e16b99c2 3038 4fc7 aaaf a97c3ef21ee7

ಬಾರ್ ಮಾಲೀಕನೇ ಕಳ್ಳನಾದ….!

DISTRICT NEWS ಚಿಕ್ಕಬಳ್ಳಾಪುರ

ಚಿಕ್ಕಬಳ್ಳಾಪುರ ಮೇ ೫  ನಗರ ಹೊರವಲಯದ ಗೋಲ್ಡನ್ ಬಾರಿನಲ್ಲಿ ನಡೆದಿದ್ದ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಬಾರ್ ಮಾಲೀಕ ಹಾಗೂ ಅತನ ನಾಲ್ವರು ಸಹಚರರನ್ನು ಪೊಲೀಸರು ಬಂಧಿಸಿದ್ದಾರೆ.

ಏಪ್ರಿಲ್ 30ರ ರಾತ್ರಿ ನಗರ ಹೊರವಲಯದ ಗೋಲ್ಡನ್ ಬಾರಿನ ಸಿಸಿಟಿವಿ ಒಡೆದು ಹಾಕಿ, ಬಾರಿನ ಹಿಂಭಾಗದ ಗೋಡೆಗೆ ಕಿಂಡಿ ಕೊರೆದು ಮದ್ಯ ಕಳವು ಮಾಡಲಾಗಿತ್ತು. ಈ ಸಂಬಂಧ ಮೇ 1ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರಿಗೆ ಬಾರ್ ಮಾಲೀಕ, ನಗರಸಭೆ ಸದಸ್ಯ ದೀಪಕ್ ಹಾಗೂ ಆತನ ಸಹಚರರೇ ಕಳ್ಳತನದ ರೂವಾರಿಗಳು ಎಂಬುವುದು ಬೆಳಕಿಗೆ ಬಂದಿದೆ.

ಲಾಕ್‍ಡೌನ್ ಸಮಯದಲ್ಲಿ ಮೂಲ ಬೆಲೆಗಿಂತ ಹತ್ತು ಪಟ್ಟು ಹೆಚ್ಚಳಕ್ಕೆ ಅಕ್ರಮವಾಗಿ ಮದ್ಯ ಮಾರಾಟ ಮಾಡಿ ಹಣ ಗಳಿಸಲು ಮಾಲೀಕ, ಆತನ ಸಹಚರರು ಸಂಚು ರೂಪಿಸಿದ್ದರು. ಇದರಂತೆ ಬಾರ್ ಗೋಡೆಗೆ ಕಿಂಡಿ ಕೊರೆದು ಮದ್ಯ ಕಳವು ಮಾಡಿದ್ದರು. ತದನಂತರ ತಮ್ಮ ಬಾರ್ ಕಳ್ಳತನ ಆಗಿದೆ ಎಂದು ಪೊಲೀಸರಿಗೆ ದೂರು ನೀಡಿದ್ದರು.

ಪೊಲೀಸರು ಹಾಗೂ ಅಬಕಾರಿ ಇಲಾಖಾಧಿಕಾರಿಗಳಿಗೆ ಮಂಕು ಬೂದಿ ಎರಚಲು ಹೋದ ಮಾಲೀಕ ಈಗ ಜೈಲು ಸೇರುವಂತಾಗಿದೆ. ಲಾಕ್‍ಡೌನ್ ವೇಳೆ ಜಿಲ್ಲೆಯ 4 ಕಡೆ ಸಹ ಮದ್ಯದಂಗಡಿಗಳ ಕಳವು ಪ್ರಕರಣಗಳು ನಡೆದಿದೆ. ಈ ಪ್ರಕರಣ ಬಾರ್ ಮಾಲೀಕರ ಮೇಲೆಯೇ ಅನುಮಾನ ಪಡುವಂತೆ ಮಾಡಿದೆ. ಪ್ರಕರಣಕ್ಕೆ ಸಂಬಧಿಸಿದಂತೆ ಬಂಧಿತರಿಂದ ಏಳು ಕ್ರೇಟ್ ಮದ್ಯ, ನಗದು ಸೇರಿದಂತೆ ಕೃತ್ಯಕ್ಕೆ ಬಳಸಿದ್ದ ಆಟೋ ಮತ್ತು  ಬೈಕ್ ವಶಕ್ಕೆ ಪಡೆಯಲಾಗಿದೆ.