ಒಇತಿಹಾಸವನ್ನು ಅರಿವಿನಿಂದ ಉತ್ತಮ ಭವಿಷ್ಯ.
ಪಾವಗಡ: ಇತಿಹಾಸವನ್ನು ಅರಿತು ನಡೆದರೆ ಭವಿಷ್ಯ ಉತ್ತಮವಾಗಿರುತ್ತದೆ ಎಂದು ಕರ್ನಾಟಕ ಇತಿಹಾಸ ಅಕಾಡೆಮಿಯ ಅಧ್ಯಕ್ಷರಾದ ದೇವರ ಕೊಂಡಾರೆಡ್ಡಿ ತಿಳಿಸಿದರು.
ಭಾನುವಾರದಂದು ಐತಿಹಾಸಿಕ ನಿಡುಗಲ್ಲಿನಲ್ಲಿ ಶ್ರೀ ವಾಲ್ಮೀಕಿ ಮಹರ್ಷಿ ಆಶ್ರಮ ವತಿಯಿಂದ ಹಮ್ಮಿಕೊಂಡಿದ್ದ ನಿಡುಗಲ್ಲು ಐತಿಹಾಸಿಕ ಮತ್ತು ಸಾಂಸ್ಕೃತಿಕ ಮಹತ್ವ ಎಂಬ ರಾಜ್ಯಮಟ್ಟದ ವಿಚಾರ ಸಂಕೀರ್ಣವನ್ನು ಉದ್ಘಾಟಿಸಿ ಮಾತನಾಡಿದರು.
ಇತಿಹಾಸದಲ್ಲಿ ಅನೇಕರ ತ್ಯಾಗ ಬಲಿದಾನ ಕಥೆಗಳಿವೆ. ಪ್ರತಿಯೊಂದು ಊರಿನ ಹಿನ್ನೆಲೆ, ಪ್ರತಿಯೊಂದು ಕೋಟೆ-ಕೊತ್ತಲು, ದೇವಾಲಯ. ಕೆರೆ, ಕಲ್ಲುಗಳಿಗೆ ಒಂದೊಂದು ಕಥೆ ಇರುತ್ತದೆ. ಇವೆಲ್ಲವೂ ಸುಮ್ಮನೆ ಹುಟ್ಟಿಕೊಂಡವುಗಳಲ್ಲ. ಪ್ರತಿಯೊಂದರ ಹಿಂದೆ ಒಂದು ಘಟನೆ ಇರುತ್ತದೆ. ಈ ಘಟನಾ ವಿಷಯವನ್ನು ಶೋಧಿಸುವುದೇ ಇತಿಹಾಸದ ಮುಖ್ಯ ಕಾರ್ಯ. ಅದ್ಬುತ ಇತಿಹಾಸವನ್ನು ಹೊಂದಿರುವ ನಿಡುಗಲ್ಲಿನ ಬಗ್ಗೆ ಸುಮಾರು 30 ಶಾಸನಗಳಲ್ಲಿ ಮಾಹಿತಿ ಲಭ್ಯವಿದೆ. ಅವುಗಳ ಆಧಾರದ ಮೇಲೆ ನೋಡುವುದಾದರೆ ನಿಡಗಲ್ಲಿನ ಸ್ಪಷ್ಟ ಚಿತ್ರಣ ದೊರೆಯುತ್ತದೆ.
ಎಲ್ಲಾ ರಾಜರಂತೆ ನಿಡುಗಲ್ಲಿನ ಅರಸರು ಮತ್ತು ಪಾಳೇಗಾರರು ಕೆರೆಗಳನ್ನು ಕಟ್ಟಿಸಿದ್ದಾರೆ. ಕೆರೆಗಳು ಎಂದರೆ ಕೇವಲ ನೀರು ನಿಲ್ಲುವ ಸ್ಥಳಗಳಲ್ಲ. ಪಶುಪಕ್ಷಿ ಸೇರಿದಂತೆ ಎಲ್ಲ ಜೀವಿಗಳ ಜೀವನಾಧಾರ ಸ್ಥಳ. ನೀರು ಇದ್ದ ಕಡೆ ದೇವತೆಗಳು ನೆಲೆಸುತ್ತಾರೆ ಎಂದು ಶಾಸನವೊಂದು ತಿಳಿಸುತ್ತದೆ.
ಇತ್ತೀಚಿನ ದಿನಗಳಲ್ಲಿ ಮನುಷ್ಯನಿಗೆ ಹಣ ಹೆಚ್ಚಾಗುತ್ತಿದ್ದು ಆಧುನಿಕತೆಯ ಧಾವಂತದಲ್ಲಿ ಹಳೆಯ ಗುಡಿಗಳನ್ನು ಕಿತ್ತು ಕಡಿಮೆ ಆಯಸ್ಸಿನ ಸಿಮೆಂಟ್ ಮಂದಿರಗಳನ್ನು ಕಟ್ಟಿಸುತ್ತಿದ್ದಾರೆ. ಇದರೊಂದಿಗೆ ಇತಿಹಾಸ ಮತ್ತು ಪರಂಪರೆಗಳು ನಾಶವಾಗುತ್ತಿದೆ ಎಂದರು.
