IMG 20201211 WA0003

ಆಸ್ಪತ್ರೆಗಳಲ್ಲಿ ಕೋವಿಡ್ ಚಿಕಿತ್ಸೆಗೆ ಅಗತ್ಯ ಸಿದ್ಧತೆ…..!

STATE Genaral

*ಆಸ್ಪತ್ರೆಗಳಲ್ಲಿ ಕೋವಿಡ್ ಚಿಕಿತ್ಸೆಗೆ ಅಗತ್ಯ ಸಿದ್ಧತೆ: ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್*

*ಔಷಧಿಗೆ ಹೆಚ್ಚು ದರ ವಿಧಿಸಿದರೆ ಕ್ರಮ*

ಬೆಂಗಳೂರು, ಡಿ 11 :-  ಕೋವಿಡ್ ಸಂಭಾವ್ಯ 2 ನೇ ಅಲೆಗೆ ಸಿದ್ಧತೆಯಾಗಿ 10 ಜಿಲ್ಲಾಸ್ಪತ್ರೆ, 30 ತಾಲೂಕು ಆಸ್ಪತ್ರೆಗಳಲ್ಲಿ ಆಕ್ಸಿಜನ್ ಜನರೇಟರ್ ಉಪಕರಣಗಳನ್ನು ಖರೀದಿಸಲು 37.72 ಕೋಟಿ ರೂ.ಗೆ ಅನುಮೋದನೆ ನೀಡಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

ವಿಧಾನಸೌಧದಲ್ಲಿ ಕೋವಿಡ್ ಟಾಸ್ಕ್ ಫೋರ್ಸ್ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಟಾಸ್ಕ್ ಫೋರ್ಸ್ ನ ಹೊಸ ಅಧ್ಯಕ್ಷರಾಗಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರನ್ನು ನಿಯೋಜಿಸಿದ್ದು, ಮುಂದಿನ ಮೂರು ತಿಂಗಳಲ್ಲಿ ಕೋವಿಡ್ ನಿಯಂತ್ರಿಸುವ ಬಗ್ಗೆ ಚರ್ಚೆಯಾಗಿದೆ. 90 ದಿನಗಳಲ್ಲಿ ಕೋವಿಡ್ ಪರೀಕ್ಷೆ ಮಾಡಲು 11.32 ಕೋಟಿ ರೂ. ವೆಚ್ಚದಲ್ಲಿ 10 ಲಕ್ಷ ಹೊಸ ರಾಪಿಡ್ ಆಂಟಿಜೆನ್ ಕಿಟ್ ಖರೀದಿ, 22.50 ಕೋಟಿ ರೂ. ವೆಚ್ಚದಲ್ಲಿ ಔಷಧಿ ಖರೀದಿಗೆ ಮಂಜೂರು ನೀಡಲಾಗಿದೆ ಎಂದು ತಿಳಿಸಲಾಗಿದೆ.

ರೆಮಿಡಿಸ್ವಿರ್ ಔಷಧಿ 1,800 ರೂ.ಗೆ ಸರ್ಕಾರಕ್ಕೆ ದೊರೆಯುತ್ತಿದೆ. ಕೆಲ ಖಾಸಗಿ ಆಸ್ಪತ್ರೆಗಳು ಈ ಔಷಧಿಗೆ ಹೆಚ್ಚು ದರ ವಿಧಿಸುತ್ತಿರುವ ಬಗ್ಗೆ ದೂರು ಬಂದಿದೆ. 2 ಸಾವಿರ ರೂ.ಗಿಂತ ಹೆಚ್ಚಿನ ದರ ವಿಧಿಸಿದರೆ ಕೆಪಿಎಂಇ ಕಾಯ್ದೆ ಪ್ರಕಾರ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

IMG 20201211 WA0004

*10 ಜಿಲ್ಲೆಗಳ ಸಭೆ*

ಇದೇ ವೇಳೆ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬಳ್ಳಾರಿ ಸೇರಿದಂತೆ 10 ಜಿಲ್ಲೆಗಳಲ್ಲಿ ಕೋವಿಡ್ ನಿಯಂತ್ರಣ ಸಂಬಂಧ ಸಚಿವ ಡಾ.ಕೆ.ಸುಧಾಕರ್ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.

ಈ ಕುರಿತು ಮಾಹಿತಿ ನೀಡಿದ ಸಚಿವರು, ಕೋವಿಡ್ 2 ನೇ ಅಲೆಯನ್ನು ಪರಿಗಣಿಸಿ, 10 ಜಿಲ್ಲೆಗಳಲ್ಲಿ ಕೋವಿಡ್ ಪರೀಕ್ಷೆಗೆ ಗುರಿ ನಿಗದಿಪಡಿಸಲಾಗಿದೆ. ಈ ತಿಂಗಳು ಹಾಗೂ ಮುಂದಿನ ತಿಂಗಳಲ್ಲಿ ಸಭೆ, ಸಮಾರಂಭ, ಹೊಸ ವರ್ಷಾಚರಣೆಗೆ ಕಡಿವಾಣ ಹಾಕಲು ಸೂಚಿಸಲಾಗಿದೆ. ಡಿಸೆಂಬರ್ 20 ರಿಂದ ಜನವರಿ ಎರಡನೇ ವಾರದವರೆಗೂ ಧಾರ್ಮಿಕ, ಸಾಮಾಜಿಕ ಸಮಾರಂಭಗಳಲ್ಲಿ ಅತಿ ಕಡಿಮೆ ಜನರು ಸೇರಬೇಕು ಎಂದು ಸೂಚಿಸಲಾಗಿದೆ ಎಂದು ತಿಳಿಸಿದರು.

ಲಸಿಕೆ ವಿತರಣೆಗೆ ಸಿದ್ಧತೆಯಾಗಿ ಹೊಸ ಆ್ಯಪ್ ಅಭಿವೃದ್ಧಿಪಡಿಸಲಾಗಿದೆ. ಇದರಲ್ಲಿ ಲಸಿಕೆ ಸಂಗ್ರಹ, ವಿತರಣೆಗೆ ಮಾಡಿಕೊಂಡ ಸಿದ್ಧತೆ ಬಗ್ಗೆ ಮಾಹಿತಿ ಅಪ್ ಲೋಡ್ ಮಾಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ವಿವರಿಸಿದರು.

IMG 20201211 WA0005 1

*ಶೋಕವೇ ಹೊರತು ಸಂಭ್ರಮವಲ್ಲ*

*ಹೊಸ ವರ್ಷದಲ್ಲಿ ಶೋಕಾಚರಣೆ ಮಾಡಬೇಕಿದೆಯೇ ಹೊರತು ಸಂಭ್ರಮಾಚರಣೆ ಅಲ್ಲ. ಅನೇಕರು ಜೀವ ಕಳೆದುಕೊಂಡಿದ್ದಾರೆ. ಮತ್ತೆ ಕೆಲವರು ಉದ್ಯೋಗ ಕಳೆದುಕೊಂಡಿದ್ದಾರೆ. ಭಾರತೀಯರಿಗೆ ಯುಗಾದಿ ಹೊಸ ವರ್ಷ ಎಂದು ಸಚಿವ ಡಾ.ಕೆ.ಸುಧಾಕರ್ ಹೇಳಿದರು.*

ಕಂದಾಯ ಸಚಿವ ಆರ್.ಅಶೋಕ್, ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಉಪಸ್ಥಿತರಿದ್ದರು.