IMG 20211021 WA0049

ಕಾಂಗ್ರೆಸ್ : ಬಿಜೆಪಿಗೆ ನೀವು ಯಾಕೆ ಮತ ಹಾಕಬೇಕು?

POLATICAL STATE

ಬಿಜೆಪಿಗೆ ನೀವು ಯಾಕೆ ಮತ ಹಾಕಬೇಕು?

ಹಾನಗಲ್ :  ಬಸವರಾಜ ಬೊಮ್ಮಾಯಿ, ಯಡಿಯೂರಪ್ಪ ಹಾಗೂ ಮೋದಿ ಅವರು ರೈತರ ಆದಾಯವನ್ನು ದುಪ್ಪಟ್ಟು ಮಾಡುತ್ತೇವೆ ಎಂದಿದ್ದರು. ನಿಮ್ಮ ಆದಾಯ ದುಪ್ಪಟ್ಟು ಆಗಿದೆಯಾ? ಇಲ್ಲ.. ಎಂದು ನೀವೇ ಹೇಳುತ್ತಿದ್ದೀರಿ.

ರೈತನಿಗೆ ಸಂಬಳ, ಪಿಂಚಣಿ, ನಿವೃತ್ತಿ, ಲಂಚ ಯಾವುದೂ ಇಲ್ಲ. ಅವರ ಬದುಕನ್ನು ಹಸನ ಮಾಡುತ್ತೇವೆ ಎಂದಿದ್ದ ಬಿಜೆಪಿಗರು ರೈತರಿಗೆ ಯಾವ ಸಹಾಯ ಮಾಡಿದ್ದಾರೆ?

ಯುವಕರಿಗೆ ವರ್ಷಕ್ಕೆ 2 ಕೋಟಿ ಉದ್ಯೋಗ ನೀಡುತ್ತೇವೆ ಎಂದಿದ್ದರು. ನಿಮ್ಮ ಊರಿನಲ್ಲಿ ಕನಿಷ್ಠ ಐದು ಜನಕ್ಕಾದರೂ ಉದ್ಯೋಗ ಸಿಕ್ಕಿದೆಯಾ? ಇಲ್ಲ.

ಅಚ್ಛೇ ದಿನ್ ಕೊಡುತ್ತೇವೆ ಎಂದಿದ್ದರು. ನಾವು ಅಧಿಕಾರಕ್ಕೆ ಬಂದರೆ ಪೆಟ್ರೋಲ್, ಡೀಸೆಲ್ ಬೆಲೆ 50 ರೂ. ಒಳಗೆ ಇಡುತ್ತೇವೆ ಎಂದಿದ್ದರು. 2013 ರಲ್ಲಿ 50 ರು. ಇದ್ದ ಪೆಟ್ರೋಲ್ ಈಗ 110 ರು. ಆಗಿದೆ. ಇದು ಅಚ್ಛೇ ದಿನನಾ? 2014ರಲ್ಲಿ ಅಡುಗೆ ಅನಿಲದ ಸಿಲಿಂಡರ್ ಬೆಲೆ 410 ರು. ಇತ್ತು. ಈಗ ಅದು 980 ರು. ಆಗಿದೆ. ಇದು ಅಚ್ಛೇ ದಿನಾನ? ಅಡುಗೆ ಎಣ್ಣೆ 99 ರು. ಇತ್ತು. ಈಗ 200 ರು. ಆಗಿದೆ. ಮೋದಿ ಅವರು ಹೇಳಿದಂತೆ ಪಕೋಡಾ ಮಾರುವುದಾದರೂ ಹೇಗೆ? ಇದು ಈ ಚುನಾವಣೆಯ ಪ್ರಶ್ನೆ. ಜನರ ಖಾತೆಗೆ ನೇರವಾಗಿ ಹಣ ಹಾಕುತ್ತೇನೆ ಎಂದಿದ್ದರು. ಯಾರ ಖಾತೆಗಾದರೂ ಹಣ ಹಾಕಿದರಾ?

