ಪರಿಶಿಷ್ಟ ಜಾತಿ/ಪಂಗಡದವರ ಅಭಿವೃದ್ಧಿಗೆ 27699 ಕೋಟಿ ರೂ.ಮೀಸಲು: – ಗೋವಿಂದ ಎಂ.ಕಾರಜೋಳ
ತುಮಕೂರು(ಕ.ವಾ)ಜೂ.5: 2020-21ನೇ ಸಾಲಿನಲ್ಲಿ ರಾಜ್ಯದಲ್ಲಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯದವರ ಅಭಿವೃದ್ಧಿಗಾಗಿ 27699 ಕೋಟಿ ರೂ.ಗಳನ್ನು ಮೀಸಲಿಟಿದ್ದು, ವಿವಿಧ ಯೋಜನೆಗಳನ್ನು ರೂಪಿಸಲಾಗಿದೆ ಎಂದು ಉಪಮುಖ್ಯಮಂತ್ರಿಗಳ ಹಾಗೂ ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಮತ್ತು ಸಮಾಜ ಕಲ್ಯಾಣ ಸಚಿವರಾದ ಗೋವಿಂದ ಎಂ.ಕಾರಜೋಳ ಅವರು ತಿಳಿಸಿದರು.
ಜಿಲ್ಲೆಯ ಪಾವಗಡ ತಾಲೂಕಿನಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಭವನ ಮತ್ತು ಸರ್ಕಾರಿ ಮೆಟ್ರಿಕ್ ನಂತರದ ಬಾಲಕ/ಬಾಲಕಿಯರ ವಿದ್ಯಾರ್ಥಿನಿಲಯಗಳು ಮತ್ತು ವಸತಿ ಶಾಲೆಗಳ ನೂತನ ಕಟ್ಟಡಗಳ ಹಾಗೂ ಪದವಿ ಪೂರ್ವ ಕಾಲೇಜಿನ ಕಟ್ಟಡಗಳ ಉದ್ಘಾಟನೆ ಮತ್ತು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗೂ ಜಿಲ್ಲಾಮಟ್ಟದ ವನಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಪಾವಗಡದಲ್ಲಿ ಸುಮಾರು 88 ಕೋಟಿ ರೂ.ವೆಚ್ಚದಲ್ಲಿ ವಿದ್ಯಾರ್ಥಿನಿಲಯಗಳು, ಪಿಯು ಕಾಲೇಜು ಹಾಗೂ ಸೆಕೆಂಡರಿ ಸ್ಕೂಲ್ ಕಟ್ಟಡಗಳ ಉದ್ಘಾಟನೆಯಾಗಿದೆ. ಇದರಿಂದ ಸುಮಾರು ಎಸ್‍ಸಿ-ಎಸ್‍ಟಿ ಜನಾಂಗದ 1600 ಮಕ್ಕಳಿಗೆ ಓದಲು ವ್ಯವಸ್ಥೆಯಾಗುತ್ತದೆ. ನಮ್ಮ ಸರ್ಕಾರದ ಗುರಿ ಶಿಕ್ಷಣಕ್ಕೆ ಪ್ರಥಮ ಆದ್ಯತೆ ನೀಡುವುದು. ಯಾವುದೇ ವರ್ಗದ ಬಡ ಮಕ್ಕಳಿಗೆ ಓದಲು ಸರ್ಕಾರ ಹೆಚ್ಚಿನ ಅನುದಾನವನ್ನು ಬಜೆಟ್‍ನಲ್ಲಿ ನೀಡಿದ್ದಾರೆ ಎಂದರು.
