Tumkur : ಜನರ ಆದಾಯ ಗೋತ, ಬೆಲೆ ಏರಿಕೆಯ ಲಾತ; ಸರಕಾರದ ವಿರುದ್ಧ ಡಿಕೆಶಿ ವಾಗ್ದಾಳಿ
ರಾಜ್ಯಾದ್ಯಂತ ಇಂದು 900ಕ್ಕೂ ಹೆಚ್ಚು ಜಿ.ಪಂ, ಹೋಬಳಿ ಕೇಂದ್ರದಲ್ಲಿ ‘100 ನಾಟ್ ಔಟ್’ ಆಂದೋಲನ
ತುಮಕೂರು :- ‘ದೇಶದ ಜನಸಾಮಾನ್ಯರ ಆದಾಯಕ್ಕೆ ಕುತ್ತು ತಂದಿರುವ ಬಿಜೆಪಿ ಸರ್ಕಾರ, ಇಂಧನ ತೈಲ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿ ಅವರ ಜೀವನಕ್ಕೆ ಬರೆ ಎಳೆದಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಪೆಟ್ರೋಲ್, ಡೀಸೆಲ್ ದರ ನಿರಂತರ ಏರಿಕೆ ಹಿನ್ನೆಲೆಯಲ್ಲಿ ಕೇಂದ್ರ ಸರಕಾರದ ವಿರುದ್ಧದ 100 ನಾಟೌಟ್ ಪ್ರತಿಭಟನೆ ಇಂದು ರಾಜ್ಯದ 900ಕ್ಕೂ ಹೆಚ್ಚು ಜಿಲ್ಲಾ ಪಂಚಾಯಿತಿ ಹಾಗೂ ಹೋಬಳಿ ಕೇಂದ್ರಗಳಲ್ಲಿ ನಡೆದಿದ್ದು, ಡಿ.ಕೆ ಶಿವಕುಮಾರ್ ಅವರು ತುಮಕೂರು ಜಿಲ್ಲೆ ತಿಪಟೂರಿನ ಕಿಬ್ಬನಹಳ್ಳಿ ಕ್ರಾಸ್ ಬಳಿ ಭಾನುವಾರ ಪ್ರತಿಭಟನೆಯಲ್ಲಿ ಪಾಲ್ಗೊಂಡರು.
ಈ ಪ್ರತಿಭಟನೆಯಲ್ಲಿ ಮಾಜಿ ಡಿಸಿಎಂ ಡಾ. ಜಿ. ಪರಮೇಶ್ವರ, ಶಾಸಕ ಡಾ. ರಂಗನಾಥ್, ಮಾಜಿ ಶಾಸಕರಾದ ಕೆ.ಎನ್. ರಾಜಣ್ಣ, ಷಡಕ್ಷರಿ, ರಫೀಕ್ ಅಹಮದ್, ಆರ್. ನಾರಾಯಣ, ಪಕ್ಷದ ಜಿಲ್ಲಾಧ್ಯಕ್ಷ ರಾಮಕೃಷ್ಣ, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಶಿ, ಗೀತಾ ರಾಜಣ್ಣ, ವನಗಿರಿಗೌಡ ಮತ್ತಿತರರು ಸಾಥ್ ನೀಡಿದರು.
ಇದಕ್ಕೂ ಮುನ್ನ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಬೆಳಗ್ಗೆ ತುಮಕೂರಿನಲ್ಲಿ ಮಾಜಿ ಡಿಸಿಎಂ ಡಾ. ಜಿ. ಪರಮೇಶ್ವರ ಅವರ ನಿವಾಸದಲ್ಲಿ ಉಪಹಾರ ಸೇವಿಸಿ, ಭಾನುವಾರ ರಾಜ್ಯಾದ್ಯಂತ ಜಿಲ್ಲಾ ಪಂಚಾಯಿತಿ ಹಾಗೂ ಹೋಬಳಿ ಮಟ್ಟದಲ್ಲಿ ನಡೆಯುತ್ತಿರುವ 100 ನಾಟೌಟ್ ಪ್ರತಿಭಟನೆ ಬಗ್ಗೆ ಜೂಮ್ ವಿಡಿಯೋ ಸಂವಾದದ ಮೂಲಕ ಪರಿಶೀಲನೆ ನಡೆಸಿ, ಸಲಹೆ-ಸೂಚನೆಗಳನ್ನು ನೀಡಿದರು. ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುತ್ತಿರುವ ಪಕ್ಷದ ಎಲ್ಲ ಮುಖಂಡರು, ಕಾರ್ಯಕರ್ತರನ್ನು ಅಭಿನಂದಿಸಿದರು.