ಹೋಗಲಿ ಬೆಲೆ ಹೆಚ್ಚಾದ ರೀತಿಯಲ್ಲೇ ನಿಮ್ಮ ಆದಾಯವೇನಾದರೂ ಹೆಚ್ಚಿತಾ? ಗೊಬ್ಬರದ ಬೆಲೆ ಹೆಚ್ಚಾಗಿದೆ. ರಸಗೊಬ್ಬರ ಸಚಿವರು ರಾಜ್ಯದವರು. ಅವರು ಏನಾದರೂ ಬೆಲೆ ಕಡಿಮೆ ಮಾಡಿದ್ದಾರಾ? ಇಲ್ಲ. ಬದಲಿಗೆ ಗೊಬ್ಬರ ಕಾಳಸಂತೆಯಲ್ಲಿ ಮಾರಾಟವಾಗುವಂತೆ ಮಾಡಿದ್ದಾರೆ.IMG 20211021 WA0048

ಸಿದ್ದರಾಮಯ್ಯ ಅವರ ಸರಕಾರವಿದ್ದಾಗ, ಹಿಂದೆ 3 ಗಂಟೆಗಳ ಕಾಲ ನೀಡುತ್ತಿದ್ದ ವಿದ್ಯುತ್ ಅನ್ನು 7 ಗಂಟೆಗೆ ಹೆಚ್ಚಿಸಿದೆವು. ಒಂದು ದಿನವಾದರೂ ನಿಮಗೆ ವಿದ್ಯುತ್ ಕೊರತೆ ಆಗಿತ್ತಾ? ಈಗ ಕೇಂದ್ರದಲ್ಲಿ ರಾಜ್ಯದ ಸಂಸದರಾದ ಪ್ರಹ್ಲಾದ್ ಜೋಷಿ ಅವರೇ ಕಲ್ಲಿದ್ದಲು ಸಚಿವರಾಗಿದ್ದು ರಾಜ್ಯಕ್ಕೆ ಕಲ್ಲಿದ್ದಲು ಪೂರೈಕೆ ಮಾಡಲು ಆಗುತ್ತಿಲ್ಲ. ಪರಿಣಾಮ ಕರ್ನಾಟಕ ಕತ್ತಲಲ್ಲಿ ಮುಳುಗಲಿದೆ ಎಂದು ಮಾಧ್ಯಮಗಳು ವರದಿ ಮಾಡುತ್ತಿವೆ.

ನಿಮಗೆ ಸಹಾಯ ಮಾಡಲು ಸಾಧ್ಯವಾಗದಿದ್ದ ಮೇಲೆ ಬಿಜೆಪಿಗೆ ನೀವು ಯಾಕೆ ಮತ ಹಾಕಬೇಕು? ಈ ಚುನಾವಣೆಯಲ್ಲಿ ರಾಜ್ಯದ ಜನರ ಸಂಕಷ್ಟದ ಬಗ್ಗೆ ಚರ್ಚೆಯಾಗುತ್ತಿಲ್ಲ. ಕೋವಿಡ್ ಸಂದರ್ಭದಲ್ಲಿ 5 ವೆಂಟಿಲೇಟರ್ ಗಳು ಇಲ್ಲಿದ್ದವು. ಆದರೆ ಅದನ್ನು ಮುಖ್ಯಮಂತ್ರಿಗಳಾಗಲಿ, ಆರೋಗ್ಯ ಸಚಿವರಾಗಲಿ, ವೈದ್ಯಾಧಿಕಾರಿ ಗಳಾಗಲಿ ಚಾಲನೆ ಮಾಡಲು ಕಾಳಜಿ ವಹಿಸಲಿಲ್ಲ. ವೆಂಟಿಲೇಟರ್ ಚಾಲನೆ ಮಾಡಲಿಲ್ಲ, ಔಷಧಿ ನೀಡಲಿಲ್ಲ. ಇಲ್ಲಿ ನಾನು ವಿಚಾರಿಸಿದೆ, ಒಬ್ಬ ರೈತನಿಗೂ ಪರಿಹಾರ ತಲುಪಿಲ್ಲ. ಇದೇ ಜಿಲ್ಲೆಯವರೇ ಕೃಷಿ ಸಚಿವರಿದ್ದಾರೆ. ಯಾರಿಗೂ ಪರಿಹಾರ ಕೊಡಿಸಿಲ್ಲ. ಬೆಂಬಲ ಬೆಲೆ ಯಾರಿಗೂ ಸಿಕ್ಕಿಲ್ಲ. ಶಿವಕುಮಾರ್ ಉದಾಸಿ ಅವರು, ಬೊಮ್ಮಾಯಿ ಅವರು, ಸಜ್ಜನ್ ಅವರು ಬಂದು ನಿಮ್ಮ ಕಷ್ಟ ಕೇಳಿ ಸಹಾಯ ಮಾಡಿದರಾ? ಇಲ್ಲ.

