IMG 20200622 WA0038

ಪಾವಗಡ: ಪಾಳು ಬಿದ್ದು ಸ್ಮಶಾಣವಾದ ನಿಡಗಲ್ ಸಾಮ್ರಾಜ್ಯ

DISTRICT NEWS ತುಮಕೂರು

 

 

*ಪಾಳು ಬಿದ್ದು ಸ್ಮಶಾಣವಾದ ನಿಡಗಲ್ ಸಾಮ್ರಾಜ್ಯ*

*ಪಾವಗಡ:* ಸುತ್ತಲೂ ಬೆರಗುಗೊಳಿಸೊ ಮನಮೋಹಕ ಪ್ರಕೃತಿ ಚೆಲುವು, ಕಣ್ಣು ಕುಕ್ಕೊ ಹಸಿರು, ಬೃಹದೆತ್ತರಕ್ಕೆ ಕಾಣುವ ಗಿರಿ ಶಿಖರದ ವಿಹಂಗಮ ನೋಟ, ಮುಂಜಾನೆ ಪುಕ್ಕ ಗೆದರಿ ಕುಣಿಯೋ ನವಿಲುಗಳು, ನೂರಾರು ಪುರಾತನ ದೇಗುಲಗಳ ಸಾಲು ಅಬ್ಬಬ್ಬಾ ಇಂತಹ ಸುಂದರ ರಮಣೀಯ ದೃಶ್ಯ ಕಣ್ಣಿಗೆ ಕಾಣುವುದು ಪಾವಗಡ ತಾಲ್ಲೂಕಿನ ನಿಡಗಲ್ ದುರ್ಗದಲ್ಲಿ. ಹೌದು ತುಮಕೂರು ಜಿಲ್ಲೆಯಲ್ಲಿ ಎರಡನೇ ಹಂಪಿ ಎಂದು ಕರೆಸಿಕೊಳ್ಳುವ ಈ ಭವ್ಯ ಭೂಮಿ ಸಾವಿರಾರು ವರ್ಷಗಳ ಐತಿಹಾಸಿಕ ಹಿನ್ನೆಲೆ ಹೊಂದಿದೆ.

 

IMG 20200622 WA0041 IMG 20200622 WA0042ಈ ನಿಡಗಲ್ ದುರ್ಗ, ನಿಲುವಿನ ಕಲ್ಲಿನಿಂದ ಕಾಣುವುದರಿಂದ ನಿಡಗಲ್ ಎಂಬ ಹೆಸರು ಬಂದಿದೆ. ಇದು ಸಮುದ್ರ ಮಟ್ಟದಿಂದ 322 ಅಡಿ ಎತ್ತರದಲ್ಲಿದೆ.

ಅಪಾರ ಪ್ರಕೃತಿ, ಖನಿಜ , ಪ್ರಾಣಿ ಸಂಪತ್ತನ್ನು ತನ್ನ ಒಡಲ ಲ್ಲಿ ಅಡಗಿಸಿಕೊಂಡು ಚಾರಣಿಗರನ್ನು ಕೈಬೀಸಿ ಕರೆಯುತ್ತಿದೆ. ಇಂತಹ ಅಭೂತಪೂರ್ವ ನಿಡಗಲ್ ಸಾಮ್ರಾಜ್ಯವನ್ನು
ಚಾಲುಕ್ಯರು, ಪಲ್ಲವರು,ಹೊಯ್ಸಳರು, ಚೋಳರು, ವಿಜಯ ನಗರದ ಅರಸರು , ಪಾಳೆಗಾರರು ಆಳ್ವಿಕೆಗೈದ ಭೂಮಿಯಾಗಿದೆ.
ಅಷ್ಱೇ ಅಲ್ಲದೆ ಅದೆಷ್ಟೋ ಸಾಧು ಸಂತರು, ಋಷಿ ಮುನಿಗಳು, ಅವಧೂತರು ನೆಲೆಯೂರಿದ್ದ ಪುಣ್ಯ ತಪೋ ಭೂಮಿ ಎಂದರೆ ಅತಿಶಯೋಕ್ತಿ ಎನಿಸದು.