ಕೊರೊನಾದಿಂದ ಲಾಕ್‍ಡೌನ್ ಆದ ಮೇಲೆ ಪ್ರಗತಿ ಕೆಲಸಗಳು ಪ್ರಾರಂಭವಾಗಿಲ್ಲ. ಇನ್ನು ಮುಂದೆ ನಿಧಾನವಾಗಿ ಪ್ರಾರಂಭವಾಗುತ್ತವೆ. ಒಟ್ಟು 2019-20ನೇ ಸಾಲಿನಲ್ಲಿ 27559 ಕೋಟಿ ಅನುದಾನವನ್ನು ಎಸ್‍ಸಿ-ಎಸ್‍ಟಿ ಜನಾಂಗಕ್ಕೆ ವಿಶೇಷ ಹಂಚಿಕೆ ಮಾಡಲಾಗಿತ್ತು. 25388 ಕೋಟಿಗಳಷ್ಟು ಖರ್ಚು ಮಾಡಿ ಶೇ.92ರಷ್ಟು ಪ್ರಗತಿ ಸಾಧಿಸಿದ್ದೇವೆ. ಮಾರ್ಚ್ ತಿಂಗಳಲ್ಲಿ ಲಾಕ್‍ಡೌನ್ ಆಗಿದ್ದರಿಂದ ಕಚೇರಿಗಳು ಸ್ಥಗಿತಗೊಂಡ ಕಾರಣ ಹೆಚ್ಚಿನ ಪ್ರಗತಿಯನ್ನು ಸಾಧಿಸಲು ಸಾಧ್ಯವಾಗಲಿಲ್ಲ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಸುಮಾರು 912 ಕೋಟಿ ವೆಚ್ಚದಲ್ಲಿ 10.86 ಲಕ್ಷ ಎಸ್‍ಸಿ, 4.80 ಎಸ್‍ಟಿ ಪಂಗಡದ ಮಹಿಳೆಯರು ಮತ್ತು ಮಕ್ಕಳಿಗೆ 15 ಲಕ್ಷದ 66 ಸಾವಿರ ಜನರಿಗೆ ಪೌಷ್ಠಿಕ ಆಹಾರ ಒದಗಿಸಿದ್ದೇವೆ ಎಂದರು.
ಪ್ರೌಢ ಶಿಕ್ಷಣ ಇಲಾಖೆಯಿಂದ 939 ಕೋಟಿ ವೆಚ್ಚದಲ್ಲಿ ಪರಿಶಿಷ್ಟ ಜಾತಿ, ಪಂಗಡದ ವಿದ್ಯಾರ್ಥಿಗಳಿಗೆ ಸಮವಸ್ತ್ರ, ಸೈಕಲ್ ಹಾಗೂ ಮಧ್ಯಾಹ್ನದ ಬಿಸಿಯೂಟ ಇತ್ಯಾದಿ ಸೇರಿದಂತೆ ಒಟ್ಟು 23 ಲಕ್ಷ ಮಕ್ಕಳಿಗೆ 2019-20ನೇ ಸಾಲಿನಲ್ಲಿ ಸೌಲಭ್ಯ ಒದಗಿಸಿಕೊಟ್ಟಿದ್ದೇವೆ. ಪಂಚಾಯತ್ ರಾಜ್ ಇಲಾಖೆಯಲ್ಲಿ 2231 ಕೋಟಿ ರೂ. ವೆಚ್ಚದಲ್ಲಿ ಸ್ವಚ್ಛ ಭಾರತದ ಅಭಿಯಾನ ಯೋಜನೆ, ಶುದ್ಧ ಕುಡಿಯುವ ನೀರು ಹಾಗೂ ನರೇಗಾ ಕಾರ್ಯಕ್ರಮ ಒಟ್ಟು 6.11 ಲಕ್ಷ ಫಲಾನುಭವಿಗಳಿಗೆ ಸೌಲಭ್ಯ ಒದಗಿಸಲಾಗಿದೆ ಎಂದು ಅವರು ತಿಳಿಸಿದರು.
ಸಮಾಜ ಕಲ್ಯಾಣ ಇಲಾಖೆಯಲ್ಲಿ ಈಗಾಗಲೇ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿನಿಲಯ, ವಸತಿ ಶಾಲೆಗಳನ್ನು ನಿರ್ವಹಣೆ ಮಾಡುವುದಕ್ಕೆ ಮತ್ತು ವಿದ್ಯಾರ್ಥಿವೇತನ ಕೊಡುವುದಕ್ಕೆ 4414 ಕೋಟಿ ರೂ.ಗಳನ್ನು ಸರ್ಕಾರ ಪರಿಶಿಷ್ಟ ಜಾತಿ ಹಾಗೂ 1093 ಕೋಟಿ ರೂ.ಗಳನ್ನು ಪರಿಶಿಷ್ಟ ಪಂಗಡದವರಿಗೆ 5.84 ಲಕ್ಷ ಪರಿಶಿಷ್ಟ ಪಂಗಡದವರು ಹಾಗೂ 16.15 ಲಕ್ಷ ಪರಿಶಿಷ್ಟ ಜಾತಿಯವರಿಗೆ ಈ ಸೌಲಭ್ಯ ಒದಗಿಸಲಾಗಿದೆ ಎಂದರು.
