‘ಸಮರ್ಥ ನಾಯಕತ್ವ ಸ್ವಾವಲಂಬಿ ಭಾರತ ಅಭಿಯಾನ. ‘ಕರ್ನಾಟಕ ಜನಸಂವಾದ’ ವರ್ಚುವಲ್ ರ‍್ಯಾಲಿಯ ಕುರಿತು ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ವಿಧಾನಪರಿಷತ್ ಸದಸ್ಯರು ಹಾಗೂ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಎನ್. ರವಿಕುಮಾರ್‌ರವರು ಮಾಧ್ಯಮಗಳಿಗೆ ನೀಡಿದ ಮಾಹಿತಿ
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ೨ ಅವಧಿಯ ಮೊದಲ ವರ್ಷ ಪೂರ್ಣಗೊಂಡಿರುವ ಸಂದರ್ಭದಲ್ಲಿ ಪಕ್ಷ ಆಯೋಜಿಸಿರುವ ‘ಸಮರ್ಥ ನಾಯಕತ್ವ ಸ್ವಾವಲಂಬಿ ಭಾರತ ಅಭಿಯಾನ’ದ ಕುರಿತು ಬಿಜೆಪಿ ರಾಷ್ರೀ ಯ ಅಧ್ಯಕ್ಷರಾದ ಶ್ರಿ ಜೆ.ಪಿ. ನಡ್ಡಾರವರು ದೆಹಲಿಯಿಂದ ರಾಜ್ಯದ ಜನತೆಯನ್ನುದ್ದೇಶಿಸಿ ನಡೆಸಲಿರುವ ‘ಕರ್ನಾಟಕ ಜನಸಂವಾದ’ ವರ್ಚುವಲ್ ರ‍್ಯಾಲಿಯ ಕುರಿತು ಸಂಪೂರ್ಣ ಮಾಹಿತಿಯನ್ನು ವಿಧಾನಪರಿಷತ್ ಸದಸ್ಯರು ಹಾಗೂ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಎನ್. ರವಿಕುಮಾರ್‌ರವರು ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ನೀಡಿದರು. ಜೂನ್ ೧೪ರ ಸಂಜೆ ೬ ಗಂಟೆಗೆ ಪ್ರಾರಂಭವಾಗುವ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ರಾಜ್ಯದ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್. ಯಡಿಯೂರಪ್ಪನವರು ಭಾಗವಹಿಸಲಿದ್ದಾರೆ. ರಾಜ್ಯಾಧ್ಯಕ್ಷರಾದ ಶ್ರೀ ನಳಿನ್ ಕುಮಾರ್ ಕಟೀಲ್‌ರವರು ಅಧ್ಯಕ್ಷತೆ ವಹಿಸಲಿದ್ದಾರೆ.
ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್, ಯೂಟ್ಯೂಬ್, ಸೇರಿದಂತೆ ವೆಬೆಕ್ಸ್, ಸ್ಥಳೀಯ ಮಾಧ್ಯಮಗಳ ಮೂಲಕ ರಾಜ್ಯದ ೨೦ ಲಕ್ಷಕ್ಕೂ ಅಧಿಕ ಜನರಿಗೆ ಮೋದಿ ೨.೦ ಸಾಧನೆಗಳು ಹಾಗೂ ಸದ್ಯದ ಸ್ಥಿತಿಯಲ್ಲಿ ಕೋವಿಡ್ -೧೯ ವೈರಾಣುವಿನ ವಿರುದ್ಧ ನಾಗರೀಕರು ತೆಗೆದುಕೊಳ್ಳಬೇಕಾದ ಎಚ್ಚರಿಕೆ, ಜಾಗೃತಿ ಕುರಿತು ಹಲವು ಮಾಹಿತಿ ನೀಡಲಿದ್ದಾರೆೆ. ಈ ಜನಸಂವಾದ ಕಾರ್ಯಕ್ರಮದ ಮೂಲಕ ದೇಶ, ರಾಜ್ಯದಲ್ಲಿ ನಿಧಾನವಾಗಿ ಹರಡುತ್ತಿರುವ ಕೋವಿಡ್-೧೯ನ್ನು ಬದುಕಿನ ಭಾಗವಾಗಿ ಮಾಡಿಕೊಂಡು ಜೀವಿಸುವುದು ಹೇಗೆ ಎನ್ನುವುದನ್ನು ಮನವರಿಕೆ ಮಾಡಿಕೊಡುವ ಜನಜಾಗೃತಿ ಅಭಿಯಾನಕ್ಕೂ ಪಕ್ಷ ಮುಂದಾಗಿದೆ ಎಂದು ರವಿಕುಮಾರ್ ಅವರು ಹೇಳಿದರು.
