21 6 21 Sanitization and Grocery kits to Auto drivers 2

ಪಾವಗಡ: ಆಟೋ – ಟ್ಯಾಕ್ಸಿ ಗಳಿಗೆ ಔಷಧಿ ಸಿಂಪಡಣೆ…!

DISTRICT NEWS ತುಮಕೂರು

ಪಾವಗಡ: ಕಳೆದ ಮೂರು ತಿಂಗಳುಗಳಿಂದ ಏಕಪ್ರಕಾರವಾಗಿ ಕೋವಿಡ್19 ಎರಡನೇ ಅಲೆಯ ಕಾರ್ಯ ಯೋಜನೆಗಳನ್ನು ಅತ್ಯಂತ ಶಿಸ್ತುಬದ್ದವಾಗಿ ತುಮಕೂರು ಜಿಲ್ಲೆಯಾದ್ಯಂತ ಸೇವೆಯನ್ನು ಸಲ್ಲಿಸುವ ಮಹತ್ಕಾರ್ಯವನ್ನು ಯಶಸ್ವಿಯಾಗಿ ನಡೆಸಲಾಗಿದೆ.
ಈ ನಿಟ್ಟಿನಲ್ಲಿ ಇಂದು ಸರ್ಕಾರದ ನಿಯಮಗಳ ಪ್ರಕಾರ ಆಟೋಗಳು ಹಾಗೂ ಟ್ಯಾಕ್ಸಿಗಳು ಪ್ರತಿನಿತ್ಯ ಸ್ಯಾನಿಟೈಸರ್ ಮಾಡಿಕೊಂಡೇ ಹೊರಬರಬೇಕು ಎಂಬುದು ಎಲ್ಲರಿಗೂ ತಿಳಿದ ವಿಚಾರವೇ ಸರಿ. ಈಗಾಗಲೇ ಆಟೋಗಳಿಗೆ ಹಾಗೂ ಟ್ಯಾಕ್ಸಿಗಳಿಗೆ ಸ್ಯಾನಿಟೈಸರನ್ನು ಆಗಾಗ್ಗೆ ಮಾಡಿರುವ ಶ್ರೀರಾಮಕೃಷ್ಣ ಸೇವಾಶ್ರಮ ಇಂದು ಮುಂಜಾನೆ ಲಾಕ್‌ಡೌನ್ ತೆರೆದ ಹಿನ್ನೆಲೆಯಲ್ಲಿ ಸರಿಸುಮಾರು 300ಕ್ಕೂ ಹೆಚ್ಚು ಆಟೋಗಳಿಗೆ ಪಟ್ಟಣದ ಗುರುಭವನದ ಮಗ್ಗುಲಲ್ಲಿರುವ ಮೈದಾನದಲ್ಲಿ ಔಷಧಿಯನ್ನು ಸಿಂಪಡಿಸಲಾಯಿತು. ಅತ್ಯಂತ ಶಿಸ್ತುಬದ್ದವಾಗಿ ಪಟ್ಟಣದ ಹಾಗೂ ಸುತ್ತಮುತ್ತಲಿನ 280 ಪ್ರಯಾಣಿಕ ಆಟೋ ಹಾಗೂ 20 ಸರಕು ಸಾಗಣಿಕೆಯ ಆಟೋಗಳಿಗೆ ಸಂಪೂರ್ಣ ಔಷಧಿಯನ್ನು ಸಿಂಪಡಿಸಲಾಯಿತು.
ಇದೇ ಸಂದರ್ಭದಲ್ಲಿ ಎಲ್ಲ ಆಟೋ ಚಾಲಕರಿಗೆ ಮೂರನೇ ಅಲೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿ ಲಸಿಕೆಯನ್ನು ಹಾಕಿಸಿಕೊಳ್ಳುವ ಬಗ್ಗೆ ಜಾಗೃತಿ ಮೂಡಿಸಲಾಯಿತು. ಸಾಮಾಜಿಕ ಅಂತರ ಹಾಗೂ ಶುಚಿತ್ವಕ್ಕೆ ಹೆಚ್ಚು ಗಮನ ಕೊಡಬೇಕು ಎಂದು ಪೂಜ್ಯ ಸ್ವಾಮಿ ಜಪಾನಂದಜಿ ರವರು ನೆರೆದ 300 ಆಟೋ ಚಾಲಕರಿಗೆ ಕಿವಿಮಾತು ತಿಳಿಸಿದರು. ಇದೇ ಸಂದರ್ಭದಲ್ಲಿ ಮಾಸ್ಕ್ ಇಲ್ಲದೆ ಯಾವುದೇ ಪ್ರಯಾಣಿಕರನ್ನು ಹತ್ತಿಸಿಕೊಳ್ಳಬಾರದು ಎಂದು ಕಟ್ಟುನಿಟ್ಟಾಗಿ ತಿಳಿಸಿದರು. ಆಟೋ ಚಾಲಕರಿಗೆ ಮುಖಗವಸು, ಸಾಬೂನು ಹಾಗೂ ದಿನಸಿ ಕಿಟ್ಟುಗಳನ್ನು ಎರಡನೇ ಬಾರಿಗೆ ವಿತರಿಸಲಾಯಿತು. ಈ ಹಿಂದೆ ಏಪ್ರಿಲ್ ತಿಂಗಳಿನಲ್ಲಿ ಇದೇ ಚಾಲಕರುಗಳಿಗೆ ದಿನಸಿ ಕಿಟ್ಟುಗಳನ್ನು ನೀಡಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಆಟೋ ಚಾಲಕರ ಸಂತೋಷಕ್ಕೆ ಪಾರವೇ ಇಲ್ಲದಂತಾಯಿತು. ಇದೇ ಸಂದರ್ಭದಲ್ಲಿ ಪೂಜ್ಯ ಸ್ವಾಮೀಜಿಯವರು ಪಾವಗಡ ಪಟ್ಟಣದ ಹಿತದೃಷ್ಟಿಯಿಂದ ಹಾಗೂ ಆಟೋ ಚಾಲಕರ ಆರೋಗ್ಯದ ದೃಷ್ಟಿಯಿಂದ ವಾರಕ್ಕೊಮ್ಮೆ ಅಂದರೆ ಪ್ರತಿ ಭಾನುವಾರ ಆಶ್ರಮದ ವತಿಯಿಂದ ಔಷಧಿಯನ್ನು ಸಿಂಪಡಿಸುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಮತ್ತೊಬ್ಬ ಸ್ವಯಂಸೇವಕರು ಹಾಗೂ ಆಶ್ರಮದ ನಿಕಟವರ್ತಿಗಳೂ ಆದ ಶ್ರೀ ಮಂಜುನಾಥ್, ಸರ್ಕಾರಿ ಸಹಾಯಕ ಅಭಿಯೋಜಕರು ಎಲ್ಲ ಆಟೋ ಸಿಬ್ಬಂದಿಯವರಿಗೆ ಶುಚಿತ್ವ ಹಾಗೂ ಬಹು ಮುಖ್ಯವಾಗಿ ಲಸಿಕೆಯನ್ನು ಹಾಕಿಸಿಕೊಳ್ಳಲೇಬೇಕು ಎಂದು ಎಚ್ಚರ ನೀಡಿ ಒಂದು ವೇಳೆ ಲಸಿಕೆಯನ್ನು ಹಾಕಿಸಿಕೊಳ್ಳದ ಚಾಲಕರ ಗಾಡಿಗಳನ್ನು ಪೊಲೀಸರ ಸಹಕಾರದೊಂದಿಗೆ ಜಪ್ತಿ ಮಾಡುವುದಾಗಿ ಜಾಗೃತಿ ಮೂಡಿಸಿದರು. ಪ್ರತಿಯೊಂದು ಆಟೋ ರಿಕ್ಷಾ ಸಾಲಿನಲ್ಲಿ ಬಂದು ತಮ್ಮ ದಿನಸಿ ಕಿಟ್ಟುಗಳನ್ನು ಪಡೆದು ಜೊತೆಯಲ್ಲಿಯೇ ಆಟೋಗಳಿಗೆ ಔಷಧಿ ಸಿಂಪಡಣೆ ಮಾಡಿಕೊಂಡು ಮಾಸ್ಕ್ ಮತ್ತು ಸೋಪನ್ನು ಪಡೆದು ಹೊಸ ಉತ್ಸಾಹದಿಂದ ಜೀವನ ಮುಂದುವರಿಸಲು ಧಾವಿಸಿದ್ದು ನಿಜಕ್ಕೂ ಸಂತೋಷವನ್ನು ತರುವಂಥದ್ದೇ ಸರಿ. ಈ ಸಂದರ್ಭದಲ್ಲಿ ಅತ್ಯಂತ ಅಚ್ಚುಕಟ್ಟಾಗಿ ಹಾಗೂ ಶಿಸ್ತಿನಿಂದ ಇಡೀ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸುವಂತೆ ಮಾಡಿದ ಶ್ರೀ ನಾಗರಾಜು, ಅಧ್ಯಕ್ಷರು ಆಟೋ ರಿಕ್ಷಾ ಚಾಲಕರ ಸಂಘ ಹಾಗೂ ಶಮಿಉಲ್ಲಾ ಮತ್ತಿತರ ಪದಾಧಿಕಾರಿಗಳು ಮತ್ತು ವಿವೇಕ ಬ್ರಿಗೇಡಿನ ಶ್ರೀ ಲೋಕೇಶ್ ದೇವರಾಜ್, ಶ್ರೀ ಕೆ.ಆರ್.ಜಯಸಿಂಹ ರವರು ಸಕ್ರಿಯವಾಗಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಇದೇ ಸಂದರ್ಭದಲ್ಲಿ ಅಪಘಾತಕ್ಕೆ ಈಡಾದ ಚಾಲಕರಿಗೆ ಸ್ವಾಮೀಜಿಯವರೇ ಸ್ವತಃ ಸಹಾಯ ನೀಡಿದ್ದು ಎಲ್ಲರ ಗಮನ ಸೆಳೆಯಿತು.