- ಬಿಜೆಪಿ- ಜೆಡಿಎಸ್ ಬೇರೆ ಅಲ್ಲ –ಬಿ.ಎಸ್.ಯಡಿಯೂರಪ್ಪ
- ಸಿದ್ದರಾಮಯ್ಯ ಗರ್ವಭಂಗ ಆಗಬೇಕು ಎಂದು ಗುಡುಗಿದ ಹೆಚ್.ಡಿ.ದೇವೇಗೌಡರು||
- |ಮೋದಿ ಅವರು ದುರ್ಬಲ ಪ್ರಧಾನಮಂತ್ರಿಯಂತೆ, ಇವರು ಪ್ರಬಲ ಮುಖ್ಯಮಂತ್ರಿಯಂತೆ!!
- ಆ ಮಹಾನುಬಾವರಿಗೆ, ನಮೋ ನಮಃ ಎಂದು ಸಿದ್ದರಾಮಯ್ಯಗೆ ಕುಟುಕಿದ ಮಾಜಿ ಪ್ರಧಾನಿಗಳು||
- ರಾಜ್ಯದಿಂದ ಎಐಸಿಸಿಗೆ ಹಣ ಸಂದಾಯವಾಗುತ್ತಿದೆ ಎಂದು ಆರೋಪ||
- ಸಮನ್ವಯತೆಯಿಂದ ಕೆಲಸ ಮಾಡೋಣ- ದೇವೇಗೌಡ
ಬೆಂಗಳೂರು: ಈ ಸರಕಾರ ಜನರ ವಿಶ್ವಾಸ ಕಳೆದುಕೊಂಡಿದೆ ಎಂದು ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಮತ್ತು ರಾಜ್ಯದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತಿಳಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ, ಬಿಜೆಪಿ ಮತ್ತು ಜೆಡಿಎಸ್ ಆಹ್ವಾನಿತ ಪ್ರಮುಖರ ಉಪಸ್ಥಿತಿಯಲ್ಲಿ ನಗರದ ರ್ಯಾಡಿಸನ್ ಬ್ಲೂ ಹೋಟೆಲ್‍ನಲ್ಲಿ ಇಂದು ನಡೆದ ಬಿಜೆಪಿ ಮತ್ತು ಜೆಡಿಎಸ್ ಸಮನ್ವಯ ಸಭೆಯಲ್ಲಿ ಮಾತನಾಡಿದ ಅವರು, ಸರಕಾರದ ಖಜಾನೆ ಖಾಲಿಯಾಗಿದ್ದು, ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡಿವೆ. ಕಿಸಾನ್ ಸಮ್ಮಾನ್ ಯೋಜನೆಯಡಿ ಕೇಂದ್ರದ 6 ಸಾವಿರ ಜೊತೆಗೆ ನಾನು ಮುಖ್ಯಮಂತ್ರಿ ಆಗಿದ್ದಾಗ 4 ಸಾವಿರ ಹೆಚ್ಚುವರಿಯಾಗಿ ಕೊಡುತ್ತಿದ್ದೆ. ಆ 4 ಸಾವಿರ ನಿಂತು ಹೋಗಿದೆ ಎಂದು ಟೀಕಿಸಿದರು. ಸರಕಾರ ದಿವಾಳಿ ಆಗಿರುವುದಕ್ಕೆ ಬೇರೆ ಉದಾಹರಣೆ ಬೇಕೇ ಎಂದು ಪ್ರಶ್ನಿಸಿದರು.
