Mango 01

ಜಿ.ಕೆ.ವಿ.ಕೆ.ಯ “ಅಗ್ರೀವಾರ್ ಘಟಕ”ದಿಂದ ರೈತರಿಂದ ನೇರ ಮಾವಿನ ಹಣ್ಣು ಮಾರಾಟ

Genaral STATE


ಬೆಂಗಳೂರು, ಮೇ 5 ( ಕರ್ನಾಟಕ ವಾರ್ತೆ ) : ಕೋವಿಡ್-19 ಸಮಯದಲ್ಲಿ ರೈತರಿಗೆ ಅನುಕೂಲವಾಗಲು ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು, ಜಿಕೆವಿಕೆ ಮುಖ್ಯದ್ವಾರದಲ್ಲಿರುವ ಕೃಷಿ ತಂತ್ರಜ್ಞಾನ ಮಾಹಿತಿಕೇಂದ್ರದಲ್ಲಿ “ಯು.ಎ.ಎಸ್.(ಬಿ.)ಅಗ್ರೀವಾರ್‍ಘಟಕ”ವು ಕಾರ್ಯನಿರ್ವಹಿಸುತ್ತಿದೆ. ಘಟಕವು ರೈತರಿಗೆ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲು ಸಂಪರ್ಕ ಸೇತುವೆಯಾಗಿ, ರೈತರ ಕೃಷಿ ಸಮಸ್ಯೆಗಳಿಗೆ ಪರಿಹಾರ ಒದಗಿಸುವುದರ ಜೊತೆಗೆ ಬೆಳೆ ಉತ್ಪಾದನಾ ತಾಂತ್ರಿಕತೆಗಳು, ಕೀಟ/ರೋಗ ಮುಂತಾದತಾಂತ್ರಿಕ ಮಾಹಿತಿಯನ್ನು ಸಹ ಒದಗಿಸುತ್ತಿದೆ.

ದಿನಾಂಕ: 05.05.2020 ಮಂಗಳವಾರದಂದು ಜಿ.ಕೆ.ವಿ.ಕೆ.ಯ ಆವರಣದಲ್ಲಿ ರಾಮನಗರ ತಾಲ್ಲೂಕಿನ ಬೆಳಗುಂಬ ಗ್ರಾಮದ ರೈತರಾದ ಬಿ.ಸಿ.ವಾಸುರವರು ಸುಮಾರು 12 ಕ್ವಿಂಟಾಲ್ ಮಾವಿನ ಹಣ್ಣನ್ನು ಜಿ.ಕೆ.ವಿ.ಕೆ. ಮತ್ತು ಹೆಬ್ಬಾಳದಲ್ಲಿ ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಿದರು. ಈ ಕಾರ್ಯಕ್ರಮವನ್ನು ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಡಾ.ಎಸ್.ರಾಜೇಂದ್ರಪ್ರಸಾದ್‍ರವರು ಉದ್ಘಾಟಿಸಿ, ರೈತರಿಗೆ ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು ಮಧ್ಯವರ್ತಿಗಳಿಲ್ಲದೆ ನೇರವಾಗಿ ಗ್ರಾಹಕರಿಗೆ ಈಗಾಗಲೇ ಆನಾನಸ್, ಬೆಣ್ಣೆಹಣ್ಣು, ಕಲ್ಲಂಗಡಿ, ದ್ರಾಕ್ಷಿ, ಟೊಮ್ಯಾಟೋ, ದೊಣ್ಣೆ ಮೆಣಸಿನಕಾಯಿ ಮುಂತಾದ ಹಣ್ಣು ಮತ್ತು ತರಕಾರಿಗಳನ್ನು ಮಾರಾಟ ಮಾಡಲು ವ್ಯವಸ್ಥೆ ಕಲ್ಪಿಸಿದೆ. ಬೆಂಗಳೂರಿನಲ್ಲಿರುವ “ಅಗ್ರೀ-ವಾರ್‍ಘಟಕ”ವಲ್ಲದೆ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಕಾರ್ಯವ್ಯಾಪ್ತಿಗೆ ಬರುವ ಹತ್ತು ಜಿಲ್ಲೆಗಳಲ್ಲಿ ರಚಿಸಿರುವ “ಜಿಲ್ಲಾ ವಿಜ್ಞಾನಿಗಳ ಸಮನ್ವಯ ಸಮಿತಿ”ಯು ಸಹ ರೈತರಿಗೆ ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆಯ ವ್ಯವಸ್ಥೆಯನ್ನು ಕಲ್ಪಿಸಲು ಸಹಕರಿಸುತ್ತಿದೆ.