ನೀರು ಮತ್ತು ದೇವಾಲಯ ಇತಿಹಾಸದ ಅಂಶಗಳು. ಬಾವಿ ಕೆರೆಗಳ ನಾಶದಿಂದ ಜನವಸತಿ ನಾಶವಾಗುತ್ತದೆ. ನೀರಿನ ಆಹಾಕಾರ ಉಂಟಾಗಿ ಕೃಷ್ಣ ಮತ್ತು ತುಂಗೆಯ ನೀರು ಬೇಕು ಎಂದು ಸರ್ಕಾರದ ಮೇಲೆ ಒತ್ತಡ ಹಾಕುವ ಸಂದರ್ಭಗಳು ಪ್ರಾರಂಭವಾಗುತ್ತಿವೆ. ದೇವಾಲಯಗಳ ನಾಶದಿಂದ ಸ್ಥಳೀಯ ಪರಂಪರೆ ಹಾಳಾಗುತ್ತದೆ ಹಾಗಾಗಿ ಕೆರೆ ಮತ್ತು ದೇವಾಲಯಗಳ ಜೀರ್ಣೋದ್ಧಾರ ನಡೆಯ ಬೇಕು. ಇದರಿಂದ ಜನತೆಯ ಸಮೃದ್ಧಿಯ ಜೀವನ ಸಾಧ್ಯವಾಗುತ್ತದೆ ಎಂದರು.
ಶ್ರೀ ವಾಲ್ಮೀಕಿ ಆಶ್ರಮದ ಪೀಠಾಧ್ಯಕ್ಷರಾದ ಶ್ರಿ ವಾಲ್ಮೀಕಿ ಸಂಜಯಕುಮಾರ ಸ್ವಾಮಿಗಳು ಸಾನಿಧ್ಯ ವಹಿಸಿ ಮಾತನಾಡುತ್ತಾ, ನಿಡಗಲ್ಲು ಧಾರ್ಮಿಕ ಮತ್ತು ಐತಿಹಾಸಿಕ ಪರಂಪರೆಯನ್ನು ಹೊಂದಿರುವ ನೆಲೆ. ಇಲ್ಲಿನ ಪ್ರತಿಯೊಂದು ಅಂಶವೂ ಪವಿತ್ರವಾದವುಗಳು. ಇಂತಹ ನೆಲದಲ್ಲಿನ ಇತಿಹಾಸವನ್ನು, ಜಾನಪದವನ್ನು, ಪರಂಪರೆಯನ್ನು ಅವಲೋಕಿಸಿದರೆ ರೋಮಾಂಚನವಾಗುತ್ತದೆ. ಇಂತಹ ನೆಲದಲ್ಲಿ ನೆಲೆ ನಿಂತು ಸಮುದಾಯದ ಸಮಾಜದ ಪ್ರಗತಿ ಶ್ರಮಸುವ ಕಾರ್ಯ ನಮ್ಮದಾಗಿರುವುದು ನಮ್ಮ ಪುಣ್ಯ. ಇಂದು ನಮ್ಮ ಕರೆಗೆ ಓಗೊಟ್ಟು ನಾಡಿನ ಅನೇಕ ವಿದ್ವಾಂಸರು, ವಿಷಯ ಪಂಡಿತರು ಇಲ್ಲಿಗೆ ಆಗಮಿಸಿ ಇಲ್ಲಿನ ಮಹತ್ವವನ್ನು ತಿಳಿಸಿಕೊಟ್ಟಿದ್ದಾರೆ. ನಿಡಗಲ್ಲಿನ ಸರ್ವತೋಮುಖ ಬೆಳವಣಿಗೆಗೆ ನಾವು ಶ್ರಮಿಸಲಿದ್ದೇವೆ. ಎಲ್ಲಾ ಸಮುದಾಯಗಳ ಮುಖಂಡರ, ಜನಪ್ರತಿನಿಧಿಗಳ, ವಿದ್ವಾಂಸರ ಸಂಘ ಸಂಸ್ಥೆಗಳ ಮತ್ತು ಅದಿಕಾರಿ ವರ್ಗದ ಬೆಂಬಲ ಮತ್ತು ಸಹಕಾರ ಮಠಕ್ಕೆ ಇದೆ. ಎಲ್ಲರ ಸಹಕಾರದೊಂದಿಗೆ ಸ್ಥಳೀಯ ಇತಿಹಾಸದ ಮರುಕಳಿಸು ಪ್ರಯತ್ನ ಮಾಡಲಾಗುವುದು ಎಂದರು.
ಡಾಕ್ಟರ್ ಚೆಲುವರಾಜ್ ಅವರು ಮಾತನಾಡಿ ನಿಡಗಲ್ಲು ಐತಿಹಾಸಿಕ ಸ್ಥ. ಇಲ್ಲಿ ನೊಳಂಬರಾದಿಯಾಗಿ ಪಾಳೇಗಾರರ ಕಾಲದವರೆಗೆ ಅನೇಕರು ರಾಜ್ಯಭಾರ ಮಾಡಿದ್ದಾರೆ. ಇದು ದೊಡ್ಡ ಸಾಮ್ರಾಜ್ಯವಲ್ಲ. ಒಬ್ಬೊಬ್ಬರ ಕಾಲದಲ್ಲಿ ಒಂದೊಂದು ಎಲ್ಲೆಗಳನ್ನು ಹೊಂದಿದ್ದು ಒಂದು ಸಣ್ಣ ರಾಜ್ಯವಾಗಿತ್ತು. ಇಲ್ಲಿ ಆಳ್ವಿಕೆ ಮಾಡಿದ ಎಲ್ಲರ ಬಗ್ಗೆ ಮಾಹಿತಿ ಶಾಸ್ತ್ರಗಳ ಮತ್ತು ಜಾನಪದ ಮೂಲಕ ಲಭ್ಯವಿದೆ.