ಬಿಜೆಪಿ- ಜೆಡಿಎಸ್ ಬೇರೆ ಅಲ್ಲ. ನಾವೆಲ್ಲ ಒಂದೇ ತಾಯಿ ಮಕ್ಕಳಂತೆ. ಬಿಜೆಪಿ- ಜೆಡಿಎಸ್ ಅಭ್ಯರ್ಥಿ ಯಾರೇ ಇರಲಿ; ಅವರನ್ನು ಗೆಲ್ಲಿಸಲು ಪ್ರಾಮಾಣಿಕವಾಗಿ ಪಣ ತೊಡಿ. ಆಗ ರಾಜ್ಯದ ಎಲ್ಲ ಲೋಕಸಭಾ ಕ್ಷೇತ್ರಗಳಲ್ಲಿ ಗೆಲ್ಲುವ ನಮ್ಮ ಪ್ರಯತ್ನವನ್ನು ತಡೆಯಲು ಯಾರಿಂದಲೂ ಅಸಾಧ್ಯ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ದೇಶ- ವಿದೇಶಗಳಲ್ಲಿ ನಿರಂತರ ಪ್ರವಾಸ ಮಾಡುತ್ತಿರುವ, ಒಂದು ದಿನ ರಜೆ ಪಡೆಯದೆ ದೇಶದ ಅಭಿವೃದ್ಧಿಗೆ ಶ್ರಮಿಸುವ ಮಾನ್ಯ ಪ್ರಧಾನಿ ನರೇಂದ್ರ ಮೋದಿ ಜೀ ಮತ್ತು ಈ ಹರೆಯದಲ್ಲೂ ಅತ್ಯಂತ ಉತ್ಸಾಹದಿಂದ ರಾಜ್ಯ ಪ್ರವಾಸ ಮಾಡಲು ಸಿದ್ಧರಾಗಿರುವ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ನಮ್ಮೆಲ್ಲರಿಗೂ ಆದರ್ಶಪ್ರಾಯರು ಎಂದರಲ್ಲದೆ, ಕಾಯಾ, ವಾಚಾ, ಮನಸಾ ಕೆಲಸ ಮಾಡಿ 28ಕ್ಕೆ 28 ಕ್ಷೇತ್ರ ಗೆಲ್ಲೋಣ ಎಂದು ಮನವಿ ಮಾಡಿದರು.
ಸಮನ್ವಯತೆಯಿಂದ ಕೆಲಸ ಮಾಡೋಣ- ದೇವೇಗೌಡ
ನರೇಂದ್ರ ಮೋದಿ ಅವರು ದುರ್ಬಲ ಪ್ರಧಾನಮಂತ್ರಿ, ನಾನು ಪ್ರಬಲ ಸಿಎಂ ಎಂದು ಕೊಚ್ಚಿಕೊಂಡ ಸಿದ್ದರಾಮಯ್ಯ ಅವರ ಗರ್ವಭಂಗ ಈ ಲೋಕಸಭೆ ಚುನಾವಣೆಯಲ್ಲಿ ಆಗಬೇಕು ಎಂದು ಮಾಜಿ ಪ್ರಧಾನಿಗಳು, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ಹೆಚ್.ಡಿ.ದೇವೇಗೌಡರು ಗುಡುಗಿದರು.
ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರು ಮಾತನಾಡಿ, ಎರಡು ಹಂತದಲ್ಲಿ ಚುನಾವಣೆ ನಡೆಯಲಿದೆ. ನಮ್ಮೆದುರು ಇರುವ ಕಾಲಾವಧಿ ಅತ್ಯಂತ ಕಡಿಮೆ ಇದೆ. ನಾವು ಹಳೆಯದೆಲ್ಲವನ್ನು ಮರೆತು ಸಮನ್ವಯತೆಯಿಂದ ಕೆಲಸ ಮಾಡಬೇಕು ಎಂದು ಮನವಿ ಮಾಡಿದರು.
