2020- 21 ನೇ ಸಾಲಿನಲ್ಲಿ ರಾಜ್ಯಕ್ಕೆ ಬರಬೇಕಾಗಿರುವ 11 ಸಾವಿರ ಕೋಟಿ ರೂಪಾಯಿ ಪರಿಹಾರವನ್ನು ಶೀಘ್ರದಲ್ಲಿ ಬಿಡುಗಡೆ ಮಾಡಬೇಕು
ರಾಜ್ಯ ಸರ್ಕಾರಕ್ಕೆ ಕೇಂದ್ರ ಸರ್ಕಾರದಿಂದ ಬರಬೇಕಾಗಿರುವ ಜಿ ಎಸ್ ಟಿ ಪರಿಹಾರ ನಷ್ಟದ ಬಾಕಿ ಮೊತ್ತ 11 ಸಾವಿರ ಕೋಟಿ ರೂಪಾಯಿ ಹಣವನ್ನು ಕೂಡಲೇ ಬಿಡುಗಡೆ ಮಾಡುವಂತೆ ಜಿ ಎಸ್ ಟಿ ಮಂಡಳಿಯ ರಾಜ್ಯ ಪ್ರತಿನಿಧಿ ಹಾಗೂ ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವರಾದ ಬಸವರಾಜ್ ಬೊಮ್ಮಾಯಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಮನವಿ ಮಾಡಿದರು.
ಶುಕ್ರವಾರ ನಡೆದ ಜಿಎಸ್ಟಿ ಮಂಡಳಿಯ ೪೩ ನೇ ಸಭೆಯಲ್ಲಿ ಬೆಂಗಳೂರಿನಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗವಹಿಸಿ ಅವರು ಮಾತನಾಡಿದರು.
2021 – 22 ನೇ ಸಾಲಿನ ಜಿಎಸ್ಟಿ ಪರಿಹಾರದ ನಷ್ಟದ ಹಣವನ್ನು ಕೇಂದ್ರ ಸರ್ಕಾರವೇ ಸಾಲಪಡೆದು ರಾಜ್ಯಕ್ಕೆ ನೀಡಬೇಕು. 2020- 21 ನೇ ಸಾಲಿನಲ್ಲಿ ರಾಜ್ಯಕ್ಕೆ ಬರಬೇಕಾಗಿರುವ 11 ಸಾವಿರ ಕೋಟಿ ರೂಪಾಯಿ ಪರಿಹಾರವನ್ನು ಶೀಘ್ರದಲ್ಲಿ ಬಿಡುಗಡೆ ಮಾಡಬೇಕು. ಜಿಎಸ್ಟಿ ಪರಿಹಾರ ಸೆಸ್ ನಲ್ಲಿಯೂ ಬಾಕಿ ಉಳಿದಿರುವ ಹಣವನ್ನು ರಾಜ್ಯಕ್ಕೆ ಬಿಡುಗಡೆ ಮಾಡಬೇಕು. ಜಿಎಸ್ಟಿ ನಷ್ಟ ಪರಿಹಾರ ಒದಗಿಸುವ ಸೌಲಭ್ಯ 2021- 2022ಕ್ಕೆ ಮುಕ್ತಾಯಗೊಳ್ಳಲಿದೆ. ಆದರೆ 2021- 2022 ರ ನಂತರವೂ ಜಿ ಎಸ್ ಟಿ ನಷ್ಟ ಪರಿಹಾರ ಸೌಲಭ್ಯವನ್ನು ಮುಂದುವರಿಸುವ ಕುರಿತು ಚರ್ಚೆ ನಡೆಯಬೇಕು ಎಂದು ಅವರು ಸಭೆಯಲ್ಲಿ ಪ್ರಸ್ತಾಪಿಸಿದರು.