ಪಾವಗಡ: ಭಾನುವಾರವಾದಾಗ್ಯೂ ಸಹ ತಾಲ್ಲೂಕಿನ ಸಮಸ್ತ ಸವಿತಾ ಸಮಾಜದವರಿಗೆ ದಿನಸಿ ಕಿಟ್ಟುಗಳನ್ನು ವಿತರಣೆ ಮಾಡಲಾಯಿತು. ಸರಿಸುಮಾರು 200ಕ್ಕೂ ಹೆಚ್ಚು ಸವಿತಾ ಸಮಾಜದ ಬಂಧುಗಳು ಸ್ವಾಮಿ ವಿವೇಕಾನಂದ ಸಂಘಟಿತ ಗ್ರಾಮಾಂತರ ಆರೋಗ್ಯ ಕೇಂದ್ರಕ್ಕೆ ಬಂದು ಅತ್ಯಂತ ಶಿಸ್ತು ಬದ್ದವಾಗಿ ದಿನಸಿ ಕಿಟ್ಟುಗಳನ್ನು ಪಡೆದರು. ಈ ಕಾರ್ಯಕ್ರಮದಲ್ಲಿ ಪಾವಗಡದ ಸರ್ಕಾರಿ ಸಹಾಯಕ ಅಭಿಯೋಜಕರಾದ ಶ್ರೀ ಮಂಜುನಾಥ ರವರು ಎಲ್ಲ ಸವಿತಾ ಸಮಾಜದವರಿಗೆ ಶುಚಿತ್ವದ ಬಗ್ಗೆ ಹಾಗೂ ಮುಖಗವಸುಗಳನ್ನು ಉಪಯೋಗಿಸುವ ಬಗ್ಗೆ ಅತ್ಯಂತ ಮನಮುಟ್ಟುವಂತೆ ವಿವರಿಸಿದರು.
ಒಟ್ಟಿನಲ್ಲಿ 12000 ಕುಟುಂಬಕ್ಕೂ ಮೀರಿದ ಈ ದಿನಸಿ ವಿತರಣೆ ಹಾಗೂ ಮಧುಗಿರಿ ಶೈಕ್ಷಣಿಕ ಜಿಲ್ಲೆಯ 2800 ಅಡುಗೆ ಸಿಬ್ಬಂದಿಯವರನ್ನು ಸೇರಿಸಿದ್ದಲ್ಲಿ ಸರಿಸುಮಾರು 15000 ಜನರಿಗೆ ಎರಡನೇ ಅಲೆಯ ಯೋಜನೆಯಡಿ ನೀಡಲಾಗಿದೆ. ಪೂಜ್ಯ ಸ್ವಾಮಿ ಜಪಾನಂದಜೀ ರವರು ಈ ವಿತರಣೆಯ ಸಂದರ್ಭದಲ್ಲಿ ಮಾತನಾಡಿ ಮುಖಗವಸು ಇಲ್ಲದೆ ಯಾರನ್ನೂ ಅಂಗಡಿಯ ಒಳಗೆ ಬಿಟ್ಟುಕೊಳ್ಳಬೇಡಿ ಹಾಗೂ ಸ್ಯಾನಿಟೈಸರ್ ಮತ್ತು ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಿ ಎಂದು ತಿಳಿಸಿದರು.
ಒಟ್ಟಿನಲ್ಲಿ ಕಳೆದ ಒಂದೂವರೆ ವರ್ಷದಿಂದ ಕೋವಿಡ್ ಮೊದಲನೇ ಮತ್ತು ಎರಡನೇ ಅಲೆಯ ಪರಿಹಾರ ಯೋಜನೆಯಡಿಯಲ್ಲಿ ಪೂಜ್ಯ ಸ್ವಾಮಿ ಜಪಾನಂದಜೀ ಹಾಗೂ ಶ್ರೀಮತಿ ಸುಧಾಮೂರ್ತಿ, ಅಧ್ಯಕ್ಷರು, ಇನ್ಫೋಸಿಸ್ ಫೌಂಡೇಷನ್ ಅವರ ಸಹಕಾರದಿಂದ ತುಮಕೂರು ಜಿಲ್ಲೆಯಾದ್ಯಂತ ಅನೇಕ ವರ್ಗದ ಜನರಿಗೆ ಸೇವೆ ಸಲ್ಲಿಸುತ್ತಿರುವುದು ಇಡೀ ರಾಜ್ಯದಲ್ಲಿಯೇ ಒಂದು ಮಾದರಿಯಾದ ಯೋಜನೆಯಾಗಿ ಕಂಡು ಬಂದಿತು.