ವಸತಿ ಯೋಜನೆಯಡಿ 1219 ಕೋಟಿ ರೂ.ಗಳಲ್ಲಿ 29,618 ಮನೆಗಳನ್ನು ಪರಿಶಿಷ್ಟ ಜಾತಿಯವರಿಗೆ ಹಾಗೂ 13,093 ಮನೆಗಳನ್ನು ಪರಿಶಿಷ್ಟ ಪಂಗಡದವರಿಗೆ ಒಟ್ಟು 47,711 ಫಲಾನುಭವಿಗೆ ಈ ಸೌಲಭ್ಯ ಒದಗಿಸಲಾಗಿದೆ. ಲೋಕೊಪಯೋಗಿ, ಜಲಸಂಪನ್ಮೂಲ ಇಲಾಖೆ, ಸಣ್ಣ ನೀರಾವರಿ ಇಲಾಖೆ, ನಗರಾಭಿವೃದ್ಧಿ ಇಲಾಖೆ ವತಿಯಿಂದ ಮೂಲಭೂತ ಸೌಕರ್ಯಗಳಿಗಾಗಿ 4669 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದ್ದೇವೆ. 2020-21ನೇ ಸಾಲಿನಲ್ಲಿ ಪರಿಶಿಷ್ಟ ಜಾತಿಯಯವರಿಗೆ 19,432 ಹಾಗೂ ಪರಿಶಿಷ್ಟ ಪಂಗಡದ ಅಭಿವೃದ್ಧಿಗಾಗಿ 8267 ಒಟ್ಟು 27,699 ಕೋಟಿ ರೂ.ಗಳನ್ನು ಒದಗಿಸಲಾಗಿದೆ ಎಂದು ಅವರು ತಿಳಿಸಿದರು.
ಮುಖ್ಯಮಂತ್ರಿಗಳೊಂದಿಗೆ ಸಭೆ ಮಾಡಿ 36 ಇಲಾಖೆಗಳಿಗೆ ಅನುದಾನ ಹಂಚಿಕೆ ಮಾಡಲು ಅನುಮೋದನೆ ನೀಡಿ ಕ್ರಿಯಾ ಯೋಜನೆ ರೂಪಿಸಲು ಅನುಮತಿ ನೀಡಲಾಗಿದೆ. 27,699 ಕೋಟಿ ರೂ.ಗಳನ್ನು ಈ ವರ್ಷದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದವರ ಅಭಿವೃದ್ಧಿಗಾಗಿ ಸಮರ್ಪಕವಾಗಿ ಬಳಸಿಕೊಳ್ಳುವಂತಹ ಯೋಜನೆಗಳನ್ನು ರೂಪಿಸಲಾಗಿದೆ. ಅಲ್ಲದೇ ಈ ಸಮುದಾಯವರಿಗೆ ವೈಯಕ್ತಿಕ ಅಭಿವೃದ್ಧಿ ಕೆಲಸಗಳಿಗೆ ಮಹತ್ವ ನೀಡಲಾಗುವುದು ಎಂದರಲ್ಲದೇ ಲೋಕೋಪಯೋಗಿ ಇಲಾಖೆ ವತಿಯಿಂದ ಗ್ರಾಮಗಳಲ್ಲಿ 18 ಸಾವಿರ ಕಿಲೋ ಮೀಟರ್ ರಸ್ತೆಗಳನ್ನು ಮೇಲ್ದರ್ಜೆಗೇರಿಸಿ ಜಿಲ್ಲಾ ಮುಖ್ಯ ರಸ್ತೆ ಎಂ.ಡಿ.ಆರ್ ಪರಿವರ್ತನೆ ಮಾಡಿ 10 ಸಾವಿರ ಕಿಲೋ ಮೀಟರ್ ಎಂ.ಡಿ. ಆರ್ ರಸ್ತೆಗಳನ್ನು ಎಸ್‍ಎಸ್‍ಹೆಚ್ ಪರಿವರ್ತಿಸಿ ಒಟ್ಟು 28 ಸಾವಿರ ಕಿಲೋಮೀಟರ್ ರಸ್ತೆಯನ್ನು ಮೇಲ್ದರ್ಜೆಗೇರಿಸಲಾಗುವುದು ಎಂದು ಸಚಿವರು ತಿಳಿಸಿದರು.
