DSC 3000 scaled e1623134186163

ತುಮಕೂರು: ಮೂರನೇ ಅಲೆಗೆ ಸಕಲ ಸಿದ್ಧತೆ….!

DISTRICT NEWS ತುಮಕೂರು

ತಾಲೂಕುಗಳಲ್ಲಿಯೂ ಶಿಶುವೈದ್ಯರ ವ್ಯವಸ್ಥೆ

ಮೂರನೇ ಅಲೆಗೆ ಸಕಲ ಸಿದ್ಧತೆ

ಅಪೌಷ್ಟಿಕ ಮಕ್ಕಳನ್ನು ಗುರುತಿಸಿ ಆರೋಗ್ಯದ ಅರಿವು ನೀಡಿ

ಅಪೌಷ್ಟಿಕ ಮಕ್ಕಳಿಗೆ ಕಿಟ್ ವಿತರಣೆ

ತುಮಕೂರು(ಕವಾ)ಜೂ.8: ಕೋವಿಡ್-19 ಮೂರನೇ ಅಲೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅವರು ತಿಳಿಸಿದರು.
ಅವರು ತಮ್ಮ ಕಚೇರಿಯಲ್ಲಿಂದು ಮಾಹಿತಿ ನೀಡುತ್ತಾ ಕೋವಿಡ್ ಮೂರನೇ ಅಲೆ ಮಕ್ಕಳಿಗೆ ಹೆಚ್ಚು ತಗುಲುವ ಸಾಧ್ಯತೆಯಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಸಮರ್ಪಕವಾಗಿ ಶಿಶು ವೈದ್ಯಕೀಯ ವ್ಯವಸ್ಥೆ ಕಲ್ಪಿಸಿಕೊಳ್ಳಲಾಗುತ್ತಿದೆ ಎಂದರು.
ಈಗಾಗಲೇ ಜಿಲ್ಲೆಯಲ್ಲಿ 16 ಸರ್ಕಾರಿ ಮತ್ತು ಖಾಸಗಿ ಸೇರಿದಂತೆ ಸುಮಾರು 60 ಕ್ಕಿಂತ ಹೆಚ್ಚು ಶಿಶು ವೈದ್ಯ (ಪಿಡಿಯಾಟ್ರಿಷಿಯನ್)ರಿದ್ದು ಎಲ್ಲಾ ತಾಲೂಕುಗಳಲ್ಲಿಯೂ ಶಿಶುವೈದ್ಯರ ವ್ಯವಸ್ಥೆ ಮಾಡಲು ಸಿದ್ಧರಾಗಿದ್ದೇವೆ. ಇದಲ್ಲದೆ ಅವಶ್ಯಕತೆಗನುಗುಣವಾಗಿ ಶಿಶು ವೈದ್ಯಕೀಯ ವಿಭಾಗಕ್ಕೆ ಸಂಬಂಧಿಸಿದ ಸಿದ್ದಾರ್ಥ ಕಾಲೇಜಿನ 8 ಪಿಜಿ ವಿದ್ಯಾರ್ಥಿಗಳು ಹಾಗೂ ಡಿಎನ್ ಬಿ ಕೋರ್ಸ್ ವಿದ್ಯಾರ್ಥಿಗಳನ್ನು ಬಳಸಿಕೊಳ್ಳಲು ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.