ಪುರಾತತ್ವ ಇಲಾಖೆ ನಿರ್ಲಕ್ಷಕ್ಕೆ ಒಳಗಾಗಿದ್ದರು ಇತ್ತೀಚೆಗೆ ಜೀರ್ಣೋದ್ಧಾರದ ಕೆಲಸಗಳು ನಡೆಯುತ್ತಿವೆ. ಸಂಬಂಧಿಸಿದ ಇಲಾಖೆಯ ಜೊತೆಗೆ ಸರ್ಕಾರವೂ ಸಹ ಕೈಜೋಡಿಸಿ 5 ದೇವಾಲಯಗಳ ಪುನರುಜ್ಜೀವನ ಮಾಡಿಸಿದ್ದಾರೆ. ಸಮುದಾಯ ಭವನಗಳು, ಯಾತ್ರಿ ಕೊಠಡಿಗಳು ನಿರ್ಮಾಣವಾಗಿದೆ. ರಸ್ತೆಗೆ ಅನುದಾನ ಬಿಡುಗಡೆಯಾಗಿದೆ. ಹಾಗಾಗಿ ಮುಂದಿನ ದಿನಗಳಲ್ಲಿ ನಿಡುಗಲ್ಲು ಗತವೈಭವವನ್ನು ಪಡೆದುಕೊಳ್ಳುತ್ತದೆ ಎಂದರು.
ಮಾಜಿ ಶಾಸಕ ತಿಮ್ಮರಾಯಪ್ಪ ಮಾತನಾಡಿ ನಿಡುಗಲ್ಲು ಕ್ಷೇತ್ರದ ಅಭಿವೃದ್ಧಿಗಾಗಿ ಈಗಾಗಲೇ ಅನೇಕ ಪ್ರಯತ್ನಗಳನ್ನು ಮಾಡಿದ್ದೇವೆ. ಇಲ್ಲಿ ಕೇವಲ ಜಾತ್ರೆಗಳನ್ನು ಮಾಡಿದರೆ ಅಭಿವೃದ್ಧಿ ಸಾಧ್ಯವಾಗದು. ಇಲ್ಲಿನ ಇತಿಹಾಸ ಪರಂಪರೆ ಸ್ಥಳೀಯ ಮಹತ್ವವನ್ನು ವಿಚಾರಸಂಕಿರಣಗಳ ಮೂಲಕ ಹೊರ ಜಗತ್ತಿಗೆ ತೋರಿಸಿಕೊಡಬೇಕು. ಆಗ ಕ್ಷೇತ್ರದ ಅಭಿವೃದ್ಧಿ ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಆಶ್ರಮದ ವತಿಯಿಂದ ಸಂಜಯಕುಮಾರ ಸ್ವಾಮಿಗಳು, ಲೋಕೇಶ್ ಪಾಳೇಗಾರ ಮತ್ತು ಅವರ ಗೆಳೆಯರ ಬಳಗದ ಶ್ರಮಮೆಚ್ಚುವಂತಹದ್ದು. ಇಂದಿನ ವಿಚಾರ ಸಂಕೀರ್ಣ ವಿಷಯಗಳನ್ನು ಗಮನಿಸಿದಾಗ ಅರ್ಥಪೂರ್ಣವೆನಿಸಿದವು.. ಇಂತಹ ವಿಚಾರ ಸಂಕೀರ್ಣಗಳು ಇಲ್ಲಿ ನಿರಂತರವಾಗಿ ನಡೆಯಬೇಕು ಎಂಬುದು ನಮ್ಮ ಆಶಯವಾಗಿದೆ ಎಂದರು.:
ನಿವೃತ್ತ ಜೈಲರ್ ಮತ್ತು ವಾಲ್ಮೀಕಿ ಸಂಪದದ ಮುಖ್ಯಸ್ಥರಾದ ಹರ್ತಿಕೋಟೆ ವೀರೇಂದ್ರ ಸಿಂಹ ರವರು ಮಾತನಾಡಿ ನಮ್ಮ ಹರ್ತಿಕೋಟೆಯೂ ನಿಡಗಲ್ಲು ಪಾಳೇಗಾರರ ರಾಜ್ಯ ಒಂದು ಬಾಗವಾಗಿದೆ. ಇಲ್ಲಿ ನಮ್ಮವರ ಆಳ್ವಿಕೆ ನಡೆಸಿದ್ದಾರೆ.ಇಂತಹ ಇತಿಹಾಸವನ್ನು ನಾಡಿಗೆ ಪ್ರಚುರ ಪಡಿಸುವುದು ನಮಗೆ ಸದಾವಕಾಶವಾಗಿದೆ. ಇಂದಿನ ಗೋಷ್ಟಿಗಳಲ್ಲಿ ಮಂಡನೆಯಾದ ನಿಡಗಲ್ಲಿನ ಎಲ್ಲ ಲೇಖನಗಳನ್ನು ವಿಷಯಗಳನ್ನು ಪುಸ್ತಕ ರೂಪಕ್ಕೆ ತಂದು ಜನತೆಗೆ ಮುಟ್ಟಿಸುವ ಕೆಲಸ ನನಗೆ ಒದಗಿ ಬಂದಿದ್ದು, ಹೆಮ್ಮೆಯಿಂದ ಈ ಕಾರ್ಯವನ್ನು ಮಾಡಿಮುಗಿಸುತ್ತೇನೆ ಎಂದರು.