ಟ್ರೈನಿ ಇಂಜಿನಿಯರ್‍ಗಳ ನೇಮಕ:-
ಲೋಕೋಪಯೋಗಿ ಇಲಾಖೆಯಲ್ಲಿ ಹಿರಿಯ ಅಧಿಕಾರಿಗಳಿಗೆ ಪದೋನ್ನತಿ ನೀಡಿದ ಹಿನ್ನೆಲೆಯಲ್ಲಿ ಕೆಳಹಂತದ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸಲು ಇಂಜಿನಿಯರ್ ಹಾಗೂ ಸಹಾಯಕ ಇಂಜಿನಿಯರ್‍ಗಳ ಕೊರತೆಯುಂಟಾಗಿದ್ದು, 1025 ಹುದ್ದೆಗಳು ಖಾಲಿಯಿವೆ. ಈಗಾಗಿ ಕೆಲಸ ನಿರ್ವಹಿಸಲು ಸಿವಿಲ್ ಇಂಜಿನಿಯರ್/ ಡಿಪ್ಲೋಮಾ ಓದಿದ 1000 ಟ್ರೈನಿ ಇಂಜಿನಿಯರ್‍ಗಳನ್ನು ನೇಮಿಸಿಕೊಂಡು ಒಂದು ವರ್ಷದ ತರಬೇತಿ ನೀಡಲಾಗುವುದು. ಈ ಮೂಲಕ ಅವರಿಗೆ ತರಬೇತಿ ನೀಡಿದಂತಾಗುತ್ತದೆ ಹಾಗೂ ಇಲಾಖೆಯಲ್ಲಿ ಕೆಲಸ ಆಗುತ್ತದೆ ಇದಕ್ಕೆ ಮುಖ್ಯಮಂತ್ರಿಗಳು ಅನುಮೋದನೆ ನೀಡಿದ್ದಾರೆ ಎಂದರು.
ಕೊಡಮಡಗುವಿನಲ್ಲಿ ವಿಶ್ವ ಪರಿಸರ ದಿನಾಚರಣೆ:-
ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಪಾವಗಡ ತಾಲೂಕಿನ ಕೊಡಮಡುಗು ಗ್ರಾಮದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಆಯೋಜಿಸಿದ್ದ ಜಿಲ್ಲಾಮಟ್ಟದ ವನಮಹೋತ್ಸವವನ್ನು ಕಾನೂನು ಮತ್ತು ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಸಣ್ಣ ನೀರಾವರಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಜೆ.ಸಿ ಮಾಧುಸ್ವಾಮಿ ಅವರು ಉದ್ಘಾಟಿಸಿದರು.
ಅನಂತರ ಮಾತನಾಡಿದ ಅವರು, ಜಿಲ್ಲೆಯಲ್ಲಿ ಅರಣ್ಯೀಕರಣ ಕಾರ್ಯಕ್ರಮಗಳು ಹೆಚ್ಚಾದರೆ ಮಳೆ ಮುಖಾಂತರ ನೀರು ದೊರೆತರೆ ರೈತರ ಬವಣೆ ತಪ್ಪಿಸಬಹುದು. ವಾತಾವರಣದಲ್ಲಿ ತಂಪಾದರೆ ಅನೇಕ ಅನುಕೂಲಗಳು ನಮಗೆ ಸಿಗುತ್ತದೆ. ಪ್ರಸಕ್ತ ವರ್ಷದಲ್ಲಿ ಸಾಮಾಜಿಕ ಅರಣ್ಯ ಇಲಾಖೆಯಡಿ 10,59,710 ಗಿಡ, ಟೆರಿಟೋರಿಯಲ್ ಅರಣ್ಯದವರು 13,97,000 ಗಿಡ ರೈತರಿಗೆ ನೀಡುವರು ಅಲ್ಲದೇ 17,32,000 ಗಿಡಗಳನ್ನು ನೆಡುವರು ಒಟ್ಟಾರೆಯಾಗಿ ಜಿಲ್ಲೆಯಲ್ಲಿ 42 ಲಕ್ಷ ಗಿಡಗಳನ್ನು ನೆಡುವ ಗುರಿ ಹೊಂದಲಾಗಿದೆ ಎಂದರು.