ನಂತರ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಶಿವಕುಮಾರ್ ಅವರು ಹೇಳಿದ್ದಿಷ್ಟು;
‘ಜನರನ್ನು ಪಿಕ್ ಪಾಕೆಟ್ ಮಾಡುತ್ತಿರುವ ಬಿಜೆಪಿ ಸರ್ಕಾರದ ವಿರುದ್ಧ ನಾವು 100 ನಾಟ್ ಔಟ್ ಪ್ರತಿಭಟನೆ ಮಾಡುತ್ತಿದ್ದೇವೆ. ಗ್ರಾಮೀಣ ಪ್ರದೇಶದ ಸುಮಾರು 900ಕ್ಕೂ ಹೆಚ್ಚು ಜಿಲ್ಲಾ ಪಂಚಾಯಿತಿ ಮತ್ತು ಹೋಬಳಿ ಕೇಂದ್ರಗಳಲ್ಲಿ ಇಂದು ಪ್ರತಿಭಟನೆ ನಡೆಯುತ್ತಿದೆ.
ನಾನು ಮತ್ತು ನಮ್ಮ ಮಾಜಿ ಅಧ್ಯಕ್ಷರಾದ ಡಾ. ಜಿ. ಪರಮೇಶ್ವರ ಅವರು ತಿಪಟೂರಿನಲ್ಲಿ ಪಾಲ್ಗೊಂಡಿದ್ದೇವೆ. ನಾಳೆ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಪ್ರತಿಭಟನೆ ನಡೆಯಲಿದ್ದು, ನಾಡಿದ್ದು ಉಳಿದ ಎಲ್ಲ ಕಡೆಗಳಲ್ಲಿ ಚಳವಳಿ ಮಾಡಲಾಗುವುದು.
ಹಿಂದೆ ಯುಪಿಎ ಸರ್ಕಾರದ ಸಮಯದಲ್ಲಿ ಪೆಟ್ರೋಲ್ ಬೆಲೆ ಏರಿದಾಗ ಯಡಿಯೂರಪ್ಪನವರು, ಶೋಭಾ ಕರಂದ್ಲಾಜೆ ಅವರು ಹಾಗೂ ಇತರ ನಾಯಕರು ಆಡಿದ್ದ ಮಾತು ಏನಾಯ್ತು? ಈಗ ಅವರ ರೋಷ ಎಲ್ಲಿ ಹೋಯ್ತು? ಅವರು ಹಾಕಿಕೊಟ್ಟ ಹಾದಿಯಲ್ಲೇ ನಾವು ಸಾಗುತ್ತಿದ್ದೇವೆ.
ದಿನೇ, ದಿನೆ ತೈಲ ಬೆಲೆ ಏರಿಕೆಯಾಗುತ್ತಿದ್ದು, ಪೆಟ್ರೋಲ್ ನಂತರ ಈಗ ದೇಶದ ವಿವಿಧ ಭಾಗಗಳಲ್ಲಿ ಡೀಸೆಲ್ ಬೆಲೆ ಕೂಡ 100 ಗಡಿ ಮುಟ್ಟಿದೆ. ಇದರಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು 65 ರಷ್ಟು ತೆರಿಗೆ ಸಂಗ್ರಹಿಸುತ್ತಿವೆ. ತೈಲ ಬೆಲೆ ಇಳಿಸಬೇಕು ಎಂಬುದು ನಮ್ಮ ಒತ್ತಾಯ.
ಇನ್ನು ಸರ್ಕಾರಿ ಹಾಗೂ ಖಾಸಗಿ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ ಜನಸಾಮಾನ್ಯರ ವೇತನ ಹೆಚ್ಚಾಗಿದೆಯಾ? ನರೇಗಾ ಕಾರ್ಮಿಕರ ದಿನಗೂಲಿ ಹೆಚ್ಚಾಗಿದೆಯಾ? ಇಲ್ಲ. ಆದರೆ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಇತರೆ ಪದಾರ್ಥಗಳ ಬೆಲೆಯನ್ನೂ ಹೆಚ್ಚಿಸಿದೆ.