‘ಸಮರ್ಥ ನಾಯಕತ್ವ ಸ್ವಾವಲಂಬಿ ಭಾರತ ಅಭಿಯಾನ’ದ ಅಂಗವಾಗಿ ವಿವಿಧ ಸಾಮಾಜಿಕ ಜಾಲತಾಣ ಬಳಸಿಕೊಂಡು ಪಕ್ಷದ ೩೭ ಸಂಘಟನಾತ್ಮಕ ಜಿಲ್ಲೆಗಳಲ್ಲಿ ೩೭ ಜಾಗೃತಿ ಅಭಿಯಾನ ನಡೆಸಲಿದ್ದೇವೆ. ೩೧೧ ಮಂಡಲದಲ್ಲಿ ೩೧೧ ರ‍್ಯಾಲಿ, ೫ ಮೋರ್ಚಾಗಳಿಂದ ಸುಮಾರು ೧೧೫ ರ‍್ಯಾಲಿ ನಡೆಸಲಾಗುತ್ತದೆ. ಒಟ್ಟು ಜೂನ್ ೬ರಿಂದ ೨೫ರವರೆಗೆ ರಾಜ್ಯಾದ್ಯಂತ ೬೦೦ಕ್ಕೂ ಹೆಚ್ಚು ರ‍್ಯಾಲಿ ನಡೆಯಲಿದ್ದು, ೧ ಕೋಟಿಗೂ ಅಧಿಕ ಜನರನ್ನು ತಲುಪುವ ಗುರಿ ಇಟ್ಟುಕೊಂಡಿದ್ದೇವೆ. ಈ ಹಿನ್ನೆಲೆಯಲ್ಲಿ ಪಕ್ಷದ ರಾಷ್ಟಿçÃಯ ಅಧ್ಯಕ್ಷರಾದ ಶ್ರೀ ಜೆ.ಪಿ. ನಡ್ಡಾರವರು ದೆಹಲಿಯಿಂದ ಜೂನ್ ೧೪ರ ಸಂಜೆ ೬ ಗಂಟೆಗೆ ಬೃಹತ್ ವರ್ಚುವಲ್ ರ‍್ಯಾಲಿ ಉದ್ದೇಶಿಸಿ ಮಾತನಾಡಲಿದ್ದು, ರಾಜ್ಯದ ೨೦ ಲಕ್ಷಕ್ಕೂ ಅಧಿಕ ಜನರನ್ನು ತಲುಪುವ ಗುರಿ ಇಟ್ಟುಕೊಂಡಿದ್ದೇವೆ ಎಂದು ಅವರು ತಿಳಿಸಿದರು.
ಸ್ವಾವಲಂಬಿ ಭಾರತದ ಆರ್ಥಿಕತೆ ಬಲವರ್ಧನೆಗೆ ಕ್ರಮ
ಪ್ರಸ್ತುತ ಕೋವಿಡ್-೧೯ನಿಂದಾಗಿ ದೇಶಾದ್ಯಂತ ಕೋಟ್ಯಂತರ ಜನ ಕೆಲಸ ಕಳೆದುಕೊಂಡಿದ್ದಾರೆ. ವಲಸೆ ಕಾರ್ಮಿಕರು ತಮ್ಮ ಸ್ವಸ್ಥಾನ ತಲುಪಿದ್ದಾರೆ. ಇವರಿಗೆ ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರವು ೨೦ ಲಕ್ಷ ಕೋಟಿ ರೂ. ಮೊತ್ತದ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಿದೆ. ಈ ಮೂಲಕ ಗ್ರಾಮೀಣ ಜನರಿಗೆ ಉದ್ಯೋಗ ಒದಗಿಸಲು ನೆರವಾಗುವ ನರೇಗಾ ಯೋಜನೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ವಿಶೇಷವಾಗಿ ಸಣ್ಣ, ಅತಿ ಸಣ್ಣ, ಗೃಹ ಕೈಗಾರಿಕೆಗಳಿಗೆ ಆದ್ಯತೆ ನೀಡಿ ಉದ್ಯೋಗ ಒದಗಿಸುವ ಕಡೆಗೆ ಗಮನ ನೀಡಲಾಗಿದೆ. ರೈತ, ಕಾರ್ಮಿಕ, ಮಹಿಳೆ, ವಾಹನ ಚಾಲಕರು, ನೇಕಾರರು, ಮೊದಲಾದ ಫಲಾನುಭವಿಗಳ ಸಭೆ ನಡೆಯಲಿದೆ. ಅವರಿಗೆ ಕೋವಿಡ್ ಸಂಬAಧದಲ್ಲಿ ವಿಶೇಷ ಪ್ಯಾಕೇಜ್ ನೀಡಿರುವ ಬಗ್ಗೆ ಮಾಹಿತಿ ನೀಡಲಾಗುವುದು ಎಂದು ಅವರು ತಿಳಿಸಿದರು.
