IMG 20210916 WA0055

BJP : ಸೆಪ್ಟೆಂಬರ್ 17ರಿಂದ ಸೇವೆ ಮತ್ತು ಸಮರ್ಪಣೆ ಅಭಿಯಾನ….!

POLATICAL STATE

ಸೆಪ್ಟೆಂಬರ್ 17ರಿಂದ ಸೇವೆ ಮತ್ತು ಸಮರ್ಪಣೆ ಅಭಿಯಾನ: ಸಚಿವ ಭೈರತಿ ಬಸವರಾಜ

ಬೆಂಗಳೂರು: ನಾಳೆ (ಸೆಪ್ಟೆಂಬರ್ 17ರಂದು) ವಿಶ್ವದ ಅತ್ಯಂತ ಜನಪ್ರಿಯ ನಾಯಕ ಹಾಗೂ ನಮ್ಮ ಗೌರವಾನ್ವಿತ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಅವರ ಹುಟ್ಟುಹಬ್ಬವಿದ್ದು, ಅಕ್ಟೋಬರ್ 7ರಂದು ಶ್ರೀ ನರೇಂದ್ರ ಮೋದಿಯವರು ಮೊದಲ ಬಾರಿ ಗುಜರಾತಿನ ಮುಖ್ಯಮಂತ್ರಿಯಾದ 20ನೇ ವಾರ್ಷಿಕೋತ್ಸವ ಬರಲಿದೆ. ಆದ್ದರಿಂದ ಸೆ.17ರಿಂದ ಅಕ್ಟೋಬರ್ 7ರ ವರೆಗೆ ಕೆರೆಕಟ್ಟೆಗಳ ಸ್ವಚ್ಛತೆ, ಜಲಮೂಲಗಳ ಪ್ಲಾಸ್ಟಿಕ್ ಹೆಕ್ಕುವುದು ಸೇರಿದಂತೆ ಅನೇಕ ಜನಪರ ಯೋಜನೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ನಗರಾಭಿವೃದ್ಧಿ ಸಚಿವರಾದ ಶ್ರೀ ಭೈರತಿ ಬಸವರಾಜ ಅವರು ತಿಳಿಸಿದರು.
ವಿಧಾನಸೌಧದ ಮೊದಲ ಮಹಡಿಯ ಕೊಠಡಿ ಸಂಖ್ಯೆ 133, ಬಿಜೆಪಿ ಶಾಸಕಾಂಗ ಪಕ್ಷದ ಕಛೇರಿಯಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆಸ್ಪತ್ರೆಗಳಲ್ಲಿ ಬಡ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಗುವುದು. ರೋಗಿಗಳಿಗೆ ಅಗತ್ಯ ಸೇವೆ ಮಾಡಲಾಗುವುದು ಎಂದರಲ್ಲದೆ, ದೇಶದಲ್ಲಿ 100 ಸ್ಮಾರ್ಟ್ ಸಿಟಿ ನೀಡಿದ ಗೌರವ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರಿಗೆ ಸಲ್ಲುತ್ತದೆ. ರಾಜ್ಯಕ್ಕೆ 7 ಸ್ಮಾರ್ಟ್ ಸಿಟಿಗಳನ್ನು ನೀಡಿದ್ದು, ಅವರಿಗೆ ಜನರ ಪರವಾಗಿ ಧನ್ಯವಾದ ಸಮರ್ಪಿಸುವುದಾಗಿ ಹೇಳಿದರು.
ದೀಪಾವಳಿ ತನಕ ಉಚಿತ ಪಡಿತರ ನೀಡುವ ನಿರ್ಧಾರವನ್ನು ಪ್ರಧಾನಿಯವರು ಕೈಗೊಂಡಿದ್ದಾರೆ. ಕೋವಿಡ್ ಲಸಿಕೆಯನ್ನು ದೇಶಾದ್ಯಂತ ಉಚಿತವಾಗಿ ನೀಡಲಾಗುತ್ತಿದೆ ಎಂದು ವಿವರಿಸಿದರು.
ಸೆ. 19ರಂದು ಪಕ್ಷದ ರಾಜ್ಯ ಕಾರ್ಯಕಾರಿಣಿ ಸಭೆಯು ದಾವಣಗೆರೆಯಲ್ಲಿ ನಡೆಯಲಿದೆ. ರಾಜ್ಯದ ಉಸ್ತುವಾರಿಗಳಾದ ಶ್ರೀ ಅರುಣ್ ಸಿಂಗ್, ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿ, ರಾಜ್ಯಾಧ್ಯಕ್ಷರಾದ ಶ್ರೀ ನಳಿನ್‍ಕುಮಾರ್ ಕಟೀಲ್, ಸಚಿವರು, ಆಹ್ವಾನಿತರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

