ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್ ೧೯ ಪ್ರಯೋಗಾಲಯವನ್ನು ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ ಸುಧಾಕರ್ ಉದ್ಘಾಟಿಸಿದರು.
ಚಿಕ್ಕಬಳ್ಳಾಪುರ : ರಾಜ್ಯದಲ್ಲಿ ತಿಂಗಳಾಂತ್ಯದೊಳಗೆ 60 ಕೋವಿಡ್ ಪರೀಕ್ಷಾ ಪ್ರಯೋಗಾಲಯ ಸ್ಥಾಪಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿರುವ ರಾಜ್ಯ ಸರ್ಕಾರ ಮತ್ತೊಂದು ಮಹತ್ವದ ಘಟ್ಟ ತಲುಪಿದೆ. ಚಿಕ್ಕಬಳ್ಳಾಪುರದಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು ಜಿಲ್ಲೆಯ ಪ್ರಥಮ ಕೋವಿಡ್ ಟೆಸ್ಟಿಂಗ್ ಲ್ಯಾಬ್ ಉದ್ಘಾಟಿಸಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿರುವ ಕೋವಿಡ್ ಪರೀಕ್ಷಾ ಪ್ರಯೋಗಾಲಯಗಳ ಸಂಖ್ಯೆ 40ಕ್ಕೆ ಏರಿದಂತಾಗಿದೆ.
ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿ ಈ ಪ್ರಯೋಗಾಲಯ ಉದ್ಘಾಟಿಸಿ ಮಾತನಾಡಿದ ವೈದ್ಯಕೀಯ ಶಿಕ್ಷಣ ಸಚಿವರು, ಜಿಲ್ಲೆಯಲ್ಲಿ ಇದುವರೆಗೆ ಪ್ರಯೋಗಾಲಯ ಇಲ್ಲದಿದ್ದರೂ ಅತೀ ಹೆಚ್ಚು ಟೆಸ್ಟ್‌ಗಳನ್ನು ನಡೆಸುವ ಜಿಲ್ಲೆಗಳಲ್ಲಿ ಚಿಕ್ಕಬಳ್ಳಾಪುರವೂ ಒಂದಾಗಿತ್ತು. ಜಿಲ್ಲೆಯಲ್ಲಿ ಸೋಂಕಿತರ ಹಾಗೂ ಶಂಕಿತರ ಪರೀಕ್ಷಾ ಮಾದರಿಗಳನ್ನು ತ್ವರಿತವಾಗಿ ಬೆಂಗಳೂರಿಗೆ ರವಾನಿಸಿ ಪರೀಕ್ಷೆ ನಡೆಸಲಾಗುತ್ತಿತ್ತು. ಈಗ ಜಿಲ್ಲೆಯಲ್ಲೇ ಪ್ರಯೋಗಾಲಯ ಸ್ಥಾಪಿಸಿರುವುದರಿಂದ ಕೋವಿಡ್ ವಿರುದ್ಧದ ಈ ಸಮರದಲ್ಲಿ ನಮಗೆ ಹೆಚ್ಚು ಬಲ ಬಂದಂತಾಗಿದೆ. ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ಕೋವಿಡ್ ಪರೀಕ್ಷೆಗಳನ್ನು ಇನ್ನು ಮುಂದೆ ಇಲ್ಲಿಯೇ ನಡೆಸಬಹುದಾಗಿದ್ದು, ಪ್ರಾಥಮಿಕ ಹಂತದಲ್ಲೇ ಸೋಂಕು ಪತ್ತೆ ಹಚ್ಚಿ ತ್ವರಿತ ಚಿಕಿತ್ಸೆ ನಡೆಸಲು ಅನುಕೂಲವಾಗಲಿದೆ ಎಂದು ಹೇಳಿದರು.
ರಾಜ್ಯ ಸರ್ಕಾರ 4ಟಿ (ಟ್ರ್ಯಾಕ್, ಟ್ರೇಸ್, ಟೆಸ್ಟ್ ಮತ್ತು ಟ್ರೀಟ್) ಸಿದ್ಧಾಂತವನ್ನು ಅನುಸರಿಸುತ್ತಿದ್ದು, ಕರ್ನಾಟಕ ಕೋವಿಡ್ ನಿಯಂತ್ರಿಸುವಲ್ಲಿ ಬಹಳಷ್ಟು ಮಟ್ಟಿಗೆ ಯಶಸ್ವಿಯಾಗಿದೆ. ಆರಂಭದಲ್ಲಿ 2ನೇ ಸ್ಥಾನದಲ್ಲಿದ್ದ ಕರ್ನಾಟಕ ಇಂದು 13ನೇ ಸ್ಥಾನದಲ್ಲಿದೆ. 4ಟಿ ಮೂಲಕ ಪರಿಣಾಮಕಾರಿ ಕಾರ್ಯತಂತ್ರ ರೂಪಿಸಿ ವೈರಸ್ ಹರಡದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಆರಂಭದಲ್ಲಿ ಕೇವಲ 2 ಕೋವಿಡ್ ಪರೀಕ್ಷಾ ಪ್ರಯೋಗಾಲಯ ಹೊಂದಿದ್ದ ರಾಜ್ಯದಲ್ಲಿ ಈಗ 40 ಕೋವಿಡ್ ಟೆಸ್ಟಿಂಗ್ ಲ್ಯಾಬ್‌ಗಳಿವೆ. ಮೇ ಅಂತ್ಯದೊಳಗೆ 60 ಲ್ಯಾಬ್ ಸ್ಥಾಪಿಸುವ ಗುರಿಹೊಂದಿದ್ದು ಪ್ರತಿದಿನ 10,000ಕ್ಕೂ ಅಧಿಕ ಟೆಸ್ಟ್ ನಡೆಸುವ ಉದ್ದೇಶ ಹೊಂದಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.