ಕೇಂದ್ರ ಸರ್ಕಾರದ 20 ಲಕ್ಷ ಕೋಟಿ ರು. ಪ್ಯಾಕೇಜ್ ನಿಂದ ಯಾರಿಗೂ ಸಹಾಯವಾಗಿಲ್ಲ. ಯಡಿಯೂರಪ್ಪ ಅವರು ಘೋಷಿಸಿದ ಪ್ಯಾಕೇಜ್ ನಿಂದಲೂ ಯಾರಿಗೂ ನೆರವಾಗಿಲ್ಲ. ರೈತರಿಂದ ಚಾಲಕರವರೆಗೂ, ಬಟ್ಟೆ ಒಗೆಯುವವನಿಂದ ಬಟ್ಟೆ ಒಳಿಯುವವನಿಗೆ, ಸವಿತ ಸಮಾಜ, ನೇಕಾರರು, ಕಾರ್ಮಿಕರಿಗೆ 5 ಸಾವಿರ ನೀಡುವುದಾಗಿ ಘೋಷಿಸಿದರು. ಅದ್ಯಾವುದು ಜನರನ್ನು ತಲುಪಿಲ್ಲ. ಹಾಗಾದರೆ ಜನ ಇವರಿಗೆ ಯಾಕೆ ಮತ ನೀಡಬೇಕು? ಎಂಬುದು ದೊಡ್ಡ ಪ್ರಶ್ನೆ.

ಈ ಚುನಾವಣೆಯಲ್ಲಿ ಸರ್ಕಾರಕ್ಕೆ ಉತ್ತರ ನೀಡಲು ನಿಮಗೆ ಅವಕಾಶ ಸಿಕ್ಕಿದೆ. ಪ್ರಜಾಪ್ರಭುತ್ವದಲ್ಲಿ ಮತದಾರನೇ ಮಾಲಿಕ. ನಿಮ್ಮ ಕೈಯಲ್ಲಿ ನಮ್ಮನ್ನು, ಮಾನೆ ಅವರನ್ನು ಹಾಗೂ ಬೊಮ್ಮಾಯಿ ಅವರನ್ನು ಗೆಲ್ಲಿಸುವ ಶಕ್ತಿಯೂ ಇದೆ. ಸೋಲಿಸುವ ಶಕ್ತಿಯೂ ಇದೆ. ಬೊಮ್ಮಾಯಿ ಅವರು, ಸಜ್ಜನ್ ಅವರು ನಿಮಗೆ ಏನಾದರೂ ಸಹಾಯ ಮಾಡಿದ್ದರೆ ನೀವು ಅವರಿಗೆ ಬೆಂಬಲ ನೀಡಬೇಹುದಿತ್ತು. ಆದರೆ ಮಾನೆಗೆ ಅಧಿಕಾರ ಇಲ್ಲ. ಆದರೂ ನಿಮಗೆ ಕಷ್ಟಕಾಲದಲ್ಲಿ ಸಾಧ್ಯವಾದಷ್ಟು ನೆರವಾಗಿ ಋಣ ತೀರಿಸಿದ್ದಾರೋ ಇಲ್ಲವೋ? ನೀವು ಅವರ ಕೈ ಹಿಡಿಯುತ್ತೀರೋ ಇಲ್ಲವೋ?

IMG 20211021 WA0047

ಕಳೆದ ಬಾರಿ ಮಾನೆ ಅವರು 5 ಸಾವಿರ ಮತಗಳ ಅಂತರದಲ್ಲಿ ಸೋತಿದ್ದರು. ಹೀಗಾಗಿ ನೀವು ಈ ಬಾರಿ ಅವರನ್ನು 25 ಸಾವಿರ ಮತಗಳ ಅಂತರದಲ್ಲಿ ಗೆಲ್ಲಿಸಬೇಕು. ಅದಕ್ಕಾಗಿ ನೀವು ಕಾಂಗ್ರೆಸ್ ಗೆ ಮತ ಹಾಕುವುದರ ಜತೆಗೆ ಇನ್ನು ಐದು ಜನ ಕಾಂಗ್ರೆಸ್ ಗೆ ಮತ ಹಾಕುವಂತೆ ಮಾಡಬೇಕು. ಇಡೀ ರಾಷ್ಟ್ರ ನಿಮ್ಮ ತೀರ್ಪನ್ನು ಎದುರು ನೋಡುತ್ತಿದೆ.

