IMG 20210527 224131

ಕೋವಿಡ್-19ರಿಂದ ಮೃತಪಟ್ಟ ಪತ್ರಕರ್ತರಿಗೆ ಆರ್ಥಿಕ ನೆರವು…!

National - ಕನ್ನಡ

,* ಕೋವಿಡ್-19ರಿಂದ ಮೃತಪಟ್ಟ 67 ಪತ್ರಕರ್ತರ ಕುಟುಂಬಗಳಿಗೆ ಆರ್ಥಿಕ ನೆರವು ನೀಡಲು ಅನುಮೋದನೆ ನೀಡಿದ ಕೇಂದ್ರ ಸರ್ಕಾರ

 * ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಪತ್ರಕರ್ತರ ಕಲ್ಯಾಣ ಯೋಜನೆ ಅಡಿ ತಲಾ 5 ಲಕ್ಷ ರೂ. ಪರಿಹಾರ ಪಡೆಯಲಿರುವ ಕುಟುಂಬಗಳು

* ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡಲು ಸಾಪ್ತಾಹಿಕ ಆಧಾರದಲ್ಲಿ ಜೆ.ಡಬ್ಲ್ಯು.ಎಸ್. ಸಭೆ ನಡೆಸಲು ಸಮಿತಿ ನಿರ್ಧಾರ

ನವದೆಹಲಿ ಮೇ 27: – ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಶ್ರೀ ಪ್ರಕಾಶ್ ಜಾವಡೇಕರ್ ಅವರ ಮಾರ್ಗದರ್ಶನದಲ್ಲಿ ಸ್ವಯಂ ಪ್ರೇರಿತ ನಿರ್ಧಾರ ಕೈಗೊಂಡಿರುವ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯ ಮತ್ತು ಭಾರತ ಸರ್ಕಾರದ ವಾರ್ತಾ ಶಾಖೆ, 2020 ಮತ್ತು 2021ರಲ್ಲಿ ಕೋವಿಡ್ -19 ಸಾಂಕ್ರಾಮಿಕದಿಂದ ಮೃತಪಟ್ಟ ಪತ್ರಕರ್ತರ ವಿವರಗಳನ್ನು ಸಂಗ್ರಹಿಸಿ ಕ್ರೋಡೀಕರಿಸಿದ್ದು, ಪತ್ರಕರ್ತರ ಕಲ್ಯಾಣ ಯೋಜನೆ ಅಡಿಯಲ್ಲಿ ಅವರುಗಳ ಕುಟುಂಬದವರಿಗೆ ಆರ್ಥಿಕ ನೆರವು ಒದಗಿಸುವ ವಿಶೇಷ ಕಾರ್ಯಕ್ರಮ ಆರಂಭಿಸಿದೆ.

ಕೋವಿಡ್ -19ರಿಂದ ಮೃತಪಟ್ಟ 26 ಪತ್ರಕರ್ತರ ಕುಟುಂಬಗಳಿಗೆ ತಲಾ 5 ಲಕ್ಷ ರೂ. ಆರ್ಥಿಕ ಪರಿಹಾರ ನೀಡಲು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಶ್ರೀ ಅಮಿತ್ ಖರೆ ಅವರ ಅಧ್ಯಕ್ಷತೆಯ ಪತ್ರಕರ್ತರ ಕಲ್ಯಾಣ ಯೋಜನೆ ಸಮಿತಿಯ ಪ್ರಸ್ತಾಪಕ್ಕೆ ಇಂದು, ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಆರ್ಥಿಕ ವರ್ಷ 2020-21ರಲ್ಲಿ ಕೇಂದ್ರ ಸರ್ಕಾರ 41 ಪತ್ರಕರ್ತರ ಕುಟುಂಬಗಳಿಗೆ ಅಂತಹ ಪರಿಹಾರ ನೀಡಿದ್ದು, ಕೋವಿಡ್ ನಿಂದ ಮೃತಪಟ್ಟ ಒಟ್ಟು 67 ಕುಟುಂಬಗಳಿಗೆ ಪರಿಹಾರ ನೀಡಿದಂತಾಗಿದೆ. ಕೋವಿಡ್ ನಿಂದ ಮೃತಪಟ್ಟ ಪತ್ರಕರ್ತರ ಕುಟುಂಬಕ್ಕೆ ಸಮಿತಿ ತೀವ್ರ ಸಂತಾಪ ಸೂಚಿಸಿದೆ.