ನಮ್ಮ ವಿರೋಧಿಗಳು ಬಲಿಷ್ಠರಿದ್ದಾರೆ. ನಾವು ಭೂತಕಾಲದ ಎಲ್ಲವನ್ನು ಮರೆಯದೆ ಇದ್ದರೆ 28ಕ್ಕೆ 28 ಕ್ಷೇತ್ರಗಳನ್ನು ಗೆಲ್ಲಲು ಸಾಧ್ಯವಾಗದು ಎಂದು ಕಿವಿಮಾತು ಹೇಳಿದರು. ಕಾಂಗ್ರೆಸ್ ಪಕ್ಷವು ಹಣಬಲದಿಂದ ಗೆಲ್ಲಲು ಮುಂದಾಗಿದೆ. ಬೇರೆ ರಾಜ್ಯಗಳಿಗೂ ಅದು ಚುನಾವಣೆಗೆ ಹಣದ ನೆರವು ನೀಡುತ್ತಿದೆ ಎಂದು ಗಮನ ಸೆಳೆದ ಅವರು, ಇವೆಲ್ಲವನ್ನೂ ನಾವು ಗಮನದಲ್ಲಿ ಇಟ್ಟುಕೊಳ್ಳಬೇಕು. ಭಿನ್ನಮತ ದೂರ ಮಾಡಲು ಯಾವುದೇ ನಾಯಕರ ಮನೆಗೆ ಹೋಗಲು ಸಿದ್ಧ ಎಂದು ನುಡಿದರು. ನರೇಂದ್ರ ಮೋದಿಯಂತಹ ಜಗಮೆಚ್ಚಿದ ನಾಯಕರ ಬಗ್ಗೆ ಲಘುವಾಗಿ ಮಾತನಾಡಿರುವ ಸಿದ್ದರಾಮಯ್ಯ ಅವರಿಗೆ ಈ ಚುನಾವಣೆಯಲ್ಲಿ ಪಾಠ ಕಲಿಸಬೇಕು. ಮೈಸೂರಿನಲ್ಲಿ ಮೈತ್ರಿ ಅಭ್ಯರ್ಥಿ ಗೆಲ್ಲಿಸಿ, ಸಿದ್ದರಾಮಯ್ಯ ಗರ್ವಭಂಗ ಮಾಡಿ ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕರು, ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷರಾದ ಜಿಟಿ ದೇವೇಗೌಡರಿಗೆ ನಿರ್ದೇಶನ ನೀಡಿದರು.
ಮೈಸೂರು ಚಾಮರಾಜನಗರ ಕ್ಷೇತ್ರ ಗೆಲ್ಲುವ ಶಕ್ತಿ ಜಿ.ಟಿ.ದೇವೇಗೌಡರಿಗೆ ಇದೆ. ಸಿದ್ದರಾಮಯ್ಯ ಅವರ ಗರ್ವಭಂಗ ಆಗಲೇಬೇಕು. ಅವರ ಗರ್ವಭಂಗ ಆಗಬೇಕಾದರೆ ನಾವೆಲ್ಲರೂ ಛಲದಿಂದ ಒಟ್ಟಾಗಿ ಹೋಗಬೇಕು ಎಂದು ವೇದಿಕೆಯಲ್ಲೇ ಜಿ.ಟಿ.ದೇವೇಗೌಡರಿಗೆ ಹೇಳಿದರು ಮಾಜಿ ಪ್ರಧಾನಿಗಳು.
ಮೈತ್ರಿಯಲ್ಲಿ ಎಲ್ಲಿಯೂ ಒಂದು ಸಣ್ಣ ಸಮಸ್ಯೆಯೂ ಕಾಣಿಸಿಕೊಳ್ಳಬಾರದು. ಒಬ್ಬ ಸಾಮಾನ್ಯ ಕಾರ್ಯಕರ್ತನನ್ನೂ ಬಿಡದೇ ಹೋರಾಟ ಮಾಡೋಣ. ಒಂದು ರಾಜ್ಯದ ಸಿಎಂ ಗಟ್ಟಿಯಾಗಿರಬೇಕಂತೆ, ದೇಶದ ಪ್ರಧಾನಿ ಬಹಳ ವೀಕ್ ಅಂತೆ.. ಅಬ್ಬಾ..! ಪ್ರಧಾನಿ ವಿರುದ್ಧವೇ ಕೋರ್ಟಿಗೆ ಹೋಗಿದ್ದಾರೆ.. ಎಂಥಾ ಜನ ಇವರು ಎಂದು ದೇವೇಗೌಡರು ಕಿಡಿಕಾರಿದರು.
