ಸಂಚಾರಿ ಕೃಷಿ ಹೆಲ್ತ್ ಕ್ಲಿನಿಕ್‌ಗೆ ಕೊಪ್ಪಳದಿಂದಲೇ ಚಾಲನೆ
ಬೆಂಗಳೂರು/ಕೊಪ್ಪಳ,ಜೂನ್.20: ಕೃಷಿಯಲ್ಲಿ ಅತಿ ಮುಖ್ಯವಾಗಿರುವ ಮಣ್ಣನ್ನು ಕಾಲಕಾಲಕ್ಕೆ ಮತ್ತು ನೀರಿನ ಪರೀಕ್ಷೆ ಅಗತ್ಯ ತಾಂತ್ರಿಕತೆ ನೆರವಿಗಾಗಿ ಸರ್ಕಾರ ಹಾಗೂ ಕೃಷಿ ಇಲಾಖೆ ಉದ್ದೇಶಿಸಿರುವ “ಸಂಚಾರಿ ಕೃಷಿ ಹೆಲ್ತ್ ಕ್ಲಿನಿಕ್”ಗಳ ಪ್ರಾರಂಭಕ್ಕೆ ಉಸ್ತುವಾರಿ ಜಿಲ್ಲೆ ಕೊಪ್ಪಳದಿಂದಲೇ ಚಾಲನೆ ನೀಡಲು ಕೃಷಿ ಸಚಿವರೂ ಆಗಿರುವ ಕೊಪ್ಪಳ ಜಿಲ್ಲಾ ಉಸ್ತುವಾರಿ ಬಿ.ಸಿ.ಪಾಟೀಲ್ ಮುಂದಾಗಿದ್ದಾರೆ.
ಕೊಪ್ಪಳ ಜಿಲ್ಲೆಯಲ್ಲಿ ಸುಮಾರು 20 ರೈತ ಸಂಪರ್ಕ ಕೇಂದ್ರಗಳಿದ್ದು, ಲಭ್ಯವಿರುವ ಜಿಲ್ಲಾ ಉಸ್ತುವಾರಿ ಅನುದಾನದಲ್ಲಿಯೇ ಈ ರೈತ ಸಂಪರ್ಕ ಕೇಂದ್ರಗಳಲ್ಲಿ “ಸಂಚಾರಿ ಕೃಷಿ ಹೆಲ್ತ್ ಕ್ಲಿನಿಕ್” ಗಳಿಗೆ ಚಾಲನೆ ನೀಡುವುದಾಗಿ ಸಚಿವರು ಸ್ಪಷ್ಟಪಡಿಸಿದ್ದಾರೆ
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕಳೆದ ಬಜೆಟ್‌ನಲ್ಲಿ ಸಂಚಾರಿ ಕೃಷಿ ಹೆಲ್ತ್ ಕ್ಲಿನಿಕ್ ಆರಂಭಿಸುವುದಾಗಿ ಘೋಷಿಸಿದ್ದರು.ಅದರಂತೆ ಕೃಷಿ ಸಚಿವರು ಉಸ್ತುವಾರಿ ಜಿಲ್ಲೆ ಕೊಪ್ಪಳದಿಂದಲೇ ಕ್ಲಿನಿಕ್‌ಗಳನ್ನು ಆರಂಭಿಸುವುದಾಗಿ ತಿಳಿಸಿದ್ದಾರೆ . ಈ ಮೊಬೈಲ್ ಕ್ಲಿನಿಕ್ ಹಳ್ಳಿಗಳ್ಳಿಗಳಿಗೆ ಭೇಟಿ ನೀಡಿ , ಅಲ್ಲಿನ ಮಣ್ಣು , ಕೃಷಿಗೆ ಬಳಸುತ್ತಿರುವ ನೀರನ್ನು ಸ್ಥಳದಲ್ಲಿಯೇ ಪರಿಶೀಲನೆ ಮಾಡಿಕೊಡಲಿದೆ . ರೈತರ ಮನೆ ಬಾಗಿಲಿಗೆ ತೆರಳಿ ಕೀಟನಾಶಕ , ಬೆಳೆ ರೋಗಗಳು ಬಗ್ಗೆ ಮಾಹಿತಿ , ಪರಿಹಾರ ನೀಡಲಿದೆ. ಹಾಗೆಯೇ ಸಾವಯವ ಕೃಷಿಗೆ ಹೆಚ್ಚು ಒತ್ತು ನೀಡಲು ನಿರ್ಧರಿಸಲಾಗಿದ್ದು ರೈತರು ನೀರಿನಲ್ಲಿ ಕರಗುವ ಗೊಬ್ಬರ , ಸೂಕ್ಷ್ಮ ಪೌಷ್ಟಿಕಾಂಶ , ಹೈಡ್ರೋಜನ್‌ಗಳನ್ನು ಬಳಸಲು ನೆರವು ನೀಡಲಾಗುವುದು .ಮೊಬೈಲ್ ಕ್ಲಿನಿಕ್ ಬಗ್ಗೆ ತಾಂತ್ರಿಕತೆ ಚರ್ಚೆ ನಡೆದಿದೆ.ಆದಷ್ಟು ಬೇಗ ಕಾರ್ಯಾರಂಭ ಮಾಡಲಾಗುವುದು ಎಂದರು.
