ಶಿಕ್ಷಕ ವೃತ್ತಿ ಎಂಬುದು ಜ್ಞಾನದ ಸಮುದ್ರ ಇದ್ದಂತೆ: ಬಂಡೆಪ್ಪ ಖಾಶೆಂಪುರ್
ಬೀದರ್ (ಸೆ.08): ಶಿಕ್ಷಕ ವೃತಿ ಎಂಬುದು ಜ್ಞಾನದ ಸಮುದ್ರ ಇದ್ದಂತೆ. ಈ ವೃತಿಯಲ್ಲಿರುವ ಶಿಕ್ಷಕರು ಅದೆಷ್ಟೋ ಮಕ್ಕಳು ಇಂಜಿನಿಯರ್, ಡಾಕ್ಟರ್, ವಿಜ್ಞಾನಿಗಳು ಸೇರಿದಂತೆ ಇನ್ನಿತರೆ ಉನ್ನತ ಮಟ್ಟದ ಸ್ಥಾನಕ್ಕೆ ಹೋಗಲು ನೆರವಾಗಿದ್ದಾರೆ. ಈಗಿನ ತಂದೆ ತಾಯಿಗಳು ಕೂಡ ತಮ್ಮ ಮಕ್ಕಳನ್ನು ಶಾಲೆಗೆ ಕಳಿಸುವ ಮೂಲಕ ಅವರನ್ನು ಶಿಕ್ಷಣವಂತರನ್ನಾಗಿ ಮಾಡಬೇಕಾಗಿದೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರಾಗಿರುವ ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಹೇಳಿದರು.
ಜಿಲ್ಲೆಯ ಚಿಟಗುಪ್ಪಾದಲ್ಲಿ ಬುಧವಾರ ನಡೆದ ‘ಪ್ರಥಮ ಚಿಟಗುಪ್ಪಾ ತಾಲೂಕು ಮಟ್ಟದ 60ನೇ ಶಿಕ್ಷಕರ ದಿನಾಚರಣೆ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಾನು ಮಂತ್ರಿಯಾಗಿದ್ದಾಗ ದೆಹಲಿಗೆ ಹೋಗಿದ್ದೆ. ಅಲ್ಲಿನ ಶಿಕ್ಷಣ ವ್ಯವಸ್ಥೆಯನ್ನು ನೋಡಿ ನಮ್ಮ ಭಾಗದಲ್ಲಿ ಕೂಡ ಶಿಕ್ಷಣ ವ್ಯವಸ್ಥೆಯನ್ನು ಸುಧಾರಣೆ ಮಾಡಬೇಕು ಎಂದುಕೊಂಡು ಬಂದಿದ್ದೆ. ಅದರಂತೆಯೇ ಮಾದರಿ ಶಾಲೆ ನಿರ್ಮಾಣಕ್ಕಾಗಿ ಕಮಠಾಣಾದ ಶಾಲೆಗೆ ಮೂರು ಕೋಟಿ ರೂ. ಅನುದಾನ ನೀಡಿದ್ದಿನಿ.
ನನ್ನ ಕ್ಷೇತ್ರದಲ್ಲಿನ 28 ಪ್ರೌಢಶಾಲೆಗಳನ್ನು ಒಳ್ಳೆಯ ದರ್ಜೆಯ ಶಾಲೆಗಳನ್ನಾಗಿ ಮಾಡುವ ನಿಟ್ಟಿನಲ್ಲಿ ಸ್ಮಾರ್ಟ್ ಕ್ಲಾಸ್ ರೂಮ್ ಗಳನ್ನು ಮಾಡುವ ಯೋಜನೆ ಕಳೆದ ವರ್ಷ ಹಾಕಿಕೊಂಡಿದ್ದೇನೆ. ಈಗಾಗಲೇ ನಿರ್ಣಾದಲ್ಲಿ ಸ್ಮಾರ್ಟ್ ಕ್ಲಾಸ್ ರೂಮ್ ಗಳ ನಿರ್ಮಾಣ ಕಾರ್ಯ ಮುಗಿದಿದೆ.
ನಾನು ಶಿಕ್ಷಣಕ್ಕೆ ಮೊದಲನೇ ಆದ್ಯತೆ ನೀಡುತ್ತಾ ಬಂದಿದ್ದೇನೆ. ಅದನ್ನು ಬಳಸಿಕೊಳ್ಳುವ ಕೆಲಸವನ್ನು ಇಲಾಖೆಯ ಅಧಿಕಾರಿಗಳು, ಶಿಕ್ಷಕರು ಮಾಡಬೇಕಾಗಿದೆ. ಕ್ಷೇತ್ರ ವ್ಯಾಪ್ತಿಯ ಏಳು ಪ್ರೌಢ ಶಾಲೆಗಳಿಗೆ ಪ್ಲೇ ಗ್ರೌಂಡ್ಸ್ ಸೇರಿದಂತೆ ಇತರೆ ಕೆಲಸಗಳಿಗೆ ಒಂದು ಕೋಟಿ ರೂ. ಅನುದಾನ ನೀಡಿದ್ದೇನೆ.
ನಾವು ಇನ್ನೂ ಬಹಳಷ್ಟು ಶಿಕ್ಷಣ ಕ್ರಾಂತಿ ಮಾಡಬೇಕಾಗಿದೆ. ಈ ವಿಚಾರವಾಗಿ ನಾನು ಈ ಹಿಂದೆ ಅಧಿವೇಶನದಲ್ಲಿ ಧ್ವನಿ ಎತ್ತಿದ್ದಿನಿ. ಮುಂದಿನ ದಿನಗಳಲ್ಲಿ ಕೂಡ ಧ್ವನಿ ಎತ್ತುತ್ತೇನೆ. ಸರ್ಕಾರಗಳು ನಮ್ಮ ಗ್ರಾಮೀಣ ಭಾಗದ ಶಾಲೆಗಳನ್ನು ಅಭಿವೃದ್ಧಿ ಮಾಡುವ ಕೆಲಸ ಮಾಡಬೇಕಾಗಿದೆ ಎಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಹೇಳಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಡಾ. ಚಂದ್ರಶೇಖರ್ ಬಿ ಪಾಟೀಲ್, ನಾಗೇಂದ್ರಪ್ಪ ಔರಾದಿ, ಮಾಲಾಶ್ರೀ, ಸೌಭಾಗ್ಯವತಿ, ಶಂಕರ ಕನಕ, ರಾಜಕುಮಾರ, ರಾಜಪ್ಪ ಜಮಾದಾರ, ಶಿವಗೊಂಡಪ್ಪ ಸಿದ್ದಪ್ಪಗೋಳ್, ಶಿವಕುಮಾರ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಶಿಕ್ಷಕರು, ವಿವಿಧ ಶಿಕ್ಷಕರ ಸಂಘಟನೆಗಳ ಮುಖಂಡರು, ವಿದ್ಯಾರ್ಥಿಗಳು ಹಾಜರಿದ್ದರು.