ಮನಮೋಹನ್ ಸಿಂಗ್ NO ಎಂದರು
ರೈತರ ಸಾಲದ ಮೇಲೆ ಬಡ್ಡಿ ಮನ್ನ ಮಾಡಿ ಎಂದು ಕೇಳಿದರೆ, ಮನಮೋಹನ್ ಸಿಂಗ್ ಅವರು NO ಎಂದರು. ಇದೆಲ್ಲಾ ಗೊತ್ತಿದ್ದರೂ ಸಿದ್ದರಾಮಯ್ಯ ಅವರೇ ಕೋರ್ಟಿಗೆ ಅರ್ಜಿ ಹಾಕ್ತೀರಾ? ಸ್ಟ್ರಾಂಗೆಸ್ಟ್ ಮುಖ್ಯಮಂತ್ರಿ, ವೀಕೆಸ್ಟ್ ಪ್ರಧಾನಮಂತ್ರಿ! ಇಂತಹ ಮುಖ್ಯಮಂತ್ರಿ ನಮ್ಮ ರಾಜ್ಯದಲ್ಲಿದ್ದಾರೆ. ಆ ಮಹಾನುಬಾವರಿಗೆ, ನಮೋ ನಮಃ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಸಿದ್ದರಾಮಯ್ಯನವರು ಜೆಡಿಎಸ್ ಎಲ್ಲಿದೆ ಅಂತಾರೆ. ಅವರಿಗೆ ಅಧಿಕಾರದ ಮದ. ಆ ಮದ ಇಳಿಸುವ ಸಾಮರ್ಥ್ಯ 91ನೇ ವರ್ಷದ ಈ ದೇವೇಗೌಡನಿಗಿದೆ. ಯಾರ ಭಯಕ್ಕೂ ನಾನು ಅಂಜುವನಲ್ಲ. ಆ ಭಯ ಅನ್ನೋದೇ ನನಗಿಲ್ಲ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ದೇವೇಗೌಡರ ಗುಡುಗಿದರು
ನನ್ನ ತಲೆ ಎನ್‌ಸೈಕ್ಲೋಪೀಡಿಯಾ. ಯಾವಾಗ, ಏನೆಲ್ಲಾ ಘಟನೆ ನಡೆದಿದೆ ಎಲ್ಲವನ್ನೂ ಹೇಳಬಲ್ಲೆ. ಯಡಿಯೂರಪ್ಪ ಅವರೇ ನನಗೆ ಎಲ್ಲಾ ಗೊತ್ತು ಎಂದ ಅವರು; ತುಮಕೂರಿಗೆ ಕಳಿಸಿ, ನನ್ನನ್ನೇ ಸೋಲಿಸಿದರು. ಕಾಂಗ್ರೆಸ್ ನವರು ಏನು ಮಾಡಿದರು ಎನ್ನುವುದು ಗೊತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಎಐಸಿಸಿಗೆ ಹಣ ಸಂದಾಯವಾಗುತ್ತಿದೆ
ಕಾಂಗ್ರೆಸ್ ರಾಜ್ಯವನ್ನು ಕೊಳ್ಳೆ ಹೊಡೆಯುತ್ತಿದೆ ಎಂದು ಆರೋಪ ಮಾಡಿದ ಮಾಜಿ ಪ್ರಧಾನಿಗಳು; 28 ಕ್ಷೇತ್ರಗಳಲ್ಲೂ ಕಾಂಗ್ರೆಸ್ ಹಣ ಬಲವನ್ನು ನಾವು ಎದುರಿಸಬೇಕಿದೆ. ಹೊರ ರಾಜ್ಯಗಳಿಗೂ ಕಾಂಗ್ರೆಸ್ ನವರು ಹಣ ಸರಬರಾಜು ಮಾಡ್ತಿದ್ದಾರೆ. ರಾಜಸ್ಥಾನ, ತೆಲಾಂಗಣ ಸೇರಿದಂತೆ ಹಲವಾರು ರಾಜ್ಯಗಳಲ್ಲಿ ಕಾಂಗ್ರೆಸ್ ಸರ್ಕಾರ ಇದೆ. ಅಲ್ಲಿಗೆಲ್ಲ ರಾಜ್ಯದ ಹಣ ಹೋಗುತ್ತಿದೆ. ಕರ್ನಾಟಕದಿಂದ ಎಐಸಿಸಿಗೆ ಹಣ ಸಂದಾಯವಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದರು.