ರೈತರು ಹಣ್ಣು ಮತ್ತು ತರಕಾರಿಗಳನ್ನು ವೈಜ್ಞಾನಿಕವಾಗಿ ಶೇಖರಣೆ ಮಾಡುವುದರ ಜೊತೆಗೆ ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ಗ್ರಾಹಕರಿಗೆ ಸಕಾಲದಲ್ಲಿ ಒದಗಿಸಿದರೆ ಉತ್ತಮ ಬೆಲೆ ಮತ್ತು ಗ್ರಾಹಕರ ನಂಬಿಕೆಯನ್ನು ಸಹ ಉಳಿಸಿಕೊಳ್ಳಬಹುದು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ವಿಸ್ತರಣಾ ನಿರ್ದೇಶಕ ಡಾ. ಎಂ. ಬೈರೇಗೌಡರವರು ಈಗಾಗಲೇ ರಾಜ್ಯದಲ್ಲಿ ಉತ್ತಮವಾದ ಮಳೆಯಾಗುತ್ತಿರುವುದರಿಂದ ರೈತರು ಬೇಸಾಯ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಕೃಷಿ ವಿಜ್ಞಾನ ಕೇಂದ್ರಗಳು ಮತ್ತು ವಿಸ್ತರಣಾ ಶಿಕ್ಷಣ ಘಟಕಗಳು ಮುಂಚೂಣಿ ಪ್ರಾತ್ಯಕ್ಷಿಕೆಗಳು, ಕ್ಷೇತ್ರ ಪ್ರಯೋಗಗಳು ಮುಂತಾದ ವಿಸ್ತಾರಣಾ ಚಟುವಟಿಕೆಗಳನ್ನು ಕೈಗೊಳ್ಳುತ್ತಿವೆ. ಕೃಷಿ ವಿಶ್ವವಿದ್ಯಾನಿಲಯವು ರೈತರಿಗೆ ರಾಗಿ, ತೊಗರಿ, ಅವರೆ, ಅಲಸಂದೆ, ಸೂರ್ಯಕಾಂತಿ ಇನ್ನಿತರೆ ಬೆಳೆಗಳ ಬಿತ್ತನೆ ಬೀಜಗಳನ್ನು ಮಾರಾಟ ಮಾಡುತ್ತಿದೆ. ರಾಮನಗರ ತಾಲ್ಲೂಕಿನ ಬೆಳಗುಂಬ ಗ್ರಾಮದ ರೈತರಾದ ಬಿ.ಸಿ.ವಾಸು ರವರು ಮಾಗಡಿ ತಾಲ್ಲೂಕಿನ ಚಂದುರಾಯನಹಳ್ಳಿಯಲ್ಲಿರುವ ಕೃಷಿ ವಿಜ್ಞಾನ ಕೇಂದ್ರವು ರೈತರಿಗೆ ಒಂದು ವರದಾನ. ಇಲ್ಲಿಯ ವಿಜ್ಞಾನಿಗಳು ನನ್ನ ತೋಟಕ್ಕೆ ಕಾಲಕಾಲಕ್ಕೆ ಭೇಟಿ ನೀಡಿ, ಲಘು ಪೋಷಕಾಂಶಗಳ ಮಿಶ್ರಣ, ಕಟಾವು ಮತ್ತು ವೈಜ್ಞಾನಿಕ ರೀತಿಯಲ್ಲಿ ಸಂಸ್ಕರಣೆ ಮತ್ತು ಆನ್‍ಲೈನ್ ಮಾರಾಟದಬಗ್ಗೆ ಮಾಹಿತಿ ನೀಡಿದುದ್ದರಿಂದ ಉತ್ತಮ ಗುಣಮಟ್ಟದ ಇಳುವರಿ ಮತ್ತು ದರವನ್ನು ಪಡೆಯಲು ಸಾಧ್ಯವಾಯಿತು ಎಂದು ಅಭಿಪ್ರಾಯಪಟ್ಟರು. ಆಸಕ್ತರು, ಮಾವಿನ ಹಣ್ಣಿಗಾಗಿ ರೈತರು ಮೋಬೈಲ್ ಸಂಖ್ಯೆ 9964457181 ಗೆ ಸಂಪರ್ಕಿಸಬಹುದು.