ರೆಡ್ ಕ್ರಾಸ್ ಸಂಸ್ಥೆ ಯ ಪದಗ್ರಹಣ ಕಾರ್ಯಕ್ರಮ….!
ಪಾವಗಡ: – ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಪಾವಗಡ ಶಾಖೆಯ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ
ಹಾಗೂ ಮಹಾತ್ಮಾ ಗಾಂಧೀಜಿಯವರ 152ನೇ ಜಯಂತಿ ಮತ್ತು “ಪುಷ್ಟಿ” ಯೋಜನೆಯಡಿಯಲ್ಲಿ ಪಾವಗಡ ತಾಲ್ಲೂಕಿನಲ್ಲಿ ತೀವ್ರ ಅಪೌಷ್ಟಿಕಾಂಶದಿಂದ ಬಳಲುತ್ತಿರುವ ಮಕ್ಕಳಿಗೆ ಉಚಿತವಾಗಿ ಪೌಷ್ಟಿಕಾಂಶಯುಕ್ತ ಮಿಶ್ರಣದ ಕೊಡುಗೆಯ ಕಾರ್ಯಕ್ರಮದ ವರದಿ
ಇಂದು ಪಾವಗಡ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ನೂತನ ಪದಾಧಿಕಾರಿಗಳ ಪದಗ್ರಹಣದ ಕಾರ್ಯಕಮ ಅತ್ಯಂತ ಯಶಸ್ವಿಯಾಗಿ ನಡೆಯಿತು. ಸರಿಯಾಗಿ 11 ಗಂಟೆಗೆ ಆರಂಭವಾದ ಕಾರ್ಯಕ್ರಮದಲ್ಲಿ ಶ್ರೀಮತಿ ಸುಬಾಷಿಣಿ ಹಾಗೂ ಕು.ರಿತೀಶಾ ರವರಿಂದ ಭಗವನ್ನಾಮ ಸಂಕೀರ್ತನೆಯೊಂದಿಗೆ ಕಾರ್ಯಕ್ರಮ ಚಾಲನೆಯಾಯಿತು.
ಕಾರ್ಯಕ್ರಮವನ್ನು ಉದ್ದೇಶಿಸಿ ಆಹ್ವಾನಿಸಿದ ಶ್ರೀ ಬಿ.ಆರ್.ಉಮೇಶ್, ಅಧ್ಯಕ್ಷರು, ಶಾಖೆಗಳ ಸ್ಥಾಪನಾ ಸಮಿತಿ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ತುಮಕೂರು ಶಾಖೆ ರವರಿಂದ ಅತ್ಯಂತ ಸಮಂಜಸಕರವಾಗಿ ಹಾಗೂ ರೆಡ್ ಕ್ರಾಸ್ ಸಂಸ್ಥೆಯ ಮೂಲ ಉದ್ದೇಶಗಳ ಹಿನ್ನೆಲೆಯಲ್ಲಿ ಎಲ್ಲ ಸಭಿಕರನ್ನು ಸ್ವಾಗತಿಸಿದರು.
ಪ್ರಾಸ್ತಾವಿಕ ನುಡಿಯನ್ನು ದಿವ್ಯ ಸಾನ್ನಿಧ್ಯ ವಹಿಸಿದ್ದ ಪೂಜ್ಯ ಸ್ವಾಮಿ ಜಪಾನಂದಜೀ ರವರು ನಡೆಸಿಕೊಟ್ಟರು. ತಮ್ಮ ಉಪನ್ಯಾಸದಲ್ಲಿ ಇಡೀ ವಿಶ್ವದಲ್ಲಿಯೇ ಅಂತರ ರಾಷ್ಟ್ರೀಯ ಮಟ್ಟದ ಅತ್ಯಂತ ದೊಡ್ಡದಾದ ಸ್ವಯಂಸೇವಾ ಸಮೂಹವೆಂದರೆ ರೆಡ್ ಕ್ರಾಸ್ ಸಂಸ್ಥೆ. 1859ರ ಸಲ್ ಫೆರಿಯೋ ಯುದ್ಧದ ಸಂದರ್ಭ ಫ್ರಾನ್ಸ್ ಮತ್ತು ಇಟಲಿಯ ಒಂದು ಸಂಯುಕ್ತ ಸೈನ್ಯ ಮತ್ತೊಂದೆಡೆ ಆಸ್ಟ್ರೇಲಿಯಾದ ಸೈನ್ಯ. ಈ ಸಂದರ್ಭದಲ್ಲಿ ಮೂರನೇ ನೆಪೋಲಿಯನ್ ಯುದ್ಧಕ್ಕೆ ಕರೆಕೊಟ್ಟಾಗ ಸರಿಸುಮಾರು ಮೂರು ಲಕ್ಷಕ್ಕೂ ಅಧಿಕ ಸೈನಿಕರು ಯುದ್ಧದಲ್ಲಿದ್ದರು. ಸುಮಾರು 15 ಗಂಟೆಯವರೆಗೆ ಭೀಕರವಾದ ಘೋರ ಯುದ್ಧ ನಡೆದ ನಂತರ ಮೃತ ದೇಹಗಳು, ಗಾಯಗೊಂಡ ದೇಹಗಳು, ಛಿದ್ರ ಛಿದ್ರವಾಗಿ ಆ ರಣರಂಗದಲ್ಲಿ ಚೆಲ್ಲಾಡಿದ್ದವು. ಯಾರಿಗೂ ತತ್‍ಕ್ಷಣದ ಉಪಚಾರವಾಗಲಿ, ಚಿಕಿತ್ಸೆಯಾಗಲಿ ದೊರೆಯದಂತಹ ಪ್ರಕ್ಷುಬ್ಧ ಸ್ಥಿತಿ. ಅಂತಹ ಸಂದರ್ಭದಲ್ಲಿ ಐಶ್ವರ್ಯವಂತನಾಗಿ ಅತ್ಯಂತ ಯಶಸ್ವಿಯಾದ ಉದ್ಯಮಿ ಹೆನ್ರಿ ಡ್ಯೂನಾಂಟ್ ತನ್ನ ಹೃದಯ ಮಿಡಿತವನ್ನು ತಡೆದುಕೊಳ್ಳಲಾಗದೆ ಸ್ಥಳೀಯ ಗ್ರಾಮಸ್ಥರ ಸಹಕಾರದೊಂದಿಗೆ ಖಾಸಗಿ ಮನೆಗಳಲ್ಲಿ, ಚರ್ಚ್‍ಗಳಲ್ಲಿ ಮುಂತಾದ ಪ್ರದೇಶಗಳಲ್ಲಿ ಗಾಯಾಳುಗಳನ್ನು ಕರೆದೊಯ್ದು ಸೇವೆ ಸಲ್ಲಿಸುತ್ತಿದ್ದ. ಒಬ್ಬ ವ್ಯಕ್ತಿ ಆರಂಭ ಮಾಡಿದ ಈ ಸಂಸ್ಥೆ ಪಾವಗಡದಂತಹ ಹಿಂದುಳಿದ ತಾಲ್ಲೂಕಿನಲ್ಲಿಯೂ ನಾನಾ ರೀತಿಯ ಸೇವಾ ಯೋಜನೆಗಳನ್ನು ಅಹರ್ನಿಷಿ ನಡೆಸುತ್ತಿರುವ ನಮ್ಮ ಸಂಸ್ಥೆಗೆ ವಹಿಸಿರುವುದು ಸೇವಾ ಯೋಜನೆಯ ಮತ್ತೊಂದು ಮಜಲು ಎಂದು ಭಾವಿಸುತ್ತೇವೆ ಎಂದು ತಿಳಿಸಿದರು.
ಮುಂದೆ ಈ ಸಂಸ್ಥೆ ಪಾವಗಡವಷ್ಟೇ ಅಲ್ಲದೆ ಜಿಲ್ಲೆಯಲ್ಲಿ, ರಾಜ್ಯದಲ್ಲಿ, ರಾಷ್ಟ್ರದಲ್ಲಿ ಹಾಗೂ ವಿಶ್ವದಲ್ಲಿಯೇ ಸೇವಾ ಕಾರ್ಯಗಳ ಒಂದು ಛಾಪನ್ನು ಮೂಡಿಸಲು ಪಣತೊಟ್ಟಿರುವುದಾಗಿ ತಿಳಿಸಿದರು.