ಈ ನಿಡಗಲ್ ದುರ್ಗದ ಒಂದೊಂದು ಕಲ್ಲುಗಳು ಇತಿಹಾಸದ ಸಾರವನ್ನು ತೋರಿಸುತ್ತವೆ.ಒಂದೊಂದು ಶಾಸನಗಳು ಇಲ್ಲಿನ ರಾಜ ಮಹಾರಾಜರ ಆಳ್ವಿಕೆಯ ಶೌರ್ಯದ ಸಾರವನ್ನು ಅನಾವರಣಗೊಳಿಸುತ್ತವೆ.

ನಿಡಗಲ್ ಅನ್ನುವ ಐತಿಹಾಸಿಕ ಪ್ರದೇಶವನ್ನು ಹಲವಾರು ಕವಿಗಳು, ಸಾಹಿತಿಗಳು, ಸ್ಥಳೀಯ ಸಾಹಿತ್ಯ ಪ್ರೇಮಿಗಳು ಇತಿಹಾಸ ಎಕ್ಕಿ ತೆಗೆದು ಸಮಾಜದ ಮುಖ್ಯನೆಲೆಗೆ ತಂದು ಉಸಿರು ಚೆಲ್ಲಿದ್ದಾರೆ. ಇನ್ನು ಕೆಲವರು ನಿಡಗಲ್ ದುರ್ಗದ ಇತಿಹಾಸದ ಸಂಶೋಧನೆಯಲ್ಲಿ ಬ್ಯುಸಿಯಾಗಿದ್ದಾರೆ. ಅದರಲ್ಲಿ ಮುಖ್ಯವಾಗಿ ಸ್ಥಳೀಯವಾಗಿ ಗಮನಸೆಳೆಯುವವರು ಇತಿಹಾಸ ತಜ್ಞ ಚೆಲುವರಾಜನ್, ಸಾಹಿತಿ ಸಣ್ಣ ನಾಗಪ್ಪ, ಪೂಜಾರ್ ಚಿತ್ತಯ್ಯ, ಹೀಗೆ ಹಲವರು.

ಶಿಲಾಯುಗದಲ್ಲೂ ತನ್ನ ಜೀವಂತಿಕೆಯನ್ನು ತಿಳಿಸುತ್ತಾ ಸಾಗುವ ನಿಡಗಲ್ ದುರ್ಗದಲ್ಲಿ ಜನರು ವಾಸವಾಗಿದ್ದರು ಎನ್ನುವುದಕ್ಕೆ ಇಲ್ಲಿ ಅಳಿದುಳಿದ ಕುರುಹುಗಳೇ ಮುಖ್ಯ ಆಧಾರವಾಗಿವೆ.

IMG 20200622 WA0040

ಸಾವಿರಾರು ವರ್ಷಗಳ ಐತಿಹಾಸಿಕ ಹಿನ್ನೆಲೆ ಹೊಂದಿರುವ ನಿಡಗಲ್ ದುರ್ಗಕ್ಕೆ ನೀಲಾಂಜನಗಿರಿ, ಕಾಳಾಂಜನಗಿರಿ, ನೀಲಾವತಿ ಪಟ್ಟಣವೆಂತಲೂ ಕರೆಯಲಾಗುತ್ತಿತ್ತು ಎಂಬ ಸಂಶೋಧಕರ ಉಲ್ಲೇಖಗಳಲ್ಲಿ ತಿಳಿದು ಬಂದಿದೆ.

ಡಾ.ಪೂಜಾರ್ ಚಿತ್ತಯ್ಯ ಅವರ ನಿಡುಗಲ್ ದುರ್ಗದ ಕಥನ ದಲ್ಲಿ ಉಳ್ಳೇಖಿಸಿರುವಾಗೆ ವಿಜಯ ನಗರ ಅರಸರ ಆಳ್ವಿಕೆ ಅಧೀನ ನಾಯಕರ ಆಳ್ವಿಕೆಯಾಗಿತ್ತು. ಇವರು ಅಧಿಕಾರವನ್ನು ಪೆನುಗೊಂಡೆಯಿಂದಲೇ ನಿಡಗಲ್ ಪ್ರಾಂತ್ಯವನ್ನು ಆಳ್ವಿಕೆ ನಡೆಸುತ್ತಿದ್ದರು.
ಅದಕ್ಕೆ ನಿದರ್ಶನವೆಂಬಂತೆ ಕ್ರಿಶ 1394 ರಿಂದ ಕ್ರಿಶ 1981 ವರೆಗೆ ದೊರೆತಿರುವ ಸುಮಾರು ಇಪ್ಪತ್ತೈದು ಶಾಸನಗಳು ವಿಜಯನಗರದ ಅರಸರ ಆಳ್ವಿಕೆಯನ್ನು ತೋರಿಸುತ್ತವೆ.