ಭಾರತ ಗೆಲ್ಲಿಸೋಣ-ಚೀನಾ ಸೋಲಿಸೋಣ ಅಭಿಯಾನ
ನೆರೆ ರಾಷ್ಟç ಚೀನಾ ವಿನಾಕಾರಣ ಭಾರತದ ವಿರುದ್ಧ ಕಾಲು ಕೆರೆದು ಪ್ರತಿನಿತ್ಯ ಗಡಿಯಲ್ಲಿ ತಗಾದೆ ತೆಗೆಯುತ್ತಿದೆ. ಅದರಲ್ಲೂ ಇಡೀ ಜಗತ್ತಿಗೇ ಮಾರಣಾಂತಿಕ ವೈರಸ್ ಹರಡಿಸಿರುವ ಕಮ್ಯುನಿಸ್ಟ್ ದೇಶವನ್ನು ಆರ್ಥಿಕವಾಗಿ ಬಗ್ಗುಬಡಿಯಲು ಇದು ಸೂಕ್ತ ಸಮಯ. ಆದ್ದರಿಂದ ಪ್ರತಿಯೊಬ್ಬರೂ ಕೂಡ ಚೀನಾ ದೇಶ ಉತ್ಪಾದಿಸುವ ಉತ್ಪನ್ನಗಳನ್ನು ಬಹಿಷ್ಕರಿಸಿ ಅವರ ವಿರುದ್ಧ ಆರ್ಥಿಕ ಯುದ್ಧದಲ್ಲಿ ಗೆಲುವು ಸಾಧಿಸೋಣ. ಈ ಮೂಲಕ ಪ್ರಧಾನಿ ಮೋದಿಯವರ ಕನಸಿನ ಕೂಸಾಗಿರುವ ಮೇಕ್ ಇನ್ ಇಂಡಿಯಾ ಹಾಗೂ ಮೇಡ್ ಇನ್ ಇಂಡಿಯಾವನ್ನು ಬೆಂಬಲಿಸೋಣ. ಗುಡಿ ಕೈಗಾರಿಕೆ, ಸಣ್ಣ ಕೈಗಾರಿಕೆ, ಸ್ಥಳೀಯವಾಗಿ ಉತ್ಪಾದನೆಯಾಗುವ ವಸ್ತು, ಉಪಕರಣಗಳನ್ನು ಖರೀದಿಸೋಣ, ದೇಶದ ಆರ್ಥಿಕತೆಯನ್ನು ಬಲಪಡಿಸೋಣ. ಇದೇ ಉದ್ದೇಶದಿಂದ ಜೂನ್ ೧೪ರ ಸಂಜೆ ೭ರಿಂದ ೮ ಗಂಟೆವರೆಗೆ ಚೀನಾ ಸೋಲಿಸಿ-ಭಾರತ ಗೆಲ್ಲಿಸೋಣ ಅಭಿಯಾನ ನಡೆಸಲು ಉದ್ದೇಶಿಸಲಾಗಿದೆ. ರಾಜ್ಯದ ೫೮ ಸಾವಿರ ಬೂತ್‌ಗಳ ೫೦ ಲಕ್ಷಕ್ಕೂ ಹೆಚ್ಚು ಮನೆಗಳಲ್ಲಿ ಗಾಂಧೀಜಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಸ್ವದೇಶಿ ಅಭಿಯಾನದ ಪ್ರತಿಜ್ಞಾ ಸಂಕಲ್ಪ ತೆಗೆದುಕೊಳ್ಳುವ ಕಾರ್ಯಕ್ರಮ ನಡೆಯಲಿದೆ. ಸೈದ್ಧಾಂತಿಕ ಹೋರಾಟದ ಮೂಲಕ ನಾಡಿನ ಪ್ರತಿಯೊಬ್ಬ ನಾಗರೀಕರೂ ಸಮರ್ಥ ಹೋರಾಟ ನಡೆಸೋಣ. ಗಾಂಧೀಜಿ ಹೇಳಿದಂತೆ ಸ್ವದೇಶಿ ಪರಿಕಲ್ಪನೆಯಲ್ಲಿ ನಾವೆಲ್ಲ ಬಾಳ್ವೆ ಮಾಡೋಣ. ಅವರ ಆದರ್ಶಗಳನ್ನು ಪಾಲಿಸೋಣ. ಸಮೃದ್ಧ ದೇಶ ಕಟ್ಟೋಣ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ರವಿಕುಮಾರ್‌ರವರು ಮಾಧ್ಯಮಗಳಿಗೆ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಮಹೇಶ್ ಟೆಂಗಿನಕಾಯಿ ಮತ್ತು ರಾಜ್ಯ ಮಾಧ್ಯಮ ಸಂಚಾಲಕರಾದ ಶ್ರೀ ಎ.ಹೆಚ್. ಆನಂದ್‌ರವರು ಉಪಸ್ಥಿತರಿದ್ದರು.