ನಂತರ ಪ್ರತಿಜ್ಞಾ ವಿಧಿಯನ್ನು ಬೋಧಿಸಿದ ಡಾ.ಅಪರ್ಣಾ ತುಳಸಿರಾಜ್ ರವರು ಅತ್ಯಂತ ಸ್ಪಷ್ಟವಾಗಿ ರೆಡ್ ಕ್ರಾಸ್ ಸಂಸ್ಥೆಯ ವಿಚಾರಧಾರೆಗಳ ಸಾರವನ್ನು ಪ್ರತಿಜ್ಞಾ ವಿಧಿಯ ಮೂಲಕ ತಿಳಿಸಿಕೊಟ್ಟರು.
ಕರ್ನಾಟಕ ರಾಜ್ಯದ ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿಗಳಾದ ಶ್ರೀ ಎಸ್.ನಾಗಣ್ಣ ರವರು ಇಂದು ತಮ್ಮ ಭಾಗ್ಯದ ದಿನವೆಂದು ಭಾವಿಸುತ್ತೇವೆ, ಕಾರಣ ಶ್ರೀರಾಮಕೃಷ್ಣ ಸೇವಾಶ್ರಮದ ಹಾಗೂ ಸ್ವಾಮಿ ವಿವೇಕಾನಂದ ಸಂಘಟಿತ ಗ್ರಾಮಾಂತರ ಆರೋಗ್ಯ ಕೇಂದ್ರದ ಆಶ್ರಯದಲ್ಲಿ ಪೂಜ್ಯ ಸ್ವಾಮಿ ಜಪಾನಂದಜಿ ರವರ ನೇತೃತ್ವದಲ್ಲಿ ಪಾವಗಡದ ಶಾಖೆಯ ಪದಗ್ರಹಣ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶವಾಯಿತು ಮತ್ತು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಕಿರೀಟದಲ್ಲಿ ಮತ್ತೊಂದು ಅಪೂರ್ವವಾದ ಗರಿ ದೊರಕಿದಂತಾಯಿತು ಎಂದು ತಿಳಿಸಿದರು.
ಎರಡು ಮಹಾ ಸಂಸ್ಥೆಗಳು ಕೂಡಿ ಕೇವಲ ಪಾವಗಡವಷ್ಟೇ ಅಲ್ಲದೆ ಈಗಾಗಲೇ ಪೂಜ್ಯ ಸ್ವಾಮಿ ಜಪಾನಂದಜೀ ರವರು ಕೈಗೆತ್ತಿಕೊಂಡಿರುವ ರಾಯಚೂರು, ಕೊಪ್ಪಳ, ಯಾದಗಿರಿ ಹಾಗೂ ಗುಲ್ಬರ್ಗಾ ಪ್ರದೇಶಗಳಲ್ಲಿ ಅಪೌಷ್ಟಿಕಾಂಶದ ಯೋಜನೆಗಳು ಹಾಗೂ ಇತರ ಸಾಮಾಜಿಕ ಸೇವಾ ಯೋಜನೆಗಳು ಮತ್ತೂ ಹೆಚ್ಚಾಗಿ ನಡೆಯುವುದರಲ್ಲಿ ಸಂದೇಹವಿಲ್ಲ ಎಂದು ತಿಳಿಸಿದರು.