IMG 20210916 WA0060
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳು ಹಾಗೂ ವಿಧಾನಪರಿಷತ್ ಸದಸ್ಯರಾದ ಶ್ರೀ ಎನ್.ರವಿಕುಮಾರ್ ಅವರು ಮಾತನಾಡಿ, ಸೆಪ್ಟೆಂಬರ್ 17ರಿಂದ ಅಕ್ಟೋಬರ್ 7ರವರೆಗೆ 20 ದಿನಗಳ ಕಾಲ ಸೇವೆ ಹಾಗೂ ಸಮರ್ಪಣೆ ಅಭಿಯಾನವನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು. ದಿವ್ಯಾಂಗರಿಗೆ ನೆರವು ಮತ್ತು ಸೈಕಲ್, ಬೈಕ್, ಶ್ರವಣ ಉಪಕರಣ ಸೇರಿ ಉಪಯುಕ್ತ ಸಲಕರಣೆಗಳ ವಿತರಣೆ ನಡೆಯಲಿದೆ. ಉಚಿತ ಆರೋಗ್ಯ ತಪಾಸಣಾ ಶಿಬಿರ ಸಂಘಟಿಸಲಾಗುವುದು. ಆಸ್ಪತ್ರೆಗಳಲ್ಲಿ ಹಣ್ಣು ಹಂಪಲು ವಿತರಿಸಲಾಗುವುದು ಎಂದರು.
ಕಿಸಾನ್ ಸನ್ಮಾನ್ ನಿಧಿ, ಉಚಿತ ಪಡಿತರ, ಗರ್ಭಿಣಿಯರ ರಜೆಯನ್ನು ಆರು ತಿಂಗಳಿಗೆ ಹೆಚ್ಚಿಸಿರುವುದು, ವಿದ್ಯಾರ್ಥಿಗಳಿಗಾಗಿ ಕೈಗೊಂಡ ಕಾರ್ಯಕ್ರಮಗಳನ್ನು ಜನರಿಗೆ ತಿಳಿಸಲಾಗುವುದು.

ಅಕ್ಟೋಬರ್ 2ರಂದು ಮಹಾತ್ಮ ಗಾಂಧಿಯವರ ಜಯಂತಿ ಇದ್ದು, ವಿಶಿಷ್ಟವಾಗಿ ಆಚರಿಸಲಾಗುವುದು. ಸ್ವದೇಶಿ ವಸ್ತು ಖರೀದಿಯ ಅಭಿಯಾನ ನಡೆಯಲಿದೆ. ಪ್ರತಿಯೊಬ್ಬ ಕಾರ್ಯಕರ್ತರು ಇದರಲ್ಲಿ ಭಾಗವಹಿಸುವರು. ಖಾದಿ, ಸ್ವದೇಶಿ ಬಟ್ಟೆ ಖರೀದಿಸಲಾಗುವುದು ಎಂದರು. ಕುಂಬಾರರು, ಕಮ್ಮಾರರು ಸೇರಿ ಕೌಶಲ್ಯ ಆಧರಿತ ಬದುಕು ಸಾಗಿಸುವವರಿಂದ ವಸ್ತುಗಳನ್ನು ಖರೀದಿಸಲಾಗುತ್ತದೆ. ಟಾಯಿಲೆಟ್ ಕಟ್ಟಿಸಿಕೊಡಲು ಫಲಾನುಭವಿಗಳನ್ನು ಗುರುತಿಸಿ ಅವರಿಗೆ ಸರಕಾರದ ಅನುದಾನ ಸಿಗುವಂತೆ ನೋಡಿಕೊಳ್ಳಲಾಗುವುದು ಎಂದರು.

ಸೆಪ್ಟೆಂಬರ್ 17 ರಿಂದ ಅಕ್ಟೋಬರ್ 7 ರವರೆಗೆ ಗೌರವಾನ್ವಿತ ಪ್ರಧಾನಮಂತ್ರಿಗಳು ಸ್ವೀಕರಿಸಿದ ಉಡುಗೊರೆಗಳು, ಸ್ಮರಣಿಕೆಗಳು ಇತ್ಯಾದಿಗಳು ಹರಾಜಿಗೆ ಲಭ್ಯವಿರುತ್ತದೆ. ಹರಾಜಿನಲ್ಲಿ ಗರಿಷ್ಠ ನೋಂದಣಿ ಮತ್ತು ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳಲು ವ್ಯಾಪಕ ಪ್ರಚಾರ ಮಾಡಲಿದ್ದೇವೆ. ಸಂಗ್ರಹಿಸಿದ ದೊಡ್ಡ ಮೊತ್ತದ ನಿಧಿಯನ್ನು ‘ನಮಾಮಿ ಗಂಗೆ ಯೋಜನೆ’ಗೆ ಬಳಸಿಕೊಳ್ಳಲಾಗುವುದು ಎಂದು ತಿಳಿಸಿದರು.

ನಮೋ ಆಪ್‍ನಲ್ಲಿ ‘ಮೈ ಸೇವಾ ಟ್ರಿಬ್ಯೂಟ್’ (ನನ್ನ ಸೇವಾ ಕೊಡುಗೆ) ಮಾಡ್ಯೂಲ್ ಲಭ್ಯವಿದೆ. ಇಲ್ಲಿ ಪಕ್ಷದ ಕಾರ್ಯಕರ್ತರು ಅವರು ಕೈಗೊಂಡ ಸೇವಾ ಕಾರ್ಯದ ಬಗ್ಗೆ ವಿವರಗಳು ಮತ್ತು ಫೋಟೋಗಳನ್ನು ಪೋಸ್ಟ್ ಮಾಡುವ ಮೂಲಕ ಗೌರವಾನ್ವಿತ ಪ್ರಧಾನ ಮಂತ್ರಿಗಳಿಗೆ ಹಾರೈಸಲು ಉತ್ತೇಜನ ನೀಡಲಾಗುವುದು ಎಂದರು.
ಸೆಪ್ಟೆಂಬರ್ 25 ನಮ್ಮೆಲ್ಲರಿಗೂ ಆದರ್ಶಪ್ರಾಯರು ಮತ್ತು ಪ್ರೇರಕರೂ ಆಗಿರುವ ಪಂಡಿತ್ ದೀನ್‍ದಯಾಳ್ ಉಪಾಧ್ಯಾಯರ ಜನ್ಮದಿನ. ಅವರ ವಿಚಾರಗಳಾಗಿರುವ ಏಕಾತ್ಮ ಮಾನವ ದರ್ಶನ ಮತ್ತು ಅಂತ್ಯೋದಯಕ್ಕೆ ಬದ್ಧರಾಗಿದ್ದೇವೆ. ಜನಸಂಘದ ಚಿಹ್ನೆ “ದೀಪದಿಂದ ಕಮಲದ ವರೆಗೆ” ಎಂಬ ಪರಿಕಲ್ಪನೆಯಡಿ ಅವರ ಜನ್ಮದಿನವನ್ನು ಆಚರಿಸಲಾಗುತ್ತದೆ. ಪಕ್ಷ ಬೆಳೆದುಬಂದ ದಾರಿಯನ್ನು ಮಂಡಲ, ಬೂತ್ ಮತ್ತು ಜಿಲ್ಲಾ ಕೇಂದ್ರಗಳಲ್ಲಿ ತಿಳಿಸುವ ಸಭೆಗಳು ನಡೆಯಲಿವೆ ಎಂದು ವಿವರಿಸಿದರು. ರಾಜ್ಯದ 60 ಸಾವಿರ ಬೂತ್, 311 ಮಂಡಲ, 37 ಸಂಘಟನಾ ಜಿಲ್ಲಾ ಕೇಂದ್ರಗಳಲ್ಲಿ ಇಂಥ ಕಾರ್ಯಕ್ರಮ ನಡೆಯಲಿದೆ ಎಂದರು. ಎಲ್ಲ ಜನಪ್ರತಿನಿಧಿಗಳೂ ಭಾಗವಹಿಸುವರು ಎಂದು ತಿಳಿಸಿದರು.
ಗಾಂಧಿ ಜಯಂತಿ, ದೀನ್‍ದಯಾಳ್ ಉಪಾಧ್ಯಾಯರ ಜಯಂತಿ ಮತ್ತು ಶ್ರೀ ನರೇಂದ್ರ ಮೋದಿಯವರ ಜನ್ಮದಿನದ ಹಿನ್ನೆಯಲ್ಲಿ 20 ದಿನಗಳ ಕಾಲ ನಡೆಯುವ ಸೇವಾ ಸಮರ್ಪಣಾ ಅಭಿಯಾನದಲ್ಲಿ ಲಕ್ಷಾಂತರ ಜನರಿಗೆ ನೆರವು ನೀಡಲಾಗುವುದು. ಈ ಅವಧಿಯಲ್ಲಿ ಗೌರವಾನ್ವಿತ ಪ್ರಧಾನ ಮಂತ್ರಿಯವರಿಗೆ ಶುಭ ಹಾರೈಸುವ ಮತ್ತು ಬಡವರಿಗಾಗಿ ಅವರು ಕೈಗೊಂಡ ಕಲ್ಯಾಣ ಕಾರ್ಯಗಳಿಗಾಗಿ ಅವರಿಗೆ ಧನ್ಯವಾದ ತಿಳಿಸುವ 5 ಕೋಟಿ ಪೋಸ್ಟ್ ಕಾರ್ಡ್‍ಗಳನ್ನು ಜನರು ಬರೆಯಲು ಪ್ರೇರೇಪಿಸಲಾಗುವುದು. ಪ್ರತಿ ಬೂತ್‍ನಿಂದ 10 ಪೋಸ್ಟ್ ಕಾರ್ಡ್ ಬರೆಯುವಂತೆ ಗುರಿ ಇಟ್ಟುಕೊಳ್ಳಲಾಗಿದೆ ಎಂದರು. ರಾಜ್ಯದಿಂದ ಸುಮಾರು 6 ಲಕ್ಷ ಪತ್ರಗಳನ್ನು ಬರೆಯಲಿದ್ದೇವೆ ಎಂದರು.
ಶಾಸಕರಾದ ಶ್ರೀ ಸಂಜೀವ ಮಠಂದೂರು, ಶ್ರೀ ಲಾಲಾಜಿ. ಆರ್. ಮೆಂಡನ್ ಅವರು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.