ವಿಜಯನಗರ ಅರಸರ ಕಾಲದಲ್ಲಿ ಕೋಟೆ ಕೊತ್ತಲಗಳು ಬಲಗೊಳ್ಳುತ್ತ ಹೋದವು. ಸಾಮ್ರಾಜ್ಯ ವಶಪಡಿಸಿಕೊಳ್ಳಬೇಕಾದರೆ ಮೊದಲು ಕೋಟೆಯನ್ನು ದಾಟಬೇಕಿತ್ತು. ಅಷ್ಟರ ಮಟ್ಟಿಗೆ ಕೋಟೆಯ ಗಟ್ಟಿತ್ವ ವನ್ನು ಕಾಪಾಡಿಕೊಂಡಿತ್ತು. ಈ ಏಳು ಸುತ್ತಿನ ಕೋಟೆಯನ್ನು ಬೈರವನ ಕೋಟೆ, ಬೆಸ್ತರ ಕೋಟೆ, ಬಸವನ ಕೋಟೆ, ಚೆನ್ನರಾಯನ ಕೋಟೆ, ಅಲ್ಲಮ ದೇವರ ಕೋಟೆ, ಅಲ್ಲಮ ದೇವರ ಕೋಟೆ, ವೀರಭದ್ರನ ಕೋಟೆ ಎಂತಲೂ ಕೋಟೆಯ ಮುಖ್ಯ ದ್ವಾರಗಳನ್ನು ಪಾಗೊಂಡೆ ಬಾಗಿಲು, ವಜ್ರದೂರು ಬಾಗಿಲು, ಸಿಮ್ಮಲಯ್ಯನ ದೊಡ್ಡಿ ಬಾಗಿಲು, ಮಾಟನೂರು ಬಾಗಿಲು ಎಂದು ಕರೆಯಲಾಗುತ್ತಿತ್ತಂತೆ ಆದರೆ ದು:ಖಕರ ಸಂಗತಿಯೆಂದರೆ ಕೋಟೆ ಕೊತ್ತಲ, ಸ್ಮಾರಕಗಳೆಲ್ಲವೂ ನೆಲಕಚ್ಚುತ್ತಿರುವುದು.

ಇನ್ನು ನಿಡಗಲ್ ದುರ್ಗದಲ್ಲಿ ಅಲ್ಲಲ್ಲಿ ಶತ್ರು ಸೈನಿಕರನ್ನು ಮಣಿಸಲು ಮದ್ದುಗುಂಡು ಹಾರಿಸಲು ಬತೇರಿಯಗಳನ್ನು ನಿರ್ಮಿಸಲಾಗಿದೆ. ಶಿಖರದ ಕೆಳಗಿನ ಅಂತಸ್ತಿನಲ್ಲಿ ಎರಡು ಫಿರಂಗಿಯ ತುಂಡುಗಳಿರುವುದು ಕಾಣುವುದೇ ಒಂಥರಾ ಖುಷಿ.
ಕೋಟೆಯ ಮೇಲ್ಬಾಗದಲ್ಲಿ ತುಪ್ಪದ ಕಣಜ, ದವಸ ಧಾನ್ಯಗಳ ಕಣಜಗಳನ್ನ, ಸೈನಿಕರ ಹಾಗೂ ಜನರ ದಾಹ ತೀರಿಸುವ ನೀರಿನ ಬಾವಿ ಮತ್ತು ಕಲ್ಯಾಣಿಗಳನ್ನು ಕಾಣಬಹುದಾಗಿದೆ. ಅದರಲ್ಲಿ ಸುಬ್ಬರಾಯನ ಬಾವಿ, ಸಿದ್ದವ್ವನ ಬಾವಿ, ಅರಸನಬಾವಿಯನ್ನು ಈಗಲೂ ಇಲ್ಲಿ ಕಾಣಬಹುದಾಗಿದೆ.
ಅರಸಿಯರ ಸ್ನಾನದ ಕೊಳಗಳನ್ನ ಎರಡನೇ ಅಂತಸ್ಥಿನಲ್ಲಿವೆ ಮತ್ತು ಪಾಳುಬಿದ್ದ ಅರಮನೆಯನ್ನು ನೋಡಬಹುದು.