ಈ ಕ್ಷೇತ್ರದಲ್ಲಿ ಹಂಚಲು ಐದಾರು ಜನ ಮಂತ್ರಿಗಳು ಚೀಲದಲ್ಲಿ ಹಣ ಹೊತ್ತುಕೊಂಡು ಬಂದಿದ್ದಾರೆ. ಅವರು ಎಷ್ಟು ಹಣ ಕೊಟ್ಟರೂ ಬೇಡ ಎನ್ನಬೇಡಿ. ಮೊನ್ನೆ ಮಸ್ಕಿಯಲ್ಲಿ ನಡೆದ ಚುನಾವಣೆಯಲ್ಲಿ ವಿಜಯೇಂದ್ರ ಅವರ ಹೆಸರು ಹೇಳಿಕೊಂಡು ಹಣ ಹಂಚಿದ್ದರು. ನಾನು ಆ ಹಣ ಬಿಡಬೇಡಿ, ಅದನ್ನು ಪಡೆದು ಕಾಂಗ್ರೆಸ್ ಗೆ ಮತಹಾಕಿ ಎಂದು ಹೇಳಿದ್ದೆ. ಅಲ್ಲಿನ ಜನ ಬಿಜೆಪಿ ನೋಟು ಕಾಂಗ್ರೆಸ್ ಗೆ ವೋಟು ಎಂದು ಹೇಳಿದರು. ನೀವು ಕಾಂಗ್ರೆಸ್ ಗೆ ಮತ ಹಾಕಿ. ಮಾನೆ ನಿಮ್ಮ ಸೇವಕನಂತೆ ಕೆಲಸ ಮಾಡುತ್ತಾರೆ.

ನಿಮ್ಮ ಹಸ್ತದಿಂದ ಕಾಂಗ್ರೆಸ್ ಹಸ್ತದ ಗುರುತಿಗೆ ಮತ ಹಾಕುವಾಗ ಬರುವ ಶಬ್ದ ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ಕೇಳಿಸಿ, ಮಾನೆ ಅವರು ವಿಧಾನಸೌಧಕ್ಕೆ ಬರುತ್ತಿದ್ದಾರೆ ಎಂಬುದು ಗೊತ್ತಾಗಬೇಕು.

ಈ ಸರ್ಕಾರ ಕೋವಿಡ್ ನಿಂದ ಸತ್ತವರಿಗೆ ಪರಿಹಾರ ನೀಡಿಲ್ಲ. ರಾಜ್ಯದಲ್ಲಿ ಕೋವಿಡ್ ನಿಂದ ನಾಲ್ಕೂವರೆ ಲಕ್ಷ ಜನ ಸತ್ತಿದ್ದಾರೆ. ಈ ಉಪ ಚುನಾವಣೆ ಹಿನ್ನೆಲೆಯಲ್ಲಿ ಈ ಕ್ಷೇತ್ರದಲ್ಲಾದರೂ ಪರಿಹಾರ ನೀಡಿರುತ್ತಾರೆ ಎಂದು ಭಾವಿಸಿದ್ದೆ. ಆದರೆ ನೀಡಿಲ್ಲ.

ಇವರಿಂದ ಜನರ ಬದುಕೇನಾದರೂ ಉದ್ಧಾರವಾಗಿದೆಯಾ? ಮನೆಗಳನ್ನು ಕಟ್ಟಿಸಿದ್ದೇವೆ ಎಂದಿದ್ದಾರೆ. ಯಾರಿಗೆ ಕೊಟ್ಟಿದ್ದಾರೆ ಎಂದು ಪಟ್ಟಿ ನೀಡಲಿ. ಕಷ್ಟಕಾಲದಲ್ಲಿ ಜನರಿಗೆ ಸಹಾಯ ಮಾಡಲು ಆಗದಿದ್ದರೆ ಮತ್ತೇನು ಮಾಡುತ್ತಾರೆ?

ಇಲ್ಲಿ ಮತ್ತೊಂದು ವಿಶೇಷ ಎಂದರೆ ಜನರೇ ನಮ್ಮ ಅಭ್ಯರ್ಥಿಯನ್ನು ಆಪದ್ಭಾಂದವ ಎಂದು ಕರೆಯುತ್ತಿದ್ದಾರೆ. ಯಾಕೆಂದರೆ, ಕೋವಿಡ್ ಸಮಯದಲ್ಲಿ ವೃತ್ತಿ ಕಳೆದುಕೊಂಡವರಿಗೆ ಶ್ರೀನಿವಾಸ ಮಾನೆ ಅವರು ತಲಾ 2 ಸಾವಿರ ರು. ಚೆಕ್ ಕೊಟ್ಟಿದ್ದಾರೆ. ಸರ್ಕಾರ ಮಾಡಲು ಸಾಧ್ಯವಾಗದ ಕೆಲಸವನ್ನು ನಮ್ಮ ಅಭ್ಯರ್ಥಿ ಮಾಡಿದ್ದಾರೆ. ಜನರ ಕಷ್ಟಕ್ಕೆ ಇವರು ಆಗುತ್ತಾರೆ. ಇವರು ಇಲ್ಲೇ ಇದ್ದು, ಜನರ ಸೇವೆ ಮಾಡುತ್ತಾರೆ ಎಂಬ ನಂಬಿಕೆಯಿಂದ ಜನ ಪಕ್ಷಬೇಧ ಮರೆತು ಬೆಂಬಲ ನೀಡುತ್ತಿದ್ದಾರೆ.