ಜಿಲ್ಲೆಯಲ್ಲಿ ಒಟ್ಟು 3600 ಹಾಸಿಗೆಗಳಿವೆ. ಈ ಪೈಕಿ 528 ಹಾಸಿಗೆಗಳನ್ನು ಪಿಡಿಯಾಟ್ರಿಕ್ ಹಾಸಿಗೆಗಳಿಗೆ ಮೀಸಲಿಡಲಾಗಿದೆ. ಇದರಲ್ಲಿರುವ 118 ಸರ್ಕಾರಿ ಹಾಸಿಗೆಗಳನ್ನು 180ಕ್ಕೆ ಹೆಚ್ಚಿಸಲು ಸಚಿವರು ನಿರ್ದೇಶಿಸಿದ್ದಾರೆ ಎಂದು ಹೇಳಿದರು.
ಜಿಲ್ಲೆಯಲ್ಲಿ 0-6 ವರ್ಷದ ಮಕ್ಕಳಿಗಾಗಿ ಹಮ್ಮಿಕೊಂಡಿರುವ ನೂತನ ಕಾರ್ಯಕ್ರಮದಡಿ ಈಗಾಗಲೆ ಗುರುತಿಸಿರುವ ಸುಮಾರಿ 8000 ಮಕ್ಕಳು ಅಪೌಷ್ಟಿಕತೆ ಹೊಂದಿರುವ(ಪೂರ್ಣವಾಗಿ ಅಲ್ಲ) ಮಕ್ಕಳ ಮನೆಗಳ ಪೋಷಕರಿಗೆ ತಿಳುವಳಿಕೆ ನೀಡಲು ಆರೋಗ್ಯ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಸೂಚಿಸಲು ನಿರ್ಧಾರ ಮಾಡಲಾಗಿದೆ. ಅಪೌಷ್ಟಿಕ ಮಕ್ಕಳಿಗೆ ಕಿಟ್ ತಯಾರು ಮಾಡಿ ನೀಡಲು ಈಗಾಗಲೇ ಸಭೆಯಲ್ಲಿ ನಿರ್ಧರಿಸಲಾಗಿದೆ. ಮಕ್ಕಳಿಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಮಕ್ಕಳ ತಜ್ಞ ವೈದ್ಯರ ಸಮಿತಿ ರಚನೆ ಮಾಡಲಾಗಿದೆ. ಆ ಸಮಿತಿಯ ನಿರ್ಧಾರದ ಆಧಾರದ ಮೇಲೆ ಮಕ್ಕಳಿಗೆ ಅರಿವು ಮೂಡಿಸಲು ಕ್ರಮವಹಿಸಲಾಗಿದೆ. ಅದೇ ರೀತಿ ರಿವರ್ಸ್ ಕ್ವಾರಂಟೈನ್ ಮಾಡಲು ವ್ಯವಸ್ಥೆ ರೂಪಿಸಲಾಗಿದೆ. ಅಂದರೆ ಅಪೌಷ್ಟಿಕತೆ ಮಕ್ಕಳ ಪೋಷಕರಿಗೆ ಲಸಿಕೆ ನೀಡಿ ಕ್ರಮ ಕೈಗೊಳ್ಳುವ ಯೋಜನೆ ರೂಪಿಸಲಾಗಿದೆ. ಇದಕ್ಕೆ ಮುಂದಿನ ದಿನಗಳಲ್ಲಿ ಸರ್ಕಾರದ ಅನುಮೋದನೆ ತೆಗೆದುಕೊಂಡು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.DSC 3192

ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಕೋವಿಡ್-19 ಪಾಸಿಟಿವಿಟಿ ಪ್ರಮಾಣ ಶೇ. 10 ರಿಂದ 13ರೊಳಗೆ ವರದಿಯಾಗುತ್ತಿದೆ. ಶಿರಾ ಮತ್ತು ತಿಪಟೂರು ತಾಲೂಕುಗಳಲ್ಲಿ ಶೇ.15ಕ್ಕಿಂತ ಹೆಚ್ಚು ವರದಿಯಾಗುತ್ತಿದೆ. ಉಳಿದ ಎಲ್ಲಾ ತಾಲೂಕುಗಳಲ್ಲಿಯೂ 15ಕ್ಕಿಂತ ಕಡಿಮೆ ಬರುತ್ತಿದೆ. ಪ್ರತಿನಿತ್ಯ ಕೋವಿಡ್ ಪರೀಕ್ಷೆ ಪ್ರಮಾಣ ಹೆಚ್ಚಾಗಿ ನಡೆಸಲಾಗುತ್ತಿದ್ದು ಸುಮಾರು 38ವಸಾವಿರದಷ್ಟು ಮೆಡಿಸನ್ ಕಿಟ್ ತಯಾರು ಮಾಡಿಕೊಂಡು ಸೋಂಕು ಕಂಡುಬಂದ ತಕ್ಷಣವೇ ಸೋಂಕಿತರಿಗೆ ತಲುಪಿಸುವ ವ್ಯವಸ್ಥೆ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ 220 ಕ್ಕೂ ಹೆಚ್ಚು ಆಮ್ಲಜನಕ ಹಾಸಿಗೆಗಳು ಖಾಲಿಯಿದ್ದು. ಹಾಸಿಗೆ ಸಮಸ್ಯೆ ಇಲ್ಲವೇ ಇಲ್ಲ ಎಂದರು.
ಕಲುಷಿತ ನೀರಲ್ಲ : ತಿಪಟೂರಿನಲ್ಲಿ ಕೊಳಚೆ (ಯುಜಿಡಿ) ನೀರು ಹೇಮಾವತಿ ನಾಲೆಗೆ ಸೇರುತ್ತಿದೆ ಎಂದು ವರದಿಯಾಗಿದೆ. ಆದರೆ ಅದು ಯುಜಿಡಿ ನೀರಲ್ಲ. ಮಳೆ ನೀರು ಹೇಮಾವತಿ ನಾಲೆ ಸೇರಿದೆ ಎಂಬ ಮಾಹಿತಿಯನ್ನು ತಿಪಟೂರು ನಗರ ಸಭೆ ಆಯುಕ್ತರು ಖಚಿತಪಡಿಸಿದ್ದಾರೆ. ಹಾಗಾಗಿ ನಾಗರಿಕರು ಆತಂಕ ಪಡುವ ಅಗತ್ಯವಿಲ್ಲ. ಇದಲ್ಲದೆ, ಬುಗುಡನಹಳ್ಳಿ ಕೆರೆಯಿಂದ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿರುವ ನೀರನ್ನು ಪರೀಕ್ಷೆ ಮಾಡಬೇಕು ಎಂದು ಮಹಾನಗರ ಪಾಲಿಕೆ ಆಯುಕ್ತರಿಗೂ ಸೂಚನೆ ನೀಡಿದ್ದೇನೆ. ಸ್ಥಳ ಪರಿಶೀಲನೆಗೂ ನಿರ್ದೇಶಿಸಿದ್ದೇನೆ. ಯುಜಿಡಿ ಮೂಲಕ ಹೇಮಾವತಿ ನಾಲೆಗೆ ಸೇರುತ್ತಿದ್ದ ಮಳೆ ನೀರು ಹೇಮಾವತಿ ನಾಲೆಗೆ ಸೇರದಂತೆ ವ್ಯವಸ್ಥೆ ಮಾಡಲು ಅಲ್ಲಿನ ನಗರ ಸಭೆ ಆಯುಕ್ತರಿಗೆ ಸೂಚನೆ ನೀಡಿದ್ದೇನೆ. ನಾನೂ ಸಹ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಜಿಲ್ಲೆಗೆ ಈಗ ಕಾವೇರಿ ನೀರಾವರಿ ನಿಗಮದಿಂದ ಹರಿಯುತ್ತಿರುವುದು ಹೊಸ ನೀರಾಗಿರುವುದರಿಂದ ಮಣ್ಣು ಮಿಶ್ರಿತವಾಗಿ ಕಂಡುಬರುತ್ತಿದೆ. ನೀರಿನ ಶುದ್ಧೀಕರಣವನ್ನು ಸಮರ್ಪಕವಾಗಿ ಆಗುವಂತೆ ಕ್ರಮ ವಹಿಸಲು ಸಂಬಂಧಿಸಿದ ಇಂಜಿನಿಯರ್ ಗಳಿಗೆ ಸೂಚಿಸಿದ್ದೇನೆ. ಜಿಲ್ಲೆಯ ಕುಡಿಯುವ ನೀರಿನ ಬೇಡಿಕೆಗೆ ಅನುಗುಣವಾಗಿ ನಿಗಮದಿಂದ ನೀರು ಹರಿಸಲಾಗಿದೆ. ಯಾವುದೇ ಕುಡಿಯುವ ನೀರಿನ ಸಮಸ್ಯೆಯಿಲ್ಲ ಎಂದು ತಿಳಿಸಿದರು.

