ಆಂಧ್ರ ಗಡಿಭಾಗದ ಚೆಕ್‍ಪೋಸ್ಟ್ ಗಳನ್ನು ಪರಿಶೀಲಿದ ಜಿಲ್ಲಾಧಿಕಾರಿಗಳು…!
ತುಮಕೂರು (ಕ.ವಾ.) ಮಾ.27: ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಅಕ್ರಮಗಳನ್ನು ತಡೆಯುವ ನಿಟ್ಟಿನಲ್ಲಿ ಆಂಧ್ರ ಗಡಿ ಭಾಗವಾದ ಪಾವಗಡ ತಾಲೂಕಿನಲ್ಲಿ ಸ್ಥಾಪಿಸಿರುವ ಚೆಕ್‍ಪೋಸ್ಟ್‍ಗಳಿಗೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ ಅಶೋಕ್ ಅವರು ಇಂದು ಜಂಟಿಯಾಗಿ ಭೇಟಿ ನೀಡಿ ಪರಿಶೀಲಿಸಿದರು.
ಪಾವಗಡ ವಿಧಾನಸಭಾ ಕ್ಷೇತ್ರವು ಚಿತ್ರದುರ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಗೊಳಪಡಲಿದ್ದು, ಕರ್ನಾಟಕಾಂಧ್ರದ ಗಡಿ ಭಾಗದಲ್ಲಿದೆ. ಈ ಭಾಗದಲ್ಲಿ ಲಿಕ್ಕರ್ ಮಾಫಿಯಾ ಹೆಚ್ಚಾಗಿ ವರದಿಯಾಗುವ ಸಾಧ್ಯತೆಯಿದೆ ಎಂಬ ಮುನ್ನೆಚ್ಚರಿಕೆಯಿಂದ ಪಾವಗಡ ತಾಲೂಕಿನ ನಾಗಲಾಪುರ ಹಾಗೂ ವೆಂಕಟಮ್ಮನಹಳ್ಳಿ ಚೆಕ್‍ಪೋಸ್ಟ್‍ಗಳಿಗೆ ಭೇಟಿ ನೀಡಿ ಎಸ್‍ಎಸ್‍ಟಿ ತಂಡದ ಕಾರ್ಯವನ್ನು ಪರಿಶೀಲಿಸಿದ ಅವರು ಎಲ್ಲ ತಂಡಗಳು 24×7 ಕಾರ್ಯ ನಿರ್ವಹಿಸುವುದರೊಂದಿಗೆ ಕೆಎಸ್‍ಆರ್‍ಟಿಸಿ ಬಸ್ ಸೇರಿದಂತೆ ಎಲ್ಲಾ ಖಾಸಗಿ ವಾಹನಗಳನ್ನೂ ತಪಾಸಣೆಗೊಳಪಡಿಸಬೇಕು. ಪ್ರತಿ ವಾಹನದ ಸಂಖ್ಯೆ, ವಾಹನದ ಮಾದರಿ, ವಾಹನವು ಎಲ್ಲಿಂದ ಎಲ್ಲಿಗೆ ಸಾಗುತ್ತಿದೆ ಎಂಬ ಮಾಹಿತಿಯನ್ನು ವಹಿಯಲ್ಲಿ ದಾಖಲಿಸಬೇಕೆಂದು ನಿರ್ದೇಶಿಸಿದರಲ್ಲದೆ ಚೆಕ್‍ಪೋಸ್ಟ್‍ಗಳಲ್ಲಿ ನಿರ್ವಹಿಸುತ್ತಿರುವ ವಹಿಗಳನ್ನು ಪರಿಶೀಲಿಸಿದರು.
ನಂತರ ಆಂಧ್ರ ಪ್ರದೇಶದ ಗಡಿಯಲ್ಲಿರುವ ಕಂಬದೂರು, ಎಗುವಪಲ್ಲಿ ಚೆಕ್‍ಪೆÇೀಸ್ಟ್‍ಗಳಿಗೆ ಭೇಟಿ ನೀಡಿ ಸದರಿ ಚೆಕ್ ಪೆÇೀಸ್ಟ್‍ಗಳ ಪೆÇಲೀಸ್ ಅಧಿಕಾರಿಗಳೊಂದಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಮಾತನಾಡಿ ಗಡಿ ಭಾಗದಲ್ಲಿ ವರದಿಯಾಗಬಹುದಾದ ಲಿಕ್ಕರ್ ಮಾಫಿಯ ಬಗ್ಗೆ ಚರ್ಚಿಸಿದರು.
