Siddaramaiah 1 800x445 1

ವಿಧಾನಸಭೆಯನ್ನು ವಿಸರ್ಜಿಸಿ ,ಚುನಾವಣೆ ಎದುರಿಸಿ….! 

STATE POLATICAL

ಬೆಂಗಳೂರು:- ವಿಧಾನಸಭೆಯನ್ನು ವಿಸರ್ಜಿಸಿ ,ಚುನಾವಣೆ ಎದುರಿಸಿ  ಎಂದು ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಸಿದ್ದರಾಮಯ್ಯ …..

ಚುನಾವಣಾ ಪ್ರಣಾಳಿಕೆಯಲ್ಲಿ ಹೇಳದೆಇರುವ ಭೂ ಸುಧಾರಣೆ ಮತ್ತು ಎಪಿಎಂಸಿ ಕಾಯ್ದೆ ತಿದ್ದುಪಡಿ ಜಾರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರಕ್ಕೆ ಯಾವ ನೈತಿಕತೆಯೂ ಇಲ್ಲ. ಈ ತಿದ್ದುಪಡಿಗಳಿಂದ ರೈತರ ಕಲ್ಯಾಣವಾಗುತ್ತದೆ ಎಂಬ ಭರವಸೆ ಇದ್ದರೆ ಬಿ.ಎಸ್.ಯಡಿಯೂರಪ್ಪನವರು ಮೊದಲು ವಿಧಾನಸಭೆಯನ್ನು ವಿಸರ್ಜಿಸಿ ಇದೇ ವಿಷಯವನ್ನು ರಾಜ್ಯದ ಜನತೆಯ ಮುಂದಿಟ್ಟು ಚುನಾವಣೆಯನ್ನು ಎದುರಿಸಬೇಕು.