ಅಪೌಷ್ಟಿಕ ಮಕ್ಕಳನ್ನು ಗುರುತಿಸಿ ಆರೋಗ್ಯದ ಅರಿವು ನೀಡಿ

DSC 3000 scaled e1623134186163

ಕೋವಿಡ್ ಮೂರನೇ ಅಲೆಯು ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳನ್ನು ಬಾಧಿಸುವ ಸಾಧ್ಯತೆ ಇರುವುದರಿಂದ ಈ ಕುರಿತು ಈಗಿನಿಂದಲೇ ಅವಶ್ಯಕ ಸಿದ್ಧತೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅಧಿಕಾರಿಗಳಿಗೆ ಸೂಚಿಸಿದರು.

ಕೋವಿಡ್-19ರ 3ನೇ ಅಲೆಯಲ್ಲಿ ಮಕ್ಕಳಿಗೆ ಸೋಂಕು ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳು ಹಾಗೂ ಸೋಂಕು ಹರಡಿದರೆ ವಹಿಸಬೇಕಾದ ಕ್ರಮಗಳ ಕುರಿತು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿಂದು ಜರುಗಿದ ಸಭೆಯಲ್ಲಿ ಮಾತನಾಡಿದ ಅವರು, 6 ವರ್ಷದೊಳಗಿನ ಅಪೌಷ್ಠಿಕ ಮಕ್ಕಳನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಹಾಗೂ 6 ರಿಂದ 16 ವರ್ಷದೊಳಗಿನ ವಿವಿಧ ಆರೋಗ್ಯದ ಸಮಸ್ಯೆ ಇರುವ ಮಕ್ಕಳನ್ನು ಶಿಕ್ಷಣ ಇಲಾಖೆ ಮತ್ತು ಆರೋಗ್ಯ ಇಲಾಖೆಯಿಂದ ಗುರುತಿಸಿ ಪಟ್ಟಿ ತಯಾರಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶಿಸಿದರು.
ಗುರುತಿಸಲಾದ ಅಪೌಷ್ಠಿಕ/ ಆರೋಗ್ಯದ ಸಮಸ್ಯೆ ಇರುವ ಮಕ್ಕಳನ್ನು ಗುರಿಯಾಗಿಟ್ಟುಕೊಂಡು ಅಂಗನವಾಡಿ ಕಾರ್ಯಕರ್ತೆ/ಶಾಲಾ ಶಿಕ್ಷಕರು/ಸ್ವಯಂ ಸೇವಕರ ಮುಖಾಂತರ ಪೌಷ್ಠಿಕ ಆರೋಗ್ಯದ ಅರಿವನ್ನು ನೀಡಬೇಕು. ಇದಲ್ಲದೆ, ಗುರುತಿಸಲಾದ ಮಕ್ಕಳಿಗೆ ಜಿಲ್ಲಾಡಳಿತ/ಸಂಘ ಸಂಸ್ಥೆಗಳ ನೆರವಿನಿಂದ ಸೂಕ್ಷ್ಮ ಪೋಷಕಾಂಶಗಳುಳ್ಳ ಪೌಷ್ಠಿಕ ಆಹಾರ ನೀಡಲು ನಿರ್ಧಾರ ತೆಗೆದುಕೊಂಡು ಈ ಬಗ್ಗೆ ಕ್ರಮ ವಹಿಸುವಂತೆ ನಿರ್ದೇಶಿಸಿದರು.