ಇನ್ನು ಆಗಿನ ಪರಾಕ್ರಮಿಗಳ ಪ್ರತೀಕವಾಗಿ ನೆಟ್ಟಿದ್ದ ವೀರಗಲ್ಲು ಗಳು ಅನಾಥವಾಗಿ ಬಿದ್ದಿರುವ ದೃಶ್ಯ ಕಣ್ಣಿಗೆ ರಾಚುತ್ತವೆ.

IMG 20200622 WA0037

ಇಲ್ಲಿನ ಮತ್ತೊಂದು ವಿಶೇಷವೆಂದರೆ ಎಲ್ಲಾ ಧಾರ್ಮಿಕ ಆಚರಣೆಗಳಿಗೂ ಪ್ರಾಮುಖ್ಯ ಪಡೆದಿತ್ತು ಈ ದುರ್ಗ. ಅದಕ್ಕೆ ಸಾಕ್ಷಿ ಜೈನ ಪಾಶ್ವನಾಥ ಜಿನಾಲಯ ಇದನ್ನು ಕ್ರಿಶ 1232 ೨ ಇರುಂಗೋಳನ ಕಾಲದಲ್ಲಿ ಹೊಯ್ಸಳ, ದ್ರಾವಿಡ ಶೈಲಿಯಲ್ಲಿ ನಿರ್ಮಾಣವಾಗಿದೆ ಎನ್ನಲಾಗುತ್ತದೆ ಇಂದಿಗೂ ಕಾಣಬಹುದಾಗಿದೆ. ಹಾಗೆಯೆ ಶಿಖರದ ಬಸವ ದೇಗುಲ ಕ್ರಿಶ 1653 ರಲ್ಲಿ ಹೊಟ್ಟಣ್ಣ ನಾಯಕ ನಿರ್ಮಿಸಲಾಗಿರುವ ದೇಗುಲ ಸೂಜಿಗಲ್ಲಿನಂತೆ ಸೆಳೆಯುತ್ತಿದೆ.

ಕ್ರಿಶ 1670 ರಲ್ಲಿ ಕಾಳಹಸ್ತೀಶ್ವರ ದೇವಾಲಯವನ್ನು ತಿಮ್ಮಣ್ಣ ನಾಯಕ ನಿರ್ಮಿಸಿದ್ದಾರೆ ಎಂಬ ಉಲ್ಲೇಖವಿದೆ.
ಸೋಮೇಶ್ವರ ದೇಗುಲ, ಹೊಟ್ಟಣ್ಣ ನಾಯಕ, ತಿಮ್ಮಣ್ಣ ನಾಯಕ ಜೀರ್ಣೋದ್ದಾರ ಗೊಳಿಸಿದ್ದ ವೀರಭದ್ರೇಶ್ವರ ಇಂದಿಗೂ ಉಳಿದು ಪೂಜೆ ಪುನಸ್ಕಾರಗಳು ನಡೆಯುತ್ತವೆ. ಹೀಗೆ ರಾಮಲಿಂಗೇಶ್ವರ ದೇಗುಲ, ಶೂಲದ ಈರಣ್ಣದ ಗುಡಿ, ಎಲ್ಲವೂ ಗಮನಸೆಳೆಯುತ್ತವೆ.