ತುಮಕೂರಿಗೆ ಹಿಂದಿರುಗುವಾಗ ಮಾರ್ಗ ಮಧ್ಯೆ ತಿರುಮಣಿಯಲ್ಲಿರುವ ಕರ್ನಾಟಕ ಪಬ್ಲಿಕ್ ಶಾಲೆಯ ಎಸ್‍ಎಸ್‍ಎಲ್‍ಸಿ ಪರೀಕ್ಷಾ ಕೇಂದ್ರದ ಕೊಠಡಿಗಳಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ವಿದ್ಯಾರ್ಥಿಗಳು ನಕಲು ಮಾಡುತ್ತಿರುವರೇ ಎಂದು ಅವರ ಉತ್ತರ ಪತ್ರಿಕೆಗಳನ್ನು ಪರಿಶೀಲಿಸಿದರು.
ಬಳಿಕ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರು ಪಾವಗಡ ಪಟ್ಟಣದಲ್ಲಿ ಸಮಾಜ ಕಲ್ಯಾಣ ಇಲಾಖೆಯಡಿ ನಡೆಸಲಾಗುತ್ತಿರುವ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿನಿಲಯದಲ್ಲಿ ಆಹಾರ ತಯಾರಿಸುವ ಅಡುಗೆ ಕೋಣೆ, ಮಲಗುವ ಕೋಣೆ ಪರಿಶೀಲಿಸಿ ಮಕ್ಕಳು ಮಲಗುವ ಹಾಸಿಗೆ ಸ್ವಚ್ಛತೆಯಿಂದ ಕೂಡಿಲ್ಲ. ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಕೂಡಲೇ ಉತ್ತಮ ಹಾಸಿಗೆ-ಹೊದಿಕೆ ವ್ಯವಸ್ಥೆ ಮಾಡಬೇಕೆಂದು ಸೂಚಿಸಿದರಲ್ಲದೆ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಕೃಷ್ಣಪ್ಪ ಅವರಿಗೆ ಶೋಕಾಸ್ ನೋಟೀಸ್ ನೀಡಲು ಕ್ರಮವಹಿಸಲಾಗುವುದೆಂದು ತಿಳಿಸಿದರು.
ಪಾವಗಡ ತಾಲ್ಲೂಕಿನ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಭೇಟಿ ನೀಡಿ ಆಡಳಿತ ವೈದ್ಯಾಧಿಕಾರಿ ಡಾ|| ಎ.ಎಸ್.ಎಲ್. ಬಾಬು ಅವರಿಂದ ಸಿಬ್ಬಂದಿಗಳ ಮಾಹಿತಿ ಪಡೆದು ಆಸ್ಪತ್ರೆಯಲ್ಲಿರುವ ಮಕ್ಕಳ, ಅರವಳಿಕೆ, ಸ್ತ್ರೀ ರೋಗ ತಜ್ಞರ ಕೊಠಡಿ, ಹೆರಿಗೆ ವಾರ್ಡ್, ಶಸ್ತ್ರ ಚಿಕಿತ್ಸಾ ಕೊಠಡಿಯನ್ನು ಪರಿಶೀಲಿಸಿದರು. ಔಷಧ ವಿತರಣಾ ಕೊಠಡಿಗೆ ಭೇಟಿ ನೀಡಿ ಔಷಧಿ ದಾಸ್ತಾನು ಇರುವ ಬಗ್ಗೆ ಮಾಹಿತಿ ಪಡೆದರು. ಉಚಿತವಾಗಿ ಔಷಧಿ ವಿತರಿಸುತ್ತಿರುವ ಬಗ್ಗೆ ರೋಗಿಗಳನ್ನು ವಿಚಾರಿಸಿದರು. ಡಾ|| ಎ.ಎಸ್.ಎಲ್. ಬಾಬು ಮಾತನಾಡಿ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಇದ್ದು, ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ವೈದ್ಯರ ಮೇಲೆ ಒತ್ತಡ ಉಂಟಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು.
ಪಾವಗಡ ಪಟ್ಟಣದಲ್ಲಿ ಹೊಸದಾಗಿ 1.20 ಕೋಟಿ ರೂ. ಅಂದಾಜು ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಪೊಲೀಸ್ ಠಾಣೆ ಕಾಮಗಾರಿಯನ್ನು ಪರಿಶೀಲಿಸಿದರು. ಇದಕ್ಕೂ ಮುನ್ನ ನಾಗಲಮಡಿಕೆ ಸುಬ್ರಹ್ಮಣ್ಯಸ್ವಾಮಿ ಹಾಗೂ ಶನೈಶ್ಚರ ಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿ ದರ್ಶನ ಪಡೆದರು.
ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪಾವಗಡ ತಾಲೂಕಿನ ವಿವಿಧ ಚೆಕ್‍ಪೋಸ್ಟ್‍ಗಳಿಗೆ ಭೇಟಿ ನೀಡಿ ಪರಿಶೀಲಿಸಲಾಯಿತು. ಪ್ರತಿಯೊಂದು ವಾಹನವನ್ನೂ ಕಡ್ಡಾಯವಾಗಿ ತಪಾಸಣೆ ಮಾಡಲು ಎಸ್‍ಎಸ್‍ಟಿ ತಂಡ ಹಾಗೂ ಸಿಬ್ಬಂದಿಗಳಿಗೆ ಸೂಚನೆ ನೀಡಲಾಗಿದೆ. ಇಂದಿನಿಂದ (ದಿನಾಂಕ 28-3-2024ರಿಂದ) ನಾಮಪತ್ರ ಸಲ್ಲಿಕೆ ಪ್ರಾರಂಭವಾಗಲಿದ್ದು, ಚುನಾವಣಾ ಸಿಬ್ಬಂದಿಗಳ ಜವಾಬ್ದಾರಿ ಇನ್ನಷ್ಟು ಹೆಚ್ಚಾಗಲಿದೆ. ಚುನಾವಣಾ ಅಭ್ಯರ್ಥಿಗಳ ಅಂತಿಮ ಪಟ್ಟಿ ಪ್ರಕಟವಾದ ನಂತರ ಮತದಾರನಿಗೆ ಹಣ /ಮತ್ತಿತರ ವಸ್ತುಗಳ ಆಮಿಷ ಒಡ್ದುವ ಸಾಧ್ಯತೆ ಹೆಚ್ಚಿರುವುದರಿಂದ ಚೆಕ್‍ಪೋಸ್ಟ್‍ಗಳಿಂದ ಹೊರ ಹೋಗುವ ಹಾಗೂ ಒಳ ಬರುವ ವಾಹನಗಳ ಮೇಲೆ ಹದ್ದಿನ ಕಣ್ಣಿಡಲು ಸಿಬ್ಬಂದಿಗಳಿಗೆ ಸೂಚಿಸಲಾಗಿದೆ ಎಂದರು.
ಎಫ್‍ಎಸ್‍ಟಿ, ಎಸ್‍ಎಸ್‍ಟಿ, ವಿಎಸ್‍ಟಿ, ವಿವಿಟಿ ತಂಡ ಹಾಗೂ ಪಿಆರ್‍ಓ/ಎಪಿಆರ್‍ಓ, ನೋಡಲ್ ಅಧಿಕಾರಿ, ಸಹಾಯಕ ಚುನಾವಣಾಧಿಕಾರಿಗಳು ಸೇರಿದಂತೆ ಎಲ್ಲ ಚುನಾವಣಾ ನಿಯೋಜಿತ ಅಧಿಕಾರಿಗಳು ಸಮನ್ವಯತೆಯಿಂದ ಕರ್ತವ್ಯ ನಿರ್ವಹಿಸಿದಾಗ ಮಾತ್ರ ಯಶಸ್ವಿ ಚುನಾವಣೆ ನಡೆಸಲು ಸಾಧ್ಯವೆಂದು ತಿಳಿಸಿದರಲ್ಲದೆ ಮತದಾರರೂ ಸಹ ಏಪ್ರಿಲ್ 26ರಂದು ನಡೆಯುವ ಮತದಾನ ದಿನದಂದು ಯಾವುದೇ ಆಮಿಷಕ್ಕೊಳಗಾಗದೆ ಕಡ್ಡಾಯವಾಗಿ ತಮ್ಮ ಸಮೀಪದ ಮತಗಟ್ಟೆಗೆ ಭೇಟಿ ನೀಡಿ ತಮ್ಮ ಅಮೂಲ್ಯ ಮತ ಚಲಾಯಿಸಿ ಉತ್ತಮ ವ್ಯಕ್ತಿಯನ್ನು ಆಯ್ಕೆ ಮಾಡುವ ಮೂಲಕ ಚುನಾವಣಾ ಹಬ್ಬದಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.
ಲೋಕಸಭಾ ಚುನಾವಣೆಯಲ್ಲಿ ಶೇ.100ರಷ್ಟು ಮತದಾನವಾಗಬೇಕು. ಸಾರ್ವಜನಿಕರೂ ಸಹ ಚುನಾವಣಾ ಅಕ್ರಮಗಳು ಕಂಡು ಬಂದರೆ ಕೂಡಲೇ ಸಹಾಯವಾಣಿ ಸಂಖ್ಯೆ 1950 ಅಥವಾ ಸಿ-ವಿಜಿಲ್ ಆಪ್ ಮೂಲಕ ದೂರು ನೀಡಿ ನ್ಯಾಯಸಮ್ಮತ ಚುನಾವಣೆ ನಡೆಸಲು ಜಿಲ್ಲಾಡಳಿತದೊಂದಿಗೆ ಕೈ ಜೋಡಿಸಬೇಕು. ಚುನಾವಣೆ ಅಕ್ರಮಗಳ ಬಗ್ಗೆ ದೂರು ಬಂದ ಕೂಡಲೇ ಎಫ್‍ಎಸ್‍ಟಿ ತಂಡ ಸ್ಥಳಕ್ಕೆ ಧಾವಿಸಿ ಸಂಬಂಧಿಸಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದರು.