ಇಲಾಖೆಗಳ ವಿಲೀನದಿಂದ ನೌಕರರಿಗೆ ಯಾವುದೇ ತೊಂದರೆಯಿಲ್ಲ:-
ಇಲಾಖೆಗಳನ್ನು ವಿಲೀನಗೊಳಿಸಬೇಕೆಂದು ಚಿಂತಿಸಲಾಗಿದೆ. ಕೆಲವು ಇಲಾಖೆಗಳಲ್ಲಿ ನೌಕರರು ಇದ್ದರೆ ಕೆಲಸವಿಲ್ಲ, ಕೆಲಸವಿರುವ ಕಡೆ ನೌಕರರಿಲ್ಲ ಆದರೂ ಸರ್ಕಾರ ಸುಮಾರು 85 ಸಾವಿರ ಕೋಟಿ ರೂ.ಗಳನ್ನು ವೇತನ/ವ್ಯವಸ್ಥೆ ನಿರ್ವಹಣೆಗೆ ಖರ್ಚು ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಸೋಷಿಯಲ್ ಸೆಕ್ಯುರಿಟಿಯಲ್ಲಿ ಅಷ್ಟೆ ಹಣ ನಾವು ನೀಡುತ್ತಿದ್ದೇವೆ. ತಾಲೂಕು ಮಟ್ಟದಲ್ಲಿರುವ ಸಣ್ಣ-ಪುಟ್ಟ ಇಲಾಖೆಗಳನ್ನು ಜಿಲ್ಲಾ/ರಾಜ್ಯ ಮಟ್ಟದಲ್ಲಿ ಮಾತ್ರ ತರಬೇಕೆ ಸಣ್ಣಪುಟ್ಟ 2-3 ಇಲಾಖೆಗಳಿಗೆ ವಿಲೀನಗೊಳಿಸಿ ಒಬ್ಬ ಅಧಿಕಾರಿಯನ್ನು ನೇಮಕ ಮಾಡಲು ಚಿಂತಿಸಬೇಕೆ ಎಂಬುದರ ಬಗ್ಗೆ ಆಲೋಚಿಸಲಾಗುತ್ತಿದೆ.
ಆಡಳಿತಾತ್ಮಕ ವ್ಯವಸ್ಥೆಯನ್ನು ಸುಧಾರಣೆ ಮಾಡಲು ಕಾಲಕಾಲಕ್ಕೆ ಸಮಿತಿಗಳನ್ನು ನೇಮಕ ಮಾಡಿ, ಅವುಗಳ ಶಿಫಾರಸ್ಸಿನಂತೆ ಕೆಲವೊಂದು ಇದು 3ನೇ ಸಮಿತಿ, ನಾವು 3ನೇ ಸಮಿತಿ, ನಾವು ಯಾವ ಇಲಾಖೆಯಲ್ಲಿ ಕಡಿಮೆ ಮಾಡಬೇಕು. ಎಲ್ಲಿ ಹೆಚ್ಚಿಗೆ ಮಾಡಬೇಕು, ಬೇರೆಕಡೆಗೆ ಸ್ಥಳಾಂತರ ಮಾಡಬೇಕೇ ಎಂಬುದರ ಬಗ್ಗೆ ಸಮಿತಿ ಶಿಫಾರಸ್ಸು ಮಾಡಲಾಗಿದೆ. ಇಲಾಖೆಗಳ ವಿಲೀನವು ಸಚಿವ ಸಂಪುಟದ ಪಾತ್ರದಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ ಎಂದು ಸಚಿವರು ಕೃಷಿ ಇಲಾಖೆಯಲ್ಲಿರುವ ಜಿಲ್ಲೆಯಲ್ಲಿ ಜಂಟಿ ನಿರ್ದೇಶಕರು ಇರುವ ಕುರಿತು ಉದಾಹರಣೆಯನ್ನು ನೀಡಿದರು.
ಕಾರ್ಯಕ್ರಮದಲ್ಲಿ ಸಂಸದರಾದ ನಾರಾಯಣಸ್ವಾಮಿ, ವಿಧಾನ ಪರಿಷತ್ ಶಾಸಕ ಡಾ|| ವೈ.ಎ ನಾರಾಯಣಸ್ವಾಮಿ, ಮಾಜಿ ಸಚಿವ ಹಾಗೂ ಶಾಸಕ ವೆಂಕಟರಮಣಪ್ಪ, ಮಾಜಿ ಶಾಸಕ ಸೋಮ ನಾಯಕ್, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ, ಜಿಲ್ಲಾ ಪಂಚಾಯತ್ ಸದಸ್ಯರಾದ ಹೆಚ್.ವಿ ವೆಂಕಟೇಶ್, ಚನ್ನಮಲ್ಲಯ್ಯ, ತಾಲೂಕು ಪಂಚಾಯಿತಿ ಅಧ್ಯಕ್ಷ ಸೊಗಡು ವೆಂಕಟೇಶ್, ಜಿಲ್ಲಾಧಿಕಾರಿ ಡಾ|| ಕೆ.ರಾಕೇಶ್‍ಕುಮಾರ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶುಭಾ ಕಲ್ಯಾಣ್, ಪೊಲೀಸ್ ವರಿಷ್ಠಾಧಿಕಾರಿ ಡಾ|| ಕೋನವಂಶಿಕೃಷ್ಣ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಹೆಚ್.ಎಸ್ ಪ್ರೇಮನಾಥ್ ಸೇರಿದಂತೆ ಮತ್ತಿತರು ಹಾಜರಿದ್ದರು.