ಜಿಲ್ಲೆಯ ಖ್ಯಾತ ಸಂಶೋಧಕರಾದ ಡಾ.ಯೋಗೀಶ್ವರಪ್ಪ ಮಾತನಾಡಿ ಪಾಳೇಗಾರಿಕೆ ಎನ್ನುವುದು ವಿಜಯನಗರದ ಕಾಲದ ಅರಸರು ನೀಡುತ್ತಿದ್ದ ಪದವಿ. ಸಾಮ್ರಾಜ್ಯದ ಅಧಿಕಾರ ವಿಕೇಂದ್ರೀಕರಣವನ್ನು ಮಾಡಿದಾಗ ಸ್ಥಳೀಯ ಆಡಳಿತಕ್ಕಾಗಿ ಆಯ್ಕೆಯಾದವರು ಪಾಳೆಗಾರರು. ಈ ಪಾಳೆಯಗಾರರು ಕೇವಲ ಒಂದು ಸಮುದಾಯಕ್ಕೆ ಸೀಮಿತವಾಗಿರಲಿಲ್ಲ. ಹಲವು ಸಮುದಾಯದವರು ಇದ್ದಾರೆ. ವ್ಯಕ್ತಿಯ ಶೌರ್ಯ ಪರಾಕ್ರಮ ಮತ್ತು ಶಕ್ತಿಯ ಮೇಲೆ ಈ ರಾಜರಿಗೆ ಹತ್ತಿರವಿದ್ದವರಿಗೆ ಈ ಪದವಿ ದೊರೆಯುತ್ತಿತ್ತು. ಹಾಗೆ ಪದವಿ ಪಡೆದವರಲ್ಲಿ ನಿಡಗಲ್ ಪಾಳೆಗಾರರು ಒಬ್ಬರು. ಮುಂದೆ ಇವರು ಸ್ಥಳೀಯವಾಗಿ ಆಡಳಿತ ಮಾಡುತ್ತಾ ಪಾಳೆಗಾರರು ಎಂದು ಪ್ರಸಿದ್ಧಿ ಪಡೆದಿದ್ದಾರೆ .ನಿಡಗಲ್ಲಿನ ಕೇವಲ ಪಾಳೇಗಾರರು ಮಾತ್ರ ಆಳ್ವಿಕೆ ಮಾಡಿಲ್ಲ. ಗಂಗರು, ನೊಳಂಬರು, ಕಲ್ಯಾಣಿ ಚಾಲುಕ್ಯರು, ಚೋಳರೂ ಆಳ್ವಿಕೆ ಮಾಡಿದ್ದಾರೆ. ಪ್ರತಿಯೊಂದು ಸ್ಥಳದ ಇತಿಹಾಸವನ್ನು ನೋಡುವಾಗ ದಾಖಲೆಗಳ ಹಿನ್ನೆಲೆಯಲ್ಲಿ ನೋಡಿದಾಗ ಸ್ಪಷ್ಟ ಇತಿಹಾಸ ದೊರೆಯುತ್ತದೆ. ಮೌಖಿಕ ಆಕರಗಳಲ್ಲಿ ವೈಭವೀಕರಣ ಕಂಡುಬರುತ್ತದೆ ಎಂದು ತಿಳಿಸಿದರು
ಜನಪದ ಸಾಹಿತಿ ಸಣ್ಣನಾಗಪ್ಪ ಮಾತನಾಡಿ ನಿಡುಗಲ್ಲಿನ ಸುತ್ತಲೂ ಸಾಕಷ್ಟು ಜಾನಪದ ಸಾಹಿತ್ಯ ಅಡಗಿದೆ. ಅದನ್ನು ಹುಡುಕಿ ತೆಗೆಯುವ ಕಾರ್ಯ ಮಾಡಬೇಕಾಗಿದೆ. ಸುತ್ತಮುತ್ತಲಿನ ಗ್ರಾಮದಲ್ಲಿ ನಿಡುಗಲ್ಲನ್ನು ಕುರಿತು ಹೇಳುವವರಿದ್ದಾರೆ. ಇಲ್ಲಿನ ರಾಜವೈಭವ, ಪಾಳೇಗಾರರ ಆಳ್ವಿಕೆ, ದೇವರು-ಧರ್ಮದ ಬಗ್ಗೆ ವೈವಿಧ್ಯಮಯವಾದ ಅಂಶಗಳು ಜಾನಪದದಿಂದ ತಿಳಿದುಬರುತ್ತದೆ.
ಶೂಲದ ಈರಣ್ಣನ ಕಥೆ ಇರಬಹುದು, ಹೊಟ್ಟಣ್ಣನಾಯಕನ ಕತೆ ಏಳೆಜ್ಜೆ ಕಣಿವೆ ಕತೆ, ದುರ್ಗದ ಹೋರಾಟ ಹೀಗೆ ಅನೇಕ ಕಥನ ಸಾಹಿತ್ಯ ಇಂದಿಗೂ ಜೀವಂತವಾಗಿ ಪ್ರದೇಶದಲ್ಲಿದೆ ಎಂದರು.