ರಾಜ್ಯದಲ್ಲಿ ಕೃಷಿಗೆ ಪೂರಕವಾಗಿ ರೈತ ಸಂಪರ್ಕ ಕೇಂದ್ರಗಳು ಬಹಳಷ್ಟು ಕೆಲಸ ಮಾಡುತ್ತಿದ್ದು, ಈ ರೈತ ಸಂಪರ್ಕ ಕೇಂದ್ರಗಳನ್ನು ಮತ್ತಷ್ಟು ಬಲಗೊಳಿಸಲು ಚಿಂತನೆ ನಡೆಸಲಾಗಿದೆ.
ರೈತ ಸಂಪರ್ಕ ಕೇಂದ್ರಗಳು ಬಹುತೇಕ ಬಾಡಿಗೆ,ಖಾಸಗಿ ಕಟ್ಟಡಗಳಲ್ಲಿ ನಡೆಯುತ್ತಿವೆ.ಕೆಲಸಕ್ಕೆ ಸ್ವಂತ ನಿವೇಶನವಿಲ್ಲ.ಸ್ವಂತ ಕಟ್ಟಡಕ್ಕೆ ನಬಾರ್ಡ್ ಹಣವನ್ನು ಬಳಸಬಹುದಾಗಿದೆ.ಶಾಸಕರು ತಮ್ಮತಮ್ಮ ಕ್ಷೇತ್ರಗಳಲ್ಲಿ ರೈತಸಂಪರ್ಕ ಕೇಂದ್ರಗಳ ಅಭಿವೃದ್ಧಿಗೆ ಹೆಚ್ಚು ಒತ್ತು ಕೊಡಬೇಕು.ರೈತ ಸಂಪರ್ಕ ಕೇಂದ್ರಗಳಿಗಾಗಿ ದಾನಿಗಳಿಂದ ಕಟ್ಟಡ,ನಿವೇಶನ ದಾನಪಡೆಯಲಾಗುವುದು ಎಂದು ತಿಳಿಸಿದರು.
ಕೊರೊನಾ ಲಾಕ್ಡೌನ್ ಸಂದರ್ಭದಲ್ಲಿ ಕೃಷಿ ಚಟುವಟಿಕೆಗಳಿಗೆ ಬಾಧಿತವಾಗದಂತೆ ರೈತರಿಗೆ ಅನುಕೂಲ ಕಲ್ಪಿಸಲು ಕೃಷಿ ವಿಶ್ವವಿದ್ಯಾಲಯಗಳು, ಇಲಾಖೆಗಳಲ್ಲಿ ಆರಂಭಿಸಲಾಗಿರುವ “ಅಗ್ರಿವಾರ್ ರೂಂ” ಬಗ್ಗೆ ಈ ಮೂರು ತಿಂಗಳಿನಲ್ಲಿ ರಾಜ್ಯ ರಾಷ್ಟ್ರಾದ್ಯಂತ ಉತ್ತಮ ಸ್ಪಂದನೆ ಸಿಕ್ಕಿದ್ದು, ಮೆಚ್ಚುಗೆ ವ್ಯಕ್ತವಾದ ಹಿನ್ನಲೆಯಲ್ಲಿ ಅಗ್ರಿವಾರ್ ರೂಮ್‌ಗಳನ್ನು ಮುಂದಿನ ದಿನಗಳಲ್ಲಿಯೂ ಮುಂದುವರೆಸಲಾಗುವುದೆಂದರು.
ಕೋವಿಡ್‌ನಿಂದಾಗಿ ಎಲ್ಲಾ ಇಲಾಖೆಗಳಿಗೂ ಅನುದಾನ ಕೊರತೆಯಾಗಿದೆ.ಅದರಂತೆ ಕೃಷಿ ವಿಶ್ವವಿದ್ಯಾಲಯಗಳಿಗೂ ಅನುದಾನದ ಕೊರತೆಯಾಗಿದೆ.ಆದರೂ ಆರ್ಥಿಕ ಇತಿಮಿತಿಯಲ್ಲಿ ಕೃಷಿಚಟುವಟಿಕೆ ಅಭಿವೃದ್ಧಿಗೆ ಕೊರತೆಯಾಗದಂತೆ ಕ್ರಮವಹಿಸಲಾಗುವುದು ಎಂದು ಬಿ.ಸಿ.ಪಾಟೀಲ್ ಸ್ಪಷ್ಟಪಡಿಸಿದರು.