಣಾಮವಾಗಿ ರಸಗೊಬ್ಬರಗಳ ದರ ಹೆಚ್ಚಳ ಕಂಡಿದೆ ಎಂಬುದರ ಬಗ್ಗೆ ಚರ್ಚಿಸಲಾಯಿತು. ಅಂತರಾಷ್ಟ್ರೀಯ ದರ ಏರಿಕೆಯ ನಡುವೆಯೂ ರೈತರು ಹಿಂದಿನ ದರದಲ್ಲೇ ರಸಗೊಬ್ಬರ ಪಡೆಯಬೇಕು ಎಂದು ಪ್ರಧಾನಮಂತ್ರಿ ಪ್ರತಿಪಾದಿಸಿದರು.

ಡಿಎಪಿ ರಸಗೊಬ್ಬರದ ಮೇಲಿನ ಸಬ್ಸಿಡಿಯನ್ನು ಪ್ರತಿ ಚೀಲಕ್ಕೆ 500 ರೂ.ಗಳಿಂದ 1200 ರೂ.ಗೆ ಹೆಚ್ಚಿಸುವ ಐತಿಹಾಸಿಕ ನಿರ್ಧಾರವನ್ನು ಕೈಗೊಳ್ಳಲಾಯಿತು. ಇದು ಪ್ರತಿಶತ 140ರಷ್ಟು ಹೆಚ್ಚಳವಾಗಿದೆ. ಡಿಎಪಿಯ ದರ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೆಚ್ಚಳವಾಗಿದ್ದಾಗ್ಯೂ, ಅದನ್ನು ಹಳೆಯ ದರದಲ್ಲಿ ಅಂದರೆ 1200ರೂ.ಗೆ. ಮಾರಾಟ ಮಾಡಲು ನಿರ್ಧರಿಸಲಾಯಿತು ಮತ್ತು ಕೇಂದ್ರ ಸರ್ಕಾರ ಈ ದರ ಏರಿಕೆಯ ಸಂಪೂರ್ಣ ಹೊರೆಯನ್ನು ಹೊರಲು ನಿರ್ಧರಿಸಿತು. ಹಿಂದೆಂದೂ ಇಷ್ಟು ದೊಡ್ಡ ಪ್ರಮಾಣದಲ್ಲಿ ಪ್ರತಿ ಚೀಲದ ಸಬ್ಸಿಡಿಯನ್ನು ಹೆಚ್ಚಿಸಲಾಗಿರಲಿಲ್ಲ.

IMG 20200907 213759

ಕಳೆದ ವರ್ಷ, ಡಿಎಪಿಯ ವಾಸ್ತವ ದರ ಪ್ರತಿ ಚೀಲಕ್ಕೆ 1700 ಇತ್ತು. ಇದರಲ್ಲಿ ಕೇಂದ್ರ ಸರ್ಕಾರ 500 ರೂ. ಸಹಾಯಧನ ನೀಡುತ್ತಿತ್ತು. ಹೀಗಾಗಿ ಕಂಪನಿಗಳು ರಸಗೊಬ್ಬರವನ್ನು ಪ್ರತಿ ಚೀಲಕ್ಕೆ 1200 ರೂ.ನಂತೆ ಮಾರಾಟ ಮಾಡುತ್ತಿದ್ದವು.

ಇತ್ತೀಚೆಗೆ, ಡಿಎಪಿಯಲ್ಲಿ ಬಳಸಲಾಗುವ ಫಾಸ್ಫರಿಕ್ ಆಮ್ಲ, ಅಮೋನಿಯಾ ಇತ್ಯಾದಿಗಳ ದರ ಅಂತಾರಾಷ್ಟ್ರೀಯವಾಗಿ ಶೇ.60ರಿಂದ 70ರಷ್ಟು ಹೆಚ್ಚಳವಾಯಿತು. ಹೀಗಾಗಿ ಡಿಎಪಿಯ ವಾಸ್ತವ ದರ ಪ್ರತಿ ಚೀಲಕ್ಕೆ ಈಗ 2400 ರೂ. ಆಗಿದ್ದು, ರಸಗೊಬ್ಬರ ಕಂಪನಿಗಳನ್ನು ಅದನ್ನು ಸರ್ಕಾರದ 500 ರೂ. ಸಹಾಯಧನ ಕಡಿತದ ಬಳಿಕ 1900 ರೂ.ಗೆ ಮಾರಾಟ ಮಾಡಬೇಕಾಗಿತ್ತು. ಆದರೆ ಇಂದಿನ ನಿರ್ಧಾರದಿಂದಾಗಿ ರೈತರು ಡಿಎಪಿಯನ್ನು ಪ್ರತಿ ಚೀಲಕ್ಕೆ 1200 ರೂ.ಗೆ ಪಡೆಯಲಿದ್ದಾರೆ.

ಈ ಸರ್ಕಾರ ರೈತರ ಕಲ್ಯಾಣಕ್ಕೆ ಬದ್ಧವಾಗಿದೆ ಮತ್ತು ರೈತರು ಬೆಲೆ ಏರಿಕೆಯ ಭೀತಿಯನ್ನು ಎದುರಿಸಬೇಕಾಗಿಲ್ಲ ಎಂದು ಖಚಿತಪಡಿಸಿಕೊಳ್ಳಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಪ್ರಧಾನಮಂತ್ರಿಯವರು ಉಲ್ಲೇಖಿಸಿದರು.

ಕೇಂದ್ರ ಸರ್ಕಾರ 80 ಸಾವಿರ ಕೋಟಿ ರೂ.ಗಳನ್ನು ಪ್ರತಿ ವರ್ಷ ರಾಸಾಯನಿಕ ಗೊಬ್ಬರಗಳ ಮೇಲಿನ ಸಹಾಯಧನಕ್ಕೆ ವೆಚ್ಚ ಮಾಡುತ್ತದೆ. ಡಿಎಪಿಯ ಸಹಾಯಧನ ಹೆಚ್ಚಳದೊಂದಿಗೆ ಭಾರತ ಸರ್ಕಾರವು ಹೆಚ್ಚುವರಿಯಾಗಿ 14,775 ಕೋಟಿ ರೂ.ಗಳನ್ನು ಈ ಮುಂಗಾರು ಹಂಗಾಮಿನಲ್ಲಿ ಸಬ್ಸಿಡಿ ರೂಪದಲ್ಲಿ ವೆಚ್ಚ ಮಾಡುತ್ತದೆ.

ನೇರವಾಗಿ ರೈತರ ಖಾತೆಗಳಿಗೆ ಪಿ.ಎಂ. ಕಿಸಾನ್ ಅಡಿಯಲ್ಲಿ ಅಕ್ಷಯ ತೃತೀಯದ ದಿನ 20,667 ಕೋಟಿ ರೂ. ವರ್ಗಾವಣೆ ಮಾಡಿದ ಬಳಿಕ ಇದು ರೈತರ ಹಿತದೃಷ್ಟಿಯಿಂದ ಕೈಗೊಂಡಿರುವ ಎರಡನೇ ಪ್ರಮುಖ ನಿರ್ಧಾರವಾಗಿದೆ