ಕಬ್ಬಿಣ, ಸೀಮೆಂಟ್ ಬೆಲೆ ಎಷ್ಟಾಗಿದೆ? ಜನಸಾಮಾನ್ಯರು ಮನೆ ಕಟ್ಟುವ ಆಸೆ ದೂರವಾಗಿದೆ. ದಿನಬಳಕೆ ವಸ್ತು ಬೆಲೆ ಏನಾಗಿದೆ? ಉದ್ಯೋಗ ಕೇಳಿದ ಯುವಕರಿಗೆ ಪಕೋಡ ಮಾರಿ ಎಂದರು. ಈಗ ಅಡುಗೆ ಎಣ್ಣೆ ಬೆಲೆಯೂ ಹೆಚ್ಚಾಗಿದೆ. ರಸಗೊಬ್ಬರದ ಬೆಲೆಯೂ ಹೆಚ್ಚಾಗಿದೆ. ವಿದ್ಯುತ್ ದರವನ್ನೂ ಹೆಚ್ಚಿಸಿದ್ದಾರೆ. ಆ ಮೂಲಕ ಬಿಜೆಪಿ ಸರ್ಕಾರ ಜನರನ್ನು ಪಿಕ್ ಪಾಕೆಟ್ ಮಾಡುತ್ತಿದೆ.
ಈ ಸರ್ಕಾರ ನೋಟು ರದ್ದು ಮಾಡಿ ಕ್ಯೂ ನಿಲ್ಲಿಸಿದಲ್ಲದೆ, ಕೊರೊನಾ ಸಮಯದಲ್ಲಿ ಆಸ್ಪತ್ರೆ, ಚಿಕಿತ್ಸೆ, ಆಕ್ಸಿಜನ್ ಎಲ್ಲದಕ್ಕೂ ಕ್ಯೂ ನಿಲ್ಲಿಸಿದಲ್ಲದೆ ಶವ ಸಂಸ್ಕಾರಕ್ಕೂ ಕ್ಯೂ ನಿಲ್ಲಿಸಿತು.
ಬಡವರು, ಮಧ್ಯಮವರ್ಗದವರು ಜೀವನ ನಡೆಸಲು ತಾಳಿ ಸೇರಿದಂತೆ ತಮ್ಮ ಬಳಿ ಇದ್ದ ಸಣ್ಣ ಪುಟ್ಟ ಚಿನ್ನವನ್ನು ಅಡವಿಡುತ್ತಿದ್ದಾರೆ.
ಇನ್ನು ಕಾರ್ಪೊರೇಷನ್ ತೆರಿಗೆಯಿಂದ ಆಸ್ತಿ ತೆರಿಗೆವರೆಗೂ ಎಲ್ಲವನ್ನು ಹೆಚ್ಚಿಸಿದೆ. ವ್ಯಾಪಾರಿಗಳ ವ್ಯವಹಾರ ನಿಲ್ಲಿಸಿ, ಈಗ ಅವರಿಂದ ತೆರಿಗೆ ವಸೂಲಿ ಮಾಡುತ್ತಿದ್ದಾರೆ. ಸರ್ಕಾರದ ವಿರುದ್ಧ ಜನ ಬೇಸತ್ತಿದ್ದಾರೆ.
ಈ ಸರ್ಕಾರ ಅಧಿಕಾರಕ್ಕೆ ಬರಲು, ಯುವಕರಿಂದ ಮತ ಪಡೆಯಲು, ಕಾಂಗ್ರೆಸ್ ನಾಯಕರ ಟೀಕೆ ಮಾಡಲು ಟ್ವಿಟರ್, ಫೇಸ್ ಬುಕ್ ಸೇರಿ ಸಾಮಾಜಿಕ ಜಾಲತಾಣ ಬೇಕಾಗಿತ್ತು. ಆದರೆ ಈಗ ಜನ ಸರ್ಕಾರವನ್ನು ಪ್ರಶ್ನಿಸಿ ಟೀಕಿಸುತ್ತಿರುವಾಗ ಅದಕ್ಕೆ ಬ್ರೇಕ್ ಹಾಕಲು ಕಾನೂನು ತರುತ್ತಿದ್ದಾರೆ.
ಸರ್ಕಾರದ ದೌರ್ಬಲ್ಯದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ, ಅಚ್ಛೇ ದಿನವನ್ನು ನೆನಪಿಸುವುದು ನಮ್ಮ ಕರ್ತವ್ಯ. ಈಗ ಎಷ್ಟು ಯುವಕರಿಗೆ ಉದ್ಯೋಗ ಸಿಕ್ಕಿದೆ? ವರ್ಷಕ್ಕೆ 2 ಕೋಟಿ ಉದ್ಯೋಗ ಕೊಡುತ್ತೇವೆ ಎಂದವರು ಈಗ ಎಷ್ಟು ಉದ್ಯೋಗ ಹಾಳು ಮಾಡಿದ್ದಾರೆ ಎಂದು ಹೇಳಬೇಕು.
ಸರ್ಕಾರ ಕೊರೊನಾದಿಂದ ಸತ್ತವರ ಲೆಕ್ಕ ಕೊಡಬೇಕಲ್ಲವೇ? ಲಸಿಕೆಗೆ ಕ್ಯೂ ನಿಲ್ಲಿಸಿ, ಕೊಡದೆ ವಾಪಸು ಕಳುಹಿಸಿದರು. ಆದರೆ ಈಗ ಕಾಂಗ್ರೆಸ್ ಒತ್ತಾಯದ ಮೇರೆಗೆ ಅದನ್ನು ಉಚಿತ ಎಂದು ಘೋಷಿಸಿದ್ದಾರೆ. ಲಸಿಕೆ ಸರಿಯಾಗಿ ಸಿಗದೆ ಎಷ್ಟು ಜನ ಸತ್ತಿದ್ದಾರೆ ಎಂಬುದರ ಲೆಕ್ಕವನ್ನೂ ಕೊಡಬೇಕು.
ದೇಶಕ್ಕೆ ಸ್ವಾತಂತ್ರ್ಯ ಬಂದ ಮೇಲೆ ಇಂತಹ ದರಿದ್ರ ಹಾಗೂ ಭ್ರಷ್ಟ ಸರ್ಕಾರ ಅಧಿಕಾರಕ್ಕೆ ಬಂದಿರಲಿಲ್ಲ. ಇಂದು ಒಂದು ವರ್ಗ ಅಲ್ಲ, ರೈತ, ಕಾರ್ಮಿಕ, ವರ್ತಕ, ಸಣ್ಣ ವ್ಯಾಪಾರಿಗಳು ಸೇರಿದಂತೆ ಯಾರಾದರೂ ಸಂತೋಷವಾಗಿದ್ದಾರಾ?
ಈ ಆಂದೋಲನ ಜನರ ಧ್ವನಿಯಾಗುವ ಕಾರ್ಯಕ್ರಮ. ಇದು ಕಾಂಗ್ರೆಸ್ ಕಾರ್ಯಕ್ರಮ ಅಲ್ಲ, ಜನಸಾಮಾನ್ಯರ ಕಾರ್ಯಕ್ರಮ. 130 ಕೋಟಿ ಭಾರತೀಯರ ಹಿತಕ್ಕಾಗಿ ಈ ಕಾರ್ಯಕ್ರಮ. ಹೀಗಾಗಿ ಇಂದು ಗ್ರಾಮೀಣ ಪ್ರದೇಶಗಳಲ್ಲಿ ಪ್ರತಿಭಟನೆ ಮಾಡುತ್ತಿದ್ದೇವೆ.
ನಾವು ಶಾಸಕರ ನಿಧಿಯಿಂದ ಲಸಿಕೆ ನೀಡುತ್ತೇವೆ ಎಂದು ಹೇಳಿದೆವು. ನಾವು ಜಾಗತಿಕ ಟೆಂಡರ್ ನಲ್ಲಿ ಭಾಗಿ ಆಗ್ತೀವಿ ಅಂದಾಗ ಅದನ್ನು ಕೈಬಿಟ್ಟರು. ನಾವು ರಾಜ್ಯಪಾಲರನ್ನು ಭೇಟಿ ಮಾಡಿ ಉಚಿತ ಲಸಿಕೆಗೆ ಮನವಿ ಮಾಡಿದೆವು. ಮಮತಾ ಬ್ಯಾನರ್ಜಿಯಂತಹ ಮುಖ್ಯಮಂತ್ರಿಗಳು ಉಚಿತ ಲಸಿಕೆ ನೀಡಲು ಮುಂದಾದಾಗ ಮಾನ ಉಳಿಸಿಕೊಳ್ಳಲು ಕೇಂದ್ರ ಸರ್ಕಾರ ಉಚಿತ ಲಸಿಕೆ ನೀಡುವುದಾಗಿ ಘೋಷಿಸಿದೆ.
ಮನೆಗೆ ಮಾರಿ ಊರಿಗೆ ಉಪಕಾರಿ ಎನ್ನುವ ಹಾಗೆ ಮೋದಿ ಅವರು ಇಲ್ಲಿಯವರಿಗೆ ಲಸಿಕೆ ನೀಡದೆ ಬೇರೆ ರಾಷ್ಟ್ರಗಳಿಗೆ ಕೊಡಲು ಮುಂದಾದರು.
ಲಸಿಕೆ ವಿಚಾರದಲ್ಲಿ ನಾವು ವಿರೋಧ ಮಾಡಿಲ್ಲ, ಸರ್ಟಿಫಿಕೇಟ್ ನಲ್ಲಿ ಮೋದಿ ಫೋಟೋ ಯಾಕೆ ಎಂದು ಪ್ರಶ್ನಿಸಿದ್ದೇವೆ, ಅಷ್ಟೇ.’