ಹಿಂದಿನ ಸರ್ಕಾರದ ಪ್ರಮುಖ ಹಗರಣಗಳ ತನಿಖೆ : ಮುಖ್ಯಮಂತ್ರಿ ಸಿದ್ದರಾಮಯ್ಯ
ಹಾಸನ, ಜೂನ್ 27 : ಹಿಂದಿನ ಸರ್ಕಾರಗಳ ಪ್ರಮುಖ ಹಗರಣಗಳಾದ 4 ವೈದ್ಯಕೀಯ ಕಾಲೇಜು ನಿರ್ಮಾಣದಲ್ಲಿ ಅವ್ಯವಹಾರ, 40 % ಕಮಿಷನ್ , ಕರೋನಾ ಸಂದರ್ಭದಲ್ಲಿ ವೈದ್ಯಕೀಯ ಸಾಮಗ್ರಿಗಳ ಖರೀದಿ, ನೀರಾವರಿ ಕಾಮಗಾರಿಗಳಲ್ಲಿ ಅವ್ಯವಹಾರ, ಪೊಲೀಸ್ ಪಿಎಸ್ಐ ನೇಮಕಾತಿ ಹಗರಣದ ತನಿಖೆ ಹಾಗೂ ಬಿಟ್ ಕಾಯಿನ್ ಗಳ ಬಗ್ಗೆ ತನಿಖೆಯನ್ನು ನಡೆಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಇಂದು ಹಾಸನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.
ಚಾಮರಾಜನಗರದಲ್ಲಿ ಕೋವಿಡ್ ಸಂದರ್ಭದಲ್ಲಿ ಆಕ್ಷಿಜನ್ ಕೊರತೆಯಿಂದ ಉಂಟಾಗಿದ್ದ ದುರಂತ ಪ್ರಕರಣದ ಮರುತನಿಖೆಯನ್ನು ಕೈಗೊಳ್ಳುವುದಾಗಿ ತಿಳಿಸಿದರು. ಅಂದಿನ ಆರೋಗ್ಯ ಸಚಿವ ಡಾ: ಸುಧಾಕರ್ ಅಲ್ಲಿ ಸತ್ತಿರುವುದು ಇಬ್ಬರೇ ಎಂದಿದ್ದರು. ಆದರೆ ಅಲ್ಲಿ ಸತ್ತಿರುವವರ ಸಂಖ್ಯೆ ಹೆಚ್ಚಿತ್ತು ಎಂದರು.
ಗ್ಯಾರಂಟಿ ಯೋಜನೆಯ ಬಗ್ಗೆ ವಿಪಕ್ಷಗಳ ಟೀಕೆಗಳ ಬಗ್ಗೆ ಪ್ರತಿಕ್ರಿಯೆ ನೀಡಿ ಈಗಾಗಲೇ ಒಂದು ಗ್ಯಾರಂಟಿಯನ್ನು ಜಾರಿ ಮಾಡಿದ್ದೇವೆ. ನಾವು ಜುಲೈ ಒಂದರಿಂದ ಗೃಹಜ್ಯೋತಿ ಯೋಜನೆಯನ್ನು ಜಾರಿಗೆ ತರುತ್ತೇವೆ. ಗೃಹಲಕ್ಷ್ಮೀ ಯೋಜನೆಯನ್ನು ಆಗಸ್ಟ್ 15 ರ ನಂತರ ಜಾರಿ ಮಾಡಲಾಗುವುದು. ಈಗಾಗಲೇ ಅರ್ಜಿ ಕರೆದಿದ್ದು, ಅರ್ಜಿಗಳು ಸ್ವೀಕಾರವಾಗುತ್ತಿವೆ ಎಂದರು.
ಅಕ್ಕಿ ದೊರೆತ ತಕ್ಷಣದಿಂದಲೇ ಅನ್ನಭಾಗ್ಯ ಜಾರಿ :
ಅನ್ನಭಾಗ್ಯ ಕಾರ್ಯಕ್ರಮಕ್ಕೆ 5 ಕೆಜಿ ಅಕ್ಕಿ ನೀಡುತ್ತಿದ್ದೇವೆ. ಒಟ್ಟು 10 ಕೆಜಿ ಅಕ್ಕಿ ನೀಡುವುದಾಗಿ ಹೇಳಿದ್ದೆವು. 2.29 ಲಕ್ಷ ಮೆ.ಟನ್ ಅಕ್ಕಿ ಅಗತ್ಯವಿದೆ. ಅಷ್ಟು ಅಕ್ಕಿ ನಮಗೆ ದೊರೆಯುತ್ತಿಲ್ಲ. ಕೇಂದ್ರ ಸರ್ಕಾರದ ಅಧೀನದ ಎಫ್.ಸಿ. ಐ ಅಕ್ಕಿ ನೀಡುವುದಾಗಿ ಒಪ್ಪಿ ನಂತರ ಕೊಡಲಾಗುವುದಿಲ್ಲ ಎಂದು ಪತ್ರ ಬರೆಯುತ್ತಾರೆ. ಇದು ಕೇಂದ್ರ ಸರ್ಕಾರದ ಷಡ್ಯಂತ್ರ. ಅಕ್ಕಿಯ ದಾಸ್ತಾನು ಇದ್ದರೂ ಕೊಡುತ್ತಿಲ್ಲ. ಈ ಬಗ್ಗೆ ಆಹಾರ ಇಲಾಖೆ ಮೂಲಕ ಹೇಳಿ ಬರೆಸಿದ್ದಾರೆ. ನವದೆಹಲಿಗೆ ಭೇಟಿ ನೀಡಿದಾಗ ಕೇಂದ್ರ ಗೃಹಸಚಿವ ಅಮಿತ್ ಶಾ ಅವರ ಗಮನಕ್ಕೆ ತರಲಾಗಿದೆ. ಬಡವರ ಮೇಲೆ ಗದಾ ಪ್ರಹಾರ ಮಾಡಲಾಗುತ್ತಿದೆ. ನಾವು ಘೋಷಣೆ ಮಾಡಿದಂತೆಯೇ ಅಕ್ಕಿ ಕೋರಿ ಪತ್ರ ಬರೆಯಲಾಗಿದೆ. ಅವರು ಒಪ್ಪಿ ಪತ್ರವನ್ನೂ ಬರೆದಿದ್ದಾರೆ. ನಾವು ಘೋಷಣೆ ಮಾಡುವ ಮುನ್ನ ಯಡಿಯೂರಪ್ಪ, ಅಶೋಕ್ ಹಾಗೂ ಬಸವರಾಜ ಬೊಮ್ಮಾಯಿ ಅವರನ್ನು ಕೇಳಿ ಘೋಷಣೆ ಮಾಡಬೇಕಿತ್ತೇ ಎಂದು ಪ್ರಶ್ನಿಸಿದರು.
ಬಿಜೆಪಿ ಬಡವರ ವಿರೋಧಿ ಪಕ್ಷ. ಅಕ್ಕಿ ಪಡೆಯಲು ನಮ್ಮ ಪ್ರಯತ್ನ ಜಾರಿಯಲ್ಲಿದೆ. ನ್ಯಾಫೆಡ್, ಕೇಂದ್ರೀಯ ಭಂಡಾರ್, ಎನ್.ಸಿ.ಸಿಎಫ್ ಅವರೊಂದಿಗೆ ಮಾತುಕತೆ ನಡೆಯುತ್ತಿದ್ದು, ನಾಳೆ ಸಚಿವ ಸಂಪುಟದಲ್ಲಿ ಚರ್ಚೆ ಮಾಡಿ ತೀರ್ಮಾನ ಮಾಡಲಾಗುತ್ತದೆ. ಎಲ್ಲಿಯೂ ಅಗತ್ಯವಿರುಷ್ಟು ಅಕ್ಕಿ ದೊರೆಯುತ್ತಿಲ್ಲ. ಅಕ್ಕಿ ದೊರೆತ ತಕ್ಷಣದಿಂದಲೇ ಅನ್ನಭಾಗ್ಯ ಜಾರಿಗೆ ತರಲಾಗುವುದು ಎಂದರು.
ಬಿಜೆಪಿಯವರು ಕೇಂದ್ರ ಸರ್ಕಾರದಿಂದ ಅಕ್ಕಿ ಕೊಡಿಸಲಿ :
ಗ್ಯಾರಂಟಿ ಯೋಜನೆಗಳು ಜಾರಿಯಾಗದಿದ್ದರೆ ಹೋರಾಟ ಮಾಡುವುದಾಗಿ ಬಿಜೆಪಿ ಹೇಳಿಕೆ ನೀಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಬೀದಿಗಿಳಿದು ಹೋರಾಟ ಮಾಡಲು ಬಿಜೆಪಿಗೆ ಯಾವ ನೈತಿಕ ಹಕ್ಕಿದೆ ಎಂದು ಪ್ರಶ್ನಿಸಿದ ಮುಖ್ಯಮಂತ್ರಿಗಳು, ರಾಜಕೀಯ ಗಿಮಿಕ್ ಮಾಡಲು ಹೊರಡಬಾರದು. ಅವರಿಗೆ ನಿಜವಾಗಿಯೂ ಬದ್ಧತೆಯಿದ್ದರೆ ಕೇಂದ್ರ ಸರ್ಕಾರದಿಂದ ಅಕ್ಕಿ ಕೊಡಿಸಲಿ ಎಂದರು.
ಐದು ಗ್ಯಾರೆಂಟಿಗಳನ್ನು ಜಾರಿ ಮಾಡುವುದು ನಿಶ್ಚಿತ :
2022-23 ನೇ ಸಾಲಿನಲ್ಲಿ ಯುವ ನಿಧಿ ಕಾರ್ಯಕ್ರಮದಡಿ ನಿರುದ್ಯೋಗಿ ಪದವೀಧರರು, ಡಿಪ್ಲೊಮಾ ಮಾಡಿದವರಿಗೆ 6 ತಿಂಗಳೊಳಗೆ ಕೆಲಸ ದೊರೆಯದೇ ಹೋದರೆ, ಪದವೀಧರರಿಗೆ 3 ಸಾವಿರ ಹಾಗೂ ಡಿಪ್ಲೊಮಾ ಮಾಡಿದವರಿಗೆ 1500 ರೂ.ಗಳನ್ನು 24 ತಿಂಗಳು ನೀಡಲಾಗುವುದು. 2.50 ಲಕ್ಷ ಹುದ್ದೆಗಳನ್ನು ಒಂದೇ ಸಾರಿಗೆ ಭರ್ತಿ ಮಾಡಲಾಗುವುದಿಲ್ಲ. ಹಂತ ಹಂತವಾಗಿ ಭರ್ತಿ ಮಾಡಲಾಗುವುದು. ಐದು ಗ್ಯಾರೆಂಟಿಗಳನ್ನು ಈಡೇರಿಸಲು ವಾರ್ಷಿಕವಾಗಿ 59000 ಕೋಟಿ ರೂ. ಬೇಕಾಗುವುದು. ಐದು ಗ್ಯಾರೆಂಟಿಗಳನ್ನು ಜಾರಿ ಮಾಡುವುದು ನಿಶ್ಚಿತ ಎಂದರು.
ಕೆಂಪೇಗೌಡರು ಜನಪರ ಹಾಗೂ ಜಾತ್ಯಾತೀತ ದೊರೆ :
ಕೆಂಪೇಗೌಡರು ಜನಪರ ಹಾಗೂ ಜಾತ್ಯಾತೀತ ದೊರೆಯಾಗಿದ್ದರು. ಇವರ ಕಾಲದಲ್ಲಿ ಎಲ್ಲರೂ ಸೌಹಾರ್ದತೆಯಿಂದಿದ್ದರು. ಇಂತಹ ಮಾದರಿ ನಾಡಪ್ರಭುವನ್ನು ಸ್ಮರಿಸುವ ಸಲುವಾಗಿ ನಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಸರ್ಕಾರದ ವತಿಯಿಂದಲೇ ಕೆಂಪೇಗೌಡರ ಜಯಂತಿಯನ್ನು ಆಚರಿಸಲು ಆದೇಶ ನೀಡಲಾಗಿತ್ತು. ಕೆಂಪೇಗೌಡರ ಪ್ರತಿಮೆಯನ್ನೂ ನಮ್ಮ ಅವಧಿಯಲ್ಲಿಯೇ ಸ್ಥಾಪಿಸಲು ತೀರ್ಮಾನ ಕೈಗೊಳ್ಳಲಾಗಿತ್ತು. ಕೆಂಪೇಗೌಡರು ಒಬ್ಬ ಪ್ರಗತಿಪರವಾದ, ಜಾತ್ಯಾತೀತವಾದ ದೊರೆಯನ್ನು ಸ್ಮರಿಸುವ ದಿನವಾಗಿದೆ ಎಂದರು.