ಕೊರೊನಾ ಸಂಕಟದಿಂದಾಗಿ ಕಷ್ಟ-ನಷ್ಟಕ್ಕೀಡಾಗಿರುವ ರೈತರು ಬೀದಿಗೆ ಬರಲಾರರು ಎಂಬ ದುಷ್ಟ ಆಲೋಚನೆಯಿಂದಲೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಷಾಮೀಲಾಗಿ ಈ ರೈತ ವಿರೋಧಿ ಮಸೂದೆಗಳನ್ನು ಜಾರಿಗೆ ತರಲು ತರಾತುರಿಯಲ್ಲಿ ಹೊರಟಿದೆ. ಆದರೆ ಇಡೀ ದೇಶದ ರೈತರು ತಮ್ಮ ಪ್ರಾಣವನ್ನು ಲೆಕ್ಕಿಸದೆ ಬೀದಿಗೆ ಇಳಿದು ಭಾರತೀಯ ಜನತಾ ಪಕ್ಷದ ಹುನ್ನಾರವನ್ನು ವಿಫಲಗೊಳಿಸಿದ್ದಾರೆ..
.ಬಿ.ಎಸ್.ಯಡಿಯೂರಪ್ಪನವರು ಮಾತುಮಾತಿಗೆ ತಾನು ರೈತ ನಾಯಕನೆಂದು ಕರೆದುಕೊಳ್ಳುತ್ತಾರೆ. ಸಂಘ ಪರಿವಾರದ ಕೇಸರಿಶಾಲು ಕಿತ್ತುಹಾಕಿ ಹಸಿರು ಶಾಲು ಹೊದ್ದುಕೊಂಡು ಮುಖ್ಯಮಂತ್ರಿಯ ಪ್ರಮಾಣ ವಚನ ಸ್ವೀಕರಿಸಿದರು. ಮುಖ್ಯಮಂತ್ರಿಯಾಗುತ್ತಿದ್ದಂತೆಯೇ ಹಸಿರು ಶಾಲಿನ ಒಳಗಿದ್ದ ರೈತ ವಿರೋಧಿ ಕೇಸರಿ ಶಾಲು ಹೊರಗೆ ಬಂದಿದೆ.
ಯಡಿಯೂರಪ್ಪನವರು ಮೊದಲ ಬಾರಿ ಮುಖ್ಯಮಂತ್ರಿಯಾದಾಗ ಹಾವೇರಿಯಲ್ಲಿ ರಸಗೊಬ್ಬರ ಕೇಳಿದ ರೈತರನ್ನು ಗುಂಡಿಟ್ಟು ಸಾಯಿಸಿದರು, ಈ ಬಾರಿ ಮುಖ್ಯಮಂತ್ರಿಯಾದಾಗ ಇಡೀ ರೈತ ಸಮುದಾಯವನ್ನೇ ಸಾಯಿಸಲು ಹೊರಟಿದ್ದಾರೆ. ರೈತರ ಕಣ್ಣೀರ ಶಾಪ ಈ ಪಕ್ಷ ಮತ್ತು ಸರ್ಕಾರಕ್ಕೆ ತಟ್ಟದೆ ಇರದು.
ಭಾರತೀಯ ಜನತಾ ಪಕ್ಷ ಹುಟ್ಟಿನಿಂದಲೇ ರೈತ ವಿರೋಧಿ. ಅದು ಬಂಡವಾಳಿಗರು,ಉದ್ಯಮಿಗಳು ಮತ್ತು ವರ್ತಕರ ಪಕ್ಷ. ಈ ಪಕ್ಷದ ಡಿಎನ್ ಎನಲ್ಲಿಯೇ ರೈತ ವಿರೋಧಿ ವಿಷ ಇದೆ. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಕಾವೇರಿ-ಕೃಷ್ಣ ನದಿನೀರು ಹಂಚಿಕೆಯಲ್ಲಿ ದ್ರೋಹ ಎಸಗಿತು, ಮಹದಾಯಿ-ಮೇಕೆದಾಟು ಯೋಜನೆಗಳಲ್ಲಿ ಮೋಸ ಮಾಡಿದೆ, ಬೀಜ-ರಸಗೊಬ್ಬರ ಪೂರೈಕೆ ಮಾಡದೆ ರೈತರನ್ನು ಗೋಳುಹೊಯ್ಕೊಳ್ಳುತ್ತಾ ಇದೆ. ಬಿಜೆಪಿಗೆ ಯಾಕೆ ರೈತರ ಮೇಲೆ ಇಷ್ಟೊಂದು ದ್ವೇಷ? ಕರ್ನಾಟಕದ ಬಗ್ಗೆ ಯಾಕೆ ಸೇಡಿನ ಭಾವನೆ? ಎನ್ನುವ ಪ್ರಶ್ನೆಗೆ ರಾಜ್ಯದ ಜನತೆಗೆ ಈಗ ಉತ್ತರ ಸಿಕ್ಕಿದೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಈಗ ರೈತ ಸಮುದಾಯದ ಎದುರು ನೀವು ಬತ್ತಲಾಗಿದ್ದಾರೆ, ಅವರು ಹೊದ್ದುಕೊಂಡಿರುವ ಯಾವ ಹಸಿರು ಶಾಲು ಕೂಡಾ ಅವರ ಮಾನ ಮುಚ್ಚಲಾರದು.. ಯಡಿಯೂರಪ್ಪನವರು ನಿಜವಾಗಿಯೂ ರೈತರ ಪರವಾಗಿದ್ದರೆ ಮೊದಲು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ರೈತರ ಜೊತೆ ನಿಂತುಕೊಳ್ಳಬೇಕು.
ದೇಶವನ್ನು ಕಾರ್ಪೋರೇಟ್ ಕುಳಗಳು ಮತ್ತು ರಿಯಲ್ ಎಸ್ಟೇಟ್ ಧಣಿಗಳಿಗೆ ಮಾರಾಟ ಮಾಡಲು ಹೊರಟಿರುವ ಮೋದಿಯವರ ತಾಳಕ್ಕೆ ನೀವು ಕುಣಿಯತೊಡಗಿದರೆ ವರ್ತಮಾನ ಮಾತ್ರವಲ್ಲ ಇತಿಹಾಸ ಕೂಡಾ ಬಿ.ಎಸ್.ಯಡಿಯೂರಪ್ಪನವರನ್ನು ಕ್ಷಮಿಸಲಾರದು. ಈಗಲೂ ಕಾಲ ಮಿಂಚಿಲ್ಲ, ಯಡಿಯೂರಪ್ಪನವರು ಆತ್ಮಸಾಕ್ಷಿಗೆ ಕರೆಗೊಟ್ಟು ರೈತರ ಬೇಡಿಕೆ ಒಪ್ಪಿಕೊಳ್ಳಬೇಕು ಎಂದಿದ್ದಾರೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