ನಿಡಗಲ್ ಬೆಟ್ಟಕ್ಕೋಗುವ ನಡುವೆ ಕಣ್ಮನ ಸೆಳೆಯುವ
ರಾಮತೀರ್ಥ ಸಿಗುತ್ತದೆ. ಈ ಹಿಂದೆ ತ್ರೇತಾಯುಗದ ಶ್ರೀರಾಮ ವನವಾಸದ ವೇಳೆ ದಾಹ ನೀಗಿಸಿಕೊಳ್ಳಲು ತನ್ನ ಶಕ್ತಿಬಳಕೆಯಿಂದ ನಿರ್ಮಾಣದ ತೀರ್ಥವೇ ರಾಮ ತೀರ್ಥವೆಂಬ ಐತಿಹ್ಯವಿದೆ. ಆಗಾಗಿ ಮಕ್ಕಳಿಲ್ಲದವರು, ಕಂಕಣ ಭಾಗ್ಯವಿಲ್ಲದವರು ಬಂದು ಗಂಗಾ ಪೂಜೆ ಮಾಡಿ ಹೋದರೆ ಶುಭ ಫಲ ದೊರೆಯುತ್ತೆ ಎನ್ನುವ ನಂಬಿಕೆ ಇಂದಿಗೂ ಇದೆ.

IMG 20200622 WA0044

ಈ ಭವ್ಯ ನಿಡಗಲ್ ಪ್ರಾಂತ್ಯದಲ್ಲಿ ಕ್ರಿಶ.880 ರ ಶಾಸನದ ಪ್ರಕಾರ ನೊಳಂಬರ ದೊರೆ ಮಹೇಂದ್ರ ಹೇಮಾವತಿಯನ್ನು ರಾಜಧಾನಿಯನ್ನಾಗಿಸಿಕೊಂಡಿದ್ದಾಗ ನಿಡಗಲ್ ನ್ನು ಬಿದಿಯ ಚೋರರಸ ಆಳ್ವಿಕೆ ಮಾಡ್ತಿರುತ್ತಾನೆ.

ಕ್ರಿಶ.1190 ರ ಶಾಸನದ ಪ್ರಕಾರ ಬಮ್ಮ ದೇವನ ಮಂತ್ರಿ ಬೀಚಿ ನಿಡಗಲ್ ಕೋಟೆ ಕೊತ್ತಲಗಳನ್ನು ಭದ್ರಪಡಿಸಿದ್ದಾನೆ.
ಇದಾದ ಮೇಲೆ ಕ್ರಿಶ 1226 ರಲ್ಲಿ ಚೋಳ ಮಹಾರಾಜರು ಹೇಮಾವತಿಯಿಂದ ನೊಡಗಲ್ಲಿಗೆ ರಾಜಧಾನಿ ಬದಲಿಸಿದರು.

1761 ವೇಳೆ ಮೈಸೂರು ಹೈದರಾಲಿಖಾನ್ ನವಾಬ ಶಿರಾ ವಶಪಡಿಸಿಕೊಂಡು ನಿಡಗಲ್ ಸಂಸ್ಥಾನದ ಪೊಗದಿಯನ್ನು ಏಳು ಸಾವಿರಕ್ಕೆ ಹೆಚ್ಚಿಸಿ ಪ್ರತಿ ವರ್ಷವೂ ಮೈಸೂರು ಸೈನ್ಯಕ್ಕೆ 300 ಸೈನಿಕರನ್ನು ಕಳುಹಿಸಬೇಕೆಂದು ನಿಗದಿಯಾಗುತ್ತದೆ. ನಂತರ ನಿಡಗಲ್ ಆಳುತ್ತಿದ್ದ ತಿಮ್ಮಣ್ಣ ನಾಯಕನನ್ನು ಟಿಪ್ಪು ಮೋಸಗೊಳಿಸಿ ನಿಡಗಲ್ ವಶಪಡಿಸಿಕೊಂಡ ಹೀಗೆ ಕ್ರಿಶ 1769 ರಲ್ಲಿ ಬ್ರಿಟಿಷರ ಪ್ರಭಾವದಿಂದ ಟಿಪ್ಪು ಅವನತಿಯೊಂದಿಗೆ ಸ್ಥಳೀಯ ಪಾಳೆಯಗಾರರು ನಶಿಸುತ್ತಾರೆ. ಆಗಿನಿಂದ ನಿಡಗಲ್ನಲ್ಲಿದ್ದ ವರ್ತಕರು, ಜನಸಾಮಾನ್ಯರು ಇಲ್ಲಿಂದ ಬೇರೆಡೆಗೆ ವಲಸೆ ಹೋಗಲು ಆರಂಭಿಸುತ್ತಾರೆ ಪರಿಣಾಮ ನಿಡಗಲ್ ದುರ್ಗ ಖಾಲಿಯಾಗಿ ಪಾಳು ಕೊಂಪೆಯಾಗುತ್ತದೆ.

