IMG 20230626 WA0009 1

Karnataka :ಜನರ ನಿರೀಕ್ಷೆಗಳಿಗೆ ತಕ್ಕಂತೆ ಕೆಲಸ ಮಾಡುವವರೇ ನಿಜವಾದ ಶಾಸಕರು….!

POLATICAL STATE

ಜನರ ನಿರೀಕ್ಷೆಗಳಿಗೆ ತಕ್ಕಂತೆ ಕೆಲಸ ಮಾಡುವವರೇ ನಿಜವಾದ ಶಾಸಕರು: ಸಿದ್ಧರಾಮಯ್ಯ
ಬೆಂಗಳೂರು, ಜೂನ್ 26 (ಕರ್ನಾಟಕ ವಾರ್ತೆ): ಜನರ ಕಷ್ಟಗಳಿಗೆ ಸ್ಪಂದಿಸಿ ಅವರ ನಿರೀಕ್ಷೆಗಳಿಗೆ ತಕ್ಕಂತೆ ಕೆಲಸ ಮಾಡುವವರೇ ನಿಜವಾದ ನಾಯಕ/ಶಾಸಕರಾಗುತ್ತಾರೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಹೇಳಿದರು.
ಅವರು ಕುಣಿಗಲ್ ಬೈಪಾಸ್ ರಸ್ತೆಯ ಮಹದೇವಪುರದಲ್ಲಿರುವ ಎಸ್‌ಡಿಎಂ ಇನ್ಸ್ಟಿಟ್ಯೂಟ್ ಆಫ್ ನ್ಯಾಚುರೋಪತಿ ಅಂಡ್ ಯೋಗಿಕ್ ಸೈನ್ಸ‌ಸ್‌-ಕ್ಷೇಮವನದಲ್ಲಿ 16 ನೇ ವಿಧಾನಸಭೆಯ ನೂತನ ಸದಸ್ಯರುಗಳಿಗೆ ಇಂದಿನಿಂದ ಮೂರು ದಿನಗಳವರೆಗೆ (ಜೂನ್ 26 ರಿಂದ 28 ರವರೆಗೆ) ಏರ್ಪಡಿಸಲಾದ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ 224 ಶಾಸಕರಲ್ಲಿ 70 ಜನರು ಮೊದಲ ಬಾರಿ ಶಾಸಕರಾಗಿ ಆಯ್ಕೆಯಾಗಿ ಸದನವನ್ನು ಪ್ರವೇಶಿಸಿದ್ದಾರೆ. ಅವರಿಗೆಲ್ಲಾ ಶುಭವಾಗಲಿ ಎಂದು ಹಾರೈಸಿದರು.
ಯಾರು ಜನರ ಕಷ್ಟಗಳಿಗೆ ಸ್ಪಂದಿಸಿ ಅವರಿಗೆ ನೆರವಾಗುವರೊ ಅವರೇ ನಿಜ ಅರ್ಥದಲ್ಲಿ ಶಾಸಕರು. ಹಾಗೆಯೇ ಅವರ ನಿರೀಕ್ಷೆಗೂ ಮೀರಿ ಕೆಲಸ ನಿರ್ವಹಿಸಿದರೆ ಮುಂದಿನ ಚುನಾವಣೆಯಲ್ಲಿ ನಿಮಗೆ ಮತ ನೀಡುತ್ತಾರೆ ಎಂದರು.

IMG 20230626 WA0010


ವಿಧಾನಸಭೆಯಲ್ಲಿ ನಡೆಯುವ ಕಲಾಪಗಳಲ್ಲಿ ಶಾಸಕರ ಭಾಗವಹಿಸುವಿಕೆ ಬಹಳ ಮುಖ್ಯ. ಶಾಸಕರು ಗೈರು ಹಾಜರಾಗದೆ ಪ್ರತಿದಿನದ ಕಾರ್ಯ-ಕಲಾಪಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು. ಅಲ್ಲಿ ನಡೆಯುವ ಪ್ರಶ್ನೋತ್ತರ, ಗಮನ ಸೆಳೆಯುವ ಸೂಚನೆ ಹಾಗೂ ಇತರ ಕಲಾಪಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು. ಅಲ್ಲದೇ ತಮ್ಮ ಕ್ಷೇತ್ರಗಳಲ್ಲಿರುವ ಸಮಸ್ಯೆಗಳ ಬಗ್ಗೆ ಸದನದಲ್ಲಿ ಬೆಳಕು ಚೆಲ್ಲಿ, ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕು ಎಂದರು.
ಸಂವಿಧಾನ, ಸದನದ ನಿಯಮಾವಳಿ, ವಿವಿಧ ಕಾಯಿದೆಗಳು, ನಿಯಮಗಳು, ಸರ್ಕಾರದ ಯೋಜನೆಗಳ ಬಗ್ಗೆ ತಿಳುವಳಿಕೆ ಅತ್ಯಗತ್ಯ ಎಂದರು