ಬಿಜೆಪಿಯವರು ಜನರ ಸಂಕಷ್ಟದ ವಿಚಾರಗಳನ್ನು ಅಡ್ಡದಾರಿಗೆ ತೆಗೆದುಕೊಂಡು ಹೋಗಲು ಪ್ರಯತ್ನಿಸುತ್ತಿದ್ದಾರೆ. ರಾಜ್ಯದಲ್ಲಿ ಬಿಜೆಪಿಯ ಡಬಲ್ ಇಂಜಿನ್ ಸರ್ಕಾರ ಇದೆ. ಸದ್ಯ ಮಾಧ್ಯಮಗಳ ವರದಿ ಪ್ರಕಾರ ನೀರಾವರಿ ಕೆಲಸಗಳಿಗೆ ಹಣವಿಲ್ಲ.

ಮಕ್ಕಳಿಗೆ 25 ರಿಂದ ಶಾಲೆ ಆರಂಭ ಮಾಡಲಾಗುತ್ತಿದ್ದು, ಬಿಸಿಯೂಟ ನೀಡಲು ಸಿದ್ಧತೆ ಆಗಿಲ್ಲ ಎಂದು ಹೇಳಿದ್ದಾರೆ. ಮಕ್ಕಳಿಗೆ ಊಟ ಕೊಡಲು ಆಗದಿದ್ದರೆ ಈ ಸರ್ಕಾರ ಯಾಕಿರಬೇಕು? ಅಂಗನವಾಡಿ ಆರಂಭ ಶ್ರೀಮತಿ ಇಂದಿರಾ ಗಾಂಧಿ ಅವರ ಕಾರ್ಯಕ್ರಮ, ಬಿಸಿಯೂಟ ಎಸ್.ಎಂ ಕೃಷ್ಣ ಅವರ ಸರ್ಕಾರದಲ್ಲಿ ಜಾರಿಗೆ ತಂದ ಯೋಜನೆ.

ಬೇರೆ ನಾಯಕರು ವೈಯಕ್ತಿಕ ಟೀಕೆ ಮಾಡುತ್ತಿರುವಾಗ ನೀವು ಸುಮ್ಮನಿರುವುದೇಕೆ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ನನಗೆ ಮುಖ್ಯಮಂತ್ರಿಗಳು ಹಾಗೂ ಇತರೆ ನಾಯಕರ ಸ್ಥಾನದ ಮೇಲೆ ಗೌರವವಿದೆ. ಕುಮಾರಸ್ವಾಮಿ ಅವರು ಸಿಎಂ ಆಗಿದ್ದವರು, ಅವರ ಮೇಲೂ ಗೌರವವಿದೆ. ಇಲ್ಲಿ ವೈಯಕ್ತಿಕ ವಿಚಾರಗಳು ಬೇಕಿಲ್ಲ. ಚುನಾವಣೆ ಸಮಯದಲ್ಲಿ ವೈಯಕ್ತಿಕ ವಿಚಾರ ಯಾಕೆ ಬೇಕು? ಸದನದಲ್ಲಿ ಯುದ್ದ ಮಾಡುವ ಸಂದರ್ಭ ಬಂದಾಗ ಅಲ್ಲಿ ಏನು ಬೇಕಾದರೂ ಮಾತನಾಡೋಣ. ಈಗ ಜನರ ಸಮಸ್ಯೆಗಳ ಬಗ್ಗೆ ಗಮನ ಹರಿಸೋಣ.’

ಸಭೆಯಲ್ಲಿ ಮಾಜಿ ಸಚಿವರಾದ ಎಚ್.ಕೆ. ಪಾಟೀಲ್, ಮನೋಹರ ತಹಶೀಲ್ದಾರ್, ಕಾರ್ಯಾಧ್ಯಕ್ಷ ಸಲೀಂ‌ ಅಹಮದ್, ಅಭ್ಯರ್ಥಿ ಶ್ರೀನಿವಾಸ ಮಾನೆ ಮಾತನಾಡಿದರು.