ಭಾರತ ಸರ್ಕಾರದ ವಾರ್ತಾ ಶಾಖೆ, ಕೋವಿಡ್ 19ರಿಂದ ಮೃತಪಟ್ಟ ಪತ್ರಕರ್ತರ ಕುಟುಂಬಗಳನ್ನು ಸಂಪರ್ಕಿಸಿ, ಈ ಯೋಜನೆಯ ಬಗ್ಗೆ ತಿಳಿಸಿ, ಕ್ಲೇಮ್ ಗಾಗಿ ಅರ್ಜಿ ಸಲ್ಲಿಸಲು ಮಾರ್ಗದರ್ಶನ ಮಾಡಿದೆ.

ಜೆ.ಡಬ್ಲ್ಯು.ಎಸ್. ಅಡಿ ಆರ್ಥಿಕ ನೆರವು ಕೋರಿ ಬರುವ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡಲು ಜೆ.ಡಬ್ಲ್ಯು.ಎಸ್. ಸಭೆಯನ್ನು ವಾರಕ್ಕೊಮ್ಮೆ ನಡೆಸಲೂ ಸಮಿತಿ ನಿರ್ಧರಿಸಿದೆ.

ಕೋವಿಡ್ -19 ಅಲ್ಲದೆ ಬೇರೆ ಕಾರಣದಿಂದ ಮೃತಪಟ್ಟ ಪತ್ರಕರ್ತರ ಕುಟುಂಬದಿಂದ ಬಂದಿದ್ದ 11 ಅರ್ಜಿಗಳನ್ನೂ ಇಂದು ನಡೆದ ಸಭೆ ಪರಿಗಣಿಸಿತು. ಜೆ.ಡಬ್ಲ್ಯು.ಎಸ್. ಸಭೆಯಲ್ಲಿ ಪಿಐಬಿಯ ಪ್ರಧಾನ ಮಹಾ ನಿರ್ದೇಶಕ ಶ್ರೀ ಜೈದೀಪ್ ಭಟ್ನಾಗರ್, ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಜಂಟಿ ಕಾರ್ಯದರ್ಶಿ ಶ್ರೀ ವಿಕ್ರಮ್ ಸಹಾಯ್, ಸಮಿತಿಯ ಪತ್ರಕರ್ತರ ಪ್ರತಿನಿಧಿಗಳಾದ ಸಂತೋಷ್ ಠಾಕೂರ್, ಶ್ರೀ ಅಮಿತ್ ಕುಮಾರ್, ಶ್ರೀ ಉಮೇಶ್ವರ್ ಕುಮಾರ್, ಶ್ರೀಮತಿ ಸರ್ಜನ ಶರ್ಮಾ ಸಭೆಯಲ್ಲಿ ಭಾಗಿಯಾಗಿದ್ದರು.

ಪತ್ರಕರ್ತರ ಕಲ್ಯಾಣ ಯೋಜನೆ ಅಡಿಯಲ್ಲಿ ಪತ್ರಕರ್ತರ ಕುಟುಂಬದವರು ಪಿಐಬಿ ಮೂಲಕ ಈ ವೆಬ್ ಸೈಟ್ ಲಿಂಕ್ ನಲ್ಲಿ ನೆರವಿಗೆ ಅರ್ಜಿ ಸಲ್ಲಿಸಬಹುದು. https://accreditation.pib.gov.in/jws/default.aspx

***