IMG 20220109 WA0021

ಪಾವಗಡ:ಮೆಕಾನಿಕ್ ವರ್ಗಕ್ಕೆ ಸರ್ಕಾರ ಅಗತ್ಯ ಸೌಲಭ್ಯ ಒದಗಿಸಬೇಕು…

DISTRICT NEWS ತುಮಕೂರು

ಪಾವಗಡ: ಮೆಕಾನಿಕ್ ವರ್ಗಕ್ಕೆ ಸರ್ಕಾರ ಅಗತ್ಯ ಸೌಲಭ್ಯ ಒದಗಿಸಬೇಕೆಂದು   ತಾಲ್ಲೂಕು ಮೆಕಾನಿಕ್ಸ್ ವೆಲ್ ಫೇರ್ ಅಸೋಸಿಯೇಷನ್ ಉದ್ಘಾಟನಾ ವೇಳೆ ಜಪಾನಂದ ಸ್ವಾಮೀಜಿ ತಿಳಿಸಿದರು. 

ಮೆಕ್ಯಾನಿಕ್ ಗಳು ಕಷ್ಟ ಜೀವಿಗಳು. ಕಾರ್ಮಿಕ ವರ್ಗಕ್ಕೆ ಸೇರುವ ಮೆಕಾನಿಕ್ ಗಳಿಗೆ ಸೇವಾ ಭದ್ರತೆ, ಆರೋಗ್ಯಕ್ಕೆ ಸಂಬಂಧಿಸಿದ ಸವಲತ್ತು. ಮಕ್ಕಳ ಶಿಕ್ಷಣಕ್ಕೆ ಸಹಕಾರ ನೀಡಬೇಕಿದೆ. ಕೋವಿಡ್ ಲಾಕ್ ಡೌನ್ ವೇಳೆಯಲ್ಲಿ ಬಹುತೇಕ ಮೆಕಾನಿಕ್, ಕಾರ್ಮಿಕರು ಸಾಕಷ್ಟು ಕಷ್ಟ ಪಟ್ಟಿದ್ದಾರೆ. ಕಷ್ಟದ ವೇಳೆ ಪ್ರತಿಯೊಬ್ಬರೂ ಇಂತಹವರ ಸೇವೆಗೆ ಬದ್ಧರಾಗಬೇಕು ಎಂದರು.

ತಾಲ್ಲೂಕಿನಲ್ಲಿ ಸಂಘ ಸ್ಥಾಪಿಸಿರುವುದು ಸಂತಸದ ಸಂಗತಿ. ತಾಲ್ಲೂಕಿನ ಎಲ್ಲ ಮೆಕಾನಿಕ್ ಗಳು ಒಗ್ಗಟ್ಟಿನಿಂದ ಸರ್ಕಾರದ ಸವಲತ್ತುಗಳನ್ನು ಪಡೆಯಬೇಕು. ಆರ್ಥಿಕವಾಗಿ ಸಬಲರಾಗಲು ಅಗತ್ಯ ಕಾರ್ಯ ಸೂಚಿ ರೂಪಿಸಬೇಕು. ಆಶ್ರಮದ ವತಿಯಿಂದ ಕೋವಿಡ್ ವೇಳೆ ಆಹಾರ ಕಿಟ್ ವಿತರಿಸಲಾಗಿತ್ತು. ಮುಂದಿನ ದಿನಗಳಲ್ಲಿಯೂ ಸಹಕಾರ ನೀಡಲಾಗುವುದು ಎಂದರು

.ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ, ಶ್ರಮಿಕರಾದ ಮೆಕಾನಿಕ್ ಗಳು ಆಧುನಿಕ ತಂತ್ರಜ್ಞಾನದ ಬಗ್ಗೆ ತಿಳಿದುಕೊಳ್ಳಬೇಕು. ಅಗತ್ಯ ತರಬೇತಿ ಪಡೆದುಕೊಂಡು ಸ್ವಾವಲಂಭಿಗಳಾಗಬೇಕು ಎಂದರು.ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ವೆಂಕಟೇಶ್, ಕೌಶಲ್ಯ ತರಬೇತಿಗಳು ಪಡೆದುಕೊಂಡು ಬಿಎಸ್ 4, 6 ವಾಹನಗಳನ್ನು ದುರಸ್ಥಿ ಮಾಡುವುದನ್ನು ಕಲಿತುಕೊಳ್ಳಬೇಕು. ಮೆಕಾನಿಕಲ್ ಎಂಜಿನಿಯರ್ ಗಳಿಗೂ ತಿಳಿಯದ ಪ್ರಾಯೋಗಿಕ ವಿಚಾರಗಳು ರಿಪೇರಿ ಮಾಡುವವರಿಗೆ ತಿಳಿದಿರುತ್ತದೆ. ಅದೇ ಕ್ಷೇತ್ರದಲ್ಲಿ ಹೆಚ್ಚಿನ  ಪ್ರಾವೀಣ್ಯತೆ ಪಡೆಯಬೇಕು ಎಂದರು.

ಮುಖಂಡ ನೇರಳೆಕುಂಟೆ ನಾಗೇಂದ್ರ ಕುಮಾರ್, ಆಂಧ್ರದ ಹಿಂದೂಪುರ, ಅನಂತಪುರ ಮಾದರಿಯಲ್ಲಿ ಪಟ್ಟಣದಲ್ಲಿ ದ್ವಿಚಕ್ರ ವಾಹನ, ಬೃಹತ್ ವಾಹನ, ಆಟೊ, ಕಾರ್ ಇತ್ಯಾದಿ ವಾಹನಗಳ ಎಲ್ಲ ಬಗೆಯ ದುರಸ್ಥಿ ಸೇವೆ ಒಂದೇ ಕಡೆ  ಸಿಗುವಂತೆ ಆಟೋ ನಗರ ಪ್ರಾರಂಭಿಸಬೇಕು ಎಂದರು.

ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ರವಿಶಂಕರನಾಯ್ಕ, ಪುರಸಭೆ ಮಾಜಿ ಅಧ್ಯಕ್ಷ ಶಂಕರರೆಡ್ಡಿ, ಬಶೀರ್,   ಸಂಘದ ಅಧ್ಯಕ್ಷ ಯುನುಸ್ ಮಾತನಾಡಿದರು.   ಸಂಸ್ಥೆಯ ಮಾರ್ಗದರ್ಶಕರಾದ  ಶಂಕರಪ್ಪ, ಖಾಲಿದ್ ಅಹಮದ್, ಶಕೀಲ್ ಅಹಮದ್, ಹಿದಾಯತ್, ನಾಗಾಚಾರಿ, ಫಕೃದ್ಧೀನ್ ಅವರನ್ನು  ಅಭಿನಂದಿಸಲಾಯಿತು.

ಪುರಸಭೆ ಮಾಜಿ ಅಧ್ಯಕ್ಷ ಮಾನಂ ವೆಂಕಟಸ್ವಾಮಿ, ಲೋಕೇಶ್ ದೇವರಾಜು,  ಸಂಘದ ಉಪಾಧ್ಯಕ್ಷ ಚನ್ನಕೇಶವ, ಕಾರ್ಯದರ್ಶಿ ಎಂ.ಅಬ್ದುಲ್ ಸಲಾಂ, ಖಜಾಂಚಿ ರಹಮತ್ ಉಲ್ಲಾ, ರಿಯಾಜ್, ಅಹಮತ್, ಸಾದಿಕ್, ರವೀಂದ್ರರೆಡ್ಡಿ, ಸಂಜೀವರೆಡ್ಡಿ, ರವೀಂದ್ರ ಬಿ., ತಬ್ರೇಜ್, ಪರ್ವೇಜ್, ನಿರ್ಮಲ್, ಜಿತೇಂದ್ರ ಉಪಸ್ಥಿತರಿದ್ದರು.

ವರದಿ : ಶ್ರೀನಿವಾಸುಲು ಎ