IMG 20230626 WA0013


1994-95ನೇ ಸಾಲಿನಲ್ಲಿ ತಾವು ಹಣಕಾಸು ಮಂತ್ರಿಯಾಗಿದ್ದಾಗ ಮಂಡಿಸಿದ ಮೊದಲ ಬಜೆಟ್ ಅನ್ನು ಮುಖ್ಯಮಂತ್ರಿಗಳು ಮೆಲುಕು ಹಾಕಿದರು. ಅದು ಹೆಚ್ಚು ಜನಮನ್ನಣೆಗೂ ಪಾತ್ರವಾಗಿದ್ದನ್ನು ಸ್ಮರಿಸಿಕೊಂಡರು.
1952-53 ರಲ್ಲಿ ಕೆಂಗಲ್ ಹನುಮಂತಯ್ಯ ಮುಖ್ಯಮಂತ್ರಿಯಾಗಿದ್ದಾಗ ಮಂಡಿಸಿದ ಮೊದಲ ಬಜೆಟ್‌ನ ಗಾತ್ರ 21 ಕೋಟಿ 3 ಲಕ್ಷ ರೂ.ಗಳಾಗಿತ್ತು. ಆದರೆ ಪ್ರಸ್ತುತ ಬಜೆಟ್‌ನ ಗಾತ್ರ ಸುಮಾರು 3 ಲಕ್ಷದ 9 ಸಾವಿರದ 896 ಕೋಟಿ ರೂ.ಗಳಾಗಿದೆ. ಇನ್ನೂ 50 ರಿಂದ 60 ಸಾವಿರ ಕೋಟಿ ಹಣ ಜನರ ಕಲ್ಯಾಣ ಯೋಜನೆಗೆ ಅಗತ್ಯವಿದೆ. ಇದನ್ನು ಪೂರಕ ಬಜೆಟ್ ನಲ್ಲಿ ಒದಗಿಸಲಾಗುವುದೆಂದರು.
ಬುದ್ಧ, ಬಸವಣ್ಣ, ಅಂಬೇಡ್ಕರರು ನಮ್ಮ ಸಂವಿಧಾನದ ಮುಖ್ಯ ಪ್ರೇರಣೆ. ಸಂವಿಧಾನವನ್ನು ನಾವೆಲ್ಲ ಅರ್ಥೈಸಿಕೊಂಡು, ಕಾನೂನು ರೂಪಿಸಬೇಕು. ಆ ಕಾನೂನುಗಳು ಜನರಿಗೆ ಪೂರಕವಾಗಿರಬೇಕೆ ಹೊರತು ಮಾರಕವಾಗಿರಬಾರದು ಎಂದು ತಿಳಿಸಿದರು.

IMG 20230626 WA0009


ವಿಧಾನಸಭಾ ಸಭಾಧ್ಯಕ್ಷರಾದ ಯು.ಟಿ.ಖಾದರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಶಾಸಕರು ಜನರು ನೀಡಿರುವ ಅವಕಾಶವನ್ನು ಸಾಕಾರಗೊಳಿಸಬೇಕು. ಎಲ್ಲ ವಿಷಯಗಳನ್ನು ಸಮಚಿತ್ತದಿಂದ ಸ್ವೀಕರಿಸಿ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಶ್ರಮಿಸಬೇಕು. ಸಾಮರಸ್ಯ ಸೋದರತ್ವ ಭಾವಗಳಿಂದ ಸಮಾಜಮುಖಿ ಕೆಲಸಗಳನ್ನು ಮಾಡಬೇಕು. ನೂತನ ಶಾಸಕರಿಗೆ ಈ ಮೂರು ತರಬೇತಿ ಶಿಬಿರ ಹೆಚ್ಚು ಜ್ಞಾನ, ತಿಳುವಳಿಕೆ ನೀಡುತ್ತದೆ. ಶೇ 90 ರಷ್ಡು ಶಾಸಕರು ತರಬೇತಿಯಲ್ಲಿ ಭಾಗವಹಿಸಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ.ಎಸ್.ಹೊರಟ್ಟಿ, ಕಾನೂನು, ನ್ಯಾಯ, ಮಾನವ ಹಕ್ಕುಗಳು ಮತ್ತು ಸಂಸದೀಯ ವ್ಯವಹಾರಗಳು ಹಾಗೂ ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್, ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಬಿ.ಝಡ್.ಜಮೀರ್ ಅಹಮದ್ ಖಾನ್, ವಿಧಾನಸಭೆ ಕಾರ್ಯದರ್ಶಿ ವಿಶಾಲಾಕ್ಷಿ, ಶ್ರೀ ಧರ್ಮಸ್ಥಳ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷರಾದ ಸುರೇಂದ್ರಕುಮಾರ್ ಸೇರಿದಂತೆ ನೂತನ ಶಾಸಕರುಗಳು ಉಪಸ್ಥಿತರಿದ್ದರು.