*ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 100 ಎಕರೆ ಪ್ರದೇಶದಲ್ಲಿ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ವಿಶ್ವಪರಿಸರ ದಿನಾಚರಣೆ ಆಚರಿಸಿದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್*
_ಪರಿಸರ ಸಂರಕ್ಷಣೆ ಮತ್ತು ನೈರ್ಮಲ್ಯದ ಪ್ರಾಮುಖ್ಯತೆಗಳನ್ನು ಕೊರೋನ ತೋರಿಸಿಕೊಡುತ್ತಿದೆ – ಡಾ.ಸುಧಾಕರ್_
*ಚಿಕ್ಕಬಳ್ಳಾಪುರ – ಜೂನ್ 5, 2020*: ಜಿಲ್ಲೆಯ ಹಲವೆಡೆ ಸಾಮೂಹಿಕವಾಗಿ ಸಸಿ ನೆಡುವ ಮೂಲಕ ವಿಶ್ವ ಪರಿಸರ ದಿನವನ್ನು ಅರ್ಥಪೂರ್ಣವಾಗಿ ಆಚರಿಸಿದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ಅವರು, ಪರಿಸರ ಸಂರಕ್ಷಣೆಯ ಮಹತ್ವವನ್ನು ಸಾರಿದ್ದಾರೆ. ಕೊರೋನ ನಮಗೆ ಪರಿಸರ ಸಂರಕ್ಷಣೆ ಹಾಗೂ ನೈರ್ಮಲ್ಯದ ಪ್ರಾಮುಖ್ಯತೆಗಳನ್ನು ತೋರಿಸಿಕೊಡುತ್ತಿದೆ. ಪರಿಸರದೊಂದಿಗೆ ಸೌಹಾರ್ದತೆಯಿಂದ ಬಾಳುವುದನ್ನು ನಾವು ಮತ್ತೆ ರೂಢಿಸಿಕೊಂಡು ಆರೋಗ್ಯಪೂರ್ಣ ಪರಿಸರವನ್ನು ನಿರ್ಮಿಸಬೇಕು. ಪರಿಸರ ಸಂರಕ್ಷಣೆ ಕೇವಲ ಇಂದಿನ ಚಟುವಟಿಕೆಯಾಗಬಾರದು, ದೈನಂದಿನ ಹೊಣೆಗಾರಿಕೆಯಾಗಬೇಕು ಎಂದು ಸಚಿವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಅರಣ್ಯ ಮತ್ತು ಪರಿಸರ ಇಲಾಖೆವತಿಯಿಂದ ಜಿಲ್ಲೆಯ ಅಮಾನಿ ಗೋಪಾಲಕೃಷ್ಣ ಕೆರೆ, ರಾಷ್ಟ್ರೀಯ ಹೆದ್ದಾರಿ ಜಡಲತಿಮ್ಮನಹಳ್ಳಿ ಹಾಗೂ ಮಂಚನಬೆಲೆ ಗುಂಡು ತೋಪಿನಲ್ಲಿ ಸಸಿ ನೆಡುವ ಮೂಲಕ ಅರಣ್ಯ ನಿರ್ಮಿಸುವ ಕಾರ್ಯಕ್ರಮವನ್ನು ಸಚಿವರು ಉದ್ಘಾಟಿಸಿ ಮಾತನಾಡಿದರು. 100 ಎಕರೆ ಪ್ರದೇಶದಲ್ಲಿ ಅರಣ್ಯ ಬೆಳೆಸುವ ಈ ಕಾರ್ಯಕ್ರಮವನ್ನು ಉದ್ಘಾಟಿಸುತ್ತಿರುವುದು ನನ್ನ ಸೌಭಾಗ್ಯ ಎಂದ ಸಚಿವರು, ನಾವು 21ನೇ ಶತಮಾನದಲ್ಲಿ ಜೀವಿಸುತ್ತಿರುವುದು ಬಹಳ ಹೆಮ್ಮೆಯ ವಿಷಯ. ಆದರೆ, ಅಷ್ಟೇ ದುರದೃಷ್ಟಕರ ಎಂದು ಹೇಳಿದರು. ಪ್ರಕೃತಿ ಈಗಾಗಲೇ ನಮ್ಮ ಮೂಗಿಗೆ ಮಾಸ್ಕ್ ಧರಿಸುವಂತೆ ಮಾಡಿದೆ. ಇದೇ ರೀತಿ ಮುಂದುವರೆದರೆ ಆಕ್ಸಿಜನ್ ಸಿಲಿಂಡರ್ ಹೊತ್ತು ತಿರುಗುವ ಕಾಲ ದೂರವಿಲ್ಲವೆಂದು ಸಚಿವರು ಹೇಳಿದರು. ನಾವು ಇಂದು ತೆಗೆದುಕೊಳ್ಳುವ ನಿರ್ಧಾರಗಳು ಭವಿಷ್ಯದ ಪೀಳಿಗೆಯ ಜಗತ್ತನ್ನು ನಿರ್ಮಿಸಲಿದೆ. ಪ್ರತಿಯೊಬ್ಬರು ಪರಿಸರದ ಸಂರಕ್ಷಣೆಗಾಗಿ ತಮ್ಮ ಜವಾಬ್ದಾರಿಯನ್ನು ಅರಿತು ಮುನ್ನಡೆದರೆ ಉತ್ತಮ ಭವಿಷ್ಯ ಸಾಧ್ಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ.ಬಿ.ಚಿಕ್ಕನರಸಿಂಹಯ್ಯ, ಜಿಲ್ಲಾಧಿಕಾರಿ ಆರ್.ಲತಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಫೌಜ಼ಿಯಾ ತರನ್ನಮ್, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್, ತಾ.ಪಂ ಅಧ್ಯಕ್ಷರಾದ ರಾಮಸ್ವಾಮಿ, ಎಪಿಎಂಸಿ ಅಧ್ಯಕ್ಷರಾದ ನಾರಾಯಣಸ್ವಾಮಿ, ಮುಖಂಡರಾದ ಕೆ.ವಿ.ನಾಗರಾಜ್, ಜಿ.ಆರ್.ನಾರಾಯಣಸ್ವಾಮಿ, ಮರಳಕುಂಟೆ ಕೃಷ್ಣಮೂರ್ತಿ, ಎಂ.ಎಫ್.ಸಿ ನಾರಾಯಣಸ್ವಾಮಿ ಇನ್ನಿತರರು ಹಾಜರಿದ್ದರು.