ಒಟ್ಟಿನಲ್ಲಿ ರೆಡ್ ಕ್ರಾಸ್ ಸಂಸ್ಥೆಗೆ ಒಂದು ಮಹಾಶಕ್ತಿ ಸೇರಿದಂತಾಗಿದೆ, ತನ್ಮೂಲಕ ದುಃಖಿಗಳಿಗೆ, ದೀನರಿಗೆ, ನಿರ್ಗತಿಕರಿಗೆ, ರೋಗಿಗಳಿಗೆ, ನಿರಾಶ್ರಿತರಿಗೆ ಆಸರೆಯಂತೆ ಕಾರ್ಯನಿರ್ವಹಿಸುವುದಾಗಿ ತಿಳಿಸಿದರು. ತದನಂತರ ಸಾಂಕೇತಿಕವಾಗಿ ಪುಷ್ಟಿ ಯೋಜನೆಯಡಿಯಲ್ಲಿ ಪಾವಗಡ ತಾಲ್ಲೂಕಿನ ಎಲ್ಲ ಅಪೌಷ್ಟಿಕಾಂಶದಿಂದ ಕೂಡಿರುವ ಸುಮಾರು 142 ಮಕ್ಕಳಿಗೆ ಪೌಷ್ಟಿಕಾಂಶ ಕೂಡಿದ ಜಾಡಿಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ತುಮಕೂರು ಶ್ರೀ ಎಂ.ಎಸ್.ಶ್ರೀಧರ್ ರವರು ತಮ್ಮ ಇಲಾಖೆಗೆ ಪೂಜ್ಯ ಸ್ವಾಮಿ ಜಪಾನಂದಜೀ ರವರು ಹಾಗೂ ಇನ್ಫೋಸಿಸ್ ಸಂಸ್ಥೆಯ ಶ್ರೀಮತಿ ಸುಧಾಮೂರ್ತಿ ರವರ ಸಹಕಾರ ಈವರೆವಿಗೆ ಕಲ್ಯಾಣ ಕರ್ನಾಟಕಕ್ಕೆ ಸೀಮಿತವಾಗಿತ್ತು, ಆದರೆ ಇದೀಗ ತುಮಕೂರು ಜಿಲ್ಲೆಗೂ ವ್ಯಾಪಿಸಿರುವುದು ತಮ್ಮ ಅದೃಷ್ಟ ಎಂದು ಭಾವಿಸಿ ತಮ್ಮ ಇಲಾಖೆಯಿಂದ ಎಲ್ಲ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಮಹಾತ್ಮಾ ಗಾಂಧೀಜಿಯವರ 152ನೇ ಜನ್ಮದಿನೋತ್ಸವದ ಅಂಗವಾಗಿ ಮಧುಗಿರಿ ಮತ್ತು ಪಾವಗಡ ತಾಲ್ಲೂಕಿನ 100ಕ್ಕೂ ಮಿಗಿಲಾದ ಕುಷ್ಠರೋಗಿಗಳಿಗೆ ನೂತನ ವಸ್ತ್ರ, ಸೀರೆ, ಟವೆಲ್, ಪಂಚೆ ಹಾಗೂ ದಿನಸಿ ಕಿಟ್ ಮತ್ತು ಸೋಪುಗಳನ್ನು ವಿತರಿಸಲಾಯಿತು.
ಅಂಗನವಾಡಿಕಾರ್ಯಕರ್ತೆಯರು,ಆಶ್ರಮದ ಸಂಯೋಜಕರಾದ ಶ್ರೀ ಎಂ.ಎಸ್.ನಾಗರಾಜು ಹಾಗೂ ಸ್ವಯಂಸೇವಕರುಗಳಾದ ಶ್ರೀ ಜಿ.ಸುದೇಶ್ ಬಾಬು, ಶ್ರೀ ಮನು ಮಹೇಶ್, ಶ್ರೀ ಲೋಕೇಶ್ ದೇವರಾಜ್, ಶ್ರೀ ಲೋಕೇಶ್, ಶ್ರೀ ವೇಣುಗೋಪಾಲರೆಡ್ಡಿ, ಶ್ರೀ ಭರತ್ ರಾಮಮೂರ್ತಿ ಹಾಗೂ ಇನ್ಫೋಸಿಸ್ ಸಂಸ್ಥೆಯ ಸಮರ್ಪಣಾ ತಂಡದ ಸದಸ್ಯರುಗಳು ಭಾಗವಹಿಸಿದ್ದರು.
ವರದಿ: A ಶ್ರೀನಿವಾಸುಲು ಪಾವಗಡ