ಜಿಲ್ಲೆಯ ಎಲ್ಲಾ ಮಕ್ಕಳ ಕುಟುಂಬಗಳಿಗೆ ಮಕ್ಕಳು ಸೇವಿಸಬಹುದಾದ ಆಹಾರ/ಕೋವಿಡ್ ಸೋಂಕು ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳು, ಸೋಂಕು ತಗುಲಿದಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಸರಳವಾಗಿ ಅರ್ಥ ಮಾಡಿಕೊಳ್ಳುವ ಚಿತ್ರಗಳುಳ್ಳ ಆಕರ್ಷಕ ಬಣ್ಣದ ಕರಪತ್ರಗಳನ್ನು ಮುದ್ರಸಿ ವಿತರಿಸಬೇಕು. ಗುರುತಿಸಲಾದ ಅಪೌಷ್ಠಿಕ/ಆರೋಗ್ಯ ಸಮಸ್ಯೆ ಇರುವ ಮಕ್ಕಳ ವಿವರಗಳನ್ನು ಆಯಾ ಗ್ರಾಮ ಪಂಚಾಯತಿ/ವಾರ್ಡ್ ಗಳ ಟಾಸ್ಕ್ ಫೋರ್ಸ್ ಸಮಿತಿಗಳಲ್ಲಿ ಇರಿಸಿ ಸದರಿ ಸಮಿತಿಯು ಮಕ್ಕಳ ಮನೆಗರ ಭೇಟಿ ನೀಡಿ ನಿಗಾ ವಹಿಸುವಂತೆ ಕ್ರಮ ಕೈಗೊಳ್ಳಬೇಕು. ಅಪೌಷ್ಠಿಕ/ಆರೋಗ್ಯದ ಸಮಸ್ಯೆ ಇರುವ ಮಕ್ಕಳ ಪೋಷಕರು/ ಕುಟುಂಬದವರು ಆದ್ಯತೆಯ ಮೇರೆಗೆ ವ್ಯಾಕ್ಸಿನ್ ಪಡೆಯುವಂತೆ ಅಂಗನವಾಡಿ ಆಶಾ ಕಾರ್ಯಕರ್ತೆ ಮತ್ತು ಶಾಲಾ ಶಿಕ್ಷಕರ ಮುಖಾಂತರ ಜಾಗೃತಿ ಮೂಡಿಸಬೇಕು. ಪ್ರತೀ ತಾಲ್ಲೂಕಿನಲ್ಲಿ ವಾರ್ ರೂಂ ತೆರೆದು ಮಕ್ಕಳ ತಜ್ಞ ವೈದ್ಯರಿಂದ ಅಗತ್ಯ ಸಮಾಲೋಚನೆ ನಡೆಸಿ ಸೂಕ್ತ ಮಾರ್ಗದರ್ಶನ ನೀಡಬೇಕು. ಸ್ಥಳೀಯ ರೇಡಿಯೋ, ಟಿ.ವಿ., ವಾಟ್ಸ್ ಆಪ್, ಫೇಸ್‍ಬುಕ್ ಮುಂತಾದ ಮಾಧ್ಯಮಗಳ ಮುಖಾಂತರ ಜಾಗೃತಿ ಮೂಡಿಸಬೇಕು. ಪ್ರತೀ ತಾಲ್ಲೂಕಿನ ಸರ್ಕಾರಿ/ಸಾರ್ವಜನಿಕ ಆಸ್ಪತ್ರೆಗಳಲ್ಲಿ ಮಕ್ಕಳ ಕೋವಿಡ್ ವಾರ್ಡ್ ಗಳನ್ನು ಮತ್ತು ತಾಲೂಕಿನಲ್ಲಿ ಕೋವಿಡ್ ಕೇರ್ ಸೆಂಟರ್ ಸಜ್ಜುಗೊಳಿಸಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಎಸ್. ನಟರಾಜ್, ಆರ್ ಸಿಎಚ್ ಅಧಿಕಾರಿ ಡಾ.ಕೇಶವ್ ರಾಜ್, ಡಾ. ಮೋಹನ್ ದಾಸ್, ಶುಶ್ರೂಷಕಿಯರ ತರಬೇತಿ ಕೇಂದ್ರದ ಪ್ರಾಂಶುಪಾಲರಾದ ಡಾ. ರಜಿನಿ ಇದ್ದರು.