ಜಿಲ್ಲೆಯ ಬರ ನಿರ್ವಹಣೆ ಬಗ್ಗೆ ಪತ್ರಕರ್ತರೊಬ್ಬರು ಮಾಹಿತಿ ಕೇಳಿದಾಗ ಉತ್ತರಿಸಿದ ಜಿಲ್ಲಾಧಿಕಾರಿ ಪ್ರತೀ ದಿನ ಬರ ನಿರ್ವಹಣೆಗೆ ಸಂಬಂಧಿಸಿದ ಮಾಹಿತಿಯನ್ನು ಆಯಾ ತಾಲೂಕು ತಹಶೀಲ್ದಾರರು ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಂದ ಮಾಹಿತಿ ಪಡೆದು ಅಗತ್ಯ ಕ್ರಮ ವಹಿಸಲಾಗುತ್ತಿದೆ ಎಂದರು.
ಜನ ಸಾಮಾನ್ಯರಿಗೆ ಕುಡಿಯುವ ನೀರಿನ ಸಮಸ್ಯೆ ಬಾರದಂತೆ ಕ್ರಮ ವಹಿಸಬೇಕು. ಕುಡಿಯುವ ನೀರಿನ ಬವಣೆ ಇರುವ ಗ್ರಾಮಗಳಲ್ಲಿ ತುರ್ತಾಗಿ ಟ್ಯಾಂಕರ್ ಮೂಲಕ ಅಥವಾ ಖಾಸಗಿ ಕೊಳವೆ ಬಾವಿ ಮೂಲಕ ನೀರು ಸರಬರಾಜಿಗೆ ಕ್ರಮ ಕೈಗೊಳ್ಳಬೇಕೆಂದು ನಿರ್ದೇಶನ ನೀಡಲಾಗಿದೆ. ಜಿಲ್ಲೆಯ ಎಲ್ಲಾ ತಾಲೂಕುಗಳಿಗೆ ಹೋಲಿಸಿದರೆ ಪಾವಗಡದಲ್ಲಿ ಜಾನುವಾರು ಮೇವಿಗೆ ಕೊರತೆ ಇರುವುದು ಜಿಲ್ಲಾಡಳಿತದ ಗಮನಕ್ಕೆ ಬಂದಿದ್ದು ಮೇವಿನ ಕೊರತೆ ನೀಗಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಹೇಳಿದರು.
ಪಾವಗಡದಲ್ಲಿ ಮರಳು ದಂಧೆ, ಮಟಕಾ ದಂಧೆ ನಡೆಯುತ್ತಿರುವ ಬಗ್ಗೆ ದೂರುಗಳಿದ್ದರೂ ಜಿಲ್ಲಾಡಳಿತ ಕ್ರಮ ಕೈಗೊಳ್ಳದಿರಲು ಕಾರಣವೇನೆಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಜಿಲ್ಲಾಧಿಕಾರಿ ಅಕ್ರಮ ಮರಳು ದಂಧೆ ಹಾಗೂ ಮಟಕಾ ದಂಧೆ ವರದಿಯಾದರೆ ಕೂಡಲೇ ಅಂಥವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ವಹಿಸಲಾಗುವುದೆಂದರು.
ಪಾವಗಡ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಖಾಲಿ ಇರುವ ವೈದ್ಯರ ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದರಲ್ಲದೆ ಸಿಎಸ್‍ಆರ್ ನಿಧಿ ಬಳಸಿ ತಾತ್ಕಾಲಿಕವಾಗಿ ತುಂಬುವ ಬಗ್ಗೆ ಪರಿಶೀಲಿಸಲಾಗುವುದೆಂದರು.
ಮುನ್ನೆಚ್ಚರಿಕಾ ಕ್ರಮವಾಗಿ ಆಂಧ್ರಪ್ರದೇಶದ ಸತ್ಯಸಾಯಿ ಹಾಗೂ ಅನಂತಪುರ ಜಿಲ್ಲೆಯ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ, ಅಬಕಾರಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಗಡಿ ಭಾಗದಲ್ಲಿ ಕೈಗೊಳ್ಳಬೇಕಾದ ಬಿಗಿ ಕ್ರಮಗಳ ಬಗ್ಗೆ ಚರ್ಚಿಸಲಾಗಿದೆ ಎಂದು ಮಾಹಿತಿ ನೀಡಿದರು.
*************