ಎರಡು ಪಕ್ಷಗಳ ಸಮನ್ವಯ ಸಮಿತಿ ಸಭೆ ನಡೆಯುತ್ತಿರುವುದು ಸಂತೋಷದಾಯಕ. ಭಾರತ ಮಾತೆ ಹಾಗೂ ಶ್ಯಾಮ್ ಪ್ರಸಾದ್ ಮುಖರ್ಜಿ, ದೀನ್ ದಯಾಳ್ ಉಪಾಧ್ಯಾಯ ಅವರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಅರ್ಪಿಸಿ ವೇದಿಕೆಗೆ ಬಂದಿದ್ದೇನೆ. ರಾಜ್ಯ ಉಸ್ತುವಾರಿ ರಾಧಮೋಹನ್ ದಾಸ್ ಎಲ್ಲಾ ಕ್ಷೇತ್ರಗಳ ಮಾಹಿತಿ ಪಡೆದಿದ್ದಾರೆ. ಎಲ್ಲಾ ಮಾಹಿತಿಯನ್ನ ಬಿಜೆಪಿ ವರಿಷ್ಠರಿಗೆ ನೀಡ್ತಿದ್ದಾರೆ. ಎರಡು ಪಕ್ಷದಲ್ಲಿ ಸಮನ್ವಯ ಸಾಧಿಸಬೇಕು. ಯಡಿಯೂರಪ್ಪ ಅವರ ಪಾತ್ರ ಬಹಳ ಮುಖ್ಯವಾಗಿದೆ. ಸಮಯ ತುಂಬಾ ಕಡಿಮೆ ಇದೆ. ಹಿಂದೆ ಆದಂತಹ ವಿಚಾರಗಳನ್ನ ಮರೆತು ನಾವೆಲ್ಲಾ ಒಂದಾಗಬೇಕಿದೆ. ಕಾರ್ಯಕರ್ತರು ಕೆಲಸ ಮಾಡಬೇಕಿದೆ ಎಂದರು ಅವರು.
ಎರಡೂ ಪಕ್ಷದವರು ಜೊತೆಯಾಗಿ ಕೆಲಸ ಮಾಡಿದರೆ ಎಲ್ಲ ಕ್ಷೇತ್ರಗಳಲ್ಲಿ ನಮಗೆ ಗೆಲ್ಲುವ ಸಾಮಥ್ರ್ಯ ಇದೆ ಎಂದ ಅವರು, ಮೋದಿಯವರು ಮತ್ತು ತಮ್ಮ ನಡುವಿನ ಆತ್ಮೀಯ ಕ್ಷಣಗಳನ್ನು ನೆನಪಿಸಿಕೊಂಡರು. ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ.ಕುಮಾರಸ್ವಾಮಿ, ಬಸವರಾಜ ಬೊಮ್ಮಾಯಿ, ಡಿ.ವಿ.ಸದಾನಂದಗೌಡ, ಲೋಕಸಭಾ ಚುನಾವಣೆಯ ರಾಜ್ಯ ಉಸ್ತುವಾರಿ ರಾಧಾಮೋಹನ್‍ದಾಸ್ ಅಗರವಾಲ್, ವಿರೋಧ ಪಕ್ಷದ ನಾಯಕ ಆರ್. ಅಶೋಕ್, ರಾಜ್ಯದ ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ರಾಜ್ಯದ ಮಾಜಿ ಸಚಿವ ಜಿ.ಟಿ. ದೇವೇಗೌಡ, ಎರಡೂ ಪಕ್ಷಗಳ ಆಹ್ವಾನಿತ ಮುಖಂಡರು ಭಾಗವಹಿಸಿದ್ದರು.
|