IMG 20200622 WA0046

ಹೀಗೆ ಹೆಜ್ಜೆ ಹೆಜ್ಜೆಗೂ ಇತಿಹಾಸವನ್ನು ಹೊರಸೂಸುವ ಬರೀ ಪುರಾತನ ಅವಶೇಶಾಗಳಿಂದ ಕಾಣುವ ನಿಡಗಲ್ ದುರ್ಗದಲ್ಲಿ ಅಮಾವಾಸ್ಯೆ, ಪೌರ್ಣಿಮೆ, ಹುಣ್ಣುಮೆ ದಿನದಂದು ನಿಧಿಯ ಚೋರರು ಪುರಾತನ ಸ್ಮಾರಕಗಳನ್ನು ಧ್ವಂಸಗೊಳಿಸುತ್ತಿದ್ದಾರೆ.
ಸುಖಾ ಸುಮ್ಮನೇ ಕಂದಚಾರಕ್ಕೆ ಬಿದ್ದು ಅದ್ಬುತ ಕೆತ್ತನೆಯುಳ್ಳ ಮೂರ್ತಿಗಳನ್ನು ಹಾಳುಗೆಡುವುತ್ತಿದ್ದಾರೆ ಇದರಿಂದ ಇತಿಹಾಸದ ಪುಟ್ಗಳಲ್ಲಿ ರಾರಾಜಿಸುತ್ತಿರುವ ನಿಡಗಲ್ ದುರ್ಗ ಕಣ್ಣ ಮುಂದೆ ಸ್ಮಶಾಣವಾಗಿ ಮಾರ್ಪಟ್ಟಿದೆ. ಇನ್ನಾದರು ಸಂಬಂಧಿಸಿದ ಸರ್ಕಾರ ಹಾಗೂ ಜನಪ್ರತಿನಿಧಿಗಳು ಇತ್ತ ಗಮನಹರಿಸಿ ನಿಧಿಚೋರರಿಂದ ಹಾಳಾಗುತ್ತಿರುವ ನಿಡಗಲ್ಲು ದುರ್ಗಕ್ಕೆ ರಕ್ಷಣೆ ಕಲ್ಪಿಸಿ ಪ್ರವಾಸಿ ತಾಣ ಮಾಡುವ ಅನಿವಾರ್ಯವಿದೆ.

IMG 20200622 WA0045

*ನಿಡಗಲ್ ಗೆ ಬರುವ ಮಾಹಿತಿ* : ಬೆಂಗಳೂರಿನಿಂದ ಮಧುಗರಿ, ಪಾವಗಡದ ಮೂಲಕ ತಲುಪಬಹುದು ಸುಮಾರು 180 ಕಿಮೀ ಆಗುತ್ತದೆ.
ತುಮಕೂರಿನಿಂದ ಬರುವುದಾದರೆ ಮಧುಗಿರಿ ಮೂಲಕ ಪಾವಗಡ, ಲಿಂಗದಹಳ್ಳಿಯಿಂದ ನಿಡಗಲ್ ತಲುಪಬಹುದಾಗಿದೆ. ಸುಮಾರು 120 ಕಿಮೀ ಆಗುತ್ತದೆ.ಬಸ್ಸುಗಳ ಸೌಲಭ್ಯವಿದೆ. (ಲಿಂಗದಹಳ್ಳಿ, ಅರಸೀಕೆರೆ)

ವರದಿ :ನವೀನ್ ಕಿಲಾರ್ಲಹಳ್ಳಿ*