ಡಾ.ಕೆ.ವಿ.ಮುದ್ದುವೀರಪ್ಪ ಮಾತನಾಡಿ ನಿಡುಗಲ್ಲಿನಲ್ಲಿ ಇಂದು ಇರುವ ಸ್ಮಾರಕಗಳನ್ನು ಮತ್ತು ನಾವು ಕ್ಷೇತ್ರಕಾರ್ಯ ಮಾಡಿದಾಗ ಇದ್ದ ಸ್ಮಾರಕಗಳನ್ನು ಗಮನಿಸಿದಾಗ ಸಂಖ್ಯೆಯಲ್ಲಿ ಬಹಳಷ್ಟು ಕಡಿಮೆಯಾಗಿದೆ. ಇದಕ್ಕೆ ಕಾರಣ ನಿರ್ಲಕ್ಷತೆ ಮತ್ತು ಹಲವು ನಿಧಿಗಳ್ಳರ ಹಾವಳಿ ಇರಬಹುದು. ಅಳಿದುಳಿದ ಇಲ್ಲಿರುವ ಸ್ಮಾರಕಗಳ ಆಧಾರದ ಮೇಲೆ ನಿಡುಗಲ್ಲನ್ನು ಅರ್ಥೈಸುವ ಅನಿವಾರ್ಯ ಒದಗುತ್ತಿದೆ. ನಿಡುಗಲ್ಲಿನ ಸುತ್ತ ಅನೇಕ ಜಾನಪದ ಕಥನಗಳು ಲಭ್ಯವಿವೆ.
ನಿಡುಗಲ್ಲಿನಲ್ಲಿರುವ ಫಿರಂಗಿಗೆ ಏಳುಮಕ್ಕಳ ತಾಯಿ ಎಂಬ ಹೆಸರು, ಕಾಳಹಸ್ತೇಶ್ವರ ಲಿಂಗಕ್ಕೆ ಕಿಚಡಿಲಿಂಗ ಎಂಬ ಹೆಸರುಗಳ ಹಿನ್ನೆಲೆ, ಕುಂಟೋಬ ನಾಯಕ ಮತ್ತು ಹೊಟ್ಟಣ್ಣ ನಾಯಕನ ಪ್ರಸಂಗ, ಕುಂಟತಿಮ್ಮನ ಪ್ರಸಂಗ ಹೀಗೆ ಹಲವು ಜಾನಪದ ಕಥನಗಳ ಮೂಲಕ ನಿಡುಗಲ್ಲಿನ ಮೌಖಿಕ ಇತಿಹಾಸವನ್ನು ಕಟ್ಟಬಹುದಾಗಿದೆ ಎಂದರು.
ಡಾ.ಗೋವಿಂದರಾಯ ರವರು ಮಾತನಾಡಿ ನಿಡುಗಲ್ಲನ್ನು ತುಮಕೂರು ಜಿಲ್ಲೆಯ ಹಂಪೆ ಎಂದರೆ ತಪ್ಪಾಗಲಾರದು. ಹಂಪೆಯಲ್ಲಿರುವಷ್ಟರ ಮಟ್ಟಿಗೆ ಹೆಚ್ಚಿನ ದೇವಾಲಯಗಳನ್ನು ಇಲ್ಲಿ ಕಾಣಬಹುದು. ಇಂತಹ ವಿಶೇಷ ಸ್ಥಳದ ಬಗ್ಗೆ ಹಲವಾರು ಸಂಶೋದಕರು, ಆಸಕ್ತರು, ಕವಿಗಳು. ಲೇಖಕರು ತಮ್ಮ ಬರವಣಿಗೆಯಲ್ಲಿ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಮಾಹಿತಿ ಒದಗಿಸಿಕೊಟ್ಟಿದ್ದಾರೆ..
ಈ ಪರಂಪರೆ ನಿಡಗಲ್ಲು ಚೆನ್ನಪ್ಪ ಕವಿಯಿಂದ ಬಸವಕವಿ ರವರಿಂದ ಪ್ರಾರಂಭವಾಗಿ ಮೆಕೆಂಜಿ, ನರಸಿಂಹಾಚಾರ್, ಡಾ.ಲಕ್ಷ್ಮಣ್ ತೆಲಗಾವಿ, ಶಿವತಾರಕ್, ಶೇಷಶಾಸ್ತ್ರಿ, ಉಮಾಪತಿ, ಗಣೇಶ್, ಡಾ.ಯೋಗೇಶ್ವರ್, ಡಾ.ಪರಶಿವಮೂರ್ತಿ, ಡಾ.ಚೆಲುವರಾಜ್ ಜಿ.ಆರ್.ತಿಪ್ಪೇಸ್ವಾಮಿ , ಡಾ.ಚಿತ್ತಯ್ಯ ಪೂಜಾರ ಡಿ.ಎಲ್.ಬಸವರಾಜು, ತಾ.ಸ.ಪುಷ್ಪ, ಮಾ.ನ.ಮೂರ್ತಿ,ಕೆಂಕೆರೆ ಹನುಮಂತೇಗೌಡ ಹೀಗೆ ಮುಂದುವರೆಯುತ್ತದೆ. ಜೊತೆಗೆ ಇದೇ ಸಾಲಿನಲ್ಲಿ ಸಣ್ಣನಾಗಪ್ಪ, ಡಾ.ಮುದ್ದುವೀರಪ್ಪ, ಡಾ.ರಂಗಲಕ್ಷ್ಮಿ, ಬಿ.ಎಲ್.ವೇಣು,ಕೋಟಬಂಡೆ ವೆಂಕಟರವಣಪ್ಪ, ಚಿತ್ತಪ್ಪ ಕಳಗಟ್ಟಿ, ಡಾ.ಕವಿತಾ, ಹೊ.ಮ.ನಾಗರಾಜು ರವರ ಸಾಹಿತ್ಯ ಕೊಡುಗೆಯೂ ಸಹಾ ನಿಡುಗಲ್ಲಿ ಇತಿಹಾಸದ ಸಾಲಿನಲ್ಲಿ ಲಭ್ಯವಾಗುತ್ತದೆ. ನಿಡುಗಲ್ಲು ದುರ್ಗದ ಕಥನ, ನಿಡಗಲ್ಲು ಪಾಳೆಗಾರರು, ಪಾವಗಡ ತಾಲ್ಲೂಕು ದರ್ಶನ ನಿಡಗಲ್ಲು ವೈಭವ, ನಿಡುಗಲ್ಲು ಕೈಪಿತ್ತು, ಸಂಶೋದನಾಸಿರಿ, ಆಂಧ್ರಪ್ರದೇಶದ ಕನ್ನಡ ಶಾಸನಗಳು, ನಿಡುಗಲ್ಲು ದರ್ಶನ, ಶೂಲದ ಈರಣ್ಣ, ತುಮಕೂರು ಜಿಲ್ಲೆಯ ಕೋಟೆಗಳು, ಪಾವಗಡ ತಾಲೂಕಿನ ಸಾಂಸ್ಕೃತಿಕ ವೀರರು,ದಕ್ಷಿಣದ ಹಂಪೆ ನಿಡುಗಲ್ಲು ನಂತಹ ಅನೇಕ ಕೃತಿಗಳು ಮತ್ತು ಬರಹಗಳು ನಿಡುಗಲ್ಲಿನ ಮೇಲೆ ಬೆಳಕು ಚೆಲ್ಲುತ್ತವೆ ಎಂದರು.
ಡಾ.ನಂಜುಂಡಸ್ವಾಮಿಯವರು ಮಾತನಾಡಿ ನಿಡುಗಲ್ಲು ರಾಜ್ಯದಲ್ಲಿ ಶಿಕ್ಷಣ ನೀಡುತ್ತಿದ್ದ ಗುರುಗಳು ಚೆನ್ನಪ್ಪ ಕವಿಗಳು. ಅವರ ಮನೆತನವನ್ನು ಓದಿಸೋರ ಮಠ ಎಂದು ಗುರುತಿಸುತ್ತಾರೆ. ಇಂದಿಗೂ ಅವರ ಮನೆತನ ಇದೆ. ಚೆನ್ನಪ್ಪ ಕವಿಯು ಶರಣ ಲೀಲಾಮೃತವನ್ನು ರಚಿಸಿದ್ದಾರೆ. ಇಂದಿಗೂ ಪಾರಾಯಣ ನಡೆಯುತ್ತಿದೆ. ಇದರಂತೆ ಬಸವ ಕವಿಯೂ ಸಹಾ ಒಬ್ಬ ಶ್ರೇಷ್ಟ ಕವಿಯಾಗಿದ್ದರು. ಎಂದರು
ನಿಡುಗಲ್ ಚೆನ್ನಪ್ಪ ಕವಿಗಳ ಸಮಾಧಿಯು ಇಂದಿನ ಬೆಂಗಳೂರು ಹೊಸಕೋಟೆಯಲ್ಲಿ ಇದೆ. ಅದನ್ನು ಶರಣ ಲೀಲಾಮೃತ ಮಠ ಎಂದು ಜನ ಗುರ್ತಿಸುತ್ತಾರೆ ಎಂದು ತಿಳಿಸಿದ್ದಾರೆ
ಡಾ.ಬಗ್ಗನಡು ನಾಗಭೂಷಣ್ ಅವರು ಮಾತನಾಡಿ ಐರೋಪ್ಯರಿಗೆ ಇರುವಷ್ಟು ಐತಿಹಾಸಿಕ ಕಾಳಜಿ ಮತ್ತು ಪ್ರಜ್ಞೆ ಭಾರತೀಯರಲ್ಲಿ ಇಲ್ಲ. ಇತಿಹಾಸದ ಬಗ್ಗೆ ನಮ್ಮಲ್ಲಿ ನಿರ್ಲಕ್ಷ ಮನೋಭಾವವಿದ್ದರೆ ಐರೋಪ್ಯರಲ್ಲಿ ದಾಖಲಿಸುವ ಗುಣವಿದೆ. ಇತಿಹಾಸದಲ್ಲಿ ದಾಖಲು ಆಧಾರ ಇತಿಹಾಸ ಮತ್ತು ಜಾನಪದ ಇತಿಹಾಸ ಎಂದು ಗುರ್ತಿಸಿ ನೋಡುವುದಾದರೆ ಎರಡನ್ನು ಸಮ್ಮಿಲನಗೊಳಿಸಿ ಇತಿಹಾಸ ಸೃಷ್ಟಿಸುವುದು ಅನಿವಾರ್ಯ ನಮ್ಮ ನೆಲೆಯಲ್ಲಿದೆ. ಆದಾಗ್ಯೂ ಸ್ಪಷ್ಟ ಇತಿಹಾಸ ಸೃಷ್ಟಿಸಲು ಸಾಧ್ಯವಿಲ್ಲ ಕೇವಲ ಶೇಕಡಾ 90ರಷ್ಟು ರವರೆಗೆ ಸತ್ಯತೆಯಿಂದ ಕೂಡಿರುತ್ತದೆ ಎಂದು ವಿದ್ವಾಂಸರು ತಿಳಿಸುತ್ತಾರೆ.
ನಿಡುಗಲ್ಲಿನ ಇತಿಹಾಸದಲ್ಲಿ ಮೌಖಿಕ ಸಾಹಿತ್ಯ ಹೆಚ್ಚು ಕಂಡುಬರುತ್ತದೆ. ಶೂಲದ ವೀರಣ್ಣನ ಬಗ್ಗೆ ಇರುವ ಸಾಹಿತ್ಯದ ಬಗ್ಗೆ ಅವಲೋಕಿಸುವುದಾದರೆ ಇಡೀ ಕರ್ನಾಟಕದಲ್ಲಿ ಎಲ್ಲೂ ಇಲ್ಲದ ವಿಶೇಷ ವ್ಯವಸ್ಥೆ ಇಲ್ಲಿ ಕಂಡುಬರುತ್ತದೆ. ಶೂಲದ ಈರಣ್ಣನ ಪೂಜೆ ಮಾಡುವ ಜನ ಕೆಳವರ್ಗದವರು ಆಗಿದ್ದರೆ, ಪ್ರಸಾದವನ್ನು ಸ್ವೀಕರಿಸಿ ಪೂಜೆಯನ್ನು ಸ್ವೀಕರಿಸುವ ಜನ ಮೇಲ್ವರ್ಗದವರ ಆಗಿದ್ದಾರೆ. ಇದಕ್ಕೆ ಪೂರಕವಾಗಿರುವ ಮೌಖಿಕ ಸಾಹಿತ್ಯ ಅದ್ಭುತವಾಗಿದೆ ಎಂದರು.
ಹೊ.ಮ.ನಾಗರಾಜುರವರು ಮಾತನಾಡಿ ನಿಡುಗಲ್ಲು ದಕ್ಷಿಣದ ಹಂಪೆ ಎಂದೇ ಪ್ರಸಿದ್ಧಿ ಪಡೆದಿದೆ. ಇಲ್ಲಿರುವ ದೇವಾಲಯಗಳು ಪ್ರತಿಯೊಂದು ಒಂದೊಂದು ಕಥೆಯನ್ನು ತಿಳಿಸುತ್ತದೆ. ಗಂಗರ ನೊಳಂಬರ ಕಲ್ಯಾಣಿ ಚಾಲುಕ್ಯರು ಚೋಳರ ಮತ್ತು ವಿಜಯನಗರೋತ್ತರ ಪಾಳೇಗಾರರ ಕಾಲದ ಹಲವು ದೇವಾಲಯಗಳು ಇಲ್ಲಿ ಕಂಡುಬರುತ್ತದೆ. ಖಂಡ್ಗ ಕಡಲೆಯನ್ನು ತರಿಸಿ ಒಂದೊಂದಾಗಿ ಒಂದೊಂದು ವಿಗ್ರಹಕ್ಕೆ ಇಟ್ಟಾಗ ಕೊನೆಗೆ ಎರಡು ನಂದಿಗಳಿಗೆ ಸೇರಿ ಒಂದೇ ಕಡಲೆ ಉಳಿದು, ಅದನ್ನು ಎರಡು ಭಾಗ ಮಾಡಿ ಎರಡಕ್ಕೂ ಇಟ್ಟಾಗ ಎರಡೂ ನಂದಿಗಳು ಮುನಿಸಿಕೊಂಡಂತೆ ತಿಳಿಸುವ ಜಾನಪದೀಯ ಕಥೆಯ ಮೂಲಕ ವೀರಗಲ್ಲಿನ ದೇವಾಲಯ ಸಂಖ್ಯೆಯನ್ನು ತಿಳಿಯಬಹುದು ಎಂದರು.
ಸ್ಥಳೀಯ ಮುಖಂಡರಾದ ಹೊಟ್ಟೆ ಬೊಮ್ಮನಹಳ್ಳಿ ತಿಮ್ಮಾರೆಡ್ಡಿ ಅವರು ಮಾತನಾಡಿ ಚಿಕ್ಕಂದಿನಿಂದ ನಿಡುಗಲ್ಲು ನೋಡುತ್ತಲೇ ಬೆಳೆದವನು ನಾನು. ಇಲ್ಲಿನ ಭವ್ಯ ಪರಂಪರೆ ಇತಿಹಾಸವನ್ನು ಬೆಳಕಿಗೆ ತರಬೇಕೆಂಬುದು ನನ್ನ ಹಿರಿಯಾಸೆಯಾಗಿತ್ತು. ಅದಕ್ಕಾಗಿ ಮೊಟ್ಟಮೊದಲಿಗೆ ಈಗ ಕುಗ್ರಾಮಕ್ಕೆ ಜನಸಂಪರ್ಕ ಏರ್ಪಡಿಸಲು ರಸ್ತೆ ಕಾಮಗಾರಿ ಕೈಗೊಂಡಿದ್ದೆವು. ಇಂದು ಅನೇಕರು ಬಂದು ಹೋಗುತ್ತಿದ್ದಾರೆ. ನಿಡಗಲ್ಲಿನ ಬಗ್ಗೆ ಬೆಳಕು ಚೆಲ್ಲುತ್ತಿದ್ದಾರೆ. ಇಂದು ಅನೇಕ ವಿದ್ವಾಂಸರು ನಮ್ಮ ನಿಡಗಲ್ಲಿನ ನೆಲದಲ್ಲಿ ಬಂದು ಮಾತನಾಡುತ್ತಿದ್ದಾರೆ ಎಂಬುದು ನಮಗೆ ಹೆಮ್ಮೆ ಎನಿಸುತ್ತಿದೆ ಎಂದರು.
ಒಂದನೇ ವಿಚಾರ ಗೋಷ್ಠಿ ಗೋಷ್ಠಿಯ ಅಧ್ಯಕ್ಷತೆಯನ್ನು ಡಾ.ಯೋಗೀಶ್ವರಪ್ಪ ವಹಿಸಿದ್ದರು. ನಿಡಗಲ್ಲು ಸ್ಮಾರಕಗಲ ಜಾನಪದ ಕಥನಗಳು ಎಂಬ ವಿಷಯವನ್ನು ಡಾ.ಕೆ.ವಿ.ಮುದ್ದವೀರಪ್ಪ, ನಿಡಗಲ್ಲು ಕೃತಿಗಳು ಎಂಬ ವಿಷಯವನ್ನು ಡಾ.ಎಂ.ಗೋವಿಂದರಾಯ, ನಿಡಗಲ್ಲು ಜಾನಪದ ವೈಶಿಷ್ಠ್ಯ ಎಂಬ ವಿಷಯವನ್ನು ಸಣ್ಣನಾಗಪ್ಪ ಮಂಡಿಸಿದರು. ೨ನೇ ಗೋಷ್ಟಿಯ ಅಧ್ಯಕ್ಷತೆಯನ್ನು ಡಾ.ಪಾವಗಡ ಚಲುವರಾಜನ್ ವಹಿಸಿದ್ದರು. ನಿಡಗಲ್ಲು ಪಾಳೇಗಾರರು ಎಂಬ ವಿಷಯವನ್ನು ಡಾ.ಯೋಗೀಶ್ವರಪ್ಪ, ನಿಡಗಲ್ಲು ಚರಿತ್ರೆ ಮತ್ತು ಮೌಖಿಕ ಆಕರಗಳು ಎಂಬ ವಿಷಯವನ್ನು ಡಾ.ಬಗ್ಗನಡು ನಾಗಭೂಷಣ್, ನಿಡಗಲ್ಲು ಚನ್ನಪ್ಪ ಕವಿ ಎಂಬ ವಿಷಯವನ್ನು ಡಾ.ವಿ.ನಂಜುಂಡಸ್ವಾಮಿ ಮತ್ತು ನಿಡಗಲ್ಲು ದೇವಾಲಯಗಳು ಎಂಬ ಅಂಶವನ್ನು ಹೊ.ಮ.ನಾಗರಾಜು ಮಂಡಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಜಗನ್ನಾಥ, ಬಸವರಾಜು, ಮಾರಪ್ಪ, ನರಸಿಂಹುಲು, ಚಳುವಳಿ ರಾಜಣ್ಣ, ದುರ್ಗಣ್ಣ, ಶಿವಪ್ಪ, ಶಿವಮ್ಮ, ಮಹರಾಜ, ಸ್ಥಳೀಯ ಸಂಪನ್ಮೂಲ ವ್ಯಕ್ತಿ ರಾಮಪ್ಪ, ತಿಮ್ಮಯ್ಯ, ಭಾಗ್ಯಮ್ಮ ಪಾಲಪ್ಪ, ರಾಜಗೋಪಾಲ ನಾಯಕ, ಗಿರಿಜಮ್ಮಶಿವಣ್ಣ, ಗಿರಿಜನ ನಾಯಕ ನೌಕರರ ಸಂಘದ ಅಧ್ಯಕ್ಷ ಅನಿಲ್ ಕುಮಾರ್, ಇಂಜಿನಿಯರ್ ಪ್ರಭಾಕರ್, ಎಪಿಎಂಸಿ ಅಧ್ಯಕ್ಷ ಮಾರಣ್ಣ, ಡಾ.ಹೆಚ್.ಕೆ.ನರಸಿಂಹಮೂರ್ತಿ, ಅಂಬಿಕಾರಮೇಶ್, ಬೆಳ್ಳಿಬಟ್ಲು ಜಯಮ್ಮ, ವಾಲ್ಮೀಕಿ ಜಾಗೃತಿ ವೇದಿಕೆಯ ಪದಾಧಿಕಾರಿಗಳಾದ ಓಂಕಾರನಾಯಕ, ಬಾಸ್ಕರನಾಯಕ, ಮಧು, ಈಶ್ವರ್, ಜಗದೀಶ್, ಮಂಜುನಾಥ, ತಿಮ್ಮಯ್ಯ, ಶ್ರೀನಿವಾಸ, ಶ್ರೀಕೃಷ್ಣ, ಅನಂತಯ್ಯ, ಬಲರಾಮ ಮತ್ತು ಸ್ಥಳೀಯ